ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೨
ಹೆಜ್ಜೆ ೨
ಶ್ರೀಶಂಕರರು ಅಡಿಯಿಟ್ಟ ಗೋಕರ್ಣ ಪ್ರಾಚೀನ ತೀರ್ಥಕ್ಷೇತ್ರ. ಪುರಾಣಗಳು ಅದರ ಮಹಿಮೆಯನ್ನು ಮಾತನಾಡುತ್ತವೆ. ಅಷ್ಟು ಹಳೆಯದು ಅದು.
ಅದೊಂದು ದೇವಾಲಯಗಳ ಸಮುಚ್ಚಯ. ಅಲ್ಲಿನ ಕಣಕಣದಲ್ಲೂ ದಿವ್ಯತೆಯ ಅಂಶವಿದೆ. ಹಾಗಾಗಿಯೇ ಎಲ್ಲೆಂದರಲ್ಲಿ ದೇವಾನುದೇವತೆಗಳ ಆವಾಸ ಅಲ್ಲಿದೆ. ಅಲ್ಲಿ ನೆಲೆ ಕಾಣದ ದೇವರಿಲ್ಲ.
ಅಲ್ಲಿರುವುದು ಒಂದು ಕೋಟಿತೀರ್ಥವಲ್ಲ. ಅಲ್ಲಿವೆ ಒಂದುಕೋಟಿ ತೀರ್ಥಗಳು. ಹೆಸರಿಸಿದ, ಹೆಸರಿಸದ ಅಸಂಖ್ಯ ತೀರ್ಥಗಳಿವೆ ಅಲ್ಲಿನ ಬೆಟ್ಟ-ಕಣಿವೆ-ಬಯಲುಗಳಲ್ಲಿ. ಜಲಜಲದ ಹನಿಹನಿಯಲ್ಲೂ ಪಾವನತೆ ಮೈದುಂಬಿದೆ ಅಲ್ಲಿ.
ಅದೊಂದು ಪುರಾತನ ಪಿತೃಕ್ಷೇತ್ರ. ಪಿತೃದೇವತೆಗಳಿಗೆ ಪ್ರಿಯವಾದ ಭೂಮಿಯದು. ಅಲ್ಲಿ ನಡೆಸುವ ಪಿತೃಕಾರ್ಯಗಳು ಪಿತೃದೇವತೆಗಳಿಗೆ ಬೇಗ ತೃಪ್ತಿಯನ್ನು ಕೊಡುತ್ತವೆ. ಅದರಿಂದಾಗಿ ಅವರ ಅನುಗ್ರಹವೂ ಕ್ಷಿಪ್ರವಾಗಿ ಸಾಧ್ಯ.
ಅದು ವೇದಭೂಮಿ. ವೇದ ನೆಲೆ ನಿಂತ ವೇದಾಧಾರಭೂಮಿ. ಸಹಸ್ರ-ಸಹಸ್ರ ವರ್ಷಗಳಿಂದ ಅಲ್ಲಿ ಬೀಸುವ ಗಾಳಿ ವೇದವನ್ನು ಝೇಂಕರಿಸಿದೆ. ಅಲ್ಲಿನ ಜೀವಗಳು ವೇದವನ್ನು ಉಸಿರಾಡಿವೆ. ವೇದಗಳನ್ನು ವಿಸ್ತರಿಸಿದ ಶಾಸ್ತ್ರಗಳು ಅಲ್ಲಿ ಜೀವ ತಳೆದಿವೆ. ದರ್ಶನಗಳು ಅಲ್ಲಿನ ನೋಟವಾಗಿವೆ.
ಇಂತಹ ದಿವ್ಯಸ್ಥಾನವನ್ನೇ ಶಿವ ಆಯ್ದುಕೊಂಡಿದ್ದು ತನ್ನ ಆತ್ಮಲಿಂಗದ ಸ್ಥಾಪನೆಗೆ, ಪ್ರತಿಷ್ಠಾಪನೆಗೆ.
ರಾವಣನ ತಪಸ್ಸು - ಶಿವನ ಒಲುಮೆ - ರಾವಣನ ಆತ್ಮಲಿಂಗದ ಬಯಕೆ - ಶಿವನಿಂದ ಪ್ರದಾನ - ಇಟ್ಟಲ್ಲಿ ನೆಲೆ ನಿಲ್ಲುವ ಎಚ್ಚರಿಕೆ - ದುರುಳನ ಕೈಯಲ್ಲಿ ದಿವ್ಯತೆ ಉಳಿಯದಂತೆ ದೇವತೆಗಳ ತಂತ್ರ - ಬ್ರಹ್ಮಚಾರಿಯಾಗಿ ಶಿವಪುತ್ರ ಗಣಪತಿ - ಗೋಕರ್ಣಕ್ಕೆ ಬರುತ್ತಿದ್ದಂತೆ ಎದುರಾದ ಸಂಧ್ಯಾಕಾಲ - ಉಪಾಸನೆಗೆ ಮುಂದಾದ ರಾವಣ - ಕಂಡ ಬ್ರಹ್ಮಚಾರಿ - ಅವನ ಕೈಗೆ ಹಸ್ತಾಂತರಗೊಂಡ ಆತ್ಮಲಿಂಗ - ಮೂರು ಬಾರಿ ಕೂಗುವ ಮುನ್ನ ಬರುವ ಒಪ್ಪಂದ - ಕೂಗಿದ ಗಣೇಶ - ಬಾರದ ರಾವಣ - ಪ್ರತಿಷ್ಠಾಪನೆಗೊಂಡ ಆತ್ಮಲಿಂಗ.
ಗೋಕರ್ಣಕ್ಕೆ ಶಿವನಿಳಿದುಬಂದ ಚರಿತೆಯಿದು. ಗೋಕರ್ಣದ ಅನುಪಮ ಮಹಿಮೆಯಿದು.
ಇಂತಹ ಗೋಕರ್ಣಕ್ಕೆ ಶಂಕರರು ಬಾರದಿರುತ್ತಾರೆಯೇ? ಬಂದರು, ಬಂದೇಬಂದರು.
ಜಗದೀಶಶರ್ಮಾ ಸಂಪ
www.srisamsthana.org