ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೫

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೫

ಮುಳುಗಿದರೊಮ್ಮೆ ಬ್ರಹ್ಮಭಾವದಿ
ಕೋಟಿತೀರ್ಥದ ಸನ್ನಿಧಿಗೆ ಬಂದ ಶ್ರೀಶಂಕರರು ಮೂರು ಬಾರಿ ಪ್ರದಕ್ಷಿಣೆ ಮಾಡಿದರು ಆ ತೀರ್ಥರಾಜನಿಗೆ. ಕ್ಷೇತ್ರವಿಧಿಯಂತೆ ಅವಗಾಹನ ಮಾಡಿದರು ಪುಣ್ಯಸಲಿಲದಲ್ಲಿ. ಅಲ್ಲಿಯೇ ಕುಳಿತು ಅನುಷ್ಠಾನದಲ್ಲಿ ಮುಳುಗಿದರು. ಬಹಿರಂಗದಲ್ಲಿ ಕಣ್ಣು ಮುಚ್ಚಿದರು; ಅಂತರಂಗದಲ್ಲಿ ಕಣ್ದೆರೆದರು. ಸತ್ ಚಿತ್ ಆನಂದಮಯನಲ್ಲಿ ಏಕೀಭವಿಸಿ ಬ್ರಹ್ಮಮಯರಾದರು. ನಿರ್ವಿಕಲ್ಪಸಮಾಧಿಯಲ್ಲಿ ಬಹುಹೊತ್ತು ಮಗ್ನರಾದರು.
ದಿವ್ಯಸಮಾಧಿಯಿಂದ ಮೇಲೆದ್ದವರು ಪ್ರಸನ್ನರಾಗಿ ನಿರುಕಿಸಿದರು ಪಾವನಜಲಾಶಯವನ್ನು. ಅದನ್ನೇ ಭಾವಿಸುತ್ತಾ ಮತ್ತೆ ಪ್ರದಕ್ಷಿಣೆ ಬಂದರು.
ತೀರ್ಥದ ಸುತ್ತಲೂ ಇರುವ ದೇವತಾಸಾನ್ನಿಧ್ಯಗಳನ್ನು ಪ್ರದಕ್ಷಿಣಾಕಾರವಾಗಿ ದರ್ಶನ ಮಾಡತೊಡಗಿದರು. ನಮಿಸಿದರು, ಸ್ತುತಿಸಿದರು. ಹೀಗೆ ಸುತ್ತುವರಿದು ಬರುತ್ತಾ ಆ ಲಿಂಗದ ಸಾಮೀಪ್ಯಕ್ಕೆ ಬಂದರು.
ಅದು ವರದೇಶಲಿಂಗ. ಹೆಸರೇ ಹೇಳುವಂತೆ ವರವೀಯುವ ದೇವನಾತ. ಉಜ್ಜ್ವಲನಾಗಿ ಬೆಳಗುವ ಮಹೋಜ್ಜ್ವಲನಾತ.
ಸನ್ನಿಧಿಗೆ ಮಹತ್ತ್ವ ಬರುವುದು ಮೂರು ಕಾರಣಗಳಿಂದ. ಮೂರ್ತಿಯ ಮಹತಿ, ಪೂಜೆಯ ಅತಿಶಯತೆ ಮತ್ತು ಅರ್ಚಿಸಿದವರ ತಪಸ್ಸಿದ್ಧಿ. ವರದೇಶಲಿಂಗದ ಶ್ರೇಷ್ಠತೆ ಅದು. ಅದನ್ನು ಸಾಕ್ಷಾತ್ ಅಗಸ್ತ್ಯರು ಪೂಜಿಸಿದ್ದರು.
ಅಂತಹ ಮಹಿಮೆಯ ವರದೇಶನ ಸಾನ್ನಿಧ್ಯಕ್ಕೆ ಬಂದುನಿಂತರು ಶ್ರೀಶಂಕರರು.
 
{ಮುಂದಿನ ಹೆಜ್ಜೆ
ನಾಳೆಯ ಓದು...}
 
ಜಗದೀಶಶರ್ಮಾ ಸಂಪ
www.srisamsthana.org