ತೋಳದ ಸಾರಥ್ಯ ?
KPSCಗೆ ಶ್ಯಾಂಭಟ್ಟರಂಥ ಭ್ರಷ್ಟರನ್ನು ಅಧ್ಯಕ್ಷಗಿರಿಗೆ ತಂದಿದ್ದು, ನನಗೆ 'ಕುರಿ ಕಾಯುವ ಕೆಲಸಕ್ಕೆ ತೋಳವನ್ನು ನೇಮಿಸಿದಂತೆ' ಅನ್ನಿಸಿದ್ದು ಸುಳ್ಳಲ್ಲ. ಬಿಡಿ, ನಮ್ಮಲ್ಲಿ ಇದು ಬಹಳ ಸಾಮಾನ್ಯ. ಯಾವ ರಾಜಕಾರಣಿಯೂ `ಕಾಮಧೇನು'ವಿನಂಥ KPSCಯ ಮೂಗುದಾರವನ್ನು ಬೇರೆಯವರ ಸುಪರ್ದಿಗೆ ಖಂಡಿತಾ ವಹಿಸುವುದಿಲ್ಲ. ಅದು ತಮ್ಮ ಆಪ್ತನ ಕೈಲೇ ಇರಬೇಕು. ಒಂದು, ತಮಗೆ ಬೇಕಾದವರಿಗೆ, ಮತ್ತು `ತಕ್ಕ ಮೊತ್ತ' ಪಾವತಿಸುವ `ಖರೀದಿದಾರ'ರಿಗೆ ಕೆಲಸ ಕೊಡಿಸುವ ಆಡಳಿತ ಯಂತ್ರ ಇದು.
ಜೀವನ ಪರ್ಯಂತ ಲಂಚವೆನ್ನುವ ಮೇಲ್ಸಂಪಾದನೆ / ಉಪ-ವೇತನವನ್ನೀವ ಆಯ್ದ ಹುದ್ದೆಗಳಿಗೆ ಎಷ್ಟಾದರೂ ದುಡ್ಡು 'ಬಿಚ್ಚುವವರು' ಇರುವವರೆಗೆ, ಅದನ್ನು ಬಾಚಿಕೊಳ್ಳುವ ರಾಜಕಾರಣಿಗಳು/ಅಧಿಕಾರಿ ವರ್ಗ ಇದ್ದೇ ಇರುತ್ತದೆ. ಹೀಗೆ `ಆಯ್ಕೆ'ಯಾದ ಅಧಿಕಾರ ವರ್ಗ ತಾವೂ ದುಡ್ಡು ಮಾಡಿಕೊಂಡು, ರಾಜಕಾರಣಿಗಳಿಗೂ ಸರಬರಾಜು ಮಾಡುತ್ತಿರುತ್ತಾರೆ. ಇಂಥ ಅಧಿಕಾರಿವರ್ಗ, ತಮ್ಮನ್ನು `ಆಯ್ಕೆ' ಯಾಗಲು ಸಹಕರಿಸಿದ್ದಕ್ಕಾಗಿ ಈ ರಾಜಕಾರಣಿಗಳಿಗೆ - ಅವರು ಅಧಿಕಾರದಲ್ಲಿರಲಿ ಬಿಡಲಿ - ದಾಕ್ಷಿಣ್ಯದಲ್ಲಿದ್ದುಕೊಂಡು ಸಹಾಯ ಮಾಡುತ್ತಿರುತ್ತದೆ. ರಾಜಕಾರಣಿಗಳಿಗೆ ಬೇಕಾದ್ದೂ ಇದೇ! ತಾವು ಹೇಳಿದಂತೆ ಕೇಳುವ ಅಧಿಕಾರಿ ವರ್ಗವನ್ನೇ ತಮ್ಮ ಕ್ಷೇತ್ರಕ್ಕೆ `ವರ್ಗಾ'ಯಿಸಿಕೊಳ್ಳುತ್ತಾರೆ. ಒಟ್ಟಾರೆ ಇದು ಒಂದು ವಿಷ ವರ್ತುಲ.
ಈ ಕಾರಣಕ್ಕೇ ನಮ್ಮ ಸಿದ್ದು KPSC ಸಾರಥ್ಯವನ್ನು ಶ್ಯಾಂಭಟ್ಟರಿಗೆ ವಹಿಸಿದ್ದು. ಈ ಮನುಷ್ಯ (?)ನ ಭ್ರಷ್ಟತನ ಕರ್ನಾಟಕದ ಉದ್ದಗಲಕ್ಕೂ ಚಿರಪರಿಚಿತ. ಎಲ್ಲ ಕಡೆ ಇದು ಸಾಮಾನ್ಯ ಎಂದು ಹೇಳುವುದು ತಪ್ಪು. ಯಾಕೆ, ಕೇಂದ್ರದಲ್ಲಿ UPSC ಇದೆಯಲ್ಲಾ? ಅದು ಯಾಕೆ ಈ ಪಾಟೀ ಭ್ರಷ್ಟವಾಗಿಲ್ಲ? ಅದರ ಆಯ್ಕೆ ಪಾರದರ್ಶಕ ಹಾಗೂ ವಿವಾದರಹಿತವಾಗಿದೆಯಲ್ಲಾ? KPSCಯನ್ನೂ ಅದರಂತೆ ಮಾಡಲು ನಮ್ಮ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇರಬೇಕಷ್ಟೇ. ಈಗಿನ ನೇಮಕದಿಂದಂತೂ ತದ್ವಿರುದ್ಧವಾದ ಸಂದೇಶ ರವಾನೆಯಾಗಿದೆಯಷ್ಟೇ.