ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೭
ಮಠ ಮತ್ತು ಕಾವೇರಿ
ಕಾವೇರಿಗೂ ಶ್ರೀರಾಮಚಂದ್ರಾಪುರಮಠಕ್ಕೂ ವಿಶಿಷ್ಟವಾದ ಸಂಬಂಧವಿದೆ.
ಶ್ರೀಶಂಕರರು ಲೋಕಾನುಗ್ರಹದ ಉದ್ದೇಶದಿಂದ ಶ್ರೀಕರಾರ್ಚನೆಗೆ ಅನುಗ್ರಹಿಸಿದ ಶ್ರೀರಾಮಾದಿ ವಿಗ್ರಹಗಳು ಅಗಸ್ತ್ಯರೊಂದಿಗೆ ಸಂಬಂಧವಿರುವಂತವು. ಅವರು ಪೂಜಿಸುತ್ತಿದ್ದ ಮೂರ್ತಿಗಳವು. ಅವರಿಂದ ಅವು ವರದಮುನಿಗಳಿಗೆ ಕೊಡಲ್ಪಟ್ಟಿದ್ದವು. ವರದರು ಅಗಸ್ತ್ಯರ ಪ್ರಿಯಶಿಷ್ಯರು. ಅಗಸ್ತ್ಯರಿಂದ ಆರಂಭಗೊಂಡ ಆ ದಿವ್ಯಮೂರ್ತಿಗಳ ಪೂಜಾಕೈಂಕರ್ಯವನ್ನು ಅವಿರತವಾಗಿ ನಡೆಸಿಕೊಂಡುಬಂದವರು. ಅವರು ಅದನ್ನು ಶ್ರೀಶಂಕರರಿಗೆ ನೀಡಿದರು. ಶ್ರೀಶಂಕರರು ಶ್ರೀಮಠದ ಯತಿಪರಂಪರೆಗೆ ಅನುಗ್ರಹಿಸಿದರು. ವರದಮುನಿಗಳು ಈ ವಿಗ್ರಹಗಳನ್ನು ನೀಡಿದ್ದು ವರದೇಶನ ಸನ್ನಿಧಿಯಲ್ಲಿ. ವರದೇಶಲಿಂಗವೂ ಅಗಸ್ತ್ಯಕರಾರ್ಚಿತವಾದದ್ದು. ಮುಂದೆ ಶ್ರೀಮಠವು ಈಗಿನ ಪ್ರಧಾನಮಠ ಪರಿಸರಕ್ಕೆ ಸ್ಥಳಾಂತರಗೊಂಡಾಗಲೂ ಅಲ್ಲಿ ದೊರೆತದ್ದು ಅಗಸ್ತ್ಯರ ತಪೋಭೂಮಿಯೇ. ಅಗಸ್ತ್ಯಕುಟೀರ, ಅಗಸ್ತ್ಯತೀರ್ಥದ ಪರಿಸರದಲ್ಲೇ ಮಠ ಸ್ಥಾಪನೆಗೊಂಡಿತು.
ಇಂತಹ ಅಗಸ್ತ್ಯರ ಪತ್ನಿಯೇ ಕಾವೇರಿ. ಅಗಸ್ತ್ಯರೊಮ್ಮೆ ಈಗಿನ ಕೊಡಗು ಪ್ರದೇಶದ ಬ್ರಹ್ಮಗಿರಿಗೆ ಆಗಮಿಸುತ್ತಾರೆ. ಅಲ್ಲಿ ಆಗ ಆಳುತ್ತಿರುತ್ತಾನೆ ದೊರೆ ಕವೇರ. ಅವನಿಗೊಬ್ಬ ಮಗಳಿರುತ್ತಾಳೆ. ಅವಳೇ ಲೋಪಾಮುದ್ರೆ. ಅವಳನ್ನು ಆತ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡು, ಶಿವಾನುಗ್ರಹದಿಂದ, ತನ್ನ ರಾಜ್ಯದ ಒಳಿತಿಗಾಗಿ ಪಡೆದುಕೊಂಡಿರುತ್ತಾನೆ. ಅಗಸ್ತ್ಯರು ಬಂದ ಸಮಯದಲ್ಲಿ ಅವಳು ವಿವಾಹವಯಸ್ಕಳಾಗಿರುತ್ತಾಳೆ. ಕವೇರ ಅವಳನ್ನು ಅಗಸ್ತ್ಯರಿಗೆ ವಿವಾಹ ಮಾಡಿಕೊಡುತ್ತಾನೆ.
ಅವರಿಬ್ಬರೂ ಸಂತುಷ್ಟರಾಗಿ ಜೀವನ ನಡೆಸುತ್ತಿರುತ್ತಾರೆ. ಆಗ ಸುರಪದ್ಮನೆಂಬ ರಾಕ್ಷಸ ಹಸಿವಿನಿಂದ ನರರನ್ನು ತಿನ್ನುತ್ತಾ ದಕ್ಷಿಣದತ್ತ ಮುನ್ನುಗ್ಗುತ್ತಾನೆ. ಅಪಾಯವಾಗದಿರಲೆಂದು ಮುನಿ ಪತ್ನಿಯನ್ನು ಜಲವಾಗಿಸಿ ಕಮಂಡಲುವಿನಲ್ಲಿ ಇಟ್ಟುಕೊಂಡಿರುತ್ತಾರೆ. ಲೋಕದ ಒಳಿತಿಗಾಗಿ ದೇವತೆಗಳ ಕೋರಿಕೆಯಂತೆ ಗಣಪತಿ ಕಾಗೆಯ ರೂಪ ತಾಳಿ ಕಮಂಡಲುವನ್ನು ಕೆಡವುತ್ತಾನೆ. ಲೋಪಾಮುದ್ರೆ ಮಹಾನದಿಯಾಗಿ ಹರಿಯುತ್ತಾಳೆ. ಅವಳೇ ಕಾವೇರಿ.
ಅಗಸ್ತ್ಯರ ಸಂಬಂಧದಿಂದಾಗಿ ಅವರ ಪತ್ನಿ ಕಾವೇರಿಯೂ ಶ್ರೀಮಠಕ್ಕೆ ವಿಶೇಷವಾಗಿ ಆದರಣೀಯಳಾಗಿದ್ದಾಳೆ.
{ಮುಂದಿನ ಹೆಜ್ಜೆ
ನಾಳೆಯ ಓದು...}
ವಿದ್ವಾನ್ ಜಗದೀಶಶರ್ಮಾ ಸಂಪ
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org