ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೮

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೮

ವರದರೆಂಬ ವರದರು

ಶ್ರೀಶಂಕರರು ವರದೇಶಲಿಂಗದ ಸನ್ನಿಧಿಗೆ ಬಂದರು. ನಮಿಸಿದರು, ಸ್ತುತಿಸಿದರು. ಅಲ್ಲಿ ಸಿಕ್ಕರು ವರದಮುನಿಗಳು. ಬಹುಪುರಾತನರು. ಅಗಸ್ತ್ಯರ ನೇರ ಶಿಷ್ಯರು. ಮಹಿಮಾನ್ವಿತರಿಬ್ಬರ ಪರಸ್ಪರ ದರ್ಶನ ಇಬ್ಬರಲ್ಲೂ ಸಂತುಷ್ಟಿಯನ್ನು ಹುಟ್ಟಿಸಿತು. ಕಂಡರು ಕಣ್ದಣಿಯೆ; ಮುದಗೊಂಡರು ಮನದುಂಬಿ.

ವರದ ಮುನಿಗಳು ವೇದವನ್ನು ಆಮೂಲಾಗ್ರ ಅರಿತವರು. ಅರಿತವರು ಮಾತ್ರವಲ್ಲ, ಅರಿತವರಲ್ಲಿ ಶ್ರೇಷ್ಠರು. ಅವರ ಮನಸ್ಸು ಎಂದೆಂದೂ ಮುಳುಗಿದ್ದು ಒಂದೇ ವಿಷಯದಲ್ಲಿ. ಅದು ರಾಮನಲ್ಲಿ, ರಾಮನ ಅರ್ಚನೆಯಲ್ಲಿ. ರಾಮಾರ್ಚನಾಸಕ್ತಚಿತ್ತರು ಅವರು.

ವರದರು ಸತ್ಕಾರವಿತ್ತರು ಶಂಕರರಿಗೆ. ಶಂಕರರೂ ಸತ್ಕರಿಸಿದರು ವರದರನ್ನು. ಅವರ ಕುಶಲವನ್ನು ಇವರು ವಿಚಾರಿಸಿದರು. ಇವರ ಕುಶಲವನ್ನು ಅವರು ಕೇಳಿದರು. ತಪಸ್ವಿಗಳ ಕುಶಲಪ್ರಶ್ನೆ ಏನಿದ್ದೀತು? 'ತಪಸ್ಸು ನಿರಾತಂಕವೇ? ಅಡ್ಡಿ-ಆತಂಕವಿಲ್ಲವಷ್ಟೇ? ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ತಾಪವಿಲ್ಲವಷ್ಟೇ?' ಹೀಗೆ ವಿಚಾರಿಸಿಕೊಂಡರು.

ಮತ್ತೆ ಆರಂಭಿಸಿದರು ವೇದಾರ್ಥಚರ್ಚೆಯನ್ನು. ವೇದದ ಭಾಷ್ಯವೇ ಅವತರಣಗೊಂಡಿತು ಅಲ್ಲಿ. ಅವರ ಈ ಸಂಭಾಷಣೆ ಸಂತೋಷಗೊಳಿಸಿದ್ದು ಕೇಳುಗರನ್ನು ಮಾತ್ರವಲ್ಲ, ಸ್ವತಃ ಅವರಿಗೇ ಸಂತೋಷವಾಯಿತು.

{ಮುಂದಿನ ಹೆಜ್ಜೆ
ನಾಳೆಯ ಓದು...}

ವಿದ್ವಾನ್ ಜಗದೀಶಶರ್ಮಾ ಸಂಪ
 
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org