ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ

ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ

                         
                                                                    ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ
                             ನಾನು ಗೋವೆಯ ಪರ್ರಾ ಎಂಬ ಹಳ್ಳಿಯಿಂದ ಬಂದವ. ಅದಕ್ಕಾಗಿ ನಮ್ಮನ್ನು ಪರೀಕ್ಕರ ಎನ್ನುತ್ತಾರೆ. ನನ್ನ ಹಳ್ಳಿ ಕಲ್ಲಂಗಡಿ ಹಣ್ಣುಗಳಿಗಾಗಿ ತುಂಬ ಪ್ರಸಿದ್ಧ. ನಾನು ಚಿಕ್ಕವನಿದ್ದಾಗ ಅಲ್ಲಿನ ರೈತರು ಹಣ್ಣಿನ ಸೀಜನ್ ಮುಗಿಯುವ ಹಂತದಲ್ಲಿ ಕಲ್ಲಂಗಡಿ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸುತ್ತಿದ್ದರು. ಎಲ್ಲ ಮಕ್ಕಳನ್ನು ಈ ಸ್ಪರ್ಧೆಗೆ ಕರೆಯುತ್ತಿದ್ದರು.
 
           ವರ್ಷಗಳ ನಂತರ ನಾನು ಐ.ಐ.ಟಿ. ಮುಂಬಯಿಗೆ ಇಂಜಿನೀಯರಿಂಗ್ ಕಲಿಯಲು ಹೋದೆ. ಅಲ್ಲಿಂದ ಆರೂವರೆ ವರ್ಷಗಳ ನಂತರ ಊರಿಗೆ ಮರಳಿದೆ. ಆಗ ಕಲ್ಲಂಗಡಿ ಹಣ್ಣಿನ ಸೀಜನ್. ಮಾರ್ಕೇಟಿನಲ್ಲಿ ಹಣ್ಣುಗಳೇ ಇರಲಿಲ್ಲ. ಕೆಲವು ಇದ್ದವಾದರೂ ಅವುಗಳು ತೀರಾ ಚಿಕ್ಕ ಅಳತೆಯವು. ನನಗೆ ಬೇಸರವೆನಿಸಿತು. ನಾನು ಸ್ಪರ್ಧೆ ಆಯೋಜಿಸುತ್ತಿದ್ದ ರೈತರ ಮನೆಗೆ ಹೋದೆ.  ಈಗ ಆ ರೈತನ ಮಗ ಸ್ಪರ್ಧೆ ಆಯೋಜಿಸುತ್ತಿದ್ದಾನೆಂದು ತಿಳಿಯಿತು. ಅಲ್ಲೊಂದು ಬದಲಾವಣೆ ನನಗೆ ಪ್ರಮುಖವಾಗಿ ಗೋಚರಿಸಿತು. ಆ ಹಿರಿಯ ರೈತ ಸ್ಪರ್ಧೆಗೆಂದು ದೊಡ್ಡ ಗಾತ್ರದ ಬಲಿತ ಹಣ್ಣನ್ನು ಕೊಟ್ಟು ಜೊತೆಗೆ ಒಂದು ಬೋಗುಣಿಯನ್ನು ಕೊಟ್ಟು, ಬೀಜಗಳನ್ನು ಬೋಗುಣಿಯಲ್ಲಿ ಉಗುಳಬೇಕೆಂದು ಹಾಗೂ ಬೀಜಗಳನ್ನು ಕಡಿಯಬಾರದೆಂದು ಹೇಳುತ್ತಿದ್ದ. ನಾವು ತಿಂದು ಉಗುಳಿದ ಬೀಜಗಳನ್ನು ಮುಂದಿನ ಸೀಜನ್ನಿನ ಬಿತ್ತನೆಗೆ ಬಳಸುತ್ತಿದ್ದ. ನಾವೆಲ್ಲ ಬೀಜ ತಯಾರಿಕೆ ಭಾಗವಾಗಿ ದುಡಿಯುವ ಬಾಲ ಕಾರ್ಮಿಕರು ಆಗ. ಈಗ ಆದ ಬದಲಾವಣೆ ಏನೆಂದರೆ ರೈತನ ಮಗ ದೊಡ್ಡ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿದು ಸ್ಪರ್ಧೆಗೆ ಸಣ್ಣ ಗಾತ್ರದ ಅರೆಪಕ್ವ ಹಣ್ಣುಗಳನ್ನು ನೀಡತೊಡಗಿದ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಹಣ್ಣುಗಳ ಗಾತ್ರ ಸಣ್ಣದಾಗುತ್ತಲೇ ಹೋಯಿತು. ಇಳುವರಿಯೂ ಕಡಿಮೆಯಾಯಿತು. ಕೇವಲ ಏಳು ವರ್ಷಗಳಲ್ಲಿ ಪರ್ರಾ ಎನ್ನುವ ಗೋವೆಯ ಹಳ್ಳಿಯು ಕಲ್ಲಂಗಡಿ ಹಣ್ಣಿನ  ಪ್ರಸಿದ್ಧಿಯನ್ನು ಕಳೆದುಕೊಂಡಿತು. 
 
          ಮಾನವರ ತಲೆಮಾರುಗಳು ಇಪ್ಪತ್ತೈದು ವರ್ಷಗಳಲ್ಲಿ ಬದಲಾವಣೆಯನ್ನು ಕಾಣುತ್ತವೆ ಎಂದು ನಂಬಲಾಗಿದೆ. ನಮ್ಮ ಮಕ್ಕಳು ಏನು ಕಲಿತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಎರಡುನೂರು ವರ್ಷಗಳೇ ಬೇಕಾಯಿತು. ಉತ್ತಮ ಶಿಕ್ಷಣ ನೀಡದೇ ಹೋದರೆ ನಮ್ಮ ದೇಶಕ್ಕೆ ಏನಾಗಬಹುದು ಎಂಬುದನ್ನು ನಾವು ಈ ಉದಾಹರಣೆಯಿಂದ ಅರಿಯಬೇಕಿದೆ.
 
 ಸಂಗ್ರಹ : ಶ್ರೀನಿವಾಸ.ಹುದ್ದಾರ   ಕೃಪೆ-ಇಂಟರ್ ನೆಟ್