ದಿನಕ್ಕೆ ೯,೦೦೦ ಊಟ ಮಾರಾಟ!
ಡೆಲ್ಲಿ ಪಕ್ಕದ ಗುರ್ಗಾಂವ್ನಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ!
ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಐವತ್ತು ರೂಪಾಯಿಗೆ ಎರಡು ಊಟ ಸಿಕ್ಕೀತೇ? ಇಲ್ಲ. ಆದರೆ ಗುರ್ಗಾಂವ್ನಲ್ಲಿ ಆ ಬೆಲೆಗೆ ಎರಡು ಜನತಾ ಮೀಲ್ಸ್ ಲಭ್ಯ. ಉದಾಹರಣೆಗೆ, ಬಿಹಾರದಿಂದ ಗುರ್ಗಾಂವಿಗೆ ಬಂದು ರಿಕ್ಷಾ ತಳ್ಳುತ್ತಾ ಬದುಕು ಸಾಗಿರುತ್ತಿರುವ ಮನೋಜ್ ಮಹತೋ ಜನತಾ ಮೀಲ್ಸಿನಿಂದ ದಿನನಿತ್ಯ ಖರೀದಿಸುವ ಎರಡು ಊಟಗಳ ವೆಚ್ಚ ರೂ.೫೦. ಮಧ್ಯಾಹ್ನ ರೂ.೩೦ರ ಊಟದಲ್ಲಿ ಚಪಾತಿಗಳು, ತೊವ್ವೆ, ಅನ್ನ, ತರಕಾರಿ ಸಾಂಬಾರ್ ಮತ್ತು ಸಲಾಡ್. ರಾತ್ರಿಯ ರೂ.೨೦ರ ಊಟದಲ್ಲಿ ಐದು ಚಪಾತಿಗಳು, ತರಕಾರಿ ಪಲ್ಯ, ಚಟ್ನಿ ಮತ್ತು ಸಲಾಡ್. ಜೊತೆಗೆ ಇದು ಸುರಕ್ಷಿತ ಎಂಬ ವಿಶ್ವಾಸ ಆತನಿಗೆ.
ಸೆಕ್ಯುರಿಟಿ ಗಾರ್ಡ್ ಆಗಿರುವ ರಣಜಿತ್ ಗಲ್ ಸಿನ್ಹಾ ದಿನದಿನವೂ ಜನತಾ ಊಟ ಮಾಡಲು ಕಾರಣ: ಊಟದಲ್ಲಿರುವ ತಾಜಾ ತರಕಾರಿಗಳು ಮತ್ತು ಊಟದ ಕಡಿಮೆ ಬೆಲೆ. ಈಗಂತೂ ಅಲ್ಲಿನ ಶಾಲೆ, ಕಾರ್ಖಾನೆ, ಕೆಫೆತೀರಿಯ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಲ್ಲಿ ಜನತಾ ಮೀಲ್ಸ್ ಭಾರೀ ಜನಪ್ರಿಯ.
ಇದೆಲ್ಲ ಶುರುವಾದದ್ದು ಎರಡು ವರುಷಗಳ ಮುಂಚೆ, ೨೦೧೩ರಲ್ಲಿ. ಭಾರತದ ನಗರಗಳಲ್ಲಿ ಅದ್ದೂರಿಯ ಊಟ ಒದಗಿಸುವ ದುಬಾರಿ ಹೋಟೆಲುಗಳು ಅನೇಕ. ಕಡಿಮೆ ಬೆಲೆಯ ಊಟ ಮಾರುವ ಕ್ಯಾಂಟೀನುಗಳು ಹಲವಾರು ಇದ್ದರೂ ಇಲ್ಲಿ ಸಿಗುವ ಊಟ ಆರೋಗ್ಯಯುತ ಅನ್ನುವಂತಿಲ್ಲ. ಇಂತಹ ಸನ್ನಿವೇಶದಲ್ಲಿ, ಭಾರತದ ನಗರಗಳ ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಒಳ್ಳೆಯ ಊಟ ಒದಗಿಸುವ ದೊಡ್ದ ಅವಕಾಶವನ್ನು ಗುರುತಿಸಿದವರು ಜೆಸ್ಸಿ ವಾನ್ ಡೆ ಜಾಂಡ್ ಎಂಬ ಡಚ್ ವ್ಯಕ್ತಿ ಮತ್ತು ಪ್ರಭಾತ್ ಅಗರ್ವಾಲ್. ಇವರಿಬ್ಬರು ಅಪೇಕ್ಷಾ ಪೊರ್ವಾಲ್ ಜೊತೆ ಸೇರಿ ಸ್ಥಾಪಿಸಿದ ಉದ್ಯಮ ಜನತಾ ಮೀಲ್ಸ್.
ಅವರೊಂದು ರೆಸ್ಟೊರೆಂಟ್ ಶುರು ಮಾಡಿದ್ದು ಜೂನ್ ೨೦೧೩ರಲ್ಲಿ. ಕೆಲವೇ ತಿಂಗಳುಗಳಲ್ಲಿ ಅವರಿಗೆ ಒಂದು ವಿಷಯ ಸ್ಪಷ್ಟವಾಯಿತು: ಆ ರೆಸ್ಟೊರೆಂಟಿನ ಊಟದ ತಯಾರಿ ವೆಚ್ಚ ಪಾವತಿಸಲಿಕ್ಕೂ ಸ್ಲಂವಾಸಿಗಳಿಗೆ ಹಾಗೂ ನಗರಗಳ ಬಡವರಿಗೆ ಕಷ್ಟಸಾಧ್ಯ. ಅದಲ್ಲದೆ, ಆ ರೆಸ್ಟೊರೆಂಟಿನಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆ ಅನಿಶ್ಚಿತವಾಗಿತ್ತು.
ಆದ್ದರಿಂದ ಅವರು ತಮ್ಮ ಉದ್ಯಮದ ರೂಪರೇಷೆ ಬದಲಿಸಬೇಕಾಯಿತು. ಕೇಂದ್ರೀಕೃತ ಉತ್ಪಾದನೆ ಮತ್ತು ಮಾರಾಟಕೇಂದ್ರಗಳಲ್ಲಿ ವಿತರಣೆ – ಈ ಮಾದರಿಯ ಅಳವಡಿಕೆ. ಈಗ ಗುರ್ಗಾಂವಿನ ಉತ್ಪಾದನಾ ಕೇಂದ್ರದ ಜಂಟಿ ನಿರ್ವಹಣೆ: ಜನತಾ ಮೀಲ್ಸ್ ಹಾಗೂ “ಅಕ್ಷಯಪಾತ್ರೆ” ಇವರಿಂದ. (ಭಾರತದಲ್ಲಿ ಶಾಲೆಗಳಿಗೆ ಮಧ್ಯಾಹ್ನದ ಊಟದ ಅತಿ ದೊಡ್ಡ ಪೂರೈಕೆದಾರ ಅಕ್ಷಯಪಾತ್ರೆ.) “ದೊಡ್ದ ಸಂಖ್ಯೆಯಲ್ಲಿ ಊಟದ ಉತ್ಪಾದನೆ ಮತ್ತು ದಕ್ಷತೆಯ ಅಡುಗೆಯಿಂದಾಗಿ ನಮಗೆ ಕಡಿಮೆಬೆಲೆಯಲ್ಲಿ ಊಟ ಪೂರೈಸಲು ಸಾಧ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಮಧ್ಯಾಹ್ನದ ಊಟ ಉತ್ಪಾದಿಸುವ ಅಕ್ಷಯಪಾತ್ರೆ ಜೊತೆಗೂಡಿದ್ದರಿಂದಾಗಿ ಅನುಕೂಲವಾಗಿದೆ” ಎಂದು ವಿವರಿಸುತ್ತಾರೆ ಜಾಂಡ್.
ಜನತಾ ಮೀಲ್ಸಿನ ಅಡುಗೆಮನೆಯ ನಿರ್ವಹಣೆ ಕೇವಲ ೧೨ ಜನರಿಂದ: ನಾಲ್ಕು ಅಡುಗೆಯವರು, ಒಬ್ಬ ಮೆನೇಜರ್ ಮತ್ತು ಸಹಾಯಕರು. ಅಲ್ಲಿ ಊಟದ ಉತ್ಪಾದನೆ ಬಹುಪಾಲು ಯಾಂತ್ರೀಕೃತ. ತೊಳೆಯುವುದು, ತರಕಾರಿಗಳ ಸಿಪ್ಪೆ ತೆಗೆದು ಕತ್ತರಿಸುವುದು ಹಾಗೂ ಚಪಾತಿ ಮಾಡುವುದು – ಈ ಕೆಲಸಗಳಿಗೆ ಜನರು ಬೇಕಾಗಿಯೇ ಇಲ್ಲ; ಇವೆಲ್ಲವನ್ನೂ ಯಂತ್ರಗಳೇ ಮಾಡುತ್ತವೆ. ಇದರಿಂದಾಗಿ, ಸಣ್ಣ ರೆಸ್ಟೊರೆಂಟುಗಳಿಗೆ ಹೋಲಿಸಿದರೆ ಜನತಾ ಮೀಲ್ಸಿನ ಕೆಲಸಗಾರರ ಮಜೂರಿ ವೆಚ್ಚ ತೀರಾ ಕಡಿಮೆ.
ಊಟದ ಪ್ರತಿಯೊಂದು ಐಟಮಿಗೂ (ಸಾಂಬಾರು, ಪಲ್ಯ, ಚಟ್ನಿ ಇತ್ಯಾದಿ) ಬೇಕಾದ ಒಳಸುರಿಗಳ ಪ್ರಮಾಣ ನಿಗದಿಪಡಿಸುವುದು ಜನತಾ ಮೀಲ್ಸಿನ ಮುಂದಿನ ಗುರಿ. ಇದರಿಂದಾಗಿ ರುಚಿ ಬದಲಾಗದಿರುವ ಅನುಕೂಲ ಮತ್ತು ಇನ್ನಷ್ಟು ಕಡಿಮೆ ಕೆಲಸಗಾರರಿಂದ ಉತ್ಪಾದನೆ ಮಾಡಲು ಸಾಧ್ಯ. ಈಗ ಇನ್ಸುಲೇಟೆಡ್ ಪೊಟ್ಟಣಗಳಲ್ಲಿ ಮಾರಾಟ ಕೇಂದ್ರಗಳಿಗೆ ಊಟ ಪೂರೈಕೆ.
ಜನತಾ ಮೀಲ್ಸ್ ಉದ್ಯಮ ಊಟದ ಮಾರಾಟಕ್ಕೆ ಅಳವಡಿಸಿರೋದು ಫ್ರಾಂಚೈಸಿ (ಉತ್ಪಾದಕರ ಹೆಸರಿನಲ್ಲಿಯೇ ಮಾರಾಟ ಮಾಡುವ ಕೇಂದ್ರಗಳು) ಮಾದರಿ. ಫ್ರಾಂಚೈಸಿಗಳು ಮುಂಚಿತವಾಗಿ ತಮಗೆ ಬೇಕಾದ ಊಟದ ಪೊಟ್ಟಣಗಳನ್ನು ಕಾದಿರಿಸಿಕೊಳ್ಳಬೇಕು. ಮಾರಾಟವಾಗದೆ ಉಳಿದದ್ದಕ್ಕೆ ಫ್ರಾಂಚೈಸಿಗಳೇ ಹೊಣೆ. ಹಾಗಾಗಿ, ಅವರಿಗೆ “ಆತಿಥ್ಯ ಉದ್ಯಮ”ದ ಪಟ್ಟುಗಳ ಬಗ್ಗೆ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಜನತಾ ಮೀಲ್ಸ್ ತರಬೇತಿ ನೀಡುತ್ತದೆ. ಭಂಡವಾಳ ನೀಡಿಕೆ ಮೂಲಕವೂ ಸಹಕರಿಸುತ್ತದೆ. ಆಗಾಗ ಫ್ರಾಂಚೈಸಿಗಳ ಸ್ಥಳಪರಿಶೀಲನೆ ಮಾಡುವ ಮೂಲಕ ಅಲ್ಲಿ ಶುಚಿತ್ವ ನಿರ್ವಹಣೆ ಖಾತರಿ ಪಡಿಸಿಕೊಳ್ಳುತ್ತದೆ.
ಮೂವತ್ತು ಫ್ರಾಂಚೈಸಿಗಳ ಮೂಲಕ ಕೇವಲ ಎರಡೇ ವರುಷಗಳಲ್ಲಿ ಜನತಾ ಮೀಲ್ಸ್ ಉದ್ಯಮ “ಲಾಭನಷ್ಟವಿಲ್ಲದ ಹಂತ” (ಬ್ರೇಕ್ ಈವನ್) ತಲಪಿದೆ. “೨೦೧೫ರ ಮುಕ್ತಾಯದಲ್ಲಿ ಫ್ರಾಂಚೈಸಿಗಳ ಸಂಖ್ಯೆ ೧೦೦ ಆಗಲಿದೆ; ಅಕ್ಟೋಬರ್ ೨೦೧೫ರ ಹೊತ್ತಿಗೆ ದಿನಕ್ಕೆ ೨೦,೦೦೦ ಊಟ ಮಾರಾಟ ಮಾಡಲಿವೆ” ಎಂಬುದು ಜಾಂಡ್ರ ಆಶಯ. ನಗರಗಳ ಬಡವರಿಗೆ ಕೈಗೆಟಕುವ ದರದಲ್ಲಿ ಒಳ್ಳೆಯ ಊಟ ನೀಡುವ ಈ ಆಶಯ ಈಡೇರಲಿ ಎಂದು ಹಾರೈಸೋಣ.