ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ತಿನ್ನುವುದನ್ನು ಕಲಿಸಿಕೊಟ್ಟು ಹೋದ ಪರಂಗಿ ದೊರೆಗಳು!
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆ (ಟಿ.ಬಿ. ಮೆಕಾಲೆ ೧೮೦೦ - ೧೮೫೯) ಎನ್ನುವವನು ಧ್ವಂಸ ಮಾಡಿದ. ತಮ್ಮ ಹೊಸ ವಿಧಾನದಿಂದ ಭಾರತೀಯರಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಕುರಿತು ತನ್ನ ತಂದೆಗೆ ಹಾಗೂ ಇತರರಿಗೆ ಅವನು ಘನವಾದ ಪತ್ರಗಳನ್ನು ಬರೆದಿದ್ದಾನೆ. ಅವುಗಳ ಮೂಲಕ ಅಂದಿನ ಆಳರಸರ ಕುಟಿಲತೆಯನ್ನು ನಾವು ಅರಿಯಬಹುದು. ತಮ್ಮ ವಿದ್ಯಾ ವಿಧಾನದಿಂದ ಮೂವತ್ತು ವರ್ಷಗಳಲ್ಲಿ ಬೆಂಗಾಲಿ (ಭಾರತದ) ಪ್ರಜೆಗಳು ರಕ್ತ ಮತ್ತು ಚರ್ಮಗಳಿಂದಷ್ಟೇ ಮೂಲನಿವಾಸಿಗಳಾಗಿ ಉಳಿಯುತ್ತಾರೆ, ಉಳಿದ ವಿಷಯಗಳಲ್ಲಿ ಅವರು ಕ್ರೈಸ್ತರೇ ಆಗುತ್ತಾರೆ ಎಂದು ಅವನು ಹೇಳಿಕೊಂಡಿದ್ದಾನೆ. ಸಂಸ್ಕೃತ ಭಾಷೆಯ ಜ್ಞಾನವಿಲ್ಲದ ನಮ್ಮ ಭಾರತೀಯ ವಿದ್ವಾಂಸರೂ ಸಹ ಸಕಲ ವಿಷಯಗಳನ್ನೂ ಇಂಗ್ಲೀಷಿನ ಮೂಲಕವೇ ಅರಿತುಕೊಂಡರು! ಇಂಗ್ಲೆಂಡಿಗೆ ಹೋಗಿ ಉನ್ನತ ಶಿಕ್ಷಣ ಪಡೆದು ಬಂದ ನಮ್ಮ ಮೇಧಾವಿಗಳು ಅನುಸರಿಸಿದ ಪದ್ಧತಿಗಳನ್ನೇ ನಮ್ಮ ವಿದ್ಯಾವಂತರೂ ಸಹ ತಲೆಯ ಮೇಲಿಟ್ಟುಕೊಂಡು ಮೆರೆಸಿದರು. ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಇದರ ಮೊದಲನೆಯ ಕಂತು ನಿಮ್ಮ ಮುಂದಿದೆ ನೋಡಿ.
ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ತಿನ್ನುವುದನ್ನು ಕಲಿಸಿಕೊಟ್ಟು ಹೋದ ಪರಂಗಿ ದೊರೆಗಳು
ಇಂಗ್ಲೆಂಡಿನಲ್ಲಿ ವರ್ಷಪೂರ್ತಿ ವಾತಾವರಣ ತಣ್ಣಗೆ ಕೊರೆಯುತ್ತಿರುತ್ತದೆ. ಕೇವಲ ಇಂಗ್ಲೆಂಡ್ ಅಷ್ಟೇ ಅಲ್ಲ, ಕರ್ಕಾಟಕ ವೃತ್ತದಾಚೆಯಿರುವ ಭೂಗೋಳದ ಉತ್ತರಾರ್ಧದಲ್ಲಿ ಚಳಿ ವಿಪರೀತವಾಗಿರುತ್ತದೆ. ಬೇಸಿಗೆ ಕಾಲದಲ್ಲಿಯೂ ಸಹ ಸೂರ್ಯನ ಕಿರಣಗಳು ಅಲ್ಪ ಪ್ರಮಾಣದ ಶಾಖವನ್ನಷ್ಟೇ ಕೊಡಬಲ್ಲವು. ಅದೇ ವಿಧವಾಗಿ ಮಕರ ವೃತ್ತದಿಂದಾಚೆಯಿರುವ ದಕ್ಷಿಣಾರ್ಧದ ಭೂಗೋಳವೂ ಸಹ ಅತ್ಯಂತ ಶೀತಲವಾಗಿದ್ದು, ಪ್ರಾಣಿಗಳನ್ನು ಗಡಗಡ ನಡುಗುವಂತೆ ಮಾಡುತ್ತದೆ. ಸೂರ್ಯನ ಚಲನೆಯು ಮಕರ ಮತ್ತು ಕರ್ಕಾಟಕ ವೃತ್ತಗಳ ಮಧ್ಯಕ್ಕೆ ಪರಿಮಿತವಾಗಿರುವುದರಿಂದ ಅದರಾಚೆಗಿನ ಭೂಪ್ರದೇಶಗಳಲ್ಲಿ ಈ ಈ ವಿಧವಾದ ವೈಪರೀತ್ಯಗಳು ಕಂಡು ಬರುತ್ತವೆ. ಆದ್ದರಿಂದ ಚಳಿಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಇಂಗ್ಲೆಂಡಿನವರಿಗೆ ಹಾಗು ಅವರಂತೆ ಇರುವ ಇತರೇ ಪ್ರಾಂತದವರಿಗೂ ಬಹು ದೊಡ್ಡ ಸವಾಲು. ಆದರೆ ಈ ಸಮಸ್ಯೆ ಭಾರತೀಯರಿಗೆ ಇಲ್ಲ. ಇಂಗ್ಲೆಂಡಿನವರಿಗೆ ಸ್ನಾನ ಮಾಡುವುದು ಆಚಾರವಾಗಲೇ ಇಲ್ಲ! ಶೌಚ ಕ್ರಿಯೆಗಳಿಗೆ ನೀರನ್ನು ಉಪಯೋಗಿಸುವುದರ ಅಭ್ಯಾಸವನ್ನು ಅವರು ಮಾಡಿಕೊಳ್ಳಲೇ ಇಲ್ಲ. ಕೈಯ್ಯನ್ನು ಹೊರಚಾಚಿದರೇ ಸಾಕು ಚಳಿಯಿಂದ ಮೈ ಗಡಗಡ ನಡುಗುತ್ತದೆ. ಹಾಗಾಗಿ ಅವರು ಕೈಗಳಿಗೆ ವಿಧವಿಧವಾದ ತೊಡುಗೆಗಳನ್ನು (ಕೈಗವಸುಗಳನ್ನು) - ಹತ್ತಿ, ಉಣ್ಣೆ ಅಥವಾ ಚರ್ಮದಿಂದ ಮಾಡಿದಂತಹವುದಗಳನ್ನು ಧರಿಸುವ ಪದ್ಧತಿಯನ್ನು ರೂಢಿಸಿಕೊಂಡರು. ಹೀಗೆ ತೊಡುಗೆಗಳಿಂದ ಮುಚ್ಚಿಹೋದ ಕೈಗಳಿಂದ ತಿನ್ನುವುದು ಕಷ್ಟ. ಹಾಗಾಗಿ ತಿನ್ನುವುದಕ್ಕಾಗಿ ಚಲಿಕೆ ಗುದ್ದಲಿಗಳಂತಹ ಸಲಕರಣೆಗಳಾದ ಚಮಚ, ಚಾಕು, ಫೋರ್ಕು, ಕತ್ತಿ, ಕಠಾರಿಗಳು... ಅವರಿಗೆ ಬೇಕೇ ಬೇಕು. ಅದು ಅವರ ಪದ್ಧತಿ! ಬ್ರಿಟೀಷರು ನಮ್ಮನ್ನು ಪರಿಪಾಲಿಸಿದ್ದರಿಂದ ನಾಡನ್ನಾಳುವ ದೊರೆಗಳನ್ನು ಅನುಸರಿಸುವುದನ್ನೇ ಮಹತ್ಕಾರ್ಯವೆಂದು ಭಾವಿಸಿದ ಭಾರತೀಯರು ಅಂತಹ ಸಂಗತಿಗಳನ್ನೆಲ್ಲಾ ರೂಢಿಸಿಕೊಂಡರು. ಜವಾನರಿಂದ ಹಿಡಿದು ದಿವಾನರುಗಳವರೆಗೆ ಎಲ್ಲರೂ ಪರಂಗಿ ದೊರೆಗಳ ಈ ’ಶೀತಲ’ ಪದ್ಧತಿಯನ್ನು ಸ್ವೀಕರಿಸಿ.... ಕೈಬಿಟ್ಟರು. ಆದರೆ ನಮಗೆ ಸ್ವಾತಂತ್ರ್ಯ ಬಂದ ಮೇಲೆ ಪಾಶ್ಚಾತ್ಯರಿಂದ ಸ್ವೀಕರಿಸುವ ಹುಚ್ಚು ಹೆಚ್ಚು ಹೆಚ್ಚಾಗುತ್ತಾ ಹೋಯಿತೇ ವಿನಃ ಕಡಿಮೆಯಾಗಲಿಲ್ಲ. ಹಿಂದೆ ಬಾಣಂತಿಯರನ್ನು ಹೊರತು ಪಡಿಸಿ ಮನೆಯೊಳಗೆ ಚಪ್ಪಲಿ ಹಾಕಿಕೊಂಡು ತಿರುಗಾಡುವವರು ನಮ್ಮ ದೇಶದಲ್ಲಿ ಇರಲೇ ಇಲ್ಲ. ಆದರೆ ಇಂದು ಬಚ್ಚಲ ಮನೆ, ಶೌಚಾಲಯದಿಂದ ಹಿಡಿದು ಅಡುಗೆ ಮನೆಯವರೆಗೆ ಚಪ್ಪಲಿಗಳ ಟಪಟಪ ಶಬ್ದ ಕಿವಿಗಳಿಗೆ ಅಪ್ಪಳಿಸುತ್ತದೆ. ಕಾಲುಚೀಲ (ಸಾಕ್ಸ್) ಹಾಕಿಕೊಂಡು ಟಾಯಲೆಟ್‌ನಿಂದ ಕಿಚನ್‌ವರೆಗೆ, ಬಾತ್‌ರೂಮಿನಿಂದ ಡೈನಿಂಗ್ ಟೇಬಲ್‌ವರೆಗೆ ಎಲ್ಲಾ ಕಾಲಕೃತ್ಯಗಳನ್ನು ಮಾಡಿಕೊಳ್ಳುವುದು ಪರಂಗಿ ದೊರೆಗಳ ಪದ್ಧತಿ! ಮೆಕಾಲೆ ವಿದ್ಯಾವಿಧಾನವು ಅದನ್ನು ಬಿಡಲಾರದ ಭೂತದಂತೆ ನಮ್ಮ ಹೆಗಲಿಗೇರಿಸಿದೆ! ’ಡಾಡಿ’ ಎಂದು ಹೇಳಲಾಗದ ಮುಗ್ಧ ಕಂದಮ್ಮಗಳು ’ದಾಡಿ’ ಇಲ್ಲಾ ’ಟಾಡಿ’ ಎಂದು ತೊದಲುತ್ತಿದ್ದರೆ ’ಮಮ್ಮಿ’ ಆನಂದತುಂದಿಲಳಾಗುತ್ತಾಳೆ.
ಶೂನ್ಯಲಲಾಟದವರು
ಸುಣ್ಣಹೊಡೆಸಿಕೊಂಡ ಮುಖದವರು
ಕೈಗಳ ಕಟ್ಟಿಕೊಂಡು
ಚಮಚೆಗಳಿಂದ ತಿನ್ನುತಿಹರು.
ಬೂಟುಗಳನು ಕಳಚದ ಅವರು
ಸೂಪುಗಳನು ಚಪ್ಪರಿಸುತ್ತಿಹರು,
ಕಮಟು ಕೋಟುಗಳಿಂದ ಪಸರಿಸುತಿಹರು
ಪಡುವಣದ ಪರಿಮಳಗಳನವರು!
ಮೆಕಾಲೆ ಎಂತಹ ದಾರ್ಶನಿಕನಲ್ಲವೇ? ಮೂವತ್ತು ವರ್ಷಗಳಲ್ಲಿ ತನ್ನ ವಿದ್ಯಾವಿಧಾನದಿಂದ ಪ್ರಭಾವಿತರಾದವರು ಯಾವ ವಿಧದಲ್ಲಿ ವ್ಯವಹರಿಸುತ್ತಾರೆನ್ನುವುದನ್ನು ಅವನು ಮೊದಲೇ ಭವಿಷ್ಯ ನುಡಿದಿದ್ದನಂತೆ! "ಕೇವಲ ಚರ್ಮ ಮತ್ತು ರಕ್ತಗಳಿಂದಷ್ಟೇ ಅವರು ಭಾರತೀಯರು, ಉಳಿದಂತೆ ಆಚಾರ ವಿಚಾರಗಳಲ್ಲಿ ಅವರು ಬ್ರಿಟಿಷರೇ ಆಗಿ ಹೋಗುತ್ತಾರೆ!" ಮೆಕಾಲೆ, ಈ ಹೇಳಿಕೆಯನ್ನು ೧೮೩೪-೩೫ರಲ್ಲಿ ಕೊಟ್ಟ ನಂತರ ನಿಜವಾಗಿಯೂ ಆ ಭಾವನೆ ನಮ್ಮಲ್ಲಿ ಬಲವಾಗಿ ಬೇರೂರಿತು. ಇಂದು ಅದು ವಿಷದ ಹೆಮ್ಮರವಾಗಿ ಬೆಳೆದು ದೇಶಾದ್ಯಂತ ಅದು ತನ್ನ ರೆಂಬೆಕೊಂಬೆಗಳನ್ನು ಹರಡಿದೆ!
ಮೆಕಾಲೆಯ ವಿದ್ಯಾವಿಧಾನವನ್ನು ವಿರೋಧಿಸಿದವರ ಸಂಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತಾ ಹೋಯಿತು. ಕ್ರಿ.ಶ. ೧೮೬೫ರಲ್ಲಿ ಅದನ್ನು ಶೇಖಡಾ ೯೫ರಷ್ಟು ಜನರು ವಿರೋಧಿಸಿದರೆ, ಇಂದು ಅದನ್ನು ವಿರೋಧಿಸುತ್ತಿರುವವರ ಸಂಖ್ಯೆ ಶೇಖಡಾ ೫ನ್ನೂ ಮೀರದು! ಭಾರತೀಯ ಪದ್ಧತಿ ಒಳ್ಳೆಯದಾ ಅಥವಾ ಪಾಶ್ಚಾತ್ಯ ಪದ್ಧತಿ ಒಳ್ಳೆಯದಾ ಎನ್ನುವುದು ಇಲ್ಲಿ ಪ್ರಶ್ನೆಯಲ್ಲ! ಏಕೆಂದರೆ ಈ ವಿಧವಾದ ಪ್ರಶ್ನೆಗಳನ್ನು ಅಮೇರಿಕಾದವರು ಹಾಕಿಕೊಳ್ಳುವುದಿಲ್ಲ, ಚೈನಾದಲ್ಲೂ ಇಲ್ಲ, ಅಷ್ಟೇ ಏಕೆ? ‘ಬುರ್ಕಿ ನಾ ಫ್ಯಾಸೋ’ ಎನ್ನುವ ಭೌಗೋಳಿಕವಾಗಿ ಬಹು ಚಿಕ್ಕದಾದ ಆಫ್ರಿಕಾ ಖಂಡದ ಬಡದೇಶವೂ ಸಹ ಈ ವಿಧವಾದ ಪ್ರಶ್ನೆಗಳನ್ನು ಹಾಕಿಕೊಳ್ಳುವುದಿಲ್ಲ! ಕಾಲಕ್ಕನುಗುಣವಾದ ಬದಲಾವಣೆಗಳು ಅವಶ್ಯವೆನಿಸಿದರೆ ಅದನ್ನು ಸ್ವದೇಶದಲ್ಲಿನ ಸಮಾಜವು ನಿರ್ಧರಿಸಬೇಕಾ? ಅಥವಾ ಆ ಬದಲಾವಣೆಗಳನ್ನು ವಿದೇಶಿಯರು ನಮ್ಮ ಸಮಾಜದ ಮೇಲೆ ಹೇರುತ್ತಿದ್ದಾರಾ ಎನ್ನುವ ಸಂಗತಿಗಳನ್ನು ನಾವು ಒರೆಗೆ ಹಚ್ಚಿ ನೋಡಬೇಕಲ್ಲವೇ? ಚಳಿಗಾಲದಲ್ಲಿ ಕಂಬಳಿ ಹೊದ್ದುಕೊಳ್ಳಬೇಕೆನ್ನುವುದು, ಬೇಸಿಗೆಯಲ್ಲಿ ದುಪ್ಪಟಿಯ ಅವಶ್ಯಕತೆಯಿಲ್ಲವೆನ್ನುವುದು ಕಾಲಕ್ಕನುಗುಣವಾಗಿ ಉಂಟಾಗುವ ಸಹಜ ಬದಲಾವಣೆ. ಈ ವಿಧವಾದ ಸಹಜ ಬದಲಾವಣೆಗಳನ್ನು ಭಾರತೀಯ ಸಮಾಜವು ಅನಾದಿಕಾಲದಿಂದಲೂ ತನ್ನಲ್ಲಿ ಇಮಡಿಸಿಕೊಳ್ಳುತ್ತಲೇ ಇದೆ! ಆದರೆ ಆ ರೀತಿಯ ಬದಲಾವಣೆಗಳಿಂದ ನಮ್ಮ ರಾಷ್ಟ್ರೀಯತೆಯ ಭಾವಕ್ಕೆ ಅಥವಾ ಸ್ವದೇಶಿ ಚಿಂತನೆಗಳಿಗೆ ಧಕ್ಕೆಯಾಗಲಿಲ್ಲ ಮತ್ತು ಅವು ರಾಷ್ಟ್ರದ ಅಸ್ಮಿತೆಯ ಕುರಿತು ಜನರಲ್ಲಿ ಶೂನ್ಯತಾ ಭಾವವನ್ನು ಎಂದಿಗೂ ಹುಟ್ಟುಹಾಕಲಿಲ್ಲ.
ಕೃತೇತು ಮಾನವ ದರ್ಮಾಃ ತ್ರೇತಾಯಾಂ ಗೌತಮಾಃ ಸ್ಮೃತಾಃ l
ದ್ವಾಪರೇ ಶಂಖಲಿಖಿತಾಃ ಕಲೌ ಪರಾಶರಾ ಸ್ಮೃತಾಃ ll
"ಕೃತಯುಗದಲ್ಲಿ ಮನುವು ಹೇಳಿದ ನಿಯಮಗಳು, ತ್ರೇತಾಯುಗದಲ್ಲಿ ಗೌತಮನ ಸೂತ್ರಗಳು, ದ್ವಾಪರದಲ್ಲಿ ಶಂಖಲಿಖಿತರ ಕೃತಿಗಳು ಮತ್ತು ಕಲಿಯುಗದಲ್ಲಿ ಪರಾಶರರ ಸ್ಮೃತಿಗಳಲ್ಲಿ ಹೇಳಿದ ನಿಯಮಗಳನ್ನು ಪಾಲಿಸಬೇಕು" ಎಂದು ಹೇಳಲಾಗಿದೆ. ಇದು ಭಾರತೀಯ ಸಮಾಜವು ಕಾಲಾನುಕಾಲಕ್ಕೆ ಸಹಜವಾದ ಮಾರ್ಪಾಡುಗಳನ್ನು ಮಾಡಿಕೊಂಡಿತೆನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆಯಷ್ಟೆ.
ಆರ್. ಕೆ. ನಾರಾಯಣ್ ಅವರಂತಹ ಲೇಖಕರು ಭಾರತೀಯ ಜೀವನ ಮೌಲ್ಯಗಳನ್ನು ಪ್ರಪಂಚಕ್ಕೆ ಸಾರಿ ಹೇಳುವುದಕ್ಕಾಗಿ ಇಂಗ್ಲೀಷನ್ನು ಒಂದು ಮಾಧ್ಯಮವಾಗಿ ಬಳಸಿಕೊಂಡರು. ೧೯೮೦ರ ದಶಕಗಳವರೆಗೂ ಬರೆದ ಅವರ ಕಾದಂಬರಿಗಳಲ್ಲಿ ಸಹ, ಭಾರತೀಯರು ಕೆಳಗೆ ಕುಳಿತುಕೊಂಡು ಊಟ ಮಾಡುವ ವಿಷಯದ ಪ್ರಸ್ತಾವನೆಯಿದೆ. ೧೯೪೯ರಲ್ಲಿ ರಚಿಸಲ್ಪಟ್ಟ "ಸಂಪತ್" ಎನ್ನುವ ಅವರ ಕೃತಿಯಲ್ಲಿ ಬರುವ ಶ್ರೀನಿವಾಸ್ ಎನ್ನುವ ಸಂಪಾದಕನ ಹೆಂಡತಿ ಅತಿಥಿಗಳಿಗೆ ಭೋಜನವನ್ನು ಉಣಬಡಿಸುವ ಪ್ರಸಂಗವೊಂದಿದೆ. ಅದರಲ್ಲಿ ಆಕೆ ಮೊದಲು ಎರಡು ಮಣೆಗಳನ್ನು ನೆಲದ ಮೇಲೆ ಇರಿಸುತ್ತಾಳೆ. ಭೋಜನಕ್ಕೆ ಬಂದ ಅತಿಥಿಗಳು ಆ ಮಣೆಗಳ ಮೇಲೆ ಕುಳಿತು ಊಟ ಮಾಡುತ್ತಾರೆ ಎನ್ನುವ ವಿವರಗಳು ದೊರೆಯುತ್ತವೆ. ಈ ಕಾದಂಬರಿಯನ್ನು ಓದಿದ ಅಮೇರಿಕದ ಪ್ರಜೆಯೊಬ್ಬ ಅನಿವಾಸಿ ಭಾರತೀಯ ಮಿತ್ರನೊಬ್ಬನನ್ನು ಈ ವಿಷಯದ ಕುರಿತಾಗಿ ಪ್ರಸ್ತಾವಿಸಿದ. "ಊಟ ಮಾಡಲು ನೀವೇಕೆ ’ಸಿಟ್ಟಿಂಗ್ ಪ್ಲಾಂಕ್’ಗಳನ್ನು’ (ಮಣೆ) ಬಳಸುತ್ತೀರಿ? ಎಂದು ಪ್ರಶ್ನಿಸಿದ. ನಮ್ಮವನಿಗೆ ಉತ್ತರ ಗೊತ್ತಿದ್ದರೆ ಹೇಳಬೇಕು ಇಲ್ಲಾ ಸುಮ್ಮನಿರಬೇಕಲ್ಲವೇ? ಆದರೆ, ಅವನು ನಮ್ಮಲ್ಲಿನ ರಾಜ ಮಹಾರಾಜರು, ವಿದ್ವಾಂಸರು, ಬಂಗಾರದ ಪಾತ್ರೆಯಲ್ಲಿ ಉಣ್ಣುವ ಶ್ರೀಮಂತರು, ಅಷ್ಟೇ ಏಕೆ? ಒಂದು ಕೈಯ್ಯಲ್ಲಿ ಮುದ್ದೆಯನ್ನು ಹಿಡಿದು ಇನ್ನೊಂದು ಕೈಯ್ಯಲ್ಲಿ ಊಟ ಮಾಡುವ ಕೂಲಿ ಕೆಲಸದವರೂ ಸಹ ಎಲ್ಲರೂ ಮಣೆಗಳ ಮೇಲೆ ಕುಳಿತುಕೊಂಡೇ ಊಟಮಾಡುತ್ತಾರೆ ಎಂದು ಬೊಗಳೆ ಬಿಟ್ಟ. ಆಗ ಅಮೇರಿಕಾದ ಮಿತ್ರ ಕೂಡಲೇ ಕೇಳಿದನಂತೆ, "ಆದರೆ ನಾನು ಇತ್ತೀಚೆಗೆ ಭಾರತಕ್ಕೆ ಭೇಟಿಯಿತ್ತಾಗ ಹೋಟಲ್ಲುಗಳಲ್ಲಾಗಲಿ, ಮನೆಗಳಲ್ಲಾಗಲಿ ಎಲ್ಲೂ ಜನರು ಕೆಳಗೆ ಕುಳಿತುಕೊಂಡು ಊಟ ಮಾಡುವುದನ್ನು ಗಮನಿಸಲಿಲ್ಲ. ಎಲ್ಲೂ ನನಗೆ ಈ ಸಿಟ್ಟಿಂಗ್ ಪ್ಲಾಂಕುಗಳು ಕಂಡುಬರಲಿಲ್ಲವಲ್ಲ?!" ನಮ್ಮವನು ಅಲ್ಲಿದ್ದರೆ ಕೇಳಿ....! ಏನೂ ಹೇಳಲಾಗದೇ ಮೆಲ್ಲನೇ ಅಲ್ಲಿಂದ ಕಾಲ್ಕಿತ್ತ.....! ಅದು ಬೇರೆ ವಿಷಯ.
ನಿಧಾನವಾಗಿ ನಮ್ಮ ಮೌಲಿಕ ವಿಚಾರಗಳು ಕುಸಿಯುತ್ತಿವೆ. ಸೈನಿಕರು, ದಾರಿಹೋಕರು, ರೋಗಿಗಳು, ವಯೋವೃದ್ಧರು ಮೊದಲಾದವರ ವಿಷಯವನ್ನು ಪಕ್ಕಕ್ಕಿಡೋಣ. ಅವರು ಊಟದ ನಿಯಮಗಳನ್ನು ಪಾಲಿಸಬೇಕಿಲ್ಲವೆಂದು ನಮ್ಮ ಭಾರತೀಯ ಸಂಪ್ರದಾಯವೇ ನಿರ್ದೇಶಿಸುತ್ತದೆ. ಆದರೆ ಉಳಿದವರು ಕೆಳಗೆ ಕುಳಿತುಕೊಂಡು ತಿನ್ನಬೇಕು. ನೆಲದ ಮೇಲಾಗಲಿ, ಚಾಪೆಯ ಮೇಲಾಗಲಿ ಅಥವಾ ಮಣೆಯ ಮೇಲಾಗಲಿ, ಹೇಗಾದರಾಗಲಿ ನಾವು ಪದ್ಮಾಸನವನ್ನು ಹಾಕಿಕೊಂಡು ಕುಳಿತುಕೊಳ್ಳುತ್ತೇವೆ. ತಿನ್ನ ಬೇಕಾದರೆ ಖಂಡಿತವಾಗಿ ಸೊಂಟವನ್ನು ಬಾಗಿಸಬೇಕಾಗುತ್ತದೆ. ಆಗ ದೇಹಕ್ಕೆ ಸ್ವಲ್ಪ ಶ್ರಮವುಂಟಾಗುತ್ತದೆ. ಊಟ ಬಡಿಸುವವರೂ ಸಹ ಸೊಂಟವನ್ನು ಬಗ್ಗಿಸಿ ಸ್ವಲ್ಪ ಶ್ರಮಪಡಬೇಕು. ಹೀಗೆ ಶ್ರಮಪಟ್ಟುಕೊಂಡು ಉಣ್ಣುವುದು, ಬಡಿಸುವುದು ಕಷ್ಟಕರವೆನಿಸಿದ್ದರಿಂದ ’ಟೇಬಲ್ಲು’ಗಳ ಮೇಲೆ ತಿನಿಸುಗಳ ಭಂಡಾರವನ್ನು ಇರಿಸಿಕೊಂಡು ಕುರ್ಚಿಗಳ ಮೇಲೆ ಕುಳಿತು ತಿನ್ನುವುದು ಪ್ರಾರಂಭವಾಯಿತು. ಶ್ರಮವಿಲ್ಲದೇ ಇರುವುದರಿಂದ, ಸೊಂಟ ಹೇಗಿರಲು ಸಾಧ್ಯ ....? ಖಂಡಿತಾ... ಅದು ಬಾಗದು. ನಿಂತುಕೊಂಡು ಸಹ ತಿನ್ನಲಾರಂಭಿಸಿದ್ದೇವೆ, ಓಡಾಡುತ್ತಲೂ ತಿನ್ನುತ್ತಿದ್ದೇವೆ! ನಮಗೀಗ ನಾಗರೀಕತೆಯೆಂದರೆ ಮೆಕಾಲೆ ಪಂಡಿತರು ಹೇಳಿದ್ದೇ ಅನುಶಾಸನವಾಗುತ್ತಿದೆ. ಈಗ ತಿನ್ನುವುದೇ ಜೀವನ ವಿಧಾನವಾಗಿದೆ. ಒಂದರ್ಥದಲ್ಲಿ ಅಂದು ಬದುಕಲಿಕ್ಕಾಗಿ ತಿನ್ನುತ್ತಿದ್ದರು ಇಂದು ತಿನ್ನಲಿಕ್ಕಾಗಿ ಬದುಕುತ್ತಿದ್ದೇವೆ! "ಆಹಾರ ಸೇವನೆಯೂ ಸಹ ಪ್ರಾಣಯಜ್ಞ" ಎನ್ನುವ ಭಾರತೀಯ ಚಿಂತನೆಯಿಂದ ನಾವು ದೂರವುಳಿಯುತ್ತಿದ್ದೇವೆ.
ಕೇರಳದಲ್ಲಿ ನೀಲ ಎನ್ನುವ ನದಿ ಇದೆಯಂತೆ. ಆ ನದಿ ತೀರದಲ್ಲೊಂದು ಗ್ರಾಮದಲ್ಲಿ ಒಬ್ಬ ವೈದ್ಯನಿದ್ದ. ಆಯುರ್ವೇದ ಪದ್ಧತಿಯಂತೆ ಅವನು ವೈದ್ಯಕೀಯ ಚಿಕಿತ್ಸೆಯನ್ನು ಮಾಡುತ್ತಿದ್ದನಂತೆ. ಹೀಗಿರುವಾಗ ಹಿಮಾಲಯದ ಬದರಿಕಾವನದಿಂದ ಎರಡು ಗಿಳಿಗಳು ದೇಶ ಸಂಚಾರ ಮಾಡಲು ಹೊರಟವು. ಅವು ಪ್ರತಿಯೊಂದು ಊರಿನ ವೈದ್ಯರ ಮನೆಯ ಅಂಗಳಕ್ಕೆ ಹೋಗಿ, "ಕೋರುಕ್" ಎಂದು ಗಟ್ಟಿಯಾಗಿ ಕಿರುಚಿತ್ತಿದ್ದವು! ಅವು ಹಾಗೆ ಕಿರುಚುತ್ತಲೇ ಇರುತ್ತಿದ್ದವು. ಪ್ರತಿಯೋರ್ವ ವೈದ್ಯನೂ ಸಹ ಅವುಗಳ ಕಿರುಚಾಟವನ್ನು ಭರಿಸಲಾಗದೆ ಅವುಗಳನ್ನು ಓಡಿಸುತ್ತಿದ್ದ. ಹೀಗೆ ಪ್ರತಿಯೊಂದು ಕಡೆಗೂ ಓಡಿಸಲ್ಪಟ್ಟ ಆ ಗಿಳಿಗಳು ಕಡೆಗೆ ನೀಲಾ ನದಿ ತೀರದಲ್ಲಿ ವಾಸಿಸುತ್ತಿದ್ದ ಈ ವೈದ್ಯನ ಅಂಗಳಕ್ಕೆ ಬಂದು ಕುಳಿತುಕೊಂಡವು. ಆ ವೈದ್ಯ ತನ್ನ ಪಾಡಿಗೆ ತಾನು ಗಿಡ ಮೂಲಿಕೆಗಳನ್ನು ಅರೆಯುತ್ತಿದ್ದ. ಆ ಗಿಳಿಗಳು ಯಥಾ ಪ್ರಕಾರ "ಕೋರುಕ್" ಎಂದು ಅರಚಿದವು. ಆ ವೈದ್ಯ ತಕ್ಷಣವೇ "ಹಿತ ಭುಕ್" ಎಂದು ಹಾಡಿದ! ಆ ಗಿಳಿಗಳು ಮತ್ತೆ "ಕೋರುಕ್" ಎಂದು ಅರಚಿದವು. ಆ ವೈದ್ಯನು ತಕ್ಷಣವೇ "ಮಿತಭುಕ್" ಎಂದ. ಆ ಗಿಳಿಗಳು ಮತ್ತೊಮ್ಮೆ "ಕೋರುಕ್" ಎಂದು ಅರಚಿದವು, ಆ ವೈದ್ಯ, " ಸಮಯ ಭುಕ್" ಎಂದು ತಕ್ಷಣವೇ ಹೇಳಿದ. ಕೂಡಲೇ ಗಿಳಿಗಳ ರೂಪದಲ್ಲಿದ್ದ ಅಶ್ವಿನೀ ದೇವತೆಗಳು ಆ ವೈದ್ಯನ ಮುಂದೆ ಪ್ರತ್ಯಕ್ಷರಾಗಿ ಅವನಿಂದ ಸರಿಯಾದ ಉತ್ತರ ಬಂದದ್ದಕ್ಕೆ ಸಂತೋಷಗೊಂಡು ಅವನನ್ನು ಹರಸಿ ಅಲ್ಲಿಂದ ಮಾಯವಾದರು.
ಕಃ ಆರುಕ್ - ಯಾರು ರೋಗವಿಲ್ಲದವನು?
ಹಿತ ಭುಕ್ - ಹಿತವಾಗಿ (ಪಥ್ಯವಾಗಿ) ತಿನ್ನುವವನು ರೋಗವಿಲ್ಲದವನು.
ಮಿತ ಭುಕ್ - ಮಿತಿಯಾಗಿ ತಿನ್ನುವವನು ರೋಗವಿಲ್ಲದವನು
ಸಮಯ ಭುಕ್ - ಸರಿಯಾದ ಸಮಯಕ್ಕೆ ತಿನ್ನುವವನು ನಿರೋಗಿ.
ಒಟ್ಟಾರೆಯಾಗಿ ಹಿತವಾಗಿ, ಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಿನ್ನುವವನು ನಿರೋಗಿಯಾಗುತ್ತಾನೆ ಎಂದು ಹೇಳುತ್ತದೆ ನಮ್ಮ ಸಂಪ್ರದಾಯ.
ಬ್ರಹ್ಮಚಾರಿಗಳು (ವಿದ್ಯಾರ್ಥಿಗಳು), ರೋಗಗ್ರಸ್ತರು, ವಯೋವೃದ್ಧರು, ನಿರಂತರ ಶಾರೀರಿಕ ಶ್ರಮವನ್ನು ಕೈಗೊಳ್ಳುವ ರೈತರು, ಸೈನಿಕರು ಮೊದಲಾದವರು ಮೂರು ಸಾರಿ ತಿನ್ನಬಹುದು ಅಥವಾ ನಾಲ್ಕು ಸಾರಿ ತಿನ್ನಬಹುದು. ಆದರೆ ಉಳಿದ ಗೃಹಸ್ಥರು ಮಾತ್ರ, ಕೇವಲ ಎರಡೇ ಬಾರಿ ತಿನ್ನಬೇಕೆಂದು ಸನಾತನ ಧರ್ಮ ನಿರ್ದೇಶಿಸುತ್ತದೆ. "ಎರಡ್ಹೊತ್ತುಂಡು ನಡುನಡುವೆ ಏನೂ ತಿನ್ನದವ ತಾ ನಿತ್ಯೋಪವಾಸಿ ನೋಡಾ!" ಆದ್ದರಿಂದ ಕೇವಲ ಎರಡು ಹೊತ್ತು ಮಾತ್ರವೇ ಭುಜಿಸುವವನು ನಿತ್ಯ ಉಪವಾಸಿ ಎಂದು ಮಹಾಭಾರತದ ಕೃತಿಕಾರನು ಹೇಳಿದ್ದಾನೆ! "ಗಳಿಸುವುದು ಕೇವಲ ಭೋಗಿಸುವುದಕ್ಕಾಗಿ" ಎನ್ನುವುದು ಪಾಶ್ಚಾತ್ಯರ ಪೈಶಾಚಿಕ ಪ್ರವೃತ್ತಿ. "ಗಳಿಸುವುದು ಎಲ್ಲರನ್ನೂ ಪೋಷಿಸುವುದಕ್ಕಾಗಿ" ಎನ್ನುವ ಭಾರತೀಯ ಸತ್ಸಂಪ್ರದಾಯವನ್ನು ಮೆಕಾಲೆ ವಿದ್ಯಾ ವಿಧಾನ ನುಂಗಿ ಹಾಕಿದೆ. ಹಾಗಾಗಿ ಉಳ್ಳವರು ದಿನವೆಲ್ಲಾ ತಿನ್ನುವ ಕೆಟ್ಟ ಪದ್ಧತಿ ಬ್ರಿಟಿಷರ ಪರಿಪಾಲನೆಯಲ್ಲಿ ತಾಂಡವವಾಡಿತು. ಯಾರು ಹೆಚ್ಚು ಬಾರಿ ತಿನಬಾರದೋ ಅವರು ಹೆಚ್ಚೆಚ್ಚು ತಿಂದು ಸಾರಿ ತಿಂದು ಬೊಜ್ಜು ಬೆಳೆಸಿಕೊಂಡರು, ಯಾರು ಹೆಚ್ಚು ಬಾರಿ ತಿನ್ನಬಹುದೋ ಅವರಿಗೆ ಒಂದು ಹೊತ್ತಿನ ಗಂಜಿಗೂ ಗತಿಯಿಲ್ಲದಂತಾಯಿತು! ಬ್ರಿಟೀಷರ ಪರಿಪಾಲನೆಯಲ್ಲಿ ಬದಲಾದ ನಮ್ಮವರ ಸ್ಥಿತಿಗತಿಗಳನ್ನು ನೋಡಿ ಅಂದಿನ ತೆಲುಗು ಕವಿ ಗರಿಮೆಳ್ಳ ಸತ್ಯನಾರಾಯಣ ಹೀಗೆ ವಿಷಾದಿಸಿದ್ದಾರೆ.
ದೇಶಗಳ್ಹನ್ನೆರಡು ಒಕ್ಕುತಲಿದ್ದರೂ
ಹಿಡಿ ಕೂಳಿಗೆ ಬಡತನವಯ್ಯಾ!
ಉಪ್ಪ ಮುಟ್ಟಿದರೆ
ಅಯ್ಯೋ ಪ್ರಮಾದವಯ್ಯಾ!
ನಾಯಿಗಳೊಡನೆ ಕಾದಾಡಿ
ಕೂಳ ತಿನ್ನುವೆವಯ್ಯಾ!
ನೋಡಿರಿದೋ ನಮ್ಮ ಪರಂಗಿ ದೊರೆತನವ
ಅಯ್ಯೋ ನೋಡಿರಿದೋ ನಮ್ಮ ಪರಂಗಿ ಸಿರಿತನವ!
ಉದ್ಯೋಗದ ಹೆಸರಿನಲ್ಲಿ ಬಿಳಿಕಳ್ಳರಿಗೆ ಊಳಿಗ ಮಾಡುವವರನ್ನು ತಯಾರಿಸಿದ ಮೆಕಾಲೆ ವಿದ್ಯಾವಿಧಾನವು ತಿನ್ನುವ ಹೊಸ ಹೊಸ ಪದ್ಧತಿಗಳನ್ನು ನಮಗೆ ಕಲಿಸಿದೆ. ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಸ್ಯ್ನಾಕ್ಸ್, ಸ್ವೀಟ್ಸು.... ಹೀಗೆಯೇ ಸಾಗುತ್ತಾ.... ಫಾಸ್ಟ್ ಫುಡ್ಸ್, ಪ್ರಾಸೆಸ್ಡ್ ಫುಡ್ಸ್, ಎಲ್ಲೆಂದರಲ್ಲಿ ತಿನ್ನುವುದೇ ತಿನ್ನುವುದು! ಬಂಧುಗಳು ಬಂದಾಗ, "ಹೋಳಿಗೆಯೂಟ ಮಾಡಿದ್ದೆವು" ಎಂದು ಹೇಳುವುದನ್ನು ಮರೆತು, "ಸ್ಪೆಷಲ್ ಮಾಡಿದ್ದೆವು" ಎಂದು ವೈಯ್ಯಾರವಾಗಿ ಹೇಳುವುದನ್ನು ನೋಡುತ್ತಿದ್ದೇವೆ! ಔತಣದಲ್ಲಿ, "ಪ್ರಥಮಂ ಮಧುರಮ್ ಆಹಾರಂ, ತಕ್ರಾಂತಂ ಭೋಜನಂ..." ಎನ್ನುವುದು ದಕ್ಷಿಣ ಭಾರತೀಯರ ಊಟದ ಶೈಲಿ ಮತ್ತು ಸಂಪ್ರದಾಯ. ಅಂದರೆ ಭೋಜನದ ಆರಂಭದಲ್ಲಿ ಸಿಹಿ ತಿಂದರೆ ಅದನ್ನು ಮಜ್ಜಿಗೆ ಕುಡಿಯುವುದರ ಮೂಲಕ ಅಂತ್ಯಗೊಳಿಸಬೇಕು. ಇದೇ ವಿಧವಾದ ಪದ್ಧತಿಗಳು ಉತ್ತರ ಭಾರತದಲ್ಲೂ ಇವೆ. ಆದರೆ ಇವೆಲ್ಲವೂ ಇಂದು ಮಂಗಮಾಯವಾಗಿವೆ! ಹಸಿವೆ ಹೆಚ್ಚಬೇಕಂತೆ, ಅತಿಯಾಗಿ ತಿನ್ನಬೇಕಂತೆ! ಆದ್ದರಿಂದ ಮೊದಲು "ಸೂಪು" ಕುಡಿಯಬೇಕಂತೆ! ಹೋಟೆಲ್ಲಿನಿಂದ ಹಿಡಿದು ಮದುವೆ ಔತಣಗಳವರೆಗೂ ಈ ವಿಕೃತಿ ಆಮದಾಗಿ ಹೋಗಿದೆ. ಈ ಬಫೇ ಪಾರ್ಟಿಗಳಲ್ಲಿ ಕಡೆಯಲ್ಲಿ ಐಸ್ ಕ್ರೀಮು ತಿನ್ನುವುದೊಂದು ಸತ್ಸಂಪ್ರದಾಯವಾಗಿದೆ! ಐಸ್‌ಕ್ರೀಮಿನಲ್ಲಿರುವುದೆಲ್ಲಾ ಸಸ್ಯಜನ್ಯವೋ ಅಥವಾ ಪ್ರಾಣಿಜನ್ಯವೋ ಬಲ್ಲವರಾರು? ಗೊತ್ತಿದ್ದರೂ ಪ್ರಶ್ನಿಸುವವರಾರು?
ಅನ್ನಾರ್ಥಿಗಳ ಮನೆಮುಂದೆ
ಬೆಳದಿಂಗಳ ವೃಕ್ಷಗಳು ಬೆಳೆದು
ಅಭ್ಯುದಯದ ಫಲಗಳನು
ನೀಡುವುದು ಎಂದೋ?
ಮಾಯಾ ಮಾರೀಚ ಮೃಗಗಳ
ಜಾಲದಿಂದ ಹೊರಬಂದು
ನಾವೆಲ್ಲಾ ಸರಿದಾರಿಯ
ಕಂಡುಕೊಳ್ಳುವುದೆಂದೋ....?
(ಚಿತ್ರ ಕೃಪೆ: ಅಂತರ್ಜಾಲ)
Comments
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಮೆಕಾಲೆಯ ವಿದ್ಯಾವಿಧಾನವನ್ನು ವಿರೋಧಿಸಿದವರ ಸಂಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತಾ ಹೋಯಿತು. ಕ್ರಿ.ಶ. ೧೮೬೫ರಲ್ಲಿ ಅದನ್ನು ಶೇಖಡಾ ೯೫ರಷ್ಟು ಜನರು ವಿರೋಧಿಸಿದರೆ,
ಇಂದು ಅದನ್ನು ವಿರೋಧಿಸುತ್ತಿರುವವರ ಸಂಖ್ಯೆ ಶೇಖಡಾ ೫ನ್ನೂ ಮೀರದು!
ಎಷ್ಟು ನಿಜವಾಗಿದೆ ಈ ಮಾತು..
ಸರ್ ಲೇಖನ ಸೊಗಸಾಗಿದೆ. ಮುಂದಿನ ಕಂತುಗಳಿಗಾಗಿ ಕಾಯುತ್ತೇನೆ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by Huddar Shriniv…
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು, ಶ್ರೀನಿವಾಸ್ ಅವರೆ. ಉಳಿದ ಕಂತುಗಳನ್ನೂ ಸಹ ಒಂದೊಂದಾಗಿ ಸೇರಿಸುತ್ತೇನೆ. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ :)
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
Thumba upayukthavaada lekhana. Idara bagge innu hechchu mahithi padeyalu uthsukalaagiddene.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by Pushpa Latha
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ನಿಮ್ಮ ಆಸಕ್ತಿಗೆ ಧನ್ಯವಾದಗಳು ಮೇಡಂ. ಎರಡನೇ ಕಂತನ್ನು ಮಿನ್ನೇರಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೇನೆ, ಆದರೆ ಅದೇಕೋ ಲೇಖನದ ಮುಖ್ಯಭಾಗವನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ನಾಳೆ ಬೆಳಿಗ್ಗೆ ಪುನಃ ಅದನ್ನು ಸೇರಿಸಲು ಪ್ರಯತ್ನಿಸುತ್ತೇನೆ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by makara
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಎಂ ಎಸ್ ವರ್ಡಿನಿಂದ ಸೇರಿಸಲು ಪ್ರಯತ್ನಿಸುತ್ತಿದ್ದೀರಿ ಅಂತ ಕಾಣುತ್ತದೆ. ಯಾವುದಾದರೂ text editorಗೆ ಹಾಕಿಕೊಂಡು ಅಲ್ಲಿಂದ ಕಾಪಿ/ಪೇಸ್ಟ್ ಮಾಡಿ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by hpn
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ನೀವು ಕೋರಿದ ಪುಟ ಲಭ್ಯವಿಲ್ಲ
The requested page "/%5Bfield_node_add_path_url%5D" could not be found.
ಮುಖ್ಯ ಪುಟದಲ್ಲಿರುವ ಪ್ರಕಟಿಸಿ ಎನ್ನುವುದರ ಮೇಲೆ ಒತ್ತಿದಾಗ ಮೇಲಿನಂತೆ ಮೆಸೇಜ್ ಕಂಡು ಬರುತ್ತಿದೆ.
ನಾಡಿಗರೆ, ಡ್ಯಾಷ್ ಬೋರ್ಡಿನ ಮೂಲಕ ಹೋದಾಗ ಲೇಖನ ಸೇರಿಸಬೇಕಾದ ಜಾಗವೇ ಕಾಣಿಸುತ್ತಿಲ್ಲ :( ಉಳಿದಂತೆ ಶೀರ್ಷಿಕೆ, ಚಿತ್ರ, Taxanomy upgrade....., blog ವರ್ಗಗಳು ಮೊದಲಾದ ಸ್ಥಳಗಳು ಕಾಣಿಸಿಕೊಳ್ಳುತ್ತಿವೆ. ಆದರೆ Item ’ಇ’ ಮಾತ್ರ ಕಾಣಿಸುತ್ತಿಲ್ಲ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by makara
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಈಗ ಸರಿಯಾಗಿರಬೇಕು. ಪ್ರಯತ್ನಿಸಿ ನೋಡಿ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by hpn
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಇಲ್ಲ, ಈಗಲೂ ಹಾಗೆಯೇ ಇದೆ ನಾಡಿಗರೆ :(
24/09/2016 ಬೆಳಿಗ್ಗೆ 7.10
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by makara
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಓ.ಕೆ. ಈಗ ಸರಿಯಾಗಿರಬೇಕು, ನೋಡಿ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by hpn
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ತುಂಬ ವರ್ಷಗಳಿಂದ ಬದಲಾಗದೆ ಉಳಿದ ಕೆಲವು ಸೆಕ್ಷನ್ನುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿರುವಾಗ ಕೆಲವೊಂದು ಫೀಚರುಗಳು ಆಚೀಚೆಯಾಯ್ತು. ಈಗ ಸರಿಪಡಿಸಲಾಗಿದೆ.
In reply to ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ... by hpn
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಹೌದು ನಾಡಿಗರೆ, ಅದನ್ನು ಈಗ ತಾನೇ ಗಮನಿಸಿದೆ. ಕೂಡಲೇ ಎರಡನೆಯ ಕಂತನ್ನು ಸೇರಿಸಿದ್ದೇನೆ. ನಿಮ್ಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಸಂಪದವನ್ನು ನವೀಕರಿಸುತ್ತಿರುವುದಕ್ಕೆ ಅಭಿನಂದನೆಗಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಭಾಗ - ೧: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ...
ಅದೇಕೋ ನನ್ನ ಒಡನಾಟ ಇತ್ತೀಚೆಗೆ ಸಂಪದದೊಂದಿಗೆ ಕಡಿಮೆಯಾಗಿತ್ತು. ಬಹುಶಃ ಫೇಸ್ ಬುಕ್ಕಿನ ಅತಿ ಬಳಕೆಯೂ ಅದಕ್ಕೆ ಕಾರಣವಾಗಿರಬಹುದು. ಅದರೊಂದಿಗೆ, ದೀರ್ಘವಾದ ಲೇಖನಗಳನ್ನು ಓದುವ ವ್ಯವಧಾನ ಓದುಗರಿಗೆ ಇಲ್ಲಾ ಎನ್ನುವುದೂ ಒಂದು ಅಳಕು. ಆದರೆ ತೆಲುಗಿನಲ್ಲಿ ಈ ಸರಣಿಯನ್ನು ಓದಿದ ಮೇಲೆ, ಇದನ್ನು ಸೂಕ್ತ ವೇದಿಕೆಯಲ್ಲಿ ಕನ್ನಡಿಗರ ಮುಂದಿರಸಬೇಕೆಂದು ಆಲೋಚಿಸಿದಾಗ ನೆನಪಾದದ್ದೇ ನಮ್ಮೆಲ್ಲರ ಮೆಚ್ಚಿನ ಸಂಪದ. ಇದನ್ನು ವಾರದ ವಿಶೇಷ ಲೇಖನವನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಸಂಪದದ ನಿರ್ವಾಹಕರಾದ ನಾಡಿಗರಿಗೆ ಧನ್ಯವಾದಗಳು. ಮತ್ತು ೩೫೦ಕ್ಕೂ ಹೆಚ್ಚು ಬಾರಿ ಸಂಪದಿಗರು ಈ ಪುಟಕ್ಕೆ ಭೇಟಿ ಕೊಟ್ಟಿರುವುದಕ್ಕೆ ಆನಂದದೊಂದಿಗೆ ಆಶ್ಚರ್ಯವೂ ಆಗುತ್ತಿದೆ. ನಿಮ್ಮಲ್ಲರ ಪ್ರೋತ್ಸಾಹ ನನಗೆ ಸರಣಿಯನ್ನು ಮುಂದುವರೆಸುವ ಟಾನಿಕ್ ಆಗಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.
ಈ ಸರಣಿಯ ಎರಡನೆಯ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%AE...