ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೦

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೦

ಮಂಗಲದ ಮುಂಬೆಳಗು
 
ಶ್ರೀರಾಮಾದಿ ವಿಗ್ರಹಗಳನ್ನು ಶ್ರೀಶಂಕರರಿಗೆ ನೀಡಿದ ವರದಮುನಿಗಳು ಹೊರಟುನಿಂತರು. ವರದೇಶನಿಗೆ ನಮಿಸಿದರು. ಆತ್ಮಲಿಂಗವನ್ನು ಅರ್ಚಿಸಿದರು. ಮನದಲ್ಲಿ ಅವನನ್ನೇ ಧ್ಯಾನಿಸುತ್ತಾ ಹಿಮಾಲಯದತ್ತ ಪಯಣಿಸಿದರು.
 
ಶ್ರೀಶಂಕರರ ಮನಸ್ಸು ತುಂಬಿತ್ತು. ದೊರೆತ ರಾಮನ ವಿಗ್ರಹ ಅವರಿಗೆ ಕಾರ್ಯಸಾಧನೆಯ ಯಶಸ್ಸನ್ನು ತೋರಿಸಿಕೊಟ್ಟಿತ್ತು. ಶಿಷ್ಯರೊಂದಿಗೆ ಸಂತುಷ್ಟಮನಸ್ಕರಾಗಿ ಸಮುದ್ರಕ್ಕೆ ತೆರಳಿದರು. ವಿಧಿಪ್ರಕಾರ ಸಮುದ್ರಸ್ನಾನ ಮಾಡಿದರು. ಶಿವಾಲಯಕ್ಕೆ ಬಂದರು. ಆತ್ಮಲಿಂಗದ ಸನ್ನಿಧಿಯಲ್ಲಿ ನಿಂದರು. ಶುದ್ಧವಾದ ಆ ಜ್ಯೋತಿರ್ಮಯಲಿಂಗವನ್ನು ವಿಧಿವತ್ತಾಗಿ ಪೂಜಿಸಿದರು. ನಮಿಸಿದರು. ಭಕ್ತಿಯಿಂದ ಸ್ತುತಿಸಿದರು. ಪ್ರದಕ್ಷಿಣೆ ಮಾಡಿದರು. ದೇವತೆಗಳಲ್ಲಿ ಶ್ರೇಷ್ಠನಾದ ಮಹಾದೇವನನ್ನು, ಆತ್ಮಗಳಲ್ಲಿ ಶ್ರೇಷ್ಠನಾದ ಪರಮಾತ್ಮನನ್ನು, ಸತ್ ಚಿತ್ ಆನಂದ ಸ್ವರೂಪಿಯನ್ನು ಹೃದಯಕಮಲದಲ್ಲಿ ಧ್ಯಾನಿಸಿದರು. ಅವನ ಪ್ರಸನ್ನತೆಯ ಕುರುಹಾಗಿ ಅವನ ಪ್ರಸಾದವನ್ನು ಸ್ವೀಕರಿಸಿದರು. ದಿವ್ಯಲಿಂಗದ ಪ್ರಸಾದದಿಂದ ಅವರ ಕಣ್ಣಾಲಿಗಳು ತುಂಬಿಬಂದವು. ಆನಂದಾಶ್ರು ಧಾರೆಯಾಗಿ ಹರಿಯಿತು. ಶಿವನ ಪರಿವಾರದ ಗಣೇಶ ಮುಂತಾದ ಸನ್ನಿಧಿಗಳನ್ನು ಪೂಜಿಸಿ, ನಮಿಸಿದರು.
 
ಅನ್ನಮಯ – ಪ್ರಾಣಮಯ – ಮನೋಮಯ – ವಿಜ್ಞಾನಮಯ – ಆನಂದಮಯ ಕೋಶಗಳಲ್ಲಿ ಅವರ ಮನಸ್ಸು ಸಂಚರಿಸಿತು. ಬ್ರಹ್ಮಾನಂದದ ಎತ್ತರಕ್ಕೆ ಮನಸ್ಸು ಏರಿನಿಂತಿತು. ನಿರ್ವಿಕಲ್ಪಸಮಾಧಿಯಲ್ಲಿ ಮುಳುಗಿದರು.
 
ವಿದ್ವಾನ್ ಜಗದೀಶಶರ್ಮಾ ಸಂಪ
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org