ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೨

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೨

ನಾರಾಯಣನೆಂಬ ಮೊದಲ ಗುರು
 
ತೇಜೋಮಯವಾಗಿದ್ದ, ಆನಂದಘನವಾಗಿದ್ದ ಅವ್ಯಕ್ತ ಚೈತನ್ಯ ರೂಪುತಳೆಯ ಹೊರಟಾಗ, ಅದು ನಾರಾಯಣನಾಗಿ ಪರಶಿವನಾಗಿ ಕಾಣಿಸಿಕೊಂಡಿತು. ಈ ಇಬ್ಬರೂ ಗುರುವಾಗಿಯೂ ಹೊರಹೊಮ್ಮಿದರು. ಹಾಗಾಗಿಯೇ ಭಾರತೀಯವಾದ ಎಲ್ಲ ಗುರುಪರಂಪರೆಗಳೂ ಒಂದೋ ನಾರಾಯಣನಿಂದ ಆರಂಭವಾಗಿರುತ್ತವೆ ಅಥವಾ ಸದಾಶಿವನಿಂದ ಆರಂಭವಾಗಿರುತ್ತವೆ – ನಾರಾಯಣಸಮಾರಂಭಾಂ ಅಥವಾ ಸದಾಶಿವಸಮಾರಂಭಾಂ.
 
ಶ್ರೀಶಂಕರರ ಪರಂಪರೆ ಶ್ರೀಮನ್ನಾರಾಯಣನಿಂದ ಹರಿದು ಬಂದದ್ದು. ನಾರಾಯಣ ಸೃಷ್ಟಿಮೂಲದ ಮೊದಲ ಅಭಿವ್ಯಕ್ತಿ. ತ್ರಿಮೂರ್ತಿಗಳಲ್ಲಿ ಒಬ್ಬ. ಸೃಷ್ಟಿಯ ಮೂಲದ್ರವ್ಯಗಳಾದ ಸತ್ತ್ವ – ರಜಸ್ಸು – ತಮಸ್ಸುಗಳಲ್ಲಿ ಸತ್ತ್ವಪ್ರಧಾನನಾದವ. ವೈಕುಂಠದ ಪರಮಧಾಮದಲ್ಲಿ ನೆಲೆ ನಿಂತವ. ಲಕ್ಷ್ಮೀರಮಣ. ದುಷ್ಟಶಿಕ್ಷಣ, ಶಿಷ್ಟರಕ್ಷಣಗಳ ಜೊತೆಗೆ ಮರ್ತ್ಯಶಿಕ್ಷಣವನ್ನೂ ಅನುಲಕ್ಷಿಸಿ ಹತ್ತು ಅವತಾರಗಳನ್ನು ಎತ್ತಿದವ. ಹತ್ತಲ್ಲದೆ ಇನ್ನೂ ಅದೆಷ್ಟೋ ಅವತಾರಗಳಿವೆ ಅವನದ್ದು.
 
ರಾಮನಾಗಿ ಬದುಕಿನ ಆದರ್ಶ ತೋರಿದವ, ಕೃಷ್ಣನಾಗಿ ಬದುಕಿನ ಸಂವಿಧಾನವಾದ ಭಗವದ್ಗೀತೆಯನ್ನು ಬೋಧಿಸಿದವ, ಕಪಿಲಮುನಿಯಾಗಿ ಸಾಂಖ್ಯತತ್ತ್ವ ಸಾರಿದವ, ಹಯಗ್ರೀವಮೂರ್ತಿಯಾಗಿ ವಿದ್ಯೆಯನ್ನು ಅನುಗ್ರಹಿಸುತ್ತಿರುವವ.
 
ಮನುಷ್ಯನಾಗಿ ಅವನ ಅವತಾರಗಳ ಪ್ರಧಾನ ಉದ್ದೇಶ ಮರ್ತ್ಯಶಿಕ್ಷಣ. ಮರ್ತ್ಯಾವತಾರಃ ಇಹ ಮರ್ತ್ಯಶಿಕ್ಷಣಂ. ಮನುಷ್ಯರಿಗೆ ಆ ಅವತಾರದಿಂದ ಬದುಕುವ ಶಿಕ್ಷಣ ದೊರೆಯಬೇಕು. ಇದು ಶ್ರೀಮನ್ನಾರಾಯಣ ನಿರಂತರವಾಗಿ ಗುರುವಾಗಿ ಕಂಗೊಳಿಸುವ ಪರಿ.
 
ಇಂತಹ ಶ್ರೀಮನ್ನಾರಾಯಣ ಶ್ರೀಮಠದ ಗುರುಪರಂಪರೆಯ ಮೊದಲ ಗುರು.
 
 
ವಿದ್ವಾನ್ ಜಗದೀಶಶರ್ಮಾ ಸಂಪ
 
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org