ಭಾಗ - ೫ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!

ಭಾಗ - ೫ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!

ಚಿತ್ರ

ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್ 
          ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆಲ್ಲಾ ಮತ, ಧರ್ಮಗಳನ್ನು ನಿರ್ಮೂಲಿಸಿ ಅವರನ್ನೆಲ್ಲಾ ಕ್ರೈಸ್ತಧರ್ಮದ ತೆಕ್ಕೆಯೊಳಗೆ ತರಬೇಕೆನ್ನುವುದೇ ಈ ಮತಪ್ರಚಾರಕರ ಮಿಷನ್ (ಉದ್ದೇಶ)! ಆದರೆ ಥಾಮಸ್ ಮೆಕಾಲೆಯ ಉದ್ದೇಶ ರಾಷ್ಟ್ರೀಯತೆಯನ್ನೂ ಸಹ ಬದಲಾಯಿಸುವ ಹುನ್ನಾರದಿಂದ ಕೂಡಿತ್ತು. ಭಾರತೀಯರನ್ನು ಭಾರತೀಯ ಸಂಸ್ಕಾರ ಪರಂಪರೆಗಳಿಂದ ದೂರಗೊಳಿಸುವುದನ್ನೇ ಲಕ್ಷ್ಯವಾಗಿಟ್ಟುಕೊಂಡ ಮೆಕಾಲೆ ತನ್ನ ಕುಟಿಲ ಯೋಜನೆಗಳನ್ನು ಅನುಷ್ಠಾನಗೊಳಿಸಲುಪಕ್ರಮಿಸಿದ. ತನ್ನ ಮೂವತ್ತನಾಲ್ಕನೇ ವಯಸ್ಸಿನಲ್ಲಿ ಕ್ರಿ.ಶ. ೧೮೩೪ನೇ ಇಸವಿಯಲ್ಲಿ ಅವನು ನಮ್ಮ ದೇಶಕ್ಕೆ ಕಾಲಿಟ್ಟ. ಆ ವೇಳೆಗಾಗಲೇ ಅವನೊಬ್ಬ ನ್ಯಾಯವಾದಿ (ವಕೀಲ) ಮತ್ತು ಇಂಗ್ಲೆಂಡ್ ದೇಶದ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಕ್ರಿ.ಶ. ೧೮೩೨ರಲ್ಲಿ ಅವನು ’ಈಸ್ಟ್ ಇಂಡಿಯಾ ಕಂಪನಿ’ಯ ನಿರ್ದೇಶಕ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದ. ಕ್ರಿ.ಶ. ೧೬೮೮ - ೧೭೦೨ರವರೆಗೆ ಅಂದರೆ ಸುಮಾರು ೧೪ ವರ್ಷಗಳ ಮಧ್ಯದಲ್ಲಿ ಇಂಗ್ಲೆಂಡಿನಲ್ಲಿ ಜರುಗಿದ ಚಾರಿತ್ರಿಕ ಘಟನೆಗಳನ್ನು ಕ್ರೋಢೀಕರಿಸಿ ಐದು ಬೃಹತ್ ಸಂಪುಟಗಳನ್ನು ರಚಿಸಿದ ಮೆಕಾಲೆ ಭಾರತೀಯ ಚರಿತ್ರೆಯನ್ನು ಕಬಳಿಸಿದ ರಾಕ್ಷಸ ಮೇಧಾವಿ! "ಸ್ವಾರ್ಥಕ್ಕಾಗಿ ಅನ್ಯರ ಹಿತಕ್ಕೆ ಘಾತಕವನ್ನುಂಟು ಮಾಡುವವನು ರಾಕ್ಷಸನೆಂದು...... ಹೇಳುವ ಭರ್ತೃಹರಿಯ ನೀತಿ ಶತಕಕ್ಕೆ ಹಿಡಿದ ಕೈಗನ್ನಡಿ ಈ ಸಾಕ್ಷರನಾದ ರಾಕ್ಷಸ. ಬ್ರಿಟಿಷರ ವಾಣಿಜ್ಯ, ವ್ಯಾಪಾರ, ರಾಜಕೀಯ ಹಾಗು ಧಾರ್ಮಿಕ ಸಾಮ್ರಾಜ್ಯಗಳ ವಿಸ್ತರಣೆಗಾಗಿ ಭಾರತದ ರಾಷ್ಟ್ರೀಯ ವಿದ್ಯಾವಿಧಾನವನ್ನು ಧ್ವಂಸಗೊಳಿಸಿದ ಬೌದ್ಧಿಕ ಬೀಭತ್ಸ್ಯಕಾರ ಈ ಮೆಕಾಲೆ....
 
                 ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!
                 ಹಾಲು ಕುಡಿಯುವ ಹಸುಗೂಸಿಗೆ
                 ಮಾತಾಡಲು ಕಲಿಸುವ ಸಂಸ್ಕಾರ,
                 ಪುರುಷನನ್ನು ಪುರುಷೋತ್ತಮನಾಗಿ
                 ತಿದ್ದಿತೀಡಿ ರೂಪಿಸುವ ಸಂಸ್ಕಾರ,
                 ತಲಾಂತರದಿ ಭರತವರ್ಷಕೆ
                 ಕೊಡುಗೆಯಾದ ಸಂಸ್ಕಾರ,
                 ಸಂಸ್ಕಾರಗಳ ಸಮಾಹಾರವೇ
                 ಮಾನವ ಪೀಳಿಗೆಗೆ ಅಸ್ತಿಭಾರ!
 
         ಆದರೆ, ನಮ್ಮ ಸಂಸ್ಕಾರಗಳ ಪ್ರಭಾವವನ್ನು ಬ್ರಿಟಿಷರ ವಿದ್ಯಾವಿಧಾನವು ನಾಶಗೊಳಿಸಿತು. ದೇವತೆಗಳ ಗುರು ಬೃಹಸ್ಪತಿಯಾದರೆ, ರಾಕ್ಷಸರ ಕುಲಗುರು ಶುಕ್ರಾಚಾರ್ಯ. ಈ ಶುಕ್ರಾಚಾರ್ಯ ಮೃತ ಸಂಜೀವಿನಿ ವಿದ್ಯೆಯನ್ನು ಕೈವಶ ಮಾಡಿಕೊಂಡಿದ್ದ. ಈ ಮೃತ ಸಂಜೀವಿನಿಯ ಮೂಲಕ ಸತ್ತವರನ್ನು ಮತ್ತೆ ಬದುಕಿಸಲಾಗುತ್ತಿತ್ತು ಹಾಗಾಗಿ ದೇವದಾನವರ ಯುದ್ಧದಲ್ಲಿ ಮೃತರಾದ ರಾಕ್ಷಸರೆಲ್ಲಾ ಈ ವಿದ್ಯೆಯ ಮೂಲಕ ಮತ್ತೆ ಬದುಕಿ ಬರುತ್ತಿದ್ದರು. ಆದರೆ ದೇವತೆಗಳಿಗೆ ಹೀಗೆ ಮತ್ತೆ ಬದುಕಿ ಬರುವ ಅವಕಾಶವಿರಲಿಲ್ಲ, ಹಾಗಾಗಿ ಅಸುರರ ಸಂಖ್ಯೆಯು ಕ್ರಮೇಣ ವೃದ್ಧಿಯಾದರೆ ಸುರರ ಸಂಖ್ಯೆಯು ಇಳಿಮುಖವಾಗತೊಡಗಿತು. ಇದನ್ನು ನಿವಾರಿಸಲು ದೇವತೆಗಳೂ ಸಹ ಮೃತ ಸಂಜೀವಿನಿ ವಿದ್ಯೆಯನ್ನು ಕಲಿತುಕೊಳ್ಳಲು ಬಯಸಿದರು. ವಾಸ್ತವವಾಗಿ ಅಮೃತವನ್ನು ಕುಡಿದ ದೇವತೆಗಳು ಜರಾಮರಣಗಳಿಲ್ಲದವರು ಅಂದರೆ ಮುಪ್ಪು, ಸಾವುಗಳಿಲ್ಲದ ಅಮರರು! ಆದರೆ ಯಾರಾದರೂ ಅವರನ್ನು ವಧಿಸಿದರೆ ಮಾತ್ರ ಅವರು ಮತ್ತೆ ಬದುಕಿ ಬರಲಾಗುತ್ತಿರಲಿಲ್ಲ. ಆದ್ದರಿಂದ ಅವರು ಬೃಹಸ್ಪತಿಯ ಕುಮಾರನಾದ ಕಚನ ಸಹಾಯವನ್ನು ಕೇಳಿದರು. ಕಚನನ್ನು, ನೇಮ ನಿಷ್ಠಗಳಿಂದ ಕೂಡಿದ ಶೀಲವಂತನೆಂದು ದೇವತೆಗಳು ಕೊಂಡಾಡಿದರು. ನಿಯಮಗಳನ್ನು ಪಾಲಿಸುವುದು ಮತ್ತು ಒಳ್ಳೆಯ ಶೀಲವನ್ನು ಹೊಂದಿರುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ. 
        ಹಾಗಾಗಿ ಉತ್ತಮ ನಡತೆಯನ್ನುಳ್ಳ ಕಚನು, ಶುಕ್ರಾಚಾರ್ಯರ ಸೇವೆಯನ್ನು ನಿಷ್ಠೆಯಿಂದ ಮಾಡಿ ಅವರ ಬಳಿ ಮೃತ ಸಂಜೀವಿನಿ ವಿದ್ಯೆಯನ್ನು ಕಲಿತುಕೊಂಡು ಬಂದು ತಮ್ಮ ಕುಲದ ಹಿತವನ್ನು ಕಾಪಾಡಬೇಕೆಂಬುದು ದೇವತೆಗಳ ಇಚ್ಛೆಯಾಗಿತ್ತು. ಕಚನು ಶುಕ್ರಾಚಾರ್ಯರ ಬಳಿ ಶಿಷ್ಯ ವೃತ್ತಿಗೆ ಸೇರಿಕೊಂಡನು. ಆದರೆ ದೇವತಾ ಪುತ್ರನಾಗಿದ್ದ ಕಚನನ್ನು ರಾಕ್ಷಸರು ಹಿಂಸಿಸುತ್ತಿದ್ದರು. ಅವರು ಹಲವಾರು ಬಾರಿ ಕಚನನ್ನು ವಿವಿಧ ರೀತಿಗಳಲ್ಲಿ ಕೊಂದು ಹಾಕಿದರು. ಆದರೆ ಹಾಗೆ ಅವನು ಮೃತನಾದಾಗಲೆಲ್ಲಾ ಶುಕ್ರಾಚಾರ್ಯರು ಸಂಜೀವಿನಿ ಮಂತ್ರವನ್ನು ಉಚ್ಛರಿಸಿ ಅವನನ್ನು ಬದುಕಿಸುತ್ತಿದ್ದರು. ಕಡೆಗೊಮ್ಮೆ ರಾಕ್ಷಸರು ಕಚನನ್ನು ಕೊಂದು ಅವನ ದೇಹವನ್ನು ಸುಟ್ಟು ಬೂದಿ ಮಾಡಿ, ಆ ಬೂದಿಯನ್ನು ಮದ್ಯದಲ್ಲಿ ಬೆರೆಸಿ ಶುಕ್ರಾಚಾರ್ಯರು ಅದನ್ನು ಕುಡಿಯುವಂತೆ ಮಾಡಿದರು. ಕಚನು ರಾಕ್ಷಸರ ಕೈಯ್ಯಲ್ಲಿ ಇಷ್ಟೆಲ್ಲಾ ಹಿಂಸೆಗಳನ್ನು ಅನುಭವಿಸಬೇಕಾಯಿತು! ಆಮೇಲೆ ಶುಕ್ರಾಚಾರ್ಯರು ಅವನನ್ನು ಪುನಃ ಬದುಕಿಸಿದರು. ಕಚನು ಬದುಕ ಬೇಕಾದರೆ ಅವನು ಶುಕ್ರಾಚಾರ್ಯರ ಹೊಟ್ಟೆಯನ್ನು ಸೀಳಿಕೊಂಡು ಹೊರಬರಬೇಕು, ಹಾಗೆ ಮಾಡಿದರೆ ಶುಕ್ರಾಚಾರ್ಯರು ಸಾಯುತ್ತಾರೆ. ಆದ್ದರಿಂದ ಅವರು ಪುನಃ ಬದುಕಲು ಸಾಧ್ಯವಾಗುವಂತೆ ಆ ಮೃತ ಸಂಜೀವಿನಿ ವಿದ್ಯೆಯನ್ನು ಅವರು ಕಚನಿಗೆ ಬೋಧಿಸಿದರು. ರಾಕ್ಷಸ ಶಿಷ್ಯರಿಗಾಗಲಿ ಅಥವಾ ತನ್ನ ಮಗಳಾದ ದೇವಯಾನಿಗಾಗಲಿ ಅವರು ಈ ವಿದ್ಯೆಯನ್ನು ಹೇಳಿಕೊಡಲಿಲ್ಲ. ಕಚನಿಗೇ ಏಕೆ ಬೋಧಿಸಿದರು ಎನ್ನುವುದು ಸೋಜಿಗದ ಪ್ರಶ್ನೆ! (ಕೆಲವೊಂದು ಪಾಠಗಳಲ್ಲಿ ಶುಕ್ರಾಚಾರ್ಯರು ಈ ವಿದ್ಯೆಯನ್ನು ತಮ್ಮ ಮಗಳಿಗೆ ಬೋಧಿಸಿದರು ಎಂದು ಇದೆ. ಆದರೆ ಅದು ವಿಷಯಾಂತರವಾಗುವುದರಿಂದ ಅದರ ಚರ್ಚೆ ಇಲ್ಲಿ ಅಪ್ರಸ್ತುತವೆನಿಸುತ್ತದೆ). 
       ಬೇರೊಬ್ಬ ರಾಕ್ಷಸ ಶಿಷ್ಯನಿಗೆ ಶುಕ್ರಾಚಾರ್ಯರು ಮಂತ್ರೋಪದೇಶವನ್ನು ಮಾಡಬಹುದಾಗಿತ್ತು ಮತ್ತು ಅದರ ಮೂಲಕ ಕಚನು ಶುಕ್ರಾಚಾರ್ಯರ ಹೊಟ್ಟೆಯನ್ನು ಸೀಳಿಕೊಂಡು ಬಂದ ನಂತರ ಆ ವಿದ್ಯೆಯನ್ನು ಪಡೆದ ರಾಕ್ಷಸ ಶಿಷ್ಯನಿಂದ ಅವರು ಪುನಃ ಬದುಕಿ ಬರಬಹುದಾಗಿತ್ತು. ಆದರೆ ಅದು ಹಾಗಾಗಲಿಲ್ಲ, ಏಕೆಂದರೆ ಗುಣವಂತನಾದ ವಿದ್ಯಾರ್ಥಿಗೇ ಶುಕ್ರಾಚಾರ್ಯರು ’ಮೃತ ಸಂಜೀವಿನಿ ವಿದ್ಯೆ’ಯನ್ನು ಹೇಳಿಕೊಟ್ಟರು ಮತ್ತು ಅದರ ಬಾಧ್ಯತೆಯನ್ನೂ ವಹಿಸಿದರು. ಅಷ್ಟರಲ್ಲಾಗಲೇ ಕಚನು ಗುಣಸಂಪನ್ನನೆಂಬ ವಿಶ್ವಾಸವು ಗುರುಗಳಿಗೆ ಉಂಟಾಗಿತ್ತು. ಹೀಗೆ ಪುಟಕ್ಕಿಟ್ಟ ಚಿನ್ನದಂತೆ ಶಿಷ್ಯರ ಗುಣಗಳನ್ನು ಪರಿಶೀಲಿಸದ ನಂತರವಷ್ಟೇ ವಿಶ್ವಾಮಿತ್ರರು ರಘುಕುಲ ತಿಲಕನಾದ ಶ್ರೀ ರಾಮನಿಗೆ, ದ್ರೋಣಾಚಾರ್ಯರು ಕುರುವಂಶದ ಕುಡಿಯಾದ ಅರ್ಜುನನಿಗೆ ವಿಶೇಷ ಅಸ್ತ್ರಗಳ ವಿದ್ಯೆಗಳನ್ನು ದಯಪಾಲಿಸಿದರು! ಕಚನು ಅಷ್ಟು ಭಯಂಕರವಾದ ಹಿಂಸೆಯನ್ನು ತಾಳಿಕೊಂಡ ಮತ್ತು ಸಮಾಜದ ಹಿತಕ್ಕೋಸ್ಕರ ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದ. ಅವನು ತನಗಾಗಿ ಅಲ್ಲದೆ ತನ್ನ ಕುಲದ ಸಮಷ್ಟಿ ಹಿತಕ್ಕಾಗಿ ಅನೇಕ ಕಷ್ಟಗಳನ್ನು ಭರಿಸಿದ. 
        ಮೆಕಾಲೆ ವಿದ್ಯಾವಿಧಾನ ಈ ಸಾಮಾಜಿಕ ನಿಷ್ಠೆಯನ್ನು ಹತ್ಯೆಗೈದಿತು. ವಿದ್ಯಾರ್ಥಿಗಳಲ್ಲಿ ಮತ್ತು ವಿದ್ಯಾವಂತರಲ್ಲಿ ಸಮಷ್ಟಿ ಹಿತಕ್ಕಿಂತ ವ್ಯಷ್ಟಿ ಹಿತವೇ ವಿಜೃಂಭಿಸುವಂತಹ ಬದಲಾವಣೆಯನ್ನು ತಂದಿತು! ಇಂಗ್ಲೀಷ್ ವಿದ್ಯೆ ಏಕೆ ಎಂದು ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ಸಿಗುವ ಸಿದ್ಧ ಉತ್ತರ ಉದ್ಯೋಗಕ್ಕಾಗಿ! ಹೊಟ್ಟೆಹೊರೆಯುವುದೇ ಈ ಆಧುನಿಕ ವಿದ್ಯೆಯ ಪರಮಲಕ್ಷ್ಯವಾಗಿದೆ! ಹಾಗಾದರೆ ಪ್ರಾಚೀನ ಭಾರತದಲ್ಲಿ ವಿದ್ಯಾರ್ಜನೆಯ ದೃಷ್ಟಿಯು ಉದರ ಪೋಷಣೆಯ ಮೇಲೆ ಕೇಂದ್ರೀಕೃತವಾಗಿರಲಿಲ್ಲವೇ? ಆಗ ಉದರ ಪೋಷಣೆಗಾಗಿ ವಿದ್ಯಾಭ್ಯಾಸ ಮಾಡುತ್ತಿರಲಿಲ್ಲವೇ? ಖಂಡಿತಾ ಆಗಲೂ ಹೊಟ್ಟೆಹೊರೆಯುವುದಕ್ಕಾಗಿ ವಿದ್ಯಾರ್ಜನೆ ಮಾಡುತ್ತಿದ್ದರು ಆದರೆ ಯಾವ ದೃಷ್ಟಿಯಿಂದ? ಸ್ತ್ರೀ ಪುರುಷ ಶೃಂಗಾರ ಸಂಬಂಧದಂತೆ - "ಒಬ್ಬನು ಅನೇಕವಾಗ ಬಯಸುವಂತೆ - ಏಕಸ್ಯಾಂ ಬಹುಮನ್ಯೇಯ - ಎಂದು ಶ್ರುತಿಗಳಲ್ಲಿ ಹೇಳಿರುವ ಲಕ್ಷ್ಯ ಸಾಧನೆಯ ಭಾಗವಾಗಿ, ಅವಿಚ್ಛಿನ್ನವಾದ ಪ್ರಜಾಪರಂಪರೆಯನ್ನು (ಸಂತಾನವನ್ನು) ಮುಂದುವರೆಸುವ ಮಾರ್ಗವಾಗಿ, ಕುಟುಂಬ ವ್ಯವಸ್ಥೆಯಲ್ಲಿ ಈ ಉನ್ನತ ಚಿಂತನೆಯನ್ನು ನಮ್ಮ ಧರ್ಮವು ಅಳವಡಿಸಿದೆ. ಈ ಶೃಂಗಾರ ಸಂಬಂಧದಲ್ಲಿ ಆನಂದವಿದೆ! ಆದರೆ ಆನಂದವೊಂದೇ ಏಕೈಕ ಗುರಿ ಎಂದು ಮೆಕಾಲೆ ಪಂಡಿತರು ಹೇಳುತ್ತಾರೆ! ಇದೇ ಭಾರತೀಯ ವಿದ್ಯಾವಿಧಾನಕ್ಕೂ ಮೆಕಾಲೆ ವಿದ್ಯಾವಿಧಾನಕ್ಕೂ ಇರುವ ಗಹನವಾದ ವ್ಯತ್ಯಾಸ!
       ಹಲವಾರು ಯುಗಗಳ ಪೂರ್ವದಲ್ಲಿ ಹನುಮಂತನು ನೂರು ಯೋಜನಗಳಷ್ಟು ದೂರವನ್ನು ಹಾರಿ ಸಮುದ್ರದ ಮಧ್ಯದಲ್ಲಿದ್ದ ಲಂಕಾನಗರಿಯ ಅಶೋಕವನದಲ್ಲಿದ್ದ ಸೀತೆಯನ್ನು ನೋಡಿದನು. ಅನಂತರ ಅದೇ ದೂರವನ್ನು ಹಾರಿ ಹಿಂದಿರುಗಿ ಭಾರತ ದೇಶದ ತೀರವನ್ನು ಸೇರಿದ. "ಸೀತಾದೇವಿ ಹೇಗಿರುತ್ತಾಳೆ" ಎನ್ನುವ ಜಾಂಬವಂತನ ಪ್ರಶ್ನೆಗೆ ಉತ್ತರವಾಗಿ ಹನುಮಂತನು, "ಪಾಡ್ಯದ ದಿನದಂದು ಪಾಠಗಳನ್ನು ಕಲಿತ ವಿದ್ಯೆಯಂತೆ ಆಕೆ ಕೃಶಳಾಗಿದ್ದಾಳೆ" ಎಂದು ವಿವರಿಸುತ್ತಾನೆ. ಇದನ್ನು ಆದಿಕವಿ ವಾಲ್ಮೀಕಿ ತನ್ನ ಕೃತಿಯಲ್ಲಿ ಬಣ್ಣಿಸಿದ್ದಾನೆ. ಸೀತಾದೇವಿ ಏಕೆ ಕೃಶಳಾಗಿದ್ದಳು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಾಡ್ಯದಂದು ಪಾಠಗಳನ್ನು ಅಭ್ಯಾಸ ಮಾಡಿದರೆ ಆ ವಿದ್ಯೆಯೂ ಸಹ ಕೃಶವಾಗಿ ಹೋಗುತ್ತದೆ ಎನ್ನುವ ವಿಚಾರ ಈಗ ನಮ್ಮಲ್ಲಿ ಬಹುತೇಕರಿಗೆ ತಿಳಿಯದು..... ಈ ಸಂಪ್ರದಾಯವನ್ನು ಮೆಕಾಲೆ ವಿದ್ಯೆ ನುಂಗಿ ಹಾಕಿದೆ! ರಾಮನ ವಿರಹದಿಂದ ಕೃಶಳಾಗಿದ್ದ ಸೀತಾದೇವಿಯನ್ನು ಪಾಡ್ಯಮಿಯ ದಿನದಂದು ವಿದ್ಯಾಭ್ಯಾಸ ಮಾಡಿ ಕೃಶಗೊಂಡ ವಿದ್ಯೆಯೊಂದಿಗೆ ಆದಿಕವಿ ಹೀಗೆ ಹೋಲಿಸಿದ್ದಾನೆ - ಪ್ರತಿಪತ್ ಪಾಠಶೀಲಸ್ಯ ವಿದ್ಯೇವ ತನುತಾಂಗತಾ! ವಿದ್ಯಾರ್ಥಿಗಳಿಗೆ ಪಾಡ್ಯ, ಅಷ್ಟಮಿ ಮತ್ತು ಅಮವಾಸ್ಯೆಗಳಂದು ರಜೆಯನ್ನು ಕೊಡುವ ಸಂಪ್ರದಾಯವು ನಮ್ಮಲ್ಲಿ ಅನಾದಿಕಾಲದಿಂದಲೂ ಇದೆ, ವಾಲ್ಮೀಕಿ ರಾಮಾಯಣವನ್ನು ರಚಿಸುವ ಕಾಲಕ್ಕಾಗಲೇ ಅದು ಅನುಷ್ಠಾನದಲ್ಲಿತ್ತು. ಬ್ರಿಟಿಷರು ಪಾಠಶಾಲೆಗಳನ್ನು ತೆರೆಯುವ ಮೊದಲೂ ಈ ಸಂಪ್ರದಾಯ ನಮ್ಮಲ್ಲಿ ರೂಢಿಯಲ್ಲಿತ್ತು, ಆದರೆ ಮೆಕಾಲೆ ವಿದ್ಯೆ ಇಲ್ಲಿ ತಳವೂರಿದ ಮೇಲೆ ಭಾನುವಾರ ಶಾಲೆಗಳಿಗೆ ರಜೆ ಘೋಷಿಸುವ ಪದ್ಧತಿ ಜಾರಿಗೆ ಬಂತು. ನಮ್ಮ ಸಂಸ್ಕೃತಿಯನ್ನು ಪಾಶ್ಚಾತ್ಯರು ’ಭೂಸ್ಥಾಪಿತ’ ಮಾಡಿದರು. ಯಾರ ಸಂಪ್ರದಾಯ ಪದ್ಧತಿಗಳು ಒಳ್ಳೆಯವು ಎನ್ನುವುದು ಇಲ್ಲಿ ಪ್ರಧಾನವಾದ ಪ್ರಶ್ನೆಯಲ್ಲ. ನಮ್ಮ ಪಂಚಾಂಗಗಳಲ್ಲಿ ಮಾತ್ರ "ಅನಧ್ಯಯನ ದಿನತ್ರಯಂ (ಅಮವಾಸ್ಯೆ, ಹುಣ್ಣಿಮೆ ಮತ್ತು ಅಷ್ಟಮಿ) ಎಂದು ಬರೆಯುತ್ತಿದ್ದಾರೆ. ಅಮವಾಸ್ಯೆಯ ಮತ್ತು ಹುಣ್ಣಿಮೆಯ ಮೊದಲು ಬರುವ ಎರಡು ಚತುರ್ದಶಿಗಳು ಮತ್ತು ನಂತರ ಬರುವ ಎರಡು ಪಾಡ್ಯದ ದಿನಗಳಲ್ಲಿಯೂ ಸಹ ವಿದ್ಯಾಭ್ಯಾಸವನ್ನು ಮಾಡುವುದು ವರ್ಜ್ಯವಾಗಿತ್ತು. ಒಟ್ಟಿನಲ್ಲಿ ಎರಡು ಅಷ್ಟಮಿಗಳನ್ನೂ ಸೇರಿಸಿ ತಿಂಗಳಿನಲ್ಲಿ ಎಂಟು ದಿನ ರಜೆ ಇರುತ್ತಿತ್ತು. ಆದರೆ ಇಂದು, ನಮ್ಮ ಶಾಲಾ ಕಾಲೇಜುಗಳಲ್ಲಿ ಇವನ್ನು ಪಾಟಿಸಲಾಗುತ್ತಿಲ್ಲ! 
      ಒಮ್ಮೆ ಇಂಗ್ಲೀಷನ್ನು ಕಲಿತುಕೊಳ್ಳಲು ಪಂಚತಂತ್ರವನ್ನು ರಚಿಸಿದ ವಿಷ್ಣುಶರ್ಮ ಮತ್ತು ತೆಲುಗು ಮಹಾಭಾರತವನ್ನು ರಚಿಸಿದ ತಿಕ್ಕನ ಸ್ವರ್ಗದಿಂದ ತೆಲುಗುನಾಡಿಗೆ ಬಂದರಂತೆ. ಈ ಕಥೆ ವಿಶ್ವನಾಥ ಸತ್ಯನಾರಾಯಣ ಎನ್ನುವವರು ರಚಿಸಿದ, "ವಿಷ್ಣು ಶರ್ಮನ ಇಂಗ್ಲೀಷ್ ಚದುವು - ವಿಷ್ಣುಶರ್ಮನ ಇಂಗ್ಲೀಷ್ ಕಲಿಕೆ" ಎನ್ನುವ ತೆಲುಗು ಕಾದಂಬರಿಯಲ್ಲಿ ಬರುತ್ತದೆ. ವಿಷ್ಣುಶರ್ಮ ಮತ್ತು ತಿಕ್ಕನರಿಬ್ಬರೂ ಒಬ್ಬ ಅಧ್ಯಾಪಕನ ಮನೆಯಲ್ಲಿ ವಿದ್ಯಾರ್ಜನೆಗಾಗಿ ಉಳಿದುಕೊಳ್ಳುತ್ತಾರೆ. ಅವರಿಬ್ಬರೂ ಅಲ್ಲಿ ಇಂಗ್ಲೀಷನ್ನು ಕಲಿತುಕೊಳ್ಳುತ್ತಿರುತ್ತಾರೆ. ಆದರೆ ಆ ಅಧ್ಯಾಪಕರು ಭಾನುವಾರದಂದು ಕಾಲೇಜಿಗೆ ಹೋಗುವುದಿಲ್ಲ. ಹೀಗೇಕೆ ಎಂದು ಆ ಮಹಾಕವಿಗಳಿಬ್ಬರಿಗೂ ಸಂದೇಹವುಂಟಾಗುತ್ತದೆ, ಅದಕ್ಕೆ ಉತ್ತರವಾಗಿ ಆ ಅಧ್ಯಾಪಕರು ಇಂದು ರಜೆ ಎಂದು ಹೇಳುತ್ತಾರೆ! "ಅದೇನು ಸ್ವಾಮಿ, ಅಷ್ಟಮಿ, ಪಾಡ್ಯ, ಅಮಾವಾಸ್ಯೆಯಂತಹ ದಿನಗಳಲ್ಲಿ ಮಾತ್ರವಲ್ಲವೇ ಅಧ್ಯಾಪನೆಗೆ ವಿರಾಮ?" ಎಂದು ಅವರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಆ ಇಂಗ್ಲೀಷ್ ಅಧ್ಯಾಪಕರು, "ಆರು ದಿವಸಗಳ ಸೃಷ್ಟಿಯನ್ನು ಮಾಡಿದ ದೇವರು ಆದಿತ್ಯವಾರ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾನಂತೆ, ಆದ್ದರಿಂದ ಈ ದಿನ ನಾವೂ ರಜೆ ತೆಗೆದುಕೊಳ್ಳುತ್ತೇವೆ" ಎಂದು ತಮ್ಮ ಪಾಶ್ಚಾತ್ಯ ವಿಜ್ಞಾನ ಪಾಂಡಿತ್ಯವನ್ನು ಪ್ರದರ್ಶಿಸಿದರು! "ತೆಗೆದುಕೊಂಡರೆ ತೆಗೆದುಕೊಳ್ಳಿ ಆದರೆ ಅಮವಾಸ್ಯೆ, ಪಾಡ್ಯಗಳಲ್ಲಿ ಕಲಿತ ವಿದ್ಯೆ ಮೈಗೆ ಹತ್ತುವುದಿಲ್ಲವಲ್ಲ.........!" ಎಂದು ವಿಷ್ಣುಶರ್ಮನು ಹೇಳಿದರೆ, "ಏಕೆ ಮೈಗೆ ಹತ್ತುವುದಿಲ್ಲ? ಅಮಾವಾಸ್ಯೆಯ ದಿವಸ ಓದಿಕೊಂಡವರು ದೊಡ್ಡ ದೊಡ್ಡ ವಿದ್ಯಾವಂತರಾಗಿದ್ದಾರೆ, ಡಿಗ್ರಿಗಳನ್ನೂ, ಡಾಕ್ಟರೇಟುಗಳನ್ನೂ.... ಪಡೆದುಕೊಂಡಿದ್ದಾರೆ!" ಎಂದು ಅವನ ಮಾತುಗಳನ್ನು ಮಧ್ಯದಲ್ಲೇ ತುಂಡರಿಸಿದರು ಆ ಆಧುನಿಕ ಅಧ್ಯಾಪಕರು. "ಪಡೆದುಕೊಂಡಿದ್ದರೂ ಪಡೆದುಕೊಂಡಿರಬಹುದೇನೋ! ಏಕೆಂದರೆ, ಅವರು ಕಲಿತಿರುವುದೆಲ್ಲಾ ಬಹುಶಃ ವಿದ್ಯೆಯಲ್ಲವೇನೋ!" ಎಂದು ತಿಕ್ಕನ ಮತ್ತು ವಿಷ್ಣುಶರ್ಮರು ಪರಸ್ಪರ ಸಮಾಧಾನ ಮಾಡಿಕೊಂಡರು. 
       ಹೀಗೆ ವಿದ್ಯೆಯಲ್ಲದ ವಿಷಯಗಳೆಲ್ಲವೂ ವಿದ್ಯೆಗಳಾಗಿವೆ. ಆದರೆ ಭಾರತೀಯ ವಿದ್ಯೆಗಳು ಮಾತ್ರ ವಿದ್ಯೆಗಳಾಗದೇ ಹೋಗುತ್ತಿವೆ!
      ಶುಕ್ರಾಚಾರ್ಯರ ಮಗಳು ದೇವಯಾನಿ ಕಚನನ್ನು ಮದುವೆ ಮಾಡಿಕೊಳ್ಳಬಯಸುತ್ತಾಳೆ. ತನಗೂ ಕಚನಿಗೂ ಈ ಮೊದಲೇ ಮನ್ಮಥನು ಮದುವೆಯನ್ನೂ ಮಾಡಿಸಿದ್ದಾನೆಂದೂ ಆಕೆ ನಿರ್ಧಾರಿತವಾಗಿ ಹೇಳುತ್ತಾಳೆ. ದೇವಲೋಕಕ್ಕೆ ಹಿಂದಿರುಗಿ ಹೋಗುತ್ತಿದ್ದ ಕಚನನ್ನು ಹಿಡಿದು ನಿಲ್ಲಿಸಿ, "ನೀನು ಬ್ರಹ್ಮಚಾರಿ, ವಿದ್ಯಾಭ್ಯಾಸವನ್ನು ಪೂರೈಸಿದ್ದೀಯ. ನಾನು ಕನ್ಯೆ, ನೀನು ಸಂಜೀವಿನಿಯೊಂದಿಗೆ ನನ್ನನ್ನೂ ನಿನ್ನೊಂದಿಗೆ ಒಯ್ಯುವಂತವನಾಗು, ಮದನನು ನಮಗೆ ಈ ಮೊದಲೇ ವಿವಾಹವನ್ನು ಮಾಡಿದ್ದಾನೆ......." ಎಂದು ತನ್ನ ಬಯಕೆಯನ್ನು ವ್ಯಕ್ತ ಮಾಡುತ್ತಾಳೆ. ಆದರೆ ಕಚನು ಈ ಅಧರ್ಮ ವಿವಾಹವನ್ನು ತಿರಸ್ಕರಿಸುತ್ತಾನೆ. ದೇವಯಾನಿಗೆ ಕಚನು ಹೇಳಿದ ಪ್ರತ್ಯುತ್ತರವನ್ನು ತೆಲುಗು ಕವಿ ನನ್ನಯ ಈ ಕೆಳಗಿನ ಕಂದ ಪದ್ಯದಲ್ಲಿ ವಿವರಿಸಿದ್ದಾನೆ, ವಿದ್ಯಾಸಂಪ್ರದಾಯವನ್ನು ವಿಶದೀಕರಿಸಿದ್ದಾನೆ. 
                "ಗುರುಗಳಿಗೆ ಶಿಷ್ಯರು ಪುತ್ರರು
                 ಪರಮಾರ್ಥದ ಲೋಕಧರ್ಮದ ಪಥವಿದು, ಇದನು
                 ಕೀಳಾಗಿಸದಿರು, ಈ ನುಡಿಗಳನು
                 ತರುಣೀ! ಗುರುಪುತ್ರೀ! ನಿನಗೆ ತಗದಾ ನುಡಿಗಳ್" 
(ಕಂದ ಪದ್ಯದ ಛಂದಸ್ಸಿನ ವಿವರಗಳು ನನಗೆ ತಿಳಿಯವು. ತಿಳಿದುಕೊಂಡರೂ ಸಹ ಪದ್ಯವನ್ನು ಛಂದಸ್ಸಿಗನುಗುಣವಾಗಿ ಬರೆಯಬಲ್ಲ ಕವಿ ನಾನಲ್ಲ. ಹಾಗಾಗಿ ಇಲ್ಲಿ ಕೇವಲ ಮೂಲ ಪದ್ಯದ ಭಾವವನ್ನು ಮಾತ್ರವೇ ಕೊಟ್ಟಿದ್ದೇನೆ). 
        ಶಿಷ್ಯನಿಗೆ ಅವನ ಗುರು ಹಾಗು ಗುರುಪತ್ನಿಯರು ತಂದೆತಾಯಿಗಳು! ಹಾಗಾಗಿ ಒಬ್ಬ ಗುರುವಿನ ಬಳಿಯಲ್ಲಿ ಓದುವವರ ನಡುವೆ ಹಾಗು ಗುರುವಿನ ಸಂತಾನಗಳ ಮಧ್ಯೆ ಭ್ರಾತೃತ್ವ (ಸಹೋದರ) ಭಾವವು ಏರ್ಪಡುತ್ತದೆ. ಬ್ರಿಟಿಷರು ಶಾಲಾ ಕಾಲೇಜುಗಳನ್ನು ಆರಂಭಿಸಿದ ನಂತರ ಈ ಸಂಪ್ರದಾಯಕ್ಕೆ ಗೆದ್ದಲು ಹಿಡಿಯಿತು. ಕ್ರಮೇಣ ಕಾಲೇಜೆಂಬ ಮಹಾವಿದ್ಯಾಲಯಗಳು ಪ್ರೇಮಿಸಿ ಪರಿಣಯವಾಡುವ ಪ್ರೇಮಾಲಯಗಳಾಗಿ ಬದಲಾಗಿವೆ. ಇದೀಗ ಕಥೆ, ಕಾದಂಬರಿಗಳಲ್ಲಿ, ಟಿ.ವಿ. ಧಾರವಾಹಿ ಹಾಗು ಸಿನಿಮಾಗಳಲ್ಲಿ ಕಾಲೇಜ್ ಎಂದರೆ ಯುವಕ-ಯುವತಿಯರು ಪ್ರೇಮಿಸಲು, ಮೋಹಿಸಲು ಇರುವ ಕೇಂದ್ರಗಳೆನ್ನುವಂತೆ ಚಿತ್ರೀಕರಿಸುತ್ತಾರೆ! ಯಾವ ಸಂಪ್ರದಾಯ ಒಳ್ಳೆಯದು? ಅಮಾವಾಸ್ಯೆಯಂದು ಓದದ ಸಂಪ್ರದಾಯವಾ ಅಥವಾ ಅಮವಾಸ್ಯೆಯಂದೂ ಓದುವ ಸಂಪ್ರದಾಯವಾ? 
         ಚಂದ್ರನಿಗೂ ಮಾನವನ ಬುದ್ಧಿ, ಮನಸ್ಸುಗಳಿಗೂ ನೇರ ಸಂಬಂಧವಿದೆ. ಸಮುದ್ರಗಳನ್ನೇ ಅಲ್ಲೋಲಕಲ್ಲೋಲವಾಗಿಸುವ ಶಕ್ತಿಯುಳ್ಳ ಚಂದ್ರನ ಪ್ರಭಾವವು ಮಾನವನ ಬುದ್ಧಿ, ಮನಸ್ಸುಗಳನ್ನು ನಿಯಂತ್ರಿಸಲಾರದೇ? ಪಂಚಭೂತಗಳ ಸಮಾಹಾರಾವಾಗಿರುವ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವೂ ಮತ್ತೊಂದು ವಸ್ತುವಿನೊಂದಿಗೆ ಅನುಸಂಧಾನವಾಗಿರುತ್ತದೆ. ಮಾನವನನ್ನು ಭೂಮಿಯು ಪ್ರಭಾವಿತಗೊಳಿಸುತ್ತದೆ. ಭೂಮಿಗೆ ಅತೀ ಹತ್ತಿರದಲ್ಲಿರುವ ಚಂದ್ರನೂ ಪ್ರಭಾವಿತಗೊಳಿಸುತ್ತಾನೆ. ಪಾಡ್ಯದಿಂದ ಅಮಾವಾಸ್ಯೆಯವರೆಗೂ ಬದಲಾಗುವ ಚಂದ್ರನ ಸ್ವರೂಪಕ್ಕೂ ಮಾನವನ ಸ್ವಭಾವಕ್ಕೂ ನೇರವಾದ ಸಂಬಂಧವಿದೆ. ಆದ್ದರಿಂದ ವಿದ್ಯಾಭ್ಯಾಸ ಮಾಡುವಾಗ ನಮ್ಮ ಪೂರ್ವಿಕರು ಈ ನಿಯಮಗಳನ್ನು ಪಾಟಿಸುತ್ತಿದ್ದರು. ಅಮಾವಾಸ್ಯೆ, ಹುಣ್ಣಿಮೆ, ಅಷ್ಟಮಿ, ಚತುರ್ದಶಿ ಮತ್ತು ಪಾಡ್ಯಮಿ ದಿನಗಳು ವಿದ್ಯೆಯನ್ನು ಕಲಿಯಲು ಸೂಕ್ತವಾದವುಗಳಲ್ಲ ಎಂದು ಅವರು ನಿರ್ಧಾರಿಸಿದ್ದಾರೆ. ಪ್ರತಿಯೊಂದೂ ಕಣ್ಣಿಗೆ ಕಂಡುಬರುವುದಿಲ್ಲ! ಆ ತಿಥಿಗಳೆಲ್ಲಾ ಚಂದ್ರನೊಂದಿಗೆ ಸಂಬಂಧ ಹೊಂದಿವೆ.....
                ಪಾಡ್ಯದ ದಿನದಂದು ಓದಿದ
                ಪಾಠದಂತೆಯೇ ಕೃಶವಾಗಿ
                ಲಂಕಾಪುರಿಯ ಉದ್ಯಾನದಿ
                ಪರಿತಪಿಸಿದ ಜಾನಕಿಯ ತೆರದಿ,
                ಅಮವಾಸ್ಯೆಯು ನುಂಗಿದ
                ಅಮೃತಕಿರಣ ಬಿಂಬಗಳ ಹಾಗೆ
                ಶ್ವೇತ ಕತ್ತಲೆಯ ಬಲೆಯೊಳಗೆ
               ಸಿಲುಕಿಕೊಂಡಿಹುದು ಎಮ್ಮಯ ವಿಧಿ!
                             *****

       ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಐದನೆಯ ಕಂತು, "ತೆಲ್ಲ ಚೀಕಟಿ ಮನ ತೆಲಿವಿನಿ ಮಿಂಗೇಸಿಂದಿ - ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!?
 ಈ ಸರಣಿಯ ನಾಲ್ಕನೆಯ ಲೇಖನಕ್ಕೆ "ವೇದಕಾಲ"ವೆನ್ನುವ ಶಬ್ದ ಸಮುಚಿತವಾದುದೇ?- ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AE...
 

 

Rating
No votes yet

Comments