ನೈಸರ್ಗಿಕ ಎಣ್ಣೆಗಳ ಸೊಳ್ಳೆ ವಿಕರ್ಷಕಗಳು ಸುರಕ್ಷಿತ

ನೈಸರ್ಗಿಕ ಎಣ್ಣೆಗಳ ಸೊಳ್ಳೆ ವಿಕರ್ಷಕಗಳು ಸುರಕ್ಷಿತ

ಸುಮಾರು ಆರು ವರುಷಗಳ ಹಿಂದಿನ ಪ್ರಸಂಗ. ಬೆಂಗಳೂರಿನ ಜಾನ್ ಥಾಮಸ್ ಅವರಿಗೆ ಆಗಾಗ ಅಸ್ತಮಾದಿಂದ ಹಾಗೂ ಶ್ವಾಸಾಂಗವ್ಯೂಹದ ಮೇಲ್ಭಾಗದ (ಗಂಟಲು, ಶ್ವಾಸನಾಳ ಇತ್ಯಾದಿ) ಸೋಂಕಿನಿಂದ ಸಂಕಟ.
ಇವರನ್ನು ಪರಿಶೀಲಿಸಿದ ವೈದ್ಯರಿಂದ ಸಲಹೆ: ರಾಸಾಯನಿಕ ಸೊಳ್ಳೆ ವಿಕರ್ಷಕಗಳ ಬಳಕೆ ನಿಲ್ಲಿಸಿ. ಆಗ ಜಾನ್ ಇಂಟರ್ ನೆಟ್ನಲ್ಲಿ ಜಾಲಾಡಿ, ಗಿಡಮೂಲಿಕೆಗಳಿಂದ ತಯಾರಿಸಲಾದ ಸೊಳ್ಳೆ ವಿಕರ್ಷಕ ಇದೆಯೇ ಎಂದು ಹುಡುಕಿದರು. ಅವರಿಗೆ ಯಾವುದೂ ಸಿಗಲಿಲ್ಲ. ಅದುವೇ ಅವರಿಗೆ ಪ್ರೇರಣೆಯಾಯಿತು: ಹರ್ಬಲ್ ಸ್ಟ್ರಾಟೆಜಿ ಎಂಬ, ನೈಸರ್ಗಿಕ ಕೀಟವಿಕರ್ಷಕಗಳ ಕಂಪೆನಿ ಸ್ಥಾಪಿಸಲು.
ಕೀಟವಿಕರ್ಷಕದ ಉತ್ಪಾದನೆಗೆ ಅವರು ನೆರವು ಪಡೆದದ್ದು ಕೇಂದ್ರೀಯ ಔಷಧೀಯ ಮತ್ತು ಪರಿಮಳ ಸಸ್ಯಗಳ ಸಂಸ್ಥೆಯಿಂದ (ಸಿಐಎಂಎಪಿ – ಸಿಮಾಪ್). ಇದು ಕೇಂದ್ರ ಸರಕಾರ ಪ್ರಾಯೋಜಿತ ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಕೌನ್ಸಿಲಿನ (ಸಿಎಸ್ಐಆರ್) ಅಧೀನ ಸಂಸ್ಥೆ. “೨೦೦೯ರಲ್ಲಿ ಕನಿಷ್ಠ ಎಂಟರಿಂದ ಹನ್ನೆರಡು ಗಂಟೆಗಳಷ್ಟು ಅವಧಿ ಕೀಟಗಳನ್ನು ದೂರವಿಡಬಲ್ಲ ಉತ್ಪನ್ನವೊಂದನ್ನು ತಯಾರಿಸಲಿಕ್ಕಾಗಿ ಸಹಾಯ ಮಾಡಲು ಸಿಮಾಪ್ ಸಂಸ್ಥೆ ಒಪ್ಪಿಕೊಂಡಿತು. ಅನಂತರ ನಾನು ಆ ಉತ್ಪನ್ನವನ್ನು ಕೇರಳದಲ್ಲಿ ಪ್ರಯೋಗಿಸಿ ನೋಡಿದೆ. ಯಾಕೆಂದರೆ, ಜಗತ್ತಿನ ಎಲ್ಲ ೪೦೦ ಪ್ರಭೇದಗಳ ಸೊಳ್ಳೆಗಳು ಕೇರಳದಲ್ಲಿವೆ” ಎಂದು ನೆನಪಿಸಿಕೊಳ್ಳುತ್ತಾರೆ ಜಾನ್ ಥಾಮಸ್.
ಇವರು ಸಂಶೋಧಿಸಿದ ಉತ್ಪನ್ನವು ಶೇಕಡಾ ೯೧ ಸೊಳ್ಳೆ ಪ್ರಭೇದಗಳ ವಿರುದ್ಧ ಪರಿಣಾಮಕಾರಿ. ಅನಂತರ, ಬೆಂಗಳೂರಿನಲ್ಲಿ ಹರ್ಬಲ್ ಸ್ಟ್ರಾಟೆಜಿ ಕಂಪೆನಿ ಸ್ಥಾಪಿಸಿ, ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈಗ, ಇದರ ಉತ್ಪನ್ನಗಳು ಗುಜರಾತ್, ರಾಜಸ್ಥಾನ, ಡೆಲ್ಲಿ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಆಫ್ರಿಕಾ ಮತ್ತು ಪೂರ್ವ ಏಷ್ಯಾದ ದೇಶಗಳಿಗೆ ರಫ್ತಾಗುತ್ತಿವೆ.
ಇನ್ಫಿನಿಟಿ ಸಂಶೋಧನಾ ಕಂಪೆನಿ (ಮಾರುಕಟ್ಟೆ ಸಂಶೋಧನೆಯ ಖಾಸಗಿ ಕಂಪೆನಿ) ೨೦೧೫ರಲ್ಲಿ ಬಿಡುಗಡೆ ಮಾಡಿದ ವರದಿಯ ಅನುಸಾರ, ಸಾವಯವ ವಿಕರ್ಷಕಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ಅವಕಾಶ ಬಳಸಿಕೊಳ್ಳಲಿಕ್ಕಾಗಿ, ಸಪ್ಟಂಬರ್ ೨೦೧೪ರಲ್ಲಿ ಡಾಬರ್ ಕಂಪೆನಿ ಓಡೊಮೊಸ್ ನ್ಯಾಚುರಲ್ಸ್ ಎಂಬ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸೊಳ್ಳೆ ವಿಕರ್ಷಕ ಮಣಿಕಟ್ಟಿನ ಪಟ್ಟಿಗಳು ಮತ್ತು ಪ್ಯಾಚುಗಳು ಸೇರಿವೆ.
೨೦೧೩ರಲ್ಲಿ ಡೆವೆ ಹರ್ಬ್ಸ್ ಎಂಬ ಢೆಲ್ಲಿಯ ಕಂಪೆನಿಯೂ ಸೊಳ್ಳೆ ವಿಕರ್ಷಕಗಳನ್ನು ಬಿಡುಗಡೆ ಮಾಡಿತು. ಅದು ಸಿಟ್ರೊನೆಲ್ಲಾ ಎಣ್ಣೆ, ನಿಂಬೆಹುಲ್ಲಿನ ಎಣ್ಣೆ ಇತ್ಯಾದಿ ಎಣ್ಣೆಗಳಿಂದ ತಯಾರಿಸಲಾದ ವಿಕರ್ಷಕ. ಈಗ ಇದು ಯುಎಸ್ಎ, ಬ್ರಿಟನ್, ಜಪಾನ್, ಕೊರಿಯಾ ಇತ್ಯಾದಿ ೧೦೦ ದೇಶಗಳಿಗೆ ರಫ್ತಾಗುತ್ತಿದೆ. ಢೆಲ್ಲಿ ಹತ್ತಿರದ ಗುರ್ಗಾಂವಿನ ಅರಿಂಜೆಲ್ ಕಂಪೆನಿ ಗಿಡಮೂಲಿಕಾ ಆಧಾರಿತ ವಿಕರ್ಷಕಗಳನ್ನು ಬಿಡುಗಡೆ ಮಾಡಿದ್ದು ೨೦೧೨ರಲ್ಲಿ. ಇದರ ಸ್ಥಾಪಕರಾದ ಅರುಣ್ ಗುಪ್ತಾರಿಗೂ ತನ್ನ ಕಂಪೆನಿ ಆರಂಭಿಸಲು ಕಾರಣವಾದದ್ದು ಜಾನ್ ಥಾಮಸರಿಗೆ ಆದಂತಹ ಅನುಭವ: “೨೦೧೨ರಲ್ಲಿ ನನ್ನ ಮಗಳಿಗೆ ಡೆಂಗು ಜ್ವರ ಬಂದಾಗ, ಗಿಡಮೂಲಿಕಾ ವಿಕರ್ಷಕಗಳಿಗೆ ಬಹಳ ಹುಡುಕಾಡಿದರೂ ಯಾವುದೂ ಸಿಗಲಿಲ್ಲ. ಕೊನೆಗೆ, ನಾನೇ ಸಂಶೋಧನೆ ಮಾಡಿ, ಅರಿಂಜೆಲ್ ತಯಾರಿಸಿ, ಮಾರಾಟ ಶುರು ಮಾಡಿದೆ” ಎನ್ನುತ್ತಾರೆ ಗುಪ್ತಾ.
ಕಹಿಬೇವು, ಸಿಟ್ರೊನೆಲ್ಲಾ, ಸಿಡಾರ್, ವೆರ್ಬೆನಾ, ಪೆನ್ನಿರೊಯಲ್, ಜೆರೇನಿಯಂ, ಲ್ಯಾವೆಂಡರ್, ಪೈನ್, ಕ್ಯಾಟ್ನಿಪ್, ರೋಸ್ಮೇರಿ, ಬಾಸಿಲ್, ಥೈಮ್, ಪೆಪ್ಪರ್ಮಿಂಟ್, ಸರ್ವಸಾಂಬಾರ, ಬೆಳ್ಳುಳ್ಳಿ, ದಾಲ್ಚಿನ್ನಿ – ಈ ಸಸ್ಯಗಳಿಂದ ಪಡೆದ ಎಣ್ಣೆಗಳಿಗೆ ಕೀಟವಿಕರ್ಷಕ ಗುಣವಿದೆ ಎಂದು ಸ್ಲೊವಾಕ್ ಅಕಾಡೆಮಿ ಆಫ್ ಸೈನ್ಸಸ್ನ ನಿಯತಕಾಲಿಕದಲ್ಲಿ ೨೦೧೨ರಲ್ಲಿ ಪ್ರಕಟವಾದ ಲೇಖನದಲ್ಲಿ ದಾಖಲಿಸಲಾಗಿದೆ.
ಸೊಳ್ಳೆಗಳು ಮನುಷ್ಯರನ್ನೂ ಇತರ ಬಿಸಿರಕ್ತದ ಪ್ರಾಣಿಗಳನ್ನೂ ಪತ್ತೆಹಚ್ಚುವುದು ಅವುಗಳ ದೇಹದಿಂದ ಬೆವರಿನಲ್ಲಿ ಹೊರಸೂಸುವ ಲಾಕ್ಟಿಕ್ ಆಮ್ಲ, ಇಂಗಾಲದ ಡೈಆಕ್ಸೈಡ್ ಇತ್ಯಾದಿಗಳನ್ನು ಗ್ರಹಿಸುವ ಮೂಲಕ. ನೈಸರ್ಗಿಕ ಎಣ್ಣೆಗಳಿಂದ ತಯಾರಿಸಲಾದ ವಿಕರ್ಷಕಗಳು ಸೊಳ್ಳೆಗಳ ಲಾಕ್ಟಿಕ್ ಆಮ್ಲ ಗ್ರಹಣಾಂಗಗಳ ಕೆಲಸಕ್ಕೆ ತಡೆಯೊಡ್ಡುತ್ತವೆ.
ಆದರೆ, ರಾಸಾಯನಿಕಗಳಿಂದ ತಯಾರಿಸಲಾದ ಸೊಳ್ಳೆ ವಿಕರ್ಷಕಗಳು ಸೊಳ್ಳೆಗಳನ್ನು ಕೊಲ್ಲುತ್ತವೆ. ಅವುಗಳಲ್ಲಿ ಇರುವುದು ಆಲ್ಲೆಥ್ರಿನ್, ಡೈಮಿಥೈಲ್ ಥಾಲೇಟ್, ಎನ್-ಎನ್- ಡೈ ಇಥೈಲ್- ಎಂ- ಟೊಲುಮೈಡ್ (ಡಿಇಇಟಿ) ಇಂತಹ ರಾಸಾಯನಿಕಗಳು. ಈ ವಿಕರ್ಷಕಗಳ ದೋಷಗಳು: ಅಸಹನೀಯ ವಾಸನೆ, ಲೇಪಿಸಿದಾಗ ಶರೀರದಲ್ಲಿ ಉಳಿಯುವ ತೈಲದ ಜಿಡ್ಡು ಮತ್ತು ವಿಷಪರಿಣಾಮ. “ಈ ರಾಸಾಯನಿಕ ವಿಕರ್ಷಕಗಳು ಅಪಾಯಕಾರಿ. ಯಾಕೆಂದರೆ, ನೈಸರ್ಗಿಕ ಎಣ್ಣೆಗಳಿಗಿಂತ ಸುಲಭವಾಗಿ ಇವನ್ನು ಚರ್ಮ ಹೀರಿ ಕೊಳ್ಳುತ್ತದೆ. ಉದಾಹರಣೆಗೆ, ಡಿಇಇಟಿ ರಾಸಾಯನಿಕದ ಶೇಕಡಾ ೧೫ ಭಾಗವನ್ನು ಚರ್ಮ ಹೀರಿಕೊಳ್ಳುತ್ತದೆ” ಎಂದು ವಿವರಿಸುತ್ತಾರೆ ಜಾನ್ ಥಾಮಸ್.
ಆದರೂ ರಾಸಾಯನಿಕ ಸೊಳ್ಳೆ ವಿಕರ್ಷಕಗಳಿಗೆ ಬೇಡಿಕೆ ಕಡಿಮೆಯಾಗುತ್ತಿಲ್ಲ. ಯಾಕೆಂದರೆ, ತಾವು ಬಳಸುವ ಸೊಳ್ಳೆ ವಿಕರ್ಷಕಗಳ ಸುರಕ್ಷಿತತೆ ಬಗೆ ಬಹುಪಾಲು ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಅವನ್ನು ಮತ್ತೆಮತ್ತೆ ಖರೀದಿಸುತ್ತಾರೆ. ಅವುಗಳ ದೀರ್ಘಕಾಲಿಕ ಬಳಕೆಯಿಂದ ಆರೋಗ್ಯ ಹದಗೆಟ್ಟಾಗ ಮಾತ್ರ ಅಂಥವರು ಎಚ್ಚೆತ್ತುಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ಆಯುರ್ವೇದೀಯ ಔಷಧಿ ಅಥವಾ ಕಾಸ್ಮೆಟಿಕ್ ಮಾರಾಟ ಮಾಡಲು ಆಯುಷ್ ಮಂತ್ರಾಲಯದಿಂದ ಪರವಾನಗಿ ಪಡೆಯುವುದು ಅಗತ್ಯ. ಆದ್ದರಿಂದ, ನಮ್ಮ ದೇಶದ ಚಾಲ್ತಿ ನಿಯಮಗಳ ಅನುಸಾರ ಪರವಾನಗಿ ಪಡೆದಿರುವ ಹಾಗೂ ನೈಸರ್ಗಿಕ ಎಣ್ಣೆಗಳಿಂದ ತಯಾರಿಸಲಾದ ಸೊಳ್ಳೆ ವಿಕರ್ಷಕದ ಬಳಕೆ ಸುರಕ್ಷಿತ.