ಭಾಗ ೧೧ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಸಾಹಿತ್ಯ ಚಳವಳಿ ಎನ್ನುವ ಅಂಧಾನುಕರಣೆಯ ದೊಂಬರಾಟ!

ಭಾಗ ೧೧ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಸಾಹಿತ್ಯ ಚಳವಳಿ ಎನ್ನುವ ಅಂಧಾನುಕರಣೆಯ ದೊಂಬರಾಟ!

ಚಿತ್ರ

ಮಹಾಪ್ರಸ್ಥಾನದ ಚಿತ್ರಕೃಪೆ: ಗೂಗಲ್
      "ಒಳಿತು ಗತದಲ್ಲಿ ಅಲ್ಪವೇನಯ್ಯ!" ಎಂದು ತೆಲುಗಿನ ಮಹಾಕವಿ ಗುರುಜಾಡ ಅಪ್ಪಾರಾವ್ ಅವರು ಕಂಡು ಹಿಡಿಯುವುದಕ್ಕೆ ಮೆಕಾಲೆ ವಿದ್ಯಾವಿಧಾನವು ಕಾರಣೀಭೂತವಾಯಿತು! ಈ ವಿಧಾನದಿಂದ ಹೊಸ ಸಂಶೋಧನೆಗಳನ್ನು ಮಾಡಿ, "ಅಲ್ಪವೂ ಒಳಿತಿರಲಿಲ್ಲ" ಎಂದು ಮಾರ್ಕ್ಸಿಷ್ಟ್ ಮೇಧಾವಿಗಳು ತೀರ್ಮಾನಿಸಿದರು. ಅಗ್ಗಿಪುಲ್ಲ, ಕುಕ್ಕಪಿಲ್ಲ, ಸಬ್ಬುಬಿಳ್ಳ - ಬೆಂಕಿ ಕಡ್ಡಿ, ನಾಯಿಮರಿ, ಸೋಪಿನ ತುಂಡು; ಹೀಗೆ ಕವಿತೆಗೆ ಅನರ್ಹವಾದ ಯಾವುದೇ ವಿಷಯಗಳಿಲ್ಲ ಎನ್ನುವುದನ್ನು ತೆಲುಗಿನ ಕ್ರಾಂತಿಕಾರಿ ಕವಿ ಶ್ರೀ ಶ್ರೀ  (ಶ್ರೀರಂಗಂ ಶ್ರೀನಿವಾಸ ರಾವ್) ಹೇಳಿದ್ದಾರೆ! ಒಳ್ಳೆಯದೇ, ಆದರೆ ಅವರ ಹೇಳಿಕೆಯನ್ನು ಚರಿತ್ರಾತ್ಮಕವಾದದ್ದು  ಎಂದು ಪ್ರಚಾರ ಮಾಡಲಾಗುತ್ತಿದೆ! ಏಕೆಂದರೆ, ಕೇವಲ ನೂರು ವರ್ಷಗಳ ಹಿಂದಿನವರ ಕುರಿತು ಮಾತ್ರವೇ ಮಾತನಾಡುವಂತೆ ಮತ್ತು ನೂರಾರು ವರ್ಷಗಳ ಹಿಂದೆ ಸಮಾಜಕ್ಕೂ, ಸಾಹಿತ್ಯಕ್ಕೂ ಮಾರ್ಗದರ್ಶಕರಾಗಿದ್ದವರನ್ನು ವಿಸ್ಮರಿಸುವುದನ್ನು ನಮಗೆ ಮೆಕಾಲೆ ವಿದ್ಯೆ ಕಲಿಸಿಕೊಟ್ಟಿದೆ. ಕ್ರಾಂತಿಕಾರಿ ಹೇಳಿಕೆ ನೀಡಿದ ಶ್ರೀ ಶ್ರೀ ಅವರು ನಾಯಿಗಳ ಕುರಿತು ಕವಿತೆ, ಕತೆ, ಕಾದಂಬರಿಗಳನ್ನು ಬರೆದರೋ ಇಲ್ಲವೋ ಗೊತ್ತಿಲ್ಲ, ಆದರೆ ಐದು ಸಾವಿರ ವರ್ಷಗಳಷ್ಟು ಹಿಂದೆಯೇ ವೇದವ್ಯಾಸರು ನಾಯಿಯ ಕುರಿತು ಮಹಾಭಾರತದಲ್ಲಿ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದೆಯೇ ತೆಲುಗಿನ ಕವಿ ನನ್ನಯ ಇದೇ ನಾಯಿಮರಿಯ ಕುರಿತು ಬರೆದಿದ್ದಾನೆ. ಜನಮೇಜಯನ ಯಜ್ಞಶಾಲೆಗೆ ಒಬ್ಬ ’ಶುನಕ ಬಾಲಕ’ (ಗಂಡು ನಾಯಿಮರಿ) ಪ್ರವೇಶಿಸುತ್ತಾನೆ. ಅವನ ಹೆಸರು ಸಾರಮೇಯ, ಅವನನ್ನು ಜನಮೇಜಯ ರಾಜನ ತಮ್ಮಂದಿರು ಹೊಡೆದು ಓಡಿಸುತ್ತಾರೆ. ಆಗ ಆ ನಾಯಿಯ ತಾಯಿ ’ಸರಮ’ ಎಂಬಾಕೆ ಬಂದು ದೊರೆಗೆ ಅವನ ತಮ್ಮಂದಿರ ಕೃತ್ಯದ ಬಗೆಗೆ ದೂರು ಕೊಡುತ್ತಾಳೆ. ಈ ಶುನಕೋಪಾಖ್ಯಾನದಿಂದ ಮಹಾಭಾರತದ ಕತೆಯ ಆರಂಭವಾಗುತ್ತದೆ. ಮತ್ತೆ ಕಡೆಯಲ್ಲಿ ಸ್ವರ್ಗಾರೋಹಣ ಪರ್ವದಲ್ಲಿಯೂ ಸಹ ಧರ್ಮಜನ ಹಿಂದೆ ನಾಯಿಮರಿಯೊಂದು ಮಹಾಪ್ರಸ್ಥಾನಕ್ಕೆ ಹೋಗುವ ಕಥೆಯಿದೆ. "ನಿತಾಂತ ಅಪಾರ ಭೂತದಯ...... ಎಣೆಯಿಲ್ಲದಷ್ಟು ಅಪಾರವಾದ ಪ್ರಾಣಿದಯೆ" ಭಾರತೀಯರ ಸ್ವಭಾವ. ಈ ಅನಾದಿ ತತ್ತ್ವವನ್ನು ಮೆಕಾಲೆ ಮಾಯಾ ಜಿಂಕೆ ನುಂಗಿ ಹಾಕಿತು. ಶ್ರೀ ಶ್ರೀ ತಮ್ಮ ಕವಿತೆಯಲ್ಲಿ ಯಾವುದೇ ಶಬ್ದ ಕವಿತೆಗೆ ಅನರ್ಹವಲ್ಲ ಎಂದು ಹೇಳಿರುವ ಮಾತು ೧೩೦೦ ವರ್ಷಗಳ ಹಿಂದೆಯೇ ಲಾಕ್ಷಣಿಕರು ಹೇಳಿದ ಸಂಸ್ಕೃತ ಶ್ಲೋಕದ ತೆಲುಗು ರೂಪಾಂತರವಷ್ಟೇ! "ಗತದಲ್ಲಿ ಒಳಿತೆಂತು ಹಣಿಕಿ ನೋಡ ಬಲ್ಲರಾರು?" ಎನ್ನುವ ಮಾತುಗಳನ್ನು ವ್ಯಾಸ ಮಹರ್ಷಿಯು ಹಿಂದೆ ಹೇಳಿದ್ದನೆನ್ನುವುದನ್ನು ಮಹಾಕವಿ ನನ್ನಯ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ಆದರೆ ಶ್ರೀ ಶ್ರೀ ಹಿಂದೆ ಲಾಕ್ಷಣಿಕರು ಹೇಳಿರುವ ಮಾತನ್ನು ಎಲ್ಲೂ ಉಲ್ಲೇಖಿಸಿಲ್ಲ, ಅದೇ ವ್ಯತ್ಯಾಸ!

ಸಾಹಿತ್ಯ ಚಳವಳಿ ಎನ್ನುವ ಅಂಧಾನುಕರಣೆಯ ದೊಂಬರಾಟ!
              ವಿಚಕ್ಷಣೆಗೆ ದೂರವಾದ
              ವಿಜ್ಞಾನವು ವಿಜೃಂಭಿಸುತಿದೆ
              ವಿಪರೀತವಾದ ಹುಳಿಸಾರು
               ಊಟವನು ನುಂಗಿದೆ!
              ಬಿಳಿ ಚರ್ಮದವರ ಸುಳ್ಳಿನ
              ಸರಮಾಲೆ ಮಾನ್ಯವಾಗಿದೆ
              ಸರಿಯಲ್ಲದ ಭಾವನೆಗಳ ಮೂಟೆ
              ತಲೆಯೇರಿ ಕುಳಿತಿದೆ!!
          ಒಮ್ಮೆ ಒಬ್ಬ ದೊಡ್ಡ ವಿದ್ವಾಂಸ ಅದೆಲ್ಲಿಗೋ ಪಯಣಿಸುತ್ತಿದ್ದ. ಅವನು ಬಹಳ ಪ್ರಸಿದ್ಧನಾಗಿದ್ದ, ಶುದ್ಧಚಾರಿತ್ರ್ಯವುಳ್ಳವನಾಗಿದ್ದ, ಪ್ರತಿಭಾವಂತ, ಆದರೆ ಎಲ್ಲೋ ಒಂದು ಕಡೆ ಅದೇನೋ ಒಂದು ಅಚಾತುರ್ಯವಾಗಿ ಹೋಗಿತ್ತು, ಎಲ್ಲಿ ಏನು ತಿಂದಿದ್ದನೋ, ಏನು ಕುಡಿದಿದ್ದನೋ ತಿಳಿಯದು. ಅವನಿಗೆ ನಿಧಾನವಾಗಿ, ಬುದ್ಧಿ ಮಂದವಾಗುತ್ತಾ ಹೋಯಿತು..... ತನ್ನ ಪಯಣದ ಮಧ್ಯೆ ಅವನು ದಾರಿಯಲ್ಲಿ ನದಿಯೊಂದನ್ನು ದಾಟಬೇಕಾಗಿ ಬಂತು. ಅವನು  ದೋಣಿಯೊಂದನ್ನು ಹತ್ತಿ ಅದರಲ್ಲಿ ಪಯಣಿಸುತ್ತಾ ಅದರ ಹುಟ್ಟು ಹಾಕುತ್ತಿದ್ದ ಅಂಬಿಗನೊಂದಿಗೆ ಮಾತಕತೆಗೆ ಇಳಿದ. ಆ ಅಂಬಿಗನು, ಆ ಮಾತು ಈ ಮಾತು ಆಡುತ್ತಾ ಆ ಪಂಡಿತನಿಗೆ ಒಂದು ಸಮಸ್ಯೆಯನ್ನು ಬಿಡಿಸಲು ಹೇಳಿದ.
          ಸ್ವಾಮಿ ನಮ್ಮ ಮನೆಯಲ್ಲಿ ಐದು ಜನರಿದ್ದೇವೆ. ನನ್ನ ಹೆಂಡತಿ, ಮೂರುಜನ ಮಕ್ಕಳು...." ಇದನ್ನು ಕೇಳುತ್ತಾ ಆ ಪಂಡಿತ ತಲೆಯಾಡಿಸಿದ. "ಹಾಗಾದರೆ ನಮ್ಮ ಮನೆಯಲ್ಲಿರುವ ಐದನೆಯ ವ್ಯಕ್ತಿ ಯಾರು ಎಂದು ಹೇಳಬಲ್ಲಿರಾ....? ಎಂದು ಆ ಅಂಬಿಗ ಪ್ರಶ್ನಿಸಿದ. ಬುದ್ಧಿ ಮಂಕಾಗಿದ್ದ ಪಂಡಿತನು ಅವನಿಗೆ ನಾನಾ ವಿಧವಾದ ಉತ್ತರಗಳನ್ನು ಕೊಟ್ಟ.
          "ಐದನೆಯ ವ್ಯಕ್ತಿ ನಿಮ್ಮ ಮನೆಯ ಅಡುಗೆಯವನು...." ಎಂದು ಆ ಪಂಡಿತ ಹೇಳಿದ. ಅದಕ್ಕೆ ಆ ದೋಣಿ ನಡೆಸುವವನು, "ನಮ್ಮ ಮನೆಯಲ್ಲಿ ಅಡುಗೆ ಮಾಡುವವನು ಇಲ್ಲ....." ಎಂದು ಹೇಳಿದ.
          "ಹಾಗಾದರೆ, ಐದನೆಯ ವ್ಯಕ್ತಿ ನಿಮ್ಮ ಮನೆಯಲ್ಲಿ ಕಸ, ಮುಸುರೆ ಮಾಡುವಾಕೆ!" ಎಂದು ಮತ್ತೆ ಉತ್ತರಿಸಿದ ಆ ಪಂಡಿತ.
          "ನಮಗೆ ಮನೆ ಕೆಲಸದವಳಾಗಲಿ, ಕೆಲಸದವನಾಗಲಿ ಇಲ್ಲ" ಎಂದು ಆ ಅಂಬಿಗನು ಸ್ಪಷ್ಟ ಪಡಿಸಿದ.
          ಹೀಗೆ ಏನೇನೋ ಉತ್ತರಗಳನ್ನು ಕೊಟ್ಟ ಆ ಪಂಡಿತ, ಕಡೆಗೆ ತನ್ನ ಸೋಲನ್ನು ಒಪ್ಪಿಕೊಂಡ. "ಹೋಗಲಿ ನೀನೇ ಸರಿಯಾದ ಉತ್ತರವನ್ನು ಹೇಳು" ಎಂದು ಆ ಅಂಬಿನನ್ನು ಕೇಳಿದ.
          "ನಮ್ಮ ಮನೆಯಲ್ಲಿರುವ ಐದನೇ ವ್ಯಕ್ತಿ ನಾನೇ ಸ್ವಾಮಿ!" ಎಂದು ಆ ಅಂಬಿಗನು ತನ್ನ ಸಮಸ್ಯೆಗೆ ಉತ್ತರ ನೀಡಿದ.
ಪಂಡಿತನು, ಓಹ್ಞ್! ಇದೇನಿದು ಇಷ್ಟು ಸಣ್ಣ ವಿಷಯ ತನಗೆ ಹೊಳೆಯದೇ ಇಲ್ಲವಲ್ಲಾ ಎಂದು ಸೋಜಿಗಪಟ್ಟುಕೊಂಡ. ಕಾಕತಾಳೀಯವೆನ್ನುವಂತೆ ಆ ಪಂಡಿತನಿಗೂ ಮೂರು ಜನ ಮಕ್ಕಳಿದ್ದರು. ಮನೆಗೆ ಹೋದದ್ದೇ ತಡ ಅವನಿಗೆ ತನ್ನ ಹೆಂಡತಿಯ ಬುದ್ಧಿವಂತಿಕೆಯನ್ನು ಪರೀಕ್ಷಿಸಬೇಕೆನ್ನುವ ಹಂಬಲವುಂಟಾಯಿತು. ಅವನು ತನ್ನ ಹೆಂಡತಿಯನ್ನು ಹೀಗೆ ಪ್ರಶ್ನಿಸಿದ, "ನಮ್ಮ ಮನೆಯಲ್ಲಿ ಐದು ಜನರಿದ್ದೇವೆ, ಮೊದಲನೆಯ ವ್ಯಕ್ತಿ ನನ್ನ ಹೆಂಡತಿ, ಮೂರು ಜನ ಮಕ್ಕಳಾದರೆ, ಆ ಐದನೆಯ ವ್ಯಕ್ತಿ ಯಾರು? ಹೇಳು ನೋಡೋಣ.....?"
          ಪಂಡಿತನ ಹೆಂಡತಿಗೆ ಅವನ ಮೇಲೆ ಭಯಂಕರ ಸಿಟ್ಟು ಬಂತು, "ನಿಮ್ಮ ಬುದ್ಧಿಗೆ ಒಂದಿಷ್ಟು ಬೆಂಕಿ ಹಾಕ! ಐದನೇ ವ್ಯಕ್ತಿ ನೀವೇ ಅಲ್ಲವೇನು?" ಎಂದು ಅವನ ಮುಖದ ಮೇಲೆ ಹೊಡೆದ ಹಾಗೆ ಹೇಳಿದಳು. ಕೂಡಲೇ ಆ ಪಂಡಿತನು, ಅಯ್ಯೋ... ಮಂಕೇ! ಆ ಐದನೆಯ ವ್ಯಕ್ತಿ ಆ ಅಂಬಿಗ.....!" ಎಂದು ಥಟ್ಟನೇ ಹೇಳಿ ಹ್ಹಿ...ಹ್ಹಿ....ಹ್ಹೀ.... ಎಂದು ಹಲ್ಲುಕಿಸಿದ.
          ಹೀಗೆ ಪಾಶ್ಚಾತ್ಯರು ಹೇಳಿದ ಮಾತುಗಳಿಗೆ ಮಾರುಹೋಗಿ, ಮಾನಸಿಕ ಗುಲಾಮಿತನಕ್ಕೆ ಒಳಗಾಗಿರುವ ಮೆಕಾಲೆ ಪಂಡಿತರು, ಮೇಲಿನ ಕಥೆಯಲ್ಲಿ ಹೇಳಿದ ಪಂಡಿತನಂತೆಯೇ ವರ್ತಿಸುತ್ತಿದ್ದಾರೆ. ಬ್ರಿಟಿಷರು ಹೇಳಿದ ಕಥೆಯನ್ನು ತಮ್ಮ ಕಥೆಯೆಂದು ನಂಬಿಕೊಂಡಿದ್ದಾರೆ. ಈ ಪ್ರವೃತ್ತಿ ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದ ನಂತರವೂ ಬೆನ್ನು ಬಿಡದ ಬೇತಾಳದಂತೆ ನಮಗಂಟಿ ಕುಳಿತಿದೆ. ಈ ಪ್ರವೃತ್ತಿ ಒಂದು ಸಂಪ್ರದಾಯವಾಗಿ ಬಿಟ್ಟಿದೆ, ಎಲ್ಲಿಯವರೆಗೆ ಎಂದರೆ, ಗುಡಿಗಳಲ್ಲಿ ಭಕ್ತರು ಗೋತ್ರನಾಮಗಳನ್ನು ಹೇಳಿದ ನಂತರ ಅಲ್ಲಿನ ಪೂಜಾರಿಗಳು, "ನೂತನ ಆಂಗ್ಲ ಸಂವತ್ಸರ ಆರಂಭ ಶುಭಸಮಯೇ..... "ಎಂದು ಸಂಕಲ್ಪವನ್ನು ಹೇಳಿಸಿ ಪೂಜೆ ಮಾಡುವಷ್ಟರ ಮಟ್ಟಿಗೆ! ಕೆಲವಾರು ವರ್ಷಗಳ ಹಿಂದೆ ಅಲ್ಲಲ್ಲಿ ಕಾಣಿಸಿಕೊಂಡ ಭಾವದಾಸ್ಯದ ಈ ರೋಗ ಮೆಲ್ಲಗೆ ಉಲ್ಭಣಿಸುತ್ತಿದೆ! ಅದು ವಿದ್ಯಾಲಯಗಳಿಂದ ದೇವಾಲಯಗಳಿಗೆ ಸಂಕ್ರಮಿಸುತ್ತಿದೆ! (ಸಧ್ಯ ಈ ರೋಗವು ಕರ್ನಾಟಕದಲ್ಲಿ ಹರಡಿಲ್ಲವೆಂದುಕೊಳ್ಳುತ್ತೇನೆ).
          ಮೆಕಾಲೆ ವಿದ್ಯಾವಿಧಾನದ ಪ್ರಭಾವದ ಪುಣ್ಯವಿಶೇಷದಿಂದಾಗಿ ನಮ್ಮ ಸಾಹಿತ್ಯರಂಗದಲ್ಲಿಯೂ ಸಹ ಹೊಸ ಹೊಸ ರೀತಿಯ ಚಳವಳಿಗಳು ಹುಟ್ಟಿಕೊಂಡಿವೆ. ಕ್ರಿ.ಶ. ಇಪ್ಪತ್ತನೆಯ ಶತಮಾನದ ಆರಂಭದಿಂದ ಈ ವಿಚಿತ್ರವಾದ ವಿನ್ಯಾಸಗಳು - ದೊಂಬರಾಟಗಳು ಮೊದಲುಗೊಂಡವು. ಪಾಶ್ಚಾತ್ಯರನ್ನು ಅನುಕರಿಸುವುದು ಈ ದೊಂಬರಾಟದ ಸ್ವರೂಪವಾಗಿದೆ, ಅದೇ ಅಂತಿಮ ಗುರಿಯಾಗಿದೆ! ವಿದ್ಯಾವಂತರು ಸಂಸ್ಕೃತ ಭಾಷೆಗೆ ದೂರವಾಗಿರುವುದು, ದೇಶದಲ್ಲಿರುವ ವಿದ್ಯಾವಂತರಿಗೆಲ್ಲಾ ಅರ್ಥವಾಗುವ ಏಕೈಕ ಭಾಷೆ ಇಂಗ್ಲೀಷ್ ಆಗಿರುವುದೆ ಇದಕ್ಕೆಲ್ಲಾ ಮೂಲ ಕಾರಣ. ಬ್ರಿಟಿಷರು ನಮ್ಮ ದೇಶಕ್ಕೆ ಕಾಲಿಡುವ ಮುನ್ನ ವಿದ್ಯಾವಂತರಿಗೆಲ್ಲಾ ತಿಳಿದಿದ್ದ ಭಾಷೆ ಸಂಸ್ಕೃತವಾಗಿತ್ತು. ಕ್ರಿ.ಶ. ೧೩೨೪ರಲ್ಲಿ ಜನಿಸಿದ ಜೆಫರಿ ಛಾಸರ್ ಬರೆದ, "ಕಾಂಟರ್‌ಬರಿ ಟೇಲ್ಸ್‌" ಮೂಲಕ ಆಂಗ್ಲ ಸಾಹಿತ್ಯದ ಆರಂಭವಾಗುತ್ತದೆ. ಅದಕ್ಕೂ ಸಾವಿರಾರು ವರ್ಷಗಳ ಪೂರ್ವದಲ್ಲಿಯೇ ಭಾರತೀಯ ಸಾಹಿತ್ಯವು ನೆಲಗೊಂಡಿತ್ತು. ಆ ಕಾಲಕ್ಕಾಗಲೇ ಬಹುತೇಕ ಭಾರತೀಯ ಭಾಷೆಗಳಲ್ಲಿ ಅನೇಕ ಗ್ರಂಥಗಳ ರಚನೆಯಾಗಿತ್ತು. ಮೆಕಾಲೆ ವಿದ್ಯಾ ಪ್ರಭಾವದಿಂದಾಗಿ, ಈ ಹಳೆಯ ಸಂಗತಿಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಆಂಗ್ಲ ಸಾಹಿತ್ಯ ಮತ್ತು ಯೂರೋಪಿಯನ್ ಭಾಷೆಗಳಲ್ಲಿ ರಚಿತವಾದ ಸಾಹಿತ್ಯಗಳು ನಮ್ಮ ಸಾಹಿತ್ಯದ ರೀತಿ ನೀತಿಗಳನ್ನು ನಿಯಂತ್ರಿಸುವುದಕ್ಕೆ ಮೊದಲು ಮಾಡಿದವು. ವಿದೇಶೀ ಮದ್ಯದ ಅಮಲನ್ನು ತಲೆಗೇರಿಸಿಕೊಂಡು ಸ್ಪೃಹೆ ತಪ್ಪಿ ಮಲಗಿ ಎದ್ದವನು ಹಿಂದಿನದೆಲ್ಲವನ್ನೂ ಮರೆತು, ಎದ್ದ ನಂತರ ಮಾತ್ರವೇ ’ಕಥೆ’ ಆರಂಭವಾಯಿತೆಂದು ಭಾವಿಸುವವನಂತಾಗಿದೆ ನಮ್ಮ ಸಾಹಿತ್ಯದ ಕಥೆ. ದೇಶಭಕ್ತಿಯನ್ನು ಕುರಿತು ಬರೆಯುವದು ಕ್ರಿ.ಶ. ೧೭, ೧೮ನೇ ಶತಮಾನಗಳಲ್ಲಿ ಮೊದಲಾಯಿತು. ಆದ್ದರಿಂದ, ಕ್ರಿ.ಶ. ೧೯ನೇ ಶತಮಾನದಿಂದೀಚೆಗಷ್ಟೇ ನಮ್ಮಲ್ಲಿ ದೇಶಭಕ್ತಿ ಅಂಕುರಿಸಿ ನಮ್ಮ ದೇಶದಲ್ಲಿ ಕವಿಗಳು, ಸಾಹಿತಿಗಳು ಈ ಪ್ರಕಾರದಲ್ಲಿ ಸಾಹಿತ್ಯ ಕೃಷಿಯನ್ನಾರಂಭಿಸಿದರೆನ್ನುವ ವಿಷಯವು ಪ್ರಚಾರವಾಗುತ್ತಿದೆ. "ದೇಶಭಕ್ತಿ ಎನ್ನುವುದು ಕೇವಲ ಒಂದು ಭಾವ, ಒಂದು ವಿಧವಾದ ಅನುಭೂತಿ ಮಾತ್ರವೇ" ಎಂದು ಈ ಸಾಹಿತ್ಯ ಚಳವಳಿಗಳನ್ನು ಹುಟ್ಟು ಹಾಕಿದವರು ಭಾವಿಸಿದರು. "ದೇಶಭಕ್ತಿ ಎನ್ನುವುದು ಒಂದು ಜೀವನ ಸತ್ಯ" ಎನ್ನುವ ವಿಷಯವು ಅನಾದಿ ಕಾಲದಿಂದಲೂ ಭಾರತದಲ್ಲಿ ಪ್ರಚಲಿತವಿದ್ದ ರಾಷ್ಟ್ರೀಯ ತತ್ತ್ವವಾಗಿತ್ತು ಎನ್ನುವುದನ್ನು ಈ ’ಕಾಲ್ಪನಿಕ ಸಾಹಿತ್ಯ’ದ ಚಳವಳಿಯು ನುಂಗಿ ಹಾಕಿತು. ಹತ್ತೊಂಬತ್ತನೇ ಶತಮಾನದಿಂದೀಚೆಗೆ ಮೊದಲಾದ ಈ ’ಕಾಲ್ಪನಿಕ ಚಳವಳಿ’ ದೇಶಭಕ್ತಿಯನ್ನೂ ಒಂದು ಭಾವದ ಪ್ರಕಾರವಾಗಿ ವಿಂಗಡಿಸಿತು! ಪಾಶ್ಚಾತ್ಯರ ’ರೋಮಾಂಟಿಜಿಸಮ್’ ಎನ್ನುವ ಸಿದ್ಧಾಂತವನ್ನು ನಮ್ಮವರು ವಿವೇಚನಾರಹಿತವಾಗಿ ನಕಲು ಮಾಡಿದಾಗ ಈ ’ಕಾಲ್ಪನಿಕ ಚಳವಳಿ’ಯ ಬೇರುಗಳು ಮೊಳೆತವು. ರೋಮ್ಯಾಂಟಿಕ್ ಪೊಯಟ್ರಿ ಅಥವಾ ‘ಭಾವಕವಿತ್ವ’ದಲ್ಲಿ ಮೂರು ಪ್ರಧಾನ ವಿಭಾಗಗಳಿವೆ ಎನ್ನುವ ಪಾಶ್ಚಾತ್ಯರ ಸಿದ್ಧಾಂತವು ಭಾರತೀಯ ಮೇಧಾವಿಗಳ ತಲೆಯನ್ನು ಹೊಕ್ಕಿತು. ಹಾಗಾದರೆ, ಆ ಮೂರು ವಿಧಾನಗಳು ಯಾವುವು? ಪ್ರಕೃತಿ ಸೌಂದರ್ಯದ ಆರಾಧನೆ, ಪ್ರಣಯ ಮತ್ತು ದೇಶಭಕ್ತಿ, ಹೀಗೆ, ಈ ಮೂರೂ ವಿಧಾನಗಳು ಒಟ್ಟುಗೂಡಿ ’ರೋಮ್ಯಾಂಟಿಕ್ ಪೊಯೆಟ್ರಿ’ ಅಥವಾ ’ಭಾವಕವಿತ್ವ’ವಾಯಿತು. ಇದರರ್ಥ ದೇಶಭಕ್ತಿ ಎನ್ನುವ ಸಾಮಾಜಿಕ ಸಂಗತಿ ಕೇವಲ ವ್ಯಕ್ತಿಗತವಾದ ಭಾವಕ್ಕೆ ಸೀಮಿತವಾದ ವಿಷಯವಾಯಿತು. ದೇಶಭಕ್ತಿ ಎನ್ನುವುದು ಅನಾದಿಕಾಲದಿಂದಲೂ ರಾಷ್ಟ್ರೀಯತೆಯ ಅವಿಭಾಜ್ಯವಾದ ವಸ್ತುವಾಗಿತ್ತು, ರಾಷ್ಟ್ರೀಯತೆಗೆ ಚಿಹ್ನೆಯಾಗಿದ್ದ, ಇಲ್ಲಿನ ಜೀವನದ ವಿಧಾನವಾಗಿದ್ದ ವಸ್ತುವು ಕೇವಲ ವ್ಯಕ್ತಿಗತ ಭಾವನೆಗೆ ಸೀಮಿತಗೊಂಡಿತು. ಆದರೆ ವಸ್ತನಿಷ್ಠವಾದ ಕವಿತ್ವವು (Objective Poetry), "ಮಾತಾಭೂಮಿಃ ಪುತ್ರೋಹಂ ಪೃಥಿವ್ಯಾಃ" ಎನ್ನುವ ಈ ವೇದಭೂಮಿಯಲ್ಲಿ ಅಂಕುರಿಸಿ, ಅದು ಅನೇಕಾನೇಕ ಕವಿತೆಗಳ ಮೂಲಕ ರಾಷ್ಟ್ರೀಯ ಭಾವನೆಯಾದ ದೇಶಭಕ್ತಿಯನ್ನು ಸಾರುತ್ತಲೇ ಬಂದಿದೆ! ಇವೆಲ್ಲಾ ’ಹತ’ವಾಗಿ ಹೋಗಿ ಪಾಶ್ಚಾತ್ಯರ ಪ್ರಭಾವದಿಂದ ದೇಶಭಕ್ತಿ ನಮಗೆ ಪರಿಚಯವಾಯಿತೆಂದು ಮೇಧಾವಿಗಳು ಹೇಳುವ ಹೀನ ಸ್ಥಿತಿಗೆ ಮೆಕಾಲೆ ವಿದ್ಯಾವಿಧಾನವು ನಮ್ಮನ್ನು ಪಾತಾಳಕ್ಕೆ ತಳ್ಳಿತು. ಬ್ರಿಟಿಷರಿಗೂ ಮುಂಚೆ ಇದ್ದ ಸ್ಥಿತಿಯನ್ನು ಮರೆಯುವಂತೆ ಅದು ಮಾಡಿತು. ರಾಷ್ಟ್ರೀಯತೆಯನ್ನೊಳಗೊಂಡಂತೆ ಭಾರತೀಯ ಸಾಹಿತ್ಯವು ಅನೇಕಾನೇಕ ವಿಷಯಗಳನ್ನೊಳಗೊಂಡ ’ಸಮಗ್ರ ಸಾಹಿತ್ಯ’ಗಿತ್ತು. ಅಖಂಡವಾಗಿದ್ದ ಸಾಹಿತ್ಯವು ಮೆಕಾಲೆ ಪ್ರಭಾವದಿಂದಾಗಿ ಭಾವಕವಿತ್ವದಲ್ಲಿನ (ಕಲ್ಪನಾ ಸಾಹಿತ್ಯದಲ್ಲಿ) ತುಂಡಾದ ಒಂದು ಭಾಗವಾಗಿ ಮಾರ್ಪಟ್ಟಿತು. ’ಸಕಲ’ವಾಗಿದ್ದದ್ದು ’ಶಕಲ’ವಾಯಿತು. ಸ್ವಲ್ಪ ಮುಂದುವರೆದು ನೋಡಿದರೆ ಈ ಭಾವಕವಿತ್ವವೂ ಸಹ ನವ ಕವಿತ್ವದ ಚಳವಳಿಯ ಒಂದು ಭಾಗ ಮಾತ್ರವೇ ಆಗಿದೆ. ಇದು ಹೇಗಿದೆ ಎಂದರೆ, ಭವ್ಯ ಭವನಕ್ಕೆ ಬುನಾದಿಯಾಗಿದ್ದ ವಸ್ತುವನ್ನು, ಕೇವಲ ಆ ಭವನದ ಒಂದು ಕೋಣೆಯ ಮೂಲೆಯಲ್ಲಿನ ಒಂದು ಅಲ್ಪಭಾಗದ ಬುನಾದಿ ಮಾತ್ರವೇ ಎಂದು ಪರಿಗಣಿಸುವಂತಾಗಿದೆ! ದೇಶಭಕ್ತಿಯನ್ನು ಭಾವ ಕವಿತ್ವದಲ್ಲಿನ ಮೂರು ಅಂಶಗಳಲ್ಲಿ ಒಂದೆಂದು ಭಾವಿಸಿದವರು ಈ ವಿಧವಾದ ಚಿಂತನೆಗಳನ್ನು ಹುಟ್ಟುಹಾಕಿದರು. ಇಪ್ಪತ್ತನೆಯ ಶತಮಾನದಲ್ಲಿ ನಡೆದ ಸಾಹಿತ್ಯಕ್ರಾಂತಿಯ ಫಲವಾಗಿ ಸಾಹಿತ್ಯದಲ್ಲಿ ’ರಾಷ್ಟ್ರೀಯತೆ’ ಎನ್ನುವ ಮಾತಿಗೆ ಸ್ಥಾನವಿಲ್ಲದೇ ಹೋಯಿತು. ರಾಷ್ಟ್ರೀಯತೆಯಲ್ಲಿನ ಒಂದು ಪ್ರಧಾನ ಅಂಶವಾದ ದೇಶಭಕ್ತಿಯನ್ನು ಪ್ರಾಧಾನ್ಯತೆಯಿಲ್ಲದ ‘ವ್ಯಕ್ತಿಗತ ಕವಿತೆ’ಯಲ್ಲಿನ (Subjective Poetry) ಒಂದು ಭಾಗವಾಗಿ ಚಿತ್ರಿಸಿದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ನಡೆದ ಹೋರಾಟವನ್ನು ರಾಷ್ಟ್ರೀಯತೆಯನ್ನು ರೂಪಿಸು ಚಳವಳಿಯನ್ನಾಗಿ ಚಿತ್ರಿಸಿದ್ದು ಮತ್ತೊಂದು ಪ್ರಧಾನವಾದ ವಕ್ರೀಕರಣ. ಭರತ ಖಂಡದ ಸುದೀರ್ಘ ಚರಿತ್ರೆಯಲ್ಲಿ ನಡೆದ ಅನೇಕಾನೇಕ ಹೋರಾಟಗಳಲ್ಲಿ ಬ್ರಿಟಿಷರ ವಿರುದ್ಧ ಜರುಗಿದ ಹೋರಾಟವು ಒಂದಷ್ಟೇ! ಇದು ರಾಷ್ಟ್ರೀಯ ಚಳವಳಿಯೇ ಆದರೂ ಸಹ ಬ್ರಿಟಿಷ್ ಭಾವದಾಸ್ಯಗ್ರಸ್ತರು ಅದನ್ನು ಹಾಗೆ ಹೇಳುತ್ತಿಲ್ಲ! ಚರಿತ್ರೆಯಲ್ಲಿ ಮೊಟ್ಟಮೊದಲ ಸಾರಿಗೆ ಭಾರತವು ಒಂದು ರಾಷ್ಟ್ರವಾಗಿ (Nation) ಆಗಿ ರೂಪಗೊಳ್ಳಲು ಬ್ರಿಟಿಷರ ವಿರುದ್ಧದ ಹೋರಾಟವು ಪ್ರಮುಖ ಪಾತ್ರ ವಹಿಸಿತು ಎಂಬುದಾಗಿ ಪ್ರಚಾರ ಪಡೆಯಿತು!
          ದೇಶಭಕ್ತಿಯಂತಯೇ, ಸಾಮಾಜಿಕ ಜೀವನದ ಮೂಲಕ ಸಮಷ್ಟಿ ಹಿತದ ಸಾಧನೆಗೆ ಇರುವ ಮತ್ತೊಂದು ಉಪಕರಣವೇ ಪ್ರಣಯ. ಸೂಕ್ತ ವರನಿಗೆ ಕನ್ಯೆಯನ್ನು ಧಾರೆಯೆರೆದು ಕೊಡುವುದರ ಮೂಲಕ ಅವರಿಬ್ಬರ ಮಧ್ಯೆ ಪ್ರಣಯವನ್ನೇರ್ಪಡಿಸುವುದು ಕುಟುಂಬ ವ್ಯವಸ್ಥೆಗೆ ಆಧಾರ. ಈ ಕುಟುಂಬವು ಸಮಾಜ ವ್ಯವಸ್ಥೆಗೆ ಮೂಲಾಧಾರ. ಆದ್ದರಿಂದ ಭಾರತೀಯ ಕಾವ್ಯಗಳಿಗೆ, ಸಾಹಿತ್ಯಕ್ಕೆ ಧಾರ್ಮಿಕವಾದ ಶೃಂಗಾರವು ಕಥಾವಸ್ತುವಾಯಿತು. ಅಷ್ಟಾದಶ ವರ್ಣನೆಗಳಲ್ಲಿ* ಪ್ರಕೃತಿಯ ಆರಾಧನೆ ಮತ್ತು ಪ್ರಕೃತಿ ಸೌಂದರ್ಯವು ವಿಕಸಿತವಾಗಿದೆ. ಕೇವಲ ದೇಶಭಕ್ತಿ, ಶೃಂಗಾರ, ಪ್ರಕೃತಿ ವರ್ಣನೆಗಳು ಮಾತ್ರವಷ್ಟೇ ಅಲ್ಲದೆ ಇನ್ನೂ ಎಷ್ಟೋ ವಿಭಿನ್ನ ವಿಷಯಗಳು ಒಂದಕ್ಕೊಂದು ಬೆಸಗೊಂಡು ಅನಾದಿಕಾಲದಿಂದಲೂ ಭಾರತೀಯ ಸಾಹಿತ್ಯದಲ್ಲಿ ವಿಕಸಿತವಾಗಿವೆ. (*ಮಹಾಕಾವ್ಯದಲ್ಲಿ ದೊಡ್ಡ ಕಾವ್ಯವಸ್ತು, ದಶಲಕ್ಷಣ, ಹದಿನೆಂಟು ವರ್ಣನೆಗಳು, ಪ್ರೌಢ ಭಾಷೆ, ಓಘದಿಂದ ಕೂಡಿದ ಮಹಾ ಛಂದಸ್ಸು, ಎರಡು-ಮೂರು ತಲೆಮಾರುಗಳ ವಿಶಾಲ ಜೀವನಚಿತ್ರಣ ಇರಬೇಕು ಎಂದು ಫೇಸ್ ಬುಕ್ಕಿನ ಸ್ನೇಹಿತರಾದ ಶ್ರೀಯುತ ವಿ.ಕೆ.ಪೆರ್ಲ ಅವರು ವಿವರಿಸಿದ್ದಾರೆ. ಕಾವ್ಯದ ದಶಲಕ್ಷಣಗಳು - ಶ್ಲೇಷ, ಪ್ರಸಾದ, ಸಮತಾ, ಸಮಾಧಿ, ಮಾಧುರ್ಯ, ಓಜಸ್, ಕಾಂತಿ, ಅರ್ಥವ್ಯಕ್ತಿ, ಸುಕುಮಾರತಾ, ಉದಾರತಾ ಎಂದು ಇನ್ನೋರ್ವ ಹಿರಿಯ ಸ್ನೇಹಿತರಾಗಿದ್ದ ದಿl ಶ್ರೀಮತಿ ಹರಿಣಿಯವರು ತಿಳಿಸಿದ್ದರು. ಇನ್ನು ಅಷ್ಟಾದಶ ವರ್ಣನೆಗಳೆಂದರೆ ಅದರಲ್ಲಿ - ನಗರ, ಅರ್ಣವ (ಸಮುದ್ರ), ಶೈಲ, ಋತು, ಚಂದ್ರೋದಯ, ಸೂರ್ಯೋದಯ, ವನವಿಹಾರ, ಜಲಕ್ರೀಡೆ, ಮಧುಪಾನ ವಿನೋದ, ಸುರತೋತ್ಸವ, ವಿಯೋಗ, ವಿವಾಹ, ಕುಮಾರಜನನ, ಮಂತ್ರಾಲೋಚನೆ, ದೂತಕಾರ್ಯ, ವಿಜಯಯಾತ್ರೆ, ಯುದ್ಧ, ನಾಯಕನ ವಿಜಯ; ಈ ಹದಿನೆಂಟು ವಿಷಯಗಳ ವರ್ಣನೆಗಳು ಇರಬೇಕೆಂದು ಡಾ.ಜಿ.ಎಸ್. ಶಿವರುದ್ರಪ್ಪನವರು ಕಣಜದಲ್ಲಿನ ಲೇಖನವೊಂದರಲ್ಲಿ ತಿಳಿಸಿದ್ದಾರೆ.). ಪ್ರತಿಯೊಂದು ಸಾಹಿತ್ಯ ಪ್ರಕಾರದಲ್ಲೂ, ಕಾವ್ಯ ಪ್ರಕಾರಗಳಲ್ಲೂ ಇವೆಲ್ಲವೂ ಇರುವುದನ್ನು ಗಮನಿಸಬಹುದು. ಸಮಗ್ರವಾಗಿದ್ದ ವಿಷಯಗಳನ್ನು ಕಾಲ್ಪನಿಕ ಸಾಹಿತ್ಯ, ನವೋದಯ ಸಾಹಿತ್ಯ, ಕ್ರಾಂತಿಕಾರಿ ಸಾಹಿತ್ಯ, ಬಂಡಾಯ ಸಾಹಿತ್ಯ, ಎಂದು ಮೊದಲಾಗಿ ತುಂಡರಿಸಿ, ತುಂಡರಿಸಿ ತಮ್ಮ ಪೊಳ್ಳುತನವನ್ನು ಆಧುನಿಕ ವಿದ್ವಾಂಸರು ಬಯಲು ಮಾಡಿಕೊಂಡಿದ್ದಾರೆ. ಕವಿತೆಯನ್ನು ಅನುಭೂತಿವಾದವೆಂದೂ (ರೋಮಾಂಚನ) ಕರೆದಿದ್ದಾರೆ, ಇದೆಲ್ಲಕ್ಕೂ ಮಾನದಂಡವಾಗಿರುವುದು ಪಾಶ್ಚಿಮಾತ್ಯರ ಚಿಂತನೆಗಳು. ಬಹುತೇಕ ಭಾರತೀಯ ಸಾಹಿತಿಗಳನ್ನು ಭಾರತೀಯತೆಯಿಂದ ದೂರ ಮಾಡಿದ್ದು ಮೆಕಾಲೆ ವಿದ್ಯಾವಿಧಾನ! ವಾಲ್ಮೀಕಿ ಬರೆದ ರಾಮಾಯಣದಲ್ಲಿ, ವ್ಯಾಸ ರಚಿತ ಮಹಾಭಾರತದಲ್ಲಿ, ತೆಲುಗಿನಲ್ಲಿ ನನ್ನಯ ಬರೆದ ಕಾವ್ಯಗಳಲ್ಲಿ ಅಭ್ಯುದಯವಿದೆ, ಪ್ರಣಯವಿದೆ, ಪ್ರಕೃತಿಯ ಆರಾಧನೆಯಿದೆ, ದೇಶಭಕ್ತಿ ಇದೆ, ರಾಷ್ಟ್ರೀಯತೆ ಇದೆ, ಸಂಸ್ಕೃತಿ ಇದೆ, ಸಮಾಜ ಸುಧಾರಣೆ ಇದೆ, ಸಂಘರ್ಷ, ಬಂಡಾಯವಿದೆ, ಕ್ರಾಂತಿ ಇದೆ - ಇವೆಲ್ಲವನ್ನೂ ಒಳಗೊಂಡ ವಿಶ್ವಹಿತವಿದೆ. (ಈ ವಿಷಯಗಳು ತೆಲುಗು ಸಾಹಿತ್ಯಕ್ಕಿಂತಲೂ ಮೊದಲು ಕನ್ನಡದಲ್ಲಿ ಕಾವ್ಯಗಳನ್ನು ರಚಿಸಿದ ರನ್ನ, ಪಂಪ, ಹರಿಹರ, ರಾಘವಾಂಕಾದಿಗಳ ಕಾವ್ಯಗಳಲ್ಲೂ ಇವೆ ಹಾಗೂ ಇತರೇ ಭಾರತೀಯ ಭಾಷೆಗಳಲ್ಲಿ ರಚನೆಯಾದ ಕಾವ್ಯಗಳಲ್ಲೂ ಇವೆ). ಆದರೆ ಇವೆಲ್ಲವೂ, "ನಾನಿದ್ದೇನೆ ನೋಡು...." ಎಂದು ಇಣುಕಿಣುಕಿ ನೋಡುವುದಿಲ್ಲ, ಮತ್ತೊಂದು ತತ್ತ್ವದ ಕುರಿತು ಅವಹೇಳನ ಮಾಡುವುದಿಲ್ಲ, ಎಲ್ಲವೂ ಸೇರಿ ಸಮಗ್ರತೆಯನ್ನು ಸಾಧಿಸಿವೆ! ಸಾಂಬಾರಿನಲ್ಲಿ ಬೇಳೆಯಿದೆ, ಕಾಯಿಪಲ್ಯೆಗಳಿವೆ, ಜೀರಿಗೆ, ಕೊತ್ತಂಬರಿ ಕಾಳುಗಳಿವೆ, ಸಾಸಿವೆ, ಮೆಂತ್ಯೆ, ಹುಣಿಸೇಹಣ್ಣು, ಉಪ್ಪು, ಅರಿಶಿಣ, ಕಾರ - ಎಲ್ಲವೂ ಕೂಡಿಕೊಂಡಿವೆ. ಯಾವುದೇ ವಸ್ತುವೂ ಸಹ ನಾನೇ ಶ್ರೇಷ್ಠವೆಂದು ಬೊಗಳೆ ಬಿಡುವುದಿಲ್ಲ. ಆದರೆ ಎಲ್ಲವನ್ನೂ ಬೇರೆಬೇರೆಯಾಗಿ ತೋರಿಸುವುದಾಗಲಿ, ಕೆಲವೊಂದನ್ನು ಒಟ್ಟು ಸೇರಿಸಿ ತೋರಿಸುವುದರಿಂದಾಗಲಿ ಉಂಟಾಗುವ ಪ್ರಯೋಜನವೇನು? ಉಪಯೋಗವಿಲ್ಲದ ಈ ಬಿಡಿ ಬಿಡಿಯಾಗಿರುವ ಸಾಹಿತ್ಯ ಪ್ರಕಾರಗಳು ತಮ್ಮ ಹೆಚ್ಚುಗಾರಿಕೆಯನ್ನು ತೋರಿಸಲು ತವಕ ಪಡುತ್ತಿವೆ, ಇವು ಮೆಕಾಲೆ ವಿದ್ಯೆಯಿಂದ ಪ್ರಭಾವಿತವಾಗಿವೆ ಆದರೆ ತಮ್ಮ ಪ್ರಭಾವವನ್ನು ಸಮಾಜದ ಮೇಲೆ ಬೀರಲಾಗದೇ ಹೋಗುತ್ತಿವೆ. ಇಲ್ಲಿ ಹೇಳಿರುವ ವಿಷಯಗಳು ಸಾಹಿತ್ಯದ ಚರ್ಚೆಯಲ್ಲ, ಆದರೆ ಸಾಹಿತ್ಯರಂಗದ ಮೆಕಾಲೆ ವಿದ್ಯೆಯ ಪ್ರಭಾವವು ಹೇಗಿದೆ ಎನ್ನುವುದನ್ನು ತಿಳಿಸುವುದಕ್ಕೆ ಮಾತ್ರ ಪರಿಮಿತವಾಗಿವೆ.
          ಮೊಟ್ಟಮೊದಲ ತೆಲುಗು ನಾಟಕದ ರಚನೆಯಾದದ್ದು ಕ್ರಿ.ಶ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಾಹಿತ್ಯದ ಎಂದು ಇತಿಹಾಸಕಾರರು ಬರೆಯುತ್ತಿದ್ದಾರೆ. ಅದಕ್ಕೂ ಮುನ್ನ ತೆಲುಗು ದೇಶದಲ್ಲಿ ನಾಟಕಗಳನ್ನು ಆಡುವವರು ಇದ್ದೇ ಇಲ್ಲವೇ? ಅವರು ಯಾವ ಯಾವ ನಾಟಕಗಳನ್ನು ಆಡುತ್ತಿದ್ದರು - ಈ ವಿಷಯಗಳಲ್ಲಿ ಸಂಶೋಧನೆಗಳು ಜರುಗವು. ಆದರೆ ಆಂಗ್ಲ ನಾಟಕಗಳ ಪ್ರಭಾವದಿಂದಾಗಿ ತೆಲುಗಿನಲ್ಲಿ ನಾಟಕಗಳು ಆರಂಭವಾದವು ಎಂದು ಬರೆಯುತ್ತಾರೆ. ನಾಟಕವೊಂದೇ ಅಲ್ಲ, ಕಥೆ, ಕಾದಂಬರಿಗಳಂತಹ ಗದ್ಯ ಪ್ರಕಾರಗಳಿಗೂ ಸ್ಪೂರ್ತಿ ಇಂಗ್ಲೀಷ್ ಸಾಹಿತ್ಯದಿಂದ ಪ್ರಾಪ್ತವಾಯಿತಂತೆ. ಇದು ಕೇವಲ ಆಂಧ್ರ ಪ್ರಾಂತಕ್ಕಷ್ಟೇ ಅಲ್ಲಾ ಯಾವತ್ ಭಾರತ ದೇಶದಲ್ಲಿ ಇಂತಹ ಚರಿತ್ರೆಗಳೇ ಕಾಣಸಿಗುತ್ತವೆ! ಅದು ಹೇಗಾಗುತ್ತದೆ, ಪೂರ್ವದಲ್ಲಿಯೇ ಲಾಕ್ಷಣಿಕರು ಹತ್ತು ವಿಧದ ನಾಟಕ ಪ್ರಕಾರಗಳು ನಮ್ಮಲ್ಲಿ ಪ್ರಚಲಿತವಿದ್ದವು ಎನ್ನುವ ಸಂಗತಿಯನ್ನು ಎಂದೋ ಬರೆದಿಟ್ಟಿದ್ದಾರಲ್ಲವೇ - ಇದರ ನೆನಪೂ ಸಹ ಇಲ್ಲ ನಮ್ಮವರಿಗೆ! ಆಸೇತು ಹಿಮಾಚಲದವರೆಗೆ ಆ ಕಾಲದಲ್ಲಿ ಒಂದೇ ಸಾಹಿತ್ಯವು ತುಂಬಿ ತುಳುಕುತ್ತಿತ್ತು. ಭಾಷೆ ಮುಖ್ಯವಲ್ಲ ಎನಿಸಿದ್ದರಿಂದ ಎಲ್ಲಾ ಪ್ರಾಂತಗಳಲ್ಲಿ ಒಂದೇ ಭಾಷೆಯ ನಾಟಕಗಳನ್ನು ಆಡಿರಬಹುದು. ನಾಟಕ, ಪ್ರಕರಣ, ಭಾಣ, ವೀಥಿ, ಅಂಕಂ, ಊಹಾಮೃಗಂ, ಮೊದಲಾದ ಹತ್ತು ವಿಧದ ರೂಪಕಗಳು ಹಾಗು ಇನ್ನೂ ಹದಿನೆಂಟು ತರಹದ ಉಪನಾಟಕ ರೂಪಗಳಿವೆ ಎಂದು ಭಾರತೀಯ ಸಾಹಿತ್ಯ ಚರಿತ್ರೆಯು ಹೇಳುತ್ತದೆ. ಆದರೆ ಇವಕ್ಕೆ ಪ್ರಚಾರವು ಸಿಕ್ಕಿಲ್ಲ! ’ಒಪೆರಾ, ಬ್ಯಾಲೆ, ಮೊದಲಾದ ಇಂಗ್ಲೀಷ್ ಡ್ರಾಮಾಗಳ ಕುರಿತು ಸಾಕಷ್ಟು ಪ್ರಚಾರವೇನೋ ಸಿಕ್ಕಿದೆ. ರಾಮನ ಕಾಲದಲ್ಲಿ ವಧೂಜನ ನಾಟಕ ಸಂಘಗಳಿದ್ದವೆಂದು ಆದಿಕವಿ ವಾಲ್ಮೀಕಿ ಬರೆದಿದ್ದಾನೆ. ಆದರೆ ಶಕರು, ಕುಷಾನರು ಮೊದಲಾದ ವಿದೇಶೀಯರು ನಾಟಕ ಕಲೆಯನ್ನು ಭಾರತದೇಶಕ್ಕೆ ತಂದರು ಎಂದು ಬ್ರಿಟೀಷ್ ಚರಿತ್ರಕಾರರು ಸಂಶೋಧನೆ ಮಾಡಿ ಹೋಗಿದ್ದಾರೆ.........
                                     *****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹನ್ನೊಂದನೆಯ ಕಂತು, ’ಸಾಹಿತ್ಯ ಉದ್ಯಮಾಲು ಅನುಕರಣ ವಿನ್ಯಾಸಾಲು - ಸಾಹಿತ್ಯ ಚಳವಳಿ ಎನ್ನುವ ಅಂಧಾನುಕರಣೆಯ ದೊಂಬರಾಟ!
 
ಈ ಸರಣಿಯ ಹತ್ತನೆಯ ಲೇಖನಕ್ಕೆ "ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ....." ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...
 

Rating
No votes yet

Comments

Submitted by makara Fri, 12/23/2016 - 20:19

ಈ ಸರಣಿಯ ಮುಂದಿನ ಕಂತು ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ! ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A8-...