ಹಂಬಲ ಹಣತೆ.

ಹಂಬಲ ಹಣತೆ.

ಕವನ

(1)    ಹಂಬಲ ಹಣತೆ
 
ಮರೆಯೊಳಿರುವನ, ಕರೆಯೆ ಬರುವನ,
ನೆಚ್ಚಿದೆಲ್ಲರ ಸುಲಭನ!
ಬರಿದೆ ಅರಸುತ ಸೋತೆನೆನದಿರು.
ಹಚ್ಚು ಹಂಬಲ ಹಣತೆಯ!
 
ಕೊಡದ ಎಣ್ಣೆಯ ಕುಡಿವ ಸೊಡರದು
ಅಡಿಯ ನೆಳಲನು ಬೆಳಗದು!
ಬಿಡದೆ ಹಿಡಿದಿಹ ಮನದ ತಮವನು,
ತೊಡೆದು ಹಾಕುವುದೆಂತದು ?
 
ಇರುಳು ಹಚ್ಚಿದ ತೈಲಧಾರೆಯ
ಸೊಡರು, ಕಳೆಯಲು ಕಾವಳ
ಗುರುವು ಹಚ್ಚಿದ ಅರಿವಿನೊರೆತೆಯು,
ಒಡನೆ ಕಳೆಯದೆ ಕಳವಳ?
 
ಸುತ್ತಮುತ್ತಲು ಎತ್ತಲೆತ್ತಲು
ಮತ್ತೆ ಕವಿದಿರೆ ಕತ್ತಲು
ಕತ್ತನೆತ್ತಲು ಒಲ್ಲದಾತಗೆ,
ಎತ್ತಕಾಂಬುದು ತಾರೆಯು?
 
ಮರೆಯೊಳಿರುವನ, ಕರೆಯೆ ಬರುವನ,
ನೆಚ್ಚಿದ್ದೆಲ್ಲರ ಸುಲಭನ!
ಹೊರಗೆ ಅರಸುತ ಸೋತೆ ನೆನದಿರು,
ಹಚ್ಚು ಹಂಬಲ ಹಣತೆಯ.
 
 
 
 
ನನ್ನ ತಂದೆಯವರಾದ ದಿವಂಗತ ಶ್ರೀ ಜಿ. ನೀಲಕಂಠಂ [09.07.1903 – 21.12.1996] ಅವರ ಕವಿತಾ ಸಾಮಥ್ರ್ಯ ವಿಶಿಷ್ಠ ರೀತಿಯದು! ಯಾವುದೇ ಉನ್ನತ ಪದವಿಯನ್ನು ಹೊಂದದ ಜಿ. ನೀಲಕಂಠಂ, ಕನ್ನಡ ಭಾಷಾ ಜ್ಞಾನ ಮತ್ತು ಕವಿತಾ ರಚನೆಯನ್ನು ಸ್ವಪ್ರಯತ್ನದಿಂದಲೇ ಕರಗತ ಮಾಡಿಕೊಂಡವರು. ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ, ನಿವೃತ್ತಿಯ ನಂತರ ಮಹಿಳಾ ಸೇವಾ ಸಮಾಜ, ಬಸವನಗುಡಿ, ಬೆಂಗಳೂರು- ಇಲ್ಲಿ ಉಪಾಧ್ಯಾಯರಾಗಿ ಮತ್ತು ಬೆಂಗಳೂರಿನ ಯುನೈಟೆಡ್ ಥಿಯಲೋಜಿಕಲ್ ಕಾಲೇಜಿನಲ್ಲಿ ಆಂಗ್ಲೇಯರಿಗೆ ಕನ್ನಡ ಬೋಧಿಸುವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ "ಹಂಬಲ ಹಣತೆ" ಕವನ ಸಂಕಲನದ ಒಂದೊಂದೇ ಕವನಗಳನ್ನು ಸಂಪದದಲ್ಲಿ ಪ್ರಕಟಿಸಲಿದ್ದೇವೆ.