ಸಣ್ಣಕತೆ: ರಾಜ್ಯೋತ್ಸವ

ಸಣ್ಣಕತೆ: ರಾಜ್ಯೋತ್ಸವ

ಸಣ್ಣಕತೆ: ರಾಜ್ಯೋತ್ಸವ

 

 

ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು,

" ಕನ್ನಡ ನಾಡು ನುಡಿ ಜಲ ಭೂಮಿಗಾಗಿ , ನನ್ನ ಈ ಜನ್ಮವನ್ನು ಮೀಸಲಾಗಿಡುವೆ. ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ ಅನ್ನ ತಿನ್ನುತ್ತಿರುವೆ , ನಿಮ್ಮ ನಡುವೆ ಒಬ್ಬ ನೆಚ್ಚಿನ ನಟನಾಗಿ ನಿಂತಿರುವೆ ಎನ್ನುವದಾದರೆ ಅದಕ್ಕೆ ಈ ನಾಡಿನ ಸಮಸ್ತ ತಾಯಿಯರ ಪ್ರೀತಿ, ಅಕ್ಕ ತಂಗಿಯರ ವಾತ್ಸಲ್ಯ ಕಾರಣ. ಸ್ವಂತ ಅಣ್ಣ ತಮ್ಮಂದಿರು ನನ್ನ ಜೊತೆ ಇರಲಿಲ್ಲ, ಆದರೆ ನೀವು ನನ್ನ ಕೈ ಬಿಡಲಿಲ್ಲ , ನನಗೆ ಅಣ್ಣನಂತೆ ತಂದೆಯಂತೆ ನಿಂತು ನನ್ನ ಸಲಹಿದಿರಿ, ಸಲಹುತ್ತಿದ್ದೀರಿ. ಇದು ಕನ್ನಡ ನಾಡಿನ ಜನತೆಗೆ ಜನ್ಮದಿಂದ ಬಂದಿರುವ ಗುಣ. ಹಸಿದು ಬಂದವರಿಗೆ, ಬಾಯಾರಿ ಬಂದವರಿಗೆ ಅವರು ಎಂದೂ ನಿರಾಕರಿಸುವದಿಲ್ಲ. ನನಗೆ ನನ್ನಂತ ನೂರು ಜನರಿಗೆ ಅನ್ನ ಕೊಡುವ ಪುಣ್ಯ ನಿಮ್ಮದು. ನಾನು ಈಗಿನ್ನು ಬೆಳೆಯುತ್ತಿರುವ ಕೂಸು, ನನ್ನ ಈ ವೇದಿಕೆಯಲ್ಲಿರುವ ನಾಡಿನ ಅತ್ಯಂತ ಹಿರಿಯ ಗೌರವಾನ್ವಿತ ಅನುಭವಿ ಹಾಗು ನಾಡೋಜ ಮುಂತಾದ ಹತ್ತು ಹಲವು ಪ್ರಶಸ್ತಿ ವಿಜೇತರಾದ ಲೇಖಕ ಶ್ರೀಯುತ "

ಎನ್ನುತ ಸ್ವಲ್ಪ ಪಕ್ಕಕ್ಕೆ ಬಗ್ಗಿ ತನ್ನ ಹಿಂದೆ ನಿಂತವರನ್ನು ನೋಡಿದ ಅವರು ಕಿವಿಯಲ್ಲಿ ಆ ಲೇಖಕರ ಹೆಸರನ್ನು ಹೇಳಿದರು, ...

" ಲೇಖಕ ಶ್ರೀಯುತ ರಾಮಯ್ಯನವರ ಜೊತೆ ನನ್ನನ್ನು ಸರಿಸಮಾನಾಗಿ ಕೂರಿಸಿದ್ದೀರಿ, ಅವರ ಅನುಭವದ ಮುಂದೆ ನನ್ನ ವಯಸ್ಸು ಯಾವ ಲೆಕ್ಕಕ್ಕೆ, ಅವರಿಗೆ ನಾನು ನಿಮ್ಮೆಲ್ಲರ ಎದುರಿಗೆ ಪಾದವಂದನೆ ಮಾಡುತ್ತಿದ್ದೇನೆ. ನನಗೆ ಸಂಜೆ ಮತ್ತೊಂದು ಕಾರ್ಯಕ್ರಮವಿದೆ, ನೀವೆಲ್ಲ ಅಪ್ಪಣೆ ಕೊಟ್ಟರೆ ನಾನು ಹೊರಡುತ್ತೇನೆ... "

ನಾಯಕನಟ ರೂಪೇಶನ ಮಾತಿಗೆ ಜನ ದಂಗಾಗಿ ಹೋಗಿದ್ದರು. ಅವರ ಅಭಿಮಾನ ಹುಚ್ಚೆದ್ದು ಕುಣಿಯುತ್ತಿತ್ತು, ತಮ್ಮ ನಾಯಕನನ್ನು ಎದುರಿಗೆ ನೋಡುತ್ತ ಹುಡುಗಿಯರು ವಿಭ್ರಮೆಗೆ ಒಳಗಾಗಿದ್ದರು,

ಹಾಡು ..... ಹಾಡು .... ಎನ್ನುವ ಜನರ ದ್ವನಿ ಮೊಳಗಿತು,

ಇತ್ತೀಚೆಗೆ ಬಿಡುಗಡೆಯಾದ ನಾಯಕ ನಟನ ಸಿನಿಮಾದ ಹಾಡನ್ನು ಅವನು ತನ್ನ ಕೆಟ್ಟದ್ವನಿಯಿಂದ ಹಾಡುತ್ತಿರುವಂತೆ ಜನ ಚಪ್ಪಾಳೆ ಹಾಕುತ್ತ ನರ್ತಿಸಿದರು. ಟೀವಿ ಮಾಧ್ಯಮಗಳು, ಕ್ಲೋಸ್ ಅಪ್ ನಲ್ಲಿ ನಾಯಕನನ್ನು ತೋರಿಸಲು ಪ್ರಯತ್ನಪಡುತ್ತಿದ್ದವು.

ವಸುಧ ಕನ್ನಡ ಸಂಘದ ಅಧ್ಯಕ್ಷ ಶಂಕರನ ಮುಖ ಇಳಿದು ಹೋಗಿತ್ತು. ಅವನ ಮನ ಚಿಂತಿಸುತ್ತ ಇತ್ತು. ಕನ್ನಡ ಭಾಷೆಯ ಉದ್ದಾರ ಎನ್ನುವ ಹೆಸರಿನಲ್ಲಿ ನಾವೆಲ್ಲ ಪರದಾಡುತ್ತೇವೆ. ಅದೇ ಹುಚ್ಚಿನಲ್ಲಿ ಈ ಸಂಘ ಕಟ್ಟಿಕೊಂಡೆವು. ಆದರೆ ನಿಜಕ್ಕೂ ನಾವು ಮಾಡುತ್ತಿರುವುದು ಕನ್ನಡ ಸೇವೆಯಾ ? ಎನ್ನುವ ಭಾವನೆ ಅವನನ್ನು ಕಾಡಿಸುತ್ತಿತ್ತು. ಈ ರೀತಿ ಯಾರೋ ಪ್ರಸಿದ್ದ ನಟರನ್ನು ಕರೆಸುವುದು, ಅವರ ಕೈಲಿ ಮಾತು, ಹಾಡು ಎನ್ನುವ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಭಾಷೆಗೆ ಯಾವ ರೀತಿ ಸಹಾಯವಾಗುತ್ತದೆ ಎಂದು ಅವನು ಯೋಚಿಸುತ್ತಿದ್ದ. ಈ ವರ್ಷ ರಾಜ್ಯೋತ್ಸವದ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧರಿಸಿ, ಕಮಿಟಿ ಮೀಟಿಂಗ್ ಸೇರಿದಾಗ ಸದಸ್ಯರೆಲ್ಲರು ಒಂದೇ ಹಟ ಹಿಡಿದರು. ಈ ಸಾರಿ ನಾವು ನಾಯಕ ನಟ ರೂಪೇಶನನ್ನು ಕರೆಸಬೇಕು. ಎಂದು . ಪಕ್ಕದ ಭಡಾವಣೆಯಲ್ಲಿ ಅವರು ಯಾರೊ ಮತ್ತೊಂದು ಕನ್ನಡ ಸಂಘದವರು, ಮತ್ತೊಬ್ಬ ನಟ ಸಂದೀಪನನ್ನು ಕರೆಸುತ್ತಿದ್ದಾರಂತೆ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಬೇಕು ಎಂದು ಅವರೆಲ್ಲರ ಹಟ. ಶಂಕರ ಎಷ್ಟೋ ಹೇಳಿದ, ನಾವು ಯಾರದೋ ಮೇಲಿನ ಪೈಪೋಟಿಗಲ್ಲ ರಾಜ್ಯೋತ್ಸವ ನಡೆಸುವುದು, ಕನ್ನಡ ಸೇವೆಗೋಸ್ಕರ ಎಂದು. ಪ್ರಸಿದ್ದರು ಬಂದರೆ ಕಾರ್ಯಕ್ರಮ ಸರಿಯಾಗಿ ನಡೆಸಲು ಆಗುವದಿಲ್ಲ, ಅಲ್ಲದೆ ಸಂಬಂಧಪಡದ ಜನರು ಹೆಚ್ಚು ಸೇರುತ್ತಾರೆ ಹಾಗಾಗಿ ಸಭೆ ತನ್ನ ಘನತೆ ಕಳೆದುಕೊಳ್ಳುತ್ತದೆ ಎಂದು. ಆದರೆ ಯಾರು ತನ್ನ ಮಾತಿಗೆ ಬೆಲೆಕೊಡಲು ಸಿದ್ದರಿರಲಿಲ್ಲ.

ಇಂದು ಆಗಿರುವುದು ಅದೇ, ತಮ್ಮ ಏರಿಯಾದ ಜನರು ಹೆಚ್ಚಿಗೆ ಇಲ್ಲವೇ ಇಲ್ಲ. ಯಾವುದೋ ಜನ ಎಲ್ಲಿಯವರೋ ಹೆಚ್ಚು ಹೆಚ್ಚು ಯುವಜನತೆ , ಪಡ್ಡೆ ಹುಡುಗರು, ಹುಡುಗಿಯರು ಕಾರ್ಯಕ್ರಮದಲ್ಲಿ ನುಗ್ಗಿ, ರಾಜ್ಯೋತ್ಸವದ ಉದ್ದೇಶವೆ ಮರೆತಂತ ಆಗಿದೆ. ಪಾಪ ಅಧ್ಯಕ್ಷ ಸ್ಥಾನಕ್ಕೆ ರಾಮಯ್ಯನವರನ್ನು ಕರೆತಂದು ಅವಮಾನ ಮಾಡಿದಂತೆ ಆಗುತ್ತಿದೆ, ಅವರಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ. ಅವರ ಮಾತನ್ನು ಕೇಳುವ ಜನರೂ ಇಲ್ಲಿ ಇಲ್ಲ ಅಂದುಕೊಂಡ.

ಈ ರೂಪೇಶನನ್ನು ಅಹ್ವಾನಿಸಲು, ಮೊದಲೆ ಪೋನ್ ಮಾಡಿ ಒಪ್ಪಿಸಿ ಅವನ ಮನೆಗೆ ಹೋದ ಮೇಲು ಸುಮಾರು ಎರಡು ಘಂಟೆ ಕಾಲ ಗೇಟಿನಲ್ಲಿ ನಿಲ್ಲಿಸಿದ್ದರು. ನಂತರ ಅವರ ಮನೆ ಒಳಗೆ ಹೋಗುವಾಗಲು ನಮ್ಮ ಸದಸ್ಯರೆಲ್ಲರಿಗೂ ಎಂತದೋ ಹಿಂಜರಿತ, ಉದ್ವೇಗ. ಒಳಗೆ ಬಂದ ಅವನು ನಮ್ಮ ಅಹ್ವಾನ ಕೇಳಿ ನೇರವಾಗಿಯೆ ಹೇಳಿದ

' ನಾನು ನಿಮ್ಮ ಸಭೆಗೆ ಬರಲು ಅಡ್ಡಿ ಏನಿಲ್ಲ. ಆದರೆ ನಾನು ಯಾವುದೇ ಸಭೆ ಅಥವ ಕಾರ್ಯಕ್ರಮಕ್ಕೆ ಬರುವಾಗಲು ಚಾರ್ಚ್ ಮಾಡುತ್ತೇನೆ. ರಾಜ್ಯೋತ್ಸವದ ಕಾರ್ಯಕ್ರಮ ಎಂದರೆ ಐದು ಲಕ್ಷ ಕೊಡಲೇ ಬೇಕು. ಅದರಲ್ಲಿ ಚೌಕಾಸಿ ಏನಿಲ್ಲ. ಅದಕ್ಕೆ ಒಪ್ಪಿಗೆ ಇದ್ದರೆ, ಹಣ ಕೊಡಿ ನಿಮ್ಮ ಕಾರ್ಯಕ್ರಮಕ್ಕೆ ಬರುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ. '

ನಮ್ಮ ಸಂಘದ ರಾಜ್ಯೋತ್ಸವದ ಒಟ್ಟು ಖರ್ಚು ನಾವು ಅಂದಾಜಿಸದಂತೆ ಏಳು ಲಕ್ಷ ಆಗಬಹುದು ಎಂದು ಕೊಂಡಿದ್ದೆವು, ಈ ಬಾರಿ ಅಷ್ಟು ಕಲೆಕ್ಷನ್ ಆಗುವುದು ಕಷ್ಟವಿತ್ತು, ಈಗ ಇವನೊಬ್ಬನಿಗೆ ಐದು ಲಕ್ಷ ಅಂದರೆ ಉಳಿದ ಖರ್ಚು ಹೇಗೆ ಹೊಂದಿಸುವುದು ಎಂದು ಶಂಕರ ಚಿಂತಿಸುತ್ತಿರುವಂತೆ ಕಾರ್ಯದರ್ಶಿ ರಮೇಶ ನಮಗೆ ಒಪ್ಪಿಗೆ ಇದೆ ಸಾರ್ ಅಂದುಬಿಟ್ಟ. ಅಲ್ಲದೆ ನಾಳೆ ಹಣವನ್ನು ತಂದು ಕೊಡುವದಾಗಿಯೂ ಹೇಳಿದ.

ನಾಯಕ ನಟ ರೂಪೇಶ್

" ನೋಡಿ ನನಗೆ ಕನ್ನಡ ಕಾರ್ಯಕ್ರಮಕ್ಕೆ ಹಣ ಪಡೆಯಬೇಕು ಎಂದೇನು ಇಲ್ಲ, ಆದರೆ ಏನು ಮಾಡುವುದು, ನಾನು ಬಿಟ್ಟಿ ಬರುತ್ತೇನೆ ಅಂದರೆ ಎಲ್ಲ ಸಂಘದವರು ಕರೆಯಲು ಬರುವರು, ನಿರಾಕರಿಸಲು ನನಗೆ ಕಷ್ಟ ನೋಡಿ " ಎಂದು ನಕ್ಕನಲ್ಲದೆ , ಹಣವನ್ನು ಕ್ಯಾಷ್ ಕೊಡಬೇಕೆಂದು ಚೆಕ್ ಬೇಡವೆಂದು ತಿಳಿಸಿದ.

 

ಅಷ್ಟಕ್ಕೆ ಮುಗಿಯಲಿಲ್ಲ, ನಾಯಕ ನಟ ರೂಪೇಶ , ತುಂಬಾ ಜನ ಸೇರುವ ಕಾರಣ ತನಗೆ ಸಾಕಷ್ಟು ಭದ್ರತೆ ಒದಗಿಸಬೇಕೆಂದು ಕೋರಿದ್ದ, ಅದಕ್ಕಾಗಿ ಸಂಘದ ಲೆಟರ್ ಹೆಡ್ ನಲ್ಲಿ ಪತ್ರ ಬರೆದು ಪೋಲಿಸರಲ್ಲಿಗೆ ಹೋದರೆ, ಪತ್ರ ಸ್ವೀಕರಿಸಿದ ಪೋಲಿಸ್ ಅಧಿಕಾರಿ

' ಎಲ್ಲರಿಗೂ ರಕ್ಷಣೆ ಅಂದರೆ ನಾನು ಜನರನ್ನು ಎಲ್ಲಿಂದ ತರುವುದು, ಹೋಗಲಿ ಬಿಡಿ , ಇಪ್ಪತ್ತು ಜನ ಪೋಲಿಸರನ್ನು ಕಳಿಸುತ್ತೇನೆ. ಈಗಲೇ ಹೇಳಿದ್ದೇನೆ ಅವರ ಖರ್ಚನ್ನು ನೀವೆ ವಹಿಸಬೇಕಾಗುತ್ತೆ "

" ಅಂದರೆ ಸಾರ್ " ರಮೇಶ ಅರ್ಥವಾಗದವನಂತೆ ಕೇಳಿದ

" ಅಂದರೆ ಏನ್ರಿ, ಇಪ್ಪತ್ತು ಜನ ಕಾನ್ಸ್ಟೇಬಲ್ಸ್ , ಒಬ್ಬ ಎಸ್ ಐ, ಒಟ್ಟು ಇಪ್ಪತ್ತೆರಡು ಸಾವಿರ ಹಣ ಕೊಟ್ಟು ಹೋಗಿ

"ಸಾರ್ ಅಷ್ಟೊಂದು ಹಣವ ಎಲ್ಲಿ ತರುವುದು "

" ರೀ ನನಗೆ ಗೊತ್ತಿಲ್ಲ ಅಂತ ಭಾವಿಸಿದ್ದೀರಾ, ಈಗ ನಾಯಕನಟ ರೂಪೇಶನನ್ನು ಕರೆಸುತ್ತಿದ್ದೀರಲ್ಲ, ಅವನೇನು ಬಿಟ್ಟಿ ಬರುತ್ತಿದ್ದಾನ, ಅವನಿಗೆ ಐದು ಹತ್ತು ಲಕ್ಷ ಅಂತ ಸುರಿಯುತ್ತೀರಿ, ನಾವು ಕೇಳಿದರೆ ಅಷ್ಟೊಂದಾ ಅಂತ ನೀರಾನೆ ತರ ಬಾಯಿ ತೆಗಿತೀರಲ್ರಿ. ಅವನೇನು ಕನ್ನಡದಲ್ಲಿ ಏನು ಕಿತ್ತು ಹಾಕಿದ್ದಾನೆ, ಅವನಿಗಿಂತ ನಮ್ಮ ಕಾನ್ಸ್ಟೇಬಲ್ ಕರಿಯಪ್ಪ ವಾಸಿ ಅವನಿಗೆ ಗೊತ್ತಿರುವ ಜಾನಪದದ ಹಾಡುಗಳು ಗ್ರಾಮೀಣ ಸೊಭಗಿನ ಕನ್ನಡ , ಹಳ್ಳಿಯ ಹಾಡುಗಳು ನೋಡುವಾಗ ನಿಮ್ಮ ರೂಪೇಶನಿಗೆ ಏನ್ರಿ ಗೊತ್ತಿದೆ, ನನಗೆ ನಿಮ್ಮ ಜೊತೆ ಮಾತನಾಡಲು ಸಮಯವಿಲ್ಲ, ಒಳಗೆ ಹಣ ಕೊಟ್ಟು ಹೋಗಿ "

ಪೋಲಿಸ್ ಸ್ಟೇಶನ್ ನಲ್ಲಿ ನಿಂತು ಹಣದ ಬಗ್ಗೆ ಹೆಚ್ಚು ಚೌಕಾಸಿ ಮಾಡುವುದು ಕ್ಷೇಮವಲ್ಲ ಎನ್ನುವ ಅರಿವಿನೊಡನೆ, ಶಂಕರ ಹಾಗು ರಮೇಶ ಎದ್ದು ಒಳಗೆ ಹೋಗಿ ಅಪ್ಲಿಕೇಶನ್ ಹಾಗು ಹಣ ಒಪ್ಪಿಸಿ ಬಂದಿದ್ದರು.

 

ಉಳಿದ ಖರ್ಚುಗಳನ್ನು ಖೋತ ಮಾಡಿ ರೂಪೇಶನಿಗೆ ಹಣ ಹೊಂದಿಸಲು ಸಾಹಸ ಪಟ್ಟಿದ್ದರು, ಅಷ್ಟಾದರು ಈ ವರ್ಷ ಹಣದ ತಾಪತ್ರಯ ಸಾಕಷ್ಟಿತ್ತು. ಅದೇ ಅಧ್ಯಕ್ಷ ಸ್ಥಾನದಲ್ಲಿದ್ದ ಕವಿ ರಾಮಯ್ಯನವರು ಪಾಪ ಯಾವ ಹಣದ ಬೇಡಿಕೆಯೂ ಇಟ್ಟಿರಲಿಲ್ಲ, ತಾವೆ ಆಟೋ ಮಾಡಿಕೊಂಡು ಬಂದಿದ್ದರು. ಅಲ್ಲದೆ ತಡವಾಗಿ ಬಂದ ರೂಪೇಶನಿಗೆ ಸಹನೆಯಿಂದ ಕಾಯುತ್ತ ಕುಳಿತ್ತಿದ್ದರು.

 

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ , ಶ್ರೀಯುತ ರಾಮಯ್ಯನವರು ಒಳಗೆ ವಿಷಾದ ಪಡುತ್ತ ಹೊರಗೆ ಪೆದ್ದು ನಗೆ ನಗುತ್ತ ಕುಳಿತಿದ್ದರು, ಅವರು ಬೆಳಗಿನ ತಿಂಡಿ ಇನ್ನು ತಿಂದಿರಲಿಲ್ಲ. ಇನ್ನು ಅವರ ಭಾಷಣ ಬಾಕಿ ಇತ್ತು.

ನಾಯಕ ನಟ ಹಾಡು ಮುಗಿಸಿ, ಕೆಳಗಿಳಿಯುತ್ತಿರುವಂತೆ ಜನ ಸಾಗರ ಅತ್ತ ನುಗ್ಗಿತು,

ಕಾರ್ಯಕ್ರಮ ಆಯೋಜಿಸಿದ್ದ ವಸುಧ ಕನ್ನಡ ಸಂಘದವರು ಹರಸಾಹಸ ಪಡುತ್ತಿದ್ದರು, ಸಂಘದ ಕಾರ್ಯದರ್ಶಿ ರಮೇಶ ಬಂದು ಮೈಕಿನ ಮೂಲಕ, ಇನ್ನೂ ಕಾರ್ಯಕ್ರಮ ಬಾಕಿ ಇದೆ ಸಹಕರಿಸಿ ಎನ್ನುತ್ತಿದ್ದ ಮಾತು ಯಾರ ಮೇಲು ಪರಿಣಾಮ ಬೀರದೆ, ಎಲ್ಲರೂ ನಾಯಕನ ಹಿಂದೆ ಓಡಿದರು. ಸ್ಟೇಜ್ ಮೇಲೆ ಕುಳಿತಿದ್ದ, ಅಧ್ಯಕ್ಷ ರಾಮಯ್ಯನವರು,

" ಆಗಲ್ಲ ಬಿಡಿ, ಇನ್ನು ಅಷ್ಟೆ, ಕಾರ್ಯಕ್ರಮ ಮುಗಿಸಿಬಿಡೋಣ, ಈ ರೀತಿ, ಪಬ್ಲಿಕ್ ಫಿಗರ್ ಬರುವ ಕಾರ್ಯಕ್ರಮಕ್ಕೆ ನಾನು ಬರಬಾರದು ಅಂದುಕೊಳ್ತೀನಿ , ಆಗೋದೆ ಇಲ್ಲ " ಎನ್ನುತ್ತ ಕೈಮುಗಿದು ಎದ್ದರು.

ನೋಡಪ್ಪ ಶಂಕರ, ಇಂತ ಕಾರ್ಯಕ್ರಮವೆಲ್ಲ ಇಷ್ಟೆ, ಯಾರಿಗೂ ಕನ್ನಡ ಅದು ಇದು ಅಂತ ಏನಿರಲ್ಲ, ಏನೋ ನಡೆಯುತ್ತ ಇರುತ್ತೆ ಅಷ್ಟೆ, ಇರಲಿ ಇಂತಹುದೆಲ್ಲ ನೋಡಿರುವೆ ನನಗೆ ಬೇಸರವಿಲ್ಲ, ನೀನು ನನಗೊಂದು ಆಟೋ ಹಿಡಿದು ಕೊಡು ಅಲ್ಲಿಯವರೆಗೂ ನಾನು ಇಲ್ಲಿ ಕೂತಿರುತ್ತೇನೆ ಅಂತ, ಮೂಲೆಯಲ್ಲಿ ಹೋಗಿ ಕೂತರು.

 

ಸಭೆ ಹೆಚ್ಚು ಕಡಿಮೆ ಖಾಲಿಯಾಗಿತ್ತು, ಕಾರ್ಯದರ್ಶಿ ರಮೇಶ ಸಪ್ಪೆ ಮುಖದೊಡನೆ ರೂಪೇಶನನ್ನು ಕಳಿಸಿ ಬಂದ.

ಸಂಘದ ಅಧ್ಯಕ್ಷ ಶಂಕರ ನಗುತ್ತ ಅಂದ ’ ಏನಪ್ಪ ರಮೇಶ, ನಿಮ್ಮ ನಾಯಕನನ್ನು ಕಳಿಸಿ ದುಃಖವಾಗಿರುವಂತಿದೆ , ಇನ್ನೂ ಸ್ವಲ್ಪ ಕಾಲ ಇರು ಅಂತ ನೀನು ಹೇಳಿದ್ದರೆ ಇರುತ್ತಿದ್ದರೇನೊ "

ಅಂದ ವ್ಯಂಗ್ಯವಾಗಿ.

" ಬಿಡೋ ನಾನು ತಪ್ಪು ಮಾಡಿದೆ ಅನ್ನಿಸುತ್ತಿದೆ, ಯಾರೋ ಕುಣಿದರು ಅಂತ ನಾನು ಕುಣಿಯಬಾರದಿತ್ತು. ಇವರೆಲ್ಲರು ಬಂದು ಕನ್ನಡ ಉದ್ದಾರ ಆಗುತ್ತೆ ಅಂತ ನಂಬಿದೆ ನೋಡು ಅದು ನನ್ನ ತಪ್ಪು. ದುರಂಹಕಾರಿ ಮನುಷ್ಯ, ಇವರೆಲ್ಲ ಸಮಾಜದಲ್ಲಿ ಪ್ರಸಿದ್ದ ನಾಯಕರು "

ಎಂದ

" ಏಕೊ ಏನಾಯ್ತು, ಅಷ್ಟೊಂದು ಬೇಸರ ಪಡುವಂತದು ಏನಿದೆ, ಅವರುಗಳುಇರುವುದು ಹಾಗೇನೆ, ಅಲ್ಲದೆ ಅವರ ಸುತ್ತಲು ಅಭಿಮಾನಿಗಳು ತುಂಬಿರುತ್ತಾರೆ, ಹಾಗಾಗಿ ಅವರಿಗೆ ಸ್ವತಂತ್ರವಾಗಿ ಇರಲು ಮತನಾಡಲು ಆಗಲ್ಲ ಬಿಡು " ಎಂದ ಶಂಕರ

" ಹಾಗಲ್ಲವೋ, ನಾನು ಹೇಗಿದ್ದರು ರೂಪೇಶ ತನ್ನ ಕಾರಿನಲ್ಲಿ ಮನೆಗೆ ಹೋಗುವಾಗ ಅದೇ ದಾರಿಯಲ್ಲಿ ಪಾಪ, ಈ ಸಾಹಿತಿ ರಾಮಯ್ಯನವರ ಮನೆ ಇದೆಯಲ್ಲ ಒಂದು ಡ್ರಾಪ್ ಕೊಡಲು ಆಗುತ್ತ ಸಾರ್ , ರಾಮಯ್ಯನವರಿಗೆ ಪಾಪ ವಯಸ್ಸಾದವರು ಎಂದೆ ಅದಕ್ಕವನು ಎಂತಹ ದುರಂಹಕಾರದ ಮಾತು ಆಡಿದ ಗೊತ್ತ "

ರಮೇಶನ ಮುಖ ಕೆಂಪಾಗಿತ್ತೂ

"ಏನಂತ ಅಂದರು "

ಶಂಕರ ಕುತೂಹಲದಿಂದ ಕೇಳಿದ

" ರೀ ಸ್ವಾಮಿ, ನಮ್ಮದು ಕಾರು , ವಯಸಾದವರು ಅಂತ ಎಲ್ಲರಿಗೂ ಡ್ರಾಪ್ ಕೊಡಲು ಇದು ಅಂಬ್ಯೂಲೆನ್ಸ್ ಅಲ್ಲ " ಅನ್ನುತ್ತಾ ವೇಗವಾಗಿ ಹೊರಟುಹೋದ

ಎಂದ ಶಂಕರ ಹಲ್ಲುಕಡಿಯುತ್ತ

" ಅಯ್ಯೋ ನೀನ್ಯಾಕೆ ಅವರನ್ನು ಕೇಳಲು ಹೋದೆ, ನಾನು ರಾಮಯ್ಯನವರನ್ನು ಮನೆಗೆ ಬಿಟ್ಟು ಬರುವೆ " ಎಂದ ಶಂಕರ

"ಇಲ್ಲ ಬಿಡು ನಾನು ಹೋಗಿ ಬೇಗ ಬಿಟ್ಟು ಬರುವೆ ನಂದೀಶನ ಕಾರಿದೆ. ನೀನು ಸ್ವಲ್ಪ ಇದ್ದು ಚೇರ್, ಶಾಮಿಯಾನ ನೋಡಿಕೋ ಅಷ್ಟರಲ್ಲಿ ಬರುವೆ " ಎನ್ನುತ್ತ ಹೊರಟ . ರಾಮಯ್ಯನವರು ರಮೇಶನ ಜೊತೆ ನಿಧಾನವಾಗಿ ಎದ್ದು ನಡೆಯುತ್ತ ಹೊರಟರು.

 

ಅಲ್ಲಿದ ಜನರೆಲ್ಲ ಚದುರುತ್ತಿದ್ದರು, ವಸುಧ ಕನ್ನಡ ಸಂಘದ ಇತರ ಸದಸ್ಯರು, ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.

ಶಂಕರ ಚಿಂತಿಸುತ್ತಿದ್ದ. ಇದೇನು ನಾವು ಎಲ್ಲಿಗೆ ಬಂದು ಮುಟ್ಟಿದ್ದೇವೆ. ಕನ್ನಡ ಸೇವೆ ಅನ್ನುವುದು ಸಹ ಪ್ರದರ್ಶನ ಅಥವ ನಾಟಕೀಯವಾಗಿ ಹೋಗುತ್ತಿದೆಯಲ್ಲ. ಇದಕ್ಕೆಲ್ಲ ಅರ್ಥವಿದೆಯ. ಮುಂದಿನ ವರ್ಷದಿಂದ ನಿಜವಾಗಿಯೂ ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಹೊಸ ರೀತಿಯ ಕಾರ್ಯಕ್ರಮ ಆಯೋಜಿಸಬೇಕು, ಏನಾದರು ಹೊಸದಾರಿ ಹುಡುಕಬೇಕು. ಈ ರೀತಿ ಅರ್ಥವಿಲ್ಲದ ಸಾವಿರ ಸಾವಿರ ಜನ ಸೇರುವದಕ್ಕಿಂತ ಅರ್ಥಪೂರ್ಣವಾಗಿ ಹತ್ತು ಜನ ಸೇರಿದರು ಸಾಕು ಎಂದು ಯೋಚಿಸುತ್ತಿದ್ದ

- ಶುಭಂ