ಏನು ಮಕ್ಕಳೋ ಏನೋ...
ಏನು ಮಕ್ಕಳೋ ಏನೋ... ಸ್ವಲ್ಪ ಬೈದರೂ ಮುಖ ಸಣ್ಣಗೆ ಮಾಡುತ್ತವೆ, ಬರೀ ಹಾರಾಟ , ಹೋರಾಟ!! ನಮ್ಮ ಕಾಲದಲ್ಲಿ ಹೀಗಿದ್ದೆವಾ..... ಒಂದು ಹಾಡು- ಹಸೆ ಕಲಿಯೋದು ಇರ್ಲಿ, ಅಕ್ಕ-ಪಕ್ಕದವರ ಜೊತೆ ಬೆರೆಯಲ್ಲ, ಹೇಳಿದ ಮಾತು ಕೇಳಲ್ಲ .… ನೆಂಟರು ಇಷ್ಟರು ಅಂದ್ರೆ ಬೇಡವೇ ಬೇಡ !!... ಹೀಗೆ ಆದರೆ ಸತ್ತಾಗಲೂ ಯಾರೂ ಬರಲ್ಲ ಅಷ್ಟೇ! ಒಂದು ಕನ್ನಡದ ಗಾದೆನಾ, ಸಂಸ್ಕೃತ ಶ್ಲೋಕನಾ, ಏನೂ ಕೇಳಬೇಡಿ... ಹ್ಯಾರಿ ಪಾಟರ್ ಅಂತೆ ಅದ್ಯಾವ್ದೋ ಗ್ರೀಕ್ ದೇವರಂತೆ ಬಡ್ಕೊಬೇಕು... ಜಗತ್ತಿಗೇ ಸಂಸ್ಕೃತಿ ಪರಿಚಯ ಮಾಡಿಸ್ದ ದೇಶ ನಮ್ಮದು..ಒಂದು ಚೂರೂ ನಮ್ದು -ತಮ್ದು ಅನ್ನೋದ್ ಬೇಡ್ವಾ ….
ಪುಂಖಾನುಪುಂಖವಾಗಿ ಹೊರ ಬೀಳುವ ದರಿದ್ರ ಇಂಗ್ಲಿಷ ಮನೆ ಹಾಳಾಗ ..… ಹೊಡ್ಕೊತಾವಲ್ಲ, ಹಾಳು ಪಿಜ್ಜಾ, ಬರ್ಗರ್ ನೇ ಬೇಕು ಅಂತ, ಏನು ಪರದೇಶದಲ್ಲೇ ಹುಟ್ಟಿದ್ವಾ.... ಅದೇ ತಿಂದು ಹಾಳಾಗ್ಲಿ ಅಂತ ಹೊರಗೆ ಕರ್ಕೊಂಡು ಹೋದರೂ ಮನತುಂಬಿ ಸಂತೋಷ ಪಡಕ್ಕೆ ಏನು ರೋಗಾನೋ ಇವಕ್ಕೆ...ನಾನು ಮೊನ್ನೆ ಮೆಟ್ರೋ ಸುರಂಗದಲ್ಲಿ ರೈಲು ಹೋದಾಗ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದಕ್ಕೆ ಎಲ್ರ ಮುಂದೆ ಅವಮಾನ ಆಯ್ತಂತೆ...ಸಿಲ್ಲಿ ಅಂತೆ...ಹೌದು …ನಂಗೆ ಸಣ್ಣ ಪುಟ್ಟದಕ್ಕೂ ಸಂತಸ ಪಡೋದಕ್ಕೆ ಇಷ್ಟನಪ್ಪ.. ಇವರಿಗೆ ಯಾಕೆ ನಾಚ್ಕೆ ಆಗ್ಬೇಕು ಅಂತೀನಿ..!! ಸಣ್ಣದಕ್ಕೂ ಪ್ರೈವಸಿ ಬೇಕಂತೆ, ಸ್ವಂತ ವಿಷಯಕ್ಕೆ ಇಂಟರ್ ಫಿಯರ್ ಆಗಬಾರದಂತೆ... ಇವುಗಳ ಮುಖಕ್ಕೆ ಅದೊಂದು ಕೇಡು ..!! ಇವರಿಗಾಗಿ ತಾನೇ ಇದುವರೆಗೂ ಎಲ್ಲ ಕಷ್ಟ-ನಷ್ಟ ತಡ್ಕೊಂಡಿದ್ದು, ( ದುಃಖ ಉಮ್ಮಳಿಸಿ )…..
ಅಲ್ಲಾ ಸ್ಕೂಲ್ ನಲ್ಲಿದ್ದೇ ಇಷ್ಟು, ಇನ್ನು ಕಾಲೇಜ್ಗೆ ಹೋದ್ರೆ ಇನ್ನೇನ್ ನೋಡಬೇಕೋ… ಅಷ್ಟಲ್ಲದೇ ಹೇಳ್ತಾರಾ ಒಳ್ಳೆ ಗಂಡ ಮಕ್ಳು ಸಿಗಕ್ಕೂ ಪುಣ್ಯ ಮಾಡಿರಬೇಕು.. ಸಾಕಿನ್ನು ಈ ಮನೆ,ಮಕ್ಲ ಸಹವಾಸ... ಅಮ್ಮನ ಮನೆಗೆ ಹೋಗ್ಬಿಡ್ತೀನಿ ಮತ್ತೆ ಬರೋದೆ ಇಲ್ಲ…..ಒಂದು ನಿಮಿಷಾನೂ ಇರಲ್ಲ ಇಲ್ಲಿ , ಮರ್ಯಾದೆ ಇಲ್ಲದ ಕಡೆ ಯಾಕಿರಬೇಕು ??…. (ಕಣ್ಣೊರೆಸಿ ಕೊಳ್ಳುತ್ತಾ….)
.
.
.
.
.
ಯಾಕೋ ಕೋಪ ಮಾಡ್ಕೊಂಡು ಸ್ಕೂಟಿಲಿ ಹೋದ ಮಗಳು ಇನ್ನೂ ಬರಲೇ ಇಲ್ಲ, ಮೊದಲೇ ತುಂಬಾ ಟ್ರಾಫಿಕ್ ಬೇರೆ …. ಪಾಪ ಏನಾಯ್ತೋ ಏನೋ !!
PC : Google
Comments
ಉ: ಏನು ಮಕ್ಕಳೋ ಏನೋ...
ಇದನ್ನೆ ಮಾಯೆ ಅನ್ನುವುದು
In reply to ಉ: ಏನು ಮಕ್ಕಳೋ ಏನೋ... by csomsekraiah
ಉ: ಏನು ಮಕ್ಕಳೋ ಏನೋ...
ನಮ್ಮನ್ನು ಹೆತ್ತವರ ಬಗ್ಗೆ ಭಯ- ಭಕ್ತಿ , ನಾವು ಹೆತ್ತ ಮಕ್ಕಳ ಬಗ್ಗೆ ತೀವ್ರ ಸೆಳೆತ, ಪ್ರೀತಿ.. ಎರಡೂ ಕಡೆ ಸೋತು ಹೋಗಲು ಮನಸಿನ ಪೈಪೋಟಿ!!... ಇದಲ್ಲವೇ ಮಾಯೆ.... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ