ಅತೀತ - ನಾಟಕ ವಿಮರ್ಶೆ
ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ ಉತ್ತರ ಕೊಡುವ ನಾಟಕ ಅತೀತ.
ನಾವು ನೋಡುವ, ನಾವು ಬಯಸುವ, ನಮ್ಮನ್ನು ಹಾಡಿ ಹೊಗಳುವ ಜಗತ್ತು ಬಹಳ ಸುಂದರ. ಸಾಧನೆಯ ಶಿಖರ ನಮ್ಮ ಗುರಿ. ನಮ್ಮನ್ನು ನಾವು ಹೋಲಿಸಿಕೊಂಡು, ಮೌಲ್ಯಮಾಪನ ಮಾಡಲು ಸಾಧಕರನ್ನು ಬಳೆಸಿಕೊಳ್ಳುವುದುಂಟು. ಪ್ರತಿಯೊಬ್ಬರ ಸುಂದರ ಮೊಗದ ಆಚೆಬದಿಯಲ್ಲಿ ಒಂದು ಕರಾಳವಾದ, ವಿಕಾರವಾದ ಮುಖ ಇರುತ್ತದೆ, ಅದನ್ನು ನಾವು ಗಮನಿಸುವುದಿಲ್ಲ ಎಂದು ನಾಟಕ ಪದೇ ಪದೆ ನಿರೂಪಿಸುತ್ತದೆ. ಬಡತನ ಪಾಪವಲ್ಲ, ಅದೊಂದು ಅಸಹಾಯಕತೆಯ ಘಟ್ಟ, ಬಡವನಾದವನೂ ಸಹ ಕನಸುಗಳ ಕಾಣಬಲ್ಲ, ಕನಸುಗಳ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂದು ಒಂದೆಡೆ ಹೇಳುತ್ತಾ ಬರುವ ಕಥೆ, ಇನ್ನೊಂದೆಡೆ ನಾಟಕದ ನಾಯಕ ಮೇಲೇರಲು ಬಳಸಿದ ವಾಮಮಾರ್ಗವನ್ನು ಬಿಚ್ಚಿಡುತ್ತಾ ಹೋಗುತ್ತದೆ. ದೇಹ-ಆತ್ಮ ವಿಂಗಡನೆ, ದೇಹದ ಪರಿಶುದ್ಧ image, ಕೆಸರುಮಯವಾದ ಆತ್ಮದ ಚಿತ್ರಣ, ಸುಳ್ಳಿನ ಸುಂದರ ಸವಿ, ಸತ್ಯದ ಕಟು ಕಹಿ, ಸ್ವಾರ್ಥದ ಹುನ್ನಾರಗಳು, ಜೀವ-ಜೀವನಕ್ಕೆ ಹಪಹಪಿಸುವಿಕೆ, ಸಮಯೋಚಿತ ಮಾತುಗಳು - ಇವುಗಳು ನಾಟಕದ ವೈಶಿಷ್ಟ್ಯತೆಗಳು.
ಸೇತುರಾಮ್ ಅವರ ನಾಟಕ ಎಂದಮೇಲೆ ಸಮಾಜ ವಿಡಂಬನೆ, ವ್ಯಂಗ್ಯೋಕ್ತಿಗಳು ಸಹಜ. ಸಮಾಜದ ವಿಕಾರ ಸತ್ಯಗಳನ್ನು ವಿಡಂಬನೆಯ ಚುಚ್ಚುಮಾತುಗಳಿಂದ ಮನದಟ್ಟು ಮಾಡುವ ಕಲೆ ಅವರದ್ದು. ನಗುತ್ತಲೆ ನೋವನ್ನು ಬಣ್ಣಿಸಿ, ಅದರ ಹಾಸ್ಯ ಮಾಡುತ್ತ ನಮಗೆ ಅದರ ಅರಿವು ಮೂಡಿಸುವುದರಲ್ಲಿ ಅವರು ನಿಷ್ಣಾತರು. ದುಃಖದ ತಪ್ಪಲಲ್ಲಿ ನಮ್ಮನ್ನು ತೇಲಿಬಿಟ್ಟು, ಇನ್ನೇನು ಕಣ್ಣಂಚು ಒದ್ದೆಯಾಗಬೇಕು ಎನ್ನುವ ಹೊತ್ತಿಗೆ ಸರಿಯಾಗಿ ನಗಿಸುವ ಒಂದು ಬಾಣ ನಮ್ಮನ್ನು ಅಪ್ಪಳಿಸುತ್ತದೆ. ನೋವಿನ ಮಾತಾದರು, ಹೇಳುವ ಶೈಲಿ ಮತ್ತು ಸಮಯ ನಮ್ಮನ್ನು ನಗಿಸಿಬಿಡುತ್ತದೆ.
ಇನ್ನು ನಟನೆಯ ವಿಚಾರಕ್ಕೆ ಬಂದರೆ, ಎಲ್ಲರ ನಟನೆ ಅದ್ಭುತ. ಪ್ರತಿಯೊಬ್ಬರ ಹಾವ-ಭಾವ, ಮಾತಿನ ಶೈಲಿ, ವರ್ಣನೆಗೆ ನಿಲುಕದ್ದು ಎನ್ನಬಹುದು. ನಟನೆ ಎನ್ನುವುದಕ್ಕಿಂತ ಅದು ಸಹಜತೆ ಎನ್ನುವಷ್ಟು ನಮ್ಮನ್ನು ಆಕರ್ಷಿಸುತ್ತಾರೆ ಆ ಎಲ್ಲಾ ನಟರು. ನಾಯಕನ ಸಮರ್ಥನಾ ತಾಕತ್ತು ಮತ್ತು ವಿಷಯ ತಿರುಚುವ ಸಾಮರ್ಥ್ಯಕ್ಕೆ ಯಾರೆ ಆದರು ಬೆರಗುಗೊಳ್ಳುವುದು ಖಂಡಿತ. ಆದರೆ ನಾಟಕ ನೋಡುವಾಗ ಕೆಲವು ದೃಶ್ಯಗಳ ವರ್ಣನೆ ನಮ್ಮ ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ. ಕೆಲ ದೃಶ್ಯಗಳನ್ನು ನಟರು ವರ್ಣಿಸುವಾಗ ಇದನ್ನು ಕೇಳಲಾರೆ ಎನ್ನಿಸುವುದು ಸಹ ಉಂಟು. ಹೆಣ್ಣಿನ ಮೇಲೆ ಆಕ್ರಮಣಗಳನ್ನು ಕಠೋರವಾಗಿ ತೋರಿಸಿದ್ದಾರೆ ಎಂದು ಅನ್ನಿಸುವುದುಂಟು. ಈ ಕೆಲ ಅಂಶಗಳನ್ನು ಹೊರೆತುಪಡಿಸಿ, ನಾಟಕ ಅದ್ಭುತವೆ ಹೌದು. ಸಮಾಜ ವಿಮರ್ಶೆಗೆ ಇದೊಂದು ಒಳ್ಳೆಯ ನಾಟಕ. ಎಲ್ಲರಿಗೂ ನಾಟಕ ಹಿಡಿಸುವುದು ಎಂದು ಹೇಳುವುದು ಕಷ್ಟವಾದರು, ಅವರ ನಟನೆಗೆ ಮನಸ್ಸೋಲುವುದು ಅನುಮಾನ ರಹಿತವಾದದ್ದು. ನಾಟಕಾಸಕ್ತರಿಗೆ ಇದು ಬಹಳ ಕಲಿಸುವುದು, ಮನ ಒಲಿಸುವುದು. ಆಸಕ್ತಿ ಉಳ್ಳವರು ಖಂಡಿತ 'ಅತೀತ' ನೋಡಲೇಬೇಕು.