ಶುಭ್ರವಾಗು ನನ್ನ ತೀರ

ಶುಭ್ರವಾಗು ನನ್ನ ತೀರ

 

ನಾನು ಬಿದ್ದೆನೆಂದು ಆಲಾಪಿಸುತ್ತೇನೆ
ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ? 
ಎಂದು ದೂರುವುದಿಲ್ಲ
 
ನಾನು ಜಾರಿದ್ದು ಕೆಸರಿನ ಮೇಲೇ ಹೌದು
ಕೆಸರು ರಾಚಿದ್ದು ನೀನೆಂದು 
ಹೇಳುವ ಮನಸ್ಸಿಲ್ಲ
 
ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದೇನೆ
ನಾಲಿಗೆಗೆ ಭಯದ ಬರೆ ಎಳೆದದ್ದು ಯಾರೆಂದು 
ಕೂಗುವ ಪ್ರಮೇಯ ನನಗಿಲ್ಲ
 
ಅಯ್ಯಾ ಎಂದು ಅರವುತ್ತಲಿದ್ದೇನೆ 
ಅದು ನಮ್ಮ ಸಮ್ಮಾನಕ್ಕೆ ಕೋರಿದ್ದೆಂದು 
ನಿನ್ನೊಳಗೆ ಅರಿವಾಗಬೇಕು
 
ಬಡತನಕ್ಕೆ ಅಂಜುವುದೆ ತಿಳಿದಿಲ್ಲದ ನನಗೆ 
ವರ್ಣ ಹೀನತೆಯ ನಿಕೃಷ್ಟತೆ ಹೇರಿದ ನೆನಪು 
ನಿನ್ನಲ್ಲಿ ಮರುಕಳಿಸಬೇಕು
 
ನನ್ನ ನಾಲಿಗೆಯ ಭಾಷೆ ನಿನ್ನ ನೆರಳಿನ ಸನಿಹ 
ಇಲ್ಲವೆಂದರೂ ಪರಿಹಾಸ ಮಾಡದಿದ್ದರದೇ 
ನಮಗೆ ಪರಾಕು
 
ಎತ್ತದಿರಿ ಏರಿಸದಿರಿ ಮುಟ್ಟಿ ಮಣೆ ಹಾಕದಿರಿ 
ಸಕಲ ಸವಲತ್ತುಗಳಿಂದ ನನ್ನ ಉದ್ಧಾರದ 
ಕತೆ ಕಟ್ಟದಿದ್ದರೆ ಸಾಕು
 
ಬಂಧುವೆಂದು ಕರೆಯಿಸಿಕೊಳ್ಳುವ ದುರಾಸೆಗಳಿಲ್ಲ
ಗೆಳೆಯನೆಂದು ನನ್ನ ಸಾವರಿಸು; 
ಬಿಟ್ಟು ಧಿಮಾಕು 
 
ಕುಹಕತೆಗಳ ಬಿಟ್ಟರೆ ಅದುವೆ ನಮ್ಮಗಾಯಗಳಿಗೆ ಮುಲಾಮು 
ಅಸಡ್ಡೆಗಳ ತೊರೆದರೆ 
ಇದೊ ನಿನಗೆ ಸಲಾಮು
 
ನಿನ್ನ ಹೃದಯ ವೈಶಾಲ್ಯತೆಯ ಕಟ್ಟುಕತೆಗಳ 
ಬಗೆದು ಒಗೆಯುತ್ತೀಯ 
ಶುಭ್ರವಾಗುತ್ತೀಯ ನನ್ನ ತೀರ ?
                                                                         
                                                -     ಅನಂತ ರಮೇಶ್

 

Rating
No votes yet