ಜಲರಾಶಿ ಮಧ್ಯೆ ದಾಹ! ದಾಹ! (ಭಾಗ-೧)
ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ. ಎಲ್ಲಾರೂ ಬನ್ನಿ. ಇವತ್ತು ಬಿಟ್ರೆ ಇನ್ ಮೂರು ತಿಂಗ್ಳ ಈ ಬದೀಗ್ ಬರೂದಿಲ್ವಂತೆ ಅವನು ಕೂಗಿದ್ದು ಕೇಳಿ ಊರ ಜನ ಧಿಗ್ಗನೆ ಎದ್ದರು. ಜೇಬು ಮುಟ್ಟಿ ನೋಡಿಕೊಂಡರು. ಚೀಲ, ಪಾತ್ರೆ, ಬುಟ್ಟಿ, ಅಂತ ಕೈಗೆ ಸಿಕ್ಕಿದ್ದು ಹಿಡಿದುಕೊಂಡು ದೋಣಿ ಇದ್ದಲ್ಲಿಗೆ ಹೊರಟರು. ಕೆಲವು ಮನೆಗಳಲ್ಲಿ ಗಂಡಸರಿರಲಿಲ್ಲ. ಹೆಂಗಸರ ಬಳಿ ದುಡ್ಡು ಶಿಲ್ಕಿರಲಿಲ್ಲ. ಮತ್ತೆನು ಮಾಡುವುದು? ಮನೆಯಲ್ಲಿ ಬೆಳೆದ ತಂಗಿನ ಕಾಯನ್ನೇ ಹಿಡಿದು ಉಪ್ಪು ಕೊಳ್ಳಲ್ಲು ಹೊರಟರು.
ಹೊಳೆಯ ಬಳಿ ನಿಂತಿದ್ದ ದೋಣಿಯ ತುಂಬ ಉಪ್ಪು. ಮಾಲೀಕರು ಅಳೆದಳೆದು ಕೊಡುತ್ತಿದ್ದರು. ಒಳ್ಳೇ ಪಾಲಿಷ್ ಮಾತುಗಳು ಅವರದು. “ಕುಮಟಾ ಪೇಟೇಲಿ ಸೇರಿಗೆ ಒಂದೂವರೆ. ಇಲ್ಲಿ ಒಂದೇ ರೂಪಾಯಿ.... ಅಯ್ಯss ಇಷ್ಟೇ ಸಣ್ಣ ಕಾಯಿ ಇದಕ್ಕೆಷ್ಟು ಉಪ್ಪು ಬರ್ತದ್ಯೇ?... ನೀ ತಂದಷ್ಟು ಶೇಂಗಾಕ್ಕೆ ಉಪ್ಪು ಕೊಟ್ಟರೆ ದಿವಾಳಿ ಆಗ್ತೆ... ಮುಂತಾಗಿ ಅಪ್ಪಟ ಮಣ್ಣಿನ ವಾಸನೆಯ ಮಾತು. ಚಾಲಾಕಿತನದ ವ್ಯಾಪಾರ.
ದೋಣಿಯಲ್ಲಿ ಉಪ್ಪು ಖಾಲಿಯಾಗ್ತಾ ಬಂತು. ಬದಲಾಗಿ ತೆಂಗಿನ ಕಾಯಿ, ಶೇಂಗಾ ದೋಣಿಯೊಳಗೆ ಬಂದು ಬಿದ್ದಿದ್ದವು. ಜನ ನಿಧಾನವಾಗಿ ಖಾಲಿ ಆದರು. ಉಪ್ಪು ಹೋಯ್ತು ಉಪ್ಪು.” ಹುಟ್ಟು ಹಾಕುತ್ತಾ ಮಾಸ್ತರರು ಕೂಗಿದರು.
ಹೊಸ ಊರಿಗೆ ದೋಣಿಯಲ್ಲಿ ಬಂದಿಳಿದ ಕೂಡಲೇ ಆದ ಮೊದಲ ಅನುಭವ ಇದು. ನಾಲ್ಕು ದಿಕ್ಕಿನಿಂದಲೂ ಉಪ್ಪು ನೀರಿಂದ ಆವೃತವಾದ ಹಳ್ಳಿ, ಉಪ್ಪಿಗಾಗಿ ಕ್ಯೂ ನಿಂತಿತ್ತು! ಇದೆಂಥ ಊರು ಎಂದುಕೊಂಡೆ.
ಅದು ಐಗಳ ಕುರ್ವೆ. ಕುರ್ವೆ ಎಂದರೆ ಸುತ್ತೆಲ್ಲ ನೀರು ಎಂದು ಅರ್ಥ. ಉತ್ತರ ಕನ್ನಡದಲ್ಲಿ ಶರಾವತಿ ನದಿ ಮಾವಿನಕುರ್ವೆಯನ್ನು ನಿರ್ಮಿಸಿದರೆ ಅಘನಾಶಿನಿ ಐಗಳ ಕುರ್ವೆಗೆ ಕಾರಣವಾಗಿದೆ. ಅಘನಾಶಿನಿಯು ಕುಮಟಾ ತಾಲ್ಲೂಕಿನಲ್ಲಿ ಸಮುದ್ರ ಸೇರುವ ಮುನ್ನ ಸಂಪೂರ್ಣವಾಗಿ ಸುತ್ತುವರೆದಿರುವ ಒಂದು ಭೂಕಾಯ ಐಗಳ ಕುರ್ವೆ. ಅಲ್ಲಿ ಸುಮಾರು ೨೦೦ ಕುಟುಂಬಗಳ ವಾಸ. ಎಲ್ಲರೂ ಭಂಡಾರಿಗಳು ಅಥವಾ ಪಟಗಾರರು. ಸಾವಿರಕ್ಕೆ ಮೇಲ್ಪಟ್ಟ ಜನಸಂಖ್ಯೆ. ಹೊಳೆಯ ಆಚೆ ದಡದಿಂದ ನೋಡಿದರೆ ಇದು ದೈತ್ಯ ತೆಂಗಿನ ಮರಗಳ ತೋಟ. ಸನಿಹ ಬಂದಾಗ ಮರಗಳಡಿಯಲ್ಲಿ ಕೆಲವು ಹೆಂಚು, ಸೋಗೆ ಮನೆಗಳು. ಹೆಚ್ಚಿನವು ಗುಡಿಸಲುಗಳು. ಅವುಗಳಿಗೆ ಹೆಣೆದ ತೆಂಗಿನಗರಿಗಳ ಮುಚ್ಚಿಗೆ.
'ದೋಣಿ' ಈ ಊರಿಗೆ ಏಕಮಾತ್ರ ಸಂಪರ್ಕ ಸಾಧನ. ಇಲ್ಲಿಂದ ಸುತ್ತಲ ಊರುಗಳಾದ ಕೋಡ್ಕಣಿ, ಮಿರ್ಜಾನ, ಹೆಗಡೆ, ತೆಪ್ಪ, ಮಾಸೂರುಗಳೆಲ್ಲ ಹತ್ತಿರದಲ್ಲೆ ಕಾಣುತ್ತವೆ. ಆದರೆ ಓಡಿ ಮುಟ್ಟಲಾಗುವುದಿಲ್ಲ. ದೋಣಿಗಾಗಿ ಕಾಯಬೇಕು. ಹೈಸ್ಕೂಲಿಗೆ ವೇಳೆಯಾಯ್ತು. ಬಸ್ಸು ತಪ್ಪಿಹೋಯ್ತು, ದೋಣಿ ತಡವಾಗಿ, ನಾವು ಹೋಗುವುದರೊಳಗೆ ರೇಶನ್ನು ಖರ್ಚಾಗಿ ಹೋಯ್ತು ಎಂದರೆ-ಅಂಥ ಕಷ್ಟಗಳಿಗೆ ಇಲ್ಲಿ ಪರಿಹಾರವೇ ಇಲ್ಲ.
ಇನ್ನೊಂದು ವಿಶೇಷ. ಅರಬ್ಬಿ ಸಮುದ್ರದ ನೀರೂ ನದಿಯೊಳಗೆ ಸೇರುವುದರಿಂದ ಇಲ್ಲಿಯ ನೀರು ಉಪ್ಪು. ನಂಬಿದರೆ ನಂಬಿ. ಐಗಳ ಕುರ್ವೆಯಲ್ಲಿ ನಾಲ್ಕೈದು ಅಡಿ ತೋಡಿದರೆ ನೀರು ಸಿಕ್ಕುತ್ತದೆ. ಉಸುಕಿನ ಹುಡಿ ಮಣ್ಣನ್ನು ಮಕ್ಕಳು ಆಟಕ್ಕಾಗಿ ಅಗೆದರೂ ಬಾವಿ ತಯ್ಯಾರು. ಆದರೆ ಏನು ಉಪಯೋಗ? ದೊರೆತದ್ದು ಉಪ್ಪು ನೀರು. ಕುಡಿಯಲು ಒಂದು ತೊಟ್ಟು ಸಿಹಿ ನೀರೂ ಇಲ್ಲಿ ಸಿಕ್ಕುವುದಿಲ್ಲ.
ಕುಡಿಯುವ ನೀರಿಗಾಗಿ ಐಗಳ ಕುರ್ವೆ ಜನ ಹೊಳೆದಾಟಿ ಕೋಡ್ಕಣಿಗೆ ಬರುತ್ತಾರೆ. ಇಲ್ಲಿಯ ಬಾವಿಗಳಲ್ಲೂ ಜನವರಿವರೆಗೆ ಮಾತ್ರ ನೀರು. ನಂತರ ಕೋಡ್ಕಣಿಯವರೀಗೇ ಇಲ್ಲದಿರುವಾಗ ಇವರಿಗೆಲ್ಲಿ? ಆಗ ಆರಂಭವಾಗುತ್ತದೆ ನೀರಿನ ಬೇಟೆ. ಒಂದು ಕೊಡ ನೀರಿಗಾಗಿ ಮೈಲು ಗಟ್ಟಲೆ ಅಲೆದಾಟ. ಇಲ್ಲಿ ಮಳೆಗಾಲದ ಆರು ತಿಂಗಳು ಅಷ್ಟೆಲ್ಲ ಕಷ್ಟವಲ್ಲ. ಐಗಳ ಕುರ್ವೆಯ ಬಾವಿಗಳಲ್ಲಿ ನೀರು ಸಿಹಿಯಲ್ಲದಿದ್ದರೂ ಸಪ್ಪೆಯಾಗಿರುತ್ತದೆ. ಹೇಗೋ ಕುಡುಯಬಹುದು. ಅನ್ನ, ಸ್ನಾನಕ್ಕೆ. ಅಡಿಗೆಗೆ ಉಪಯೋಗಿಸಬಹುದು. ಆದರೆ ಉಳಿದ ಆರು ತಿಂಗಳ ಪಾಡು ಹೇಳುವುದಲ್ಲ. ಯಾರಾದರೂ ಅತಿಥಿಗಳು ಬಂದು ಸಿಹಿ ನೀರು ಕೇಳಿದರೆ ಉಭಯ ಸಂಕಟ.
ತೆಂಗು ಈಜನರ ಜೀವಾಳ.ಅದೂ ಇರದಿದ್ದರೆ ಈ ನಡುಗುಡ್ಡೆಯಲ್ಲಿ ಉಳಿಯುವ ಅಗತ್ಯ ಇರಲಿಲ್ಲ. ಜನರನ್ನು ಇಲ್ಲಿ ಹಿಡಿದು ನಿಲ್ಲಿ ಸಿದ್ದೇ ತೆಂಗು. ಬಂದ ಅತಿಥಿಗಳಿಗೆಲ್ಲ ಧಾರಾಳ ಎಳೆನೀರು ಸರಬರಾಜು. ಅದು ಬಿಟ್ಟರೆ ಕೆಲವರಿಗೆ ಅಲ್ಪ ಸ್ವಲ್ಪ ಗದ್ದೆ ಇದೆ. ಒಂದು ಬೆಳೆ ಭತ್ತ. ಇನ್ನೊಂದು ಶೇಂಗಾ (ನೆಲಗಡಲೆ). ತೆಂಗಿನ ಕಾಯೊಂದು ಬಿಟ್ಟು ಇಲ್ಲಿಯ ಜನ ಪ್ರತಿಯೊಂದು ವಸ್ತುವನ್ನೂ ಹೊಳೆಯಾಚೆಯಿಂದ ತರಬೇಕು. ಅದಕ್ಕೇ ಐಗಳ ಕುರ್ವೆಯ ದೋಣಿಯಲ್ಲಿ ಸದಾ ಅಕ್ಕಿ, ಅವಲಕ್ಕಿ, ಉಳ್ಳಾಗಡ್ಡೆ, ಲಿಂಬೆಹಣ್ಣು ಮುಂತಾಗಿ ಸಾಮಾನುಗಳು ತುಂಬಿರುತ್ತವೆ. ಜೊತೆಗೆ ಕಟ್ಟಿಗೆ ರಾಶಿ, ಹುಲ್ಲು ಹೊರೆ, ಕುಡಿಯುವ ನೀರಿನ ಹತ್ತಾರು ಕೊಡಗಳು. ಹೀಗಾಗಿ ದೋಣಿಯಲ್ಲಿ ಕೂಡ್ರಲು ಜಾಗವೇ ಇರುವುದಿಲ್ಲ. ಇಲ್ಲಿ ಬೆಳೆದ ಭತ್ತ ಅಕ್ಕಿಯಾಗಿ ಬರುವಾಗ 'ಸಾಕಪ್ಪಾ ಸಾಕು ಬೆಳೆದದ್ದು' ಅನ್ನಿಸುವುದಂತೆ.!
ಮೊದಲು ಅಲ್ಲಿ ಒಂದು ಅಂಗಡಿಯಿತ್ತು. ಜನ ಬೇಕಾದ ಸಾಮಾನು ಅಲ್ಲೇ ಕೊಳ್ಳುತ್ತಿದ್ದರು. 'ಸ್ಟಾರಸ್ಯವೆಂದರೆ ಮಕ್ಕಳುಗಳೆಲ್ಲ ಮನೆಯಿಂದ ಕಾಯನ್ನೋ ದುಡ್ಡನ್ನೋ ಕದ್ದು ತಂದು ಪೆಪ್ಪರಮೇಂಟು ತಿನ್ನುವುದು ಶುರುವಾಯ್ತು. ಕದ್ದು ಬೀಡಿ ಸೇದುವದೂ ಕಂಡು ಬಂತು.ಬೇಸತ್ತ ಹಿರಿಯರು ಅಂಗಡಿಯನ್ನೇ ತೆಗೆಸಿಬಿಟ್ರು' ಎಂದು ಒಬ್ಬ ಯುವಕ ಕಥೆ ಹೇಳಿದ.
ಅದಕ್ಕಾಗಿ ಈಗ ಅಲ್ಲಿ ಅಂಗಡಿ ಇಲ್ಲ. ಬದಲಾಗಿ ಜನ ಆಗಾಗಿ ಹೊಳೆದಾಟಿ ಹೋಗುವುದರಿಂದ ಬೇಕಾದ ವಸ್ತುಗಳನ್ನು ಅಲ್ಲಿಂದಲೇ ಕೊಂಡು ತರುತ್ತಾರೆ. ಬೆಳಿಗ್ಗೆ ಕೂಲಿಗಾಗಿ ಹೊರಗೆ ಹೋದವರು ಸಂಜೆ ಬರುವಾಗ ಅಕ್ಕಿ-ಬೆಲ್ಲ-ಮೆಣಸು ಹಾಗೂ ಒಂದು ಕೊಡ ನೀರು ತರುತ್ತಾರೆ ನಾಳೆಗಾಗಿ ಅವರ ಕೂಡಿಡುವುದು ಇಷ್ಟು ಇಷ್ಟು!