ಅರ್ಥ ಮತ್ತು ತರ್ಕ
ರಾಜ್ಯ ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳ ಪಡೆಯುವ ; ಸುಖಕರವಾದ ಜೀವನ ನಡೆಸುವ ಮಹನೀಯರೊಬ್ಬರು ದೇಶ ಕಾಯುವ ಯೋಧರ ಬಗ್ಗೆ ತಮ್ಮ ಅಮೋಘ ಹೇಳಿಕೆಯೊಂದನ್ನು ನೀಡಿ ಕೃತಾರ್ಥರಾಗಿದ್ದಾರೆ . ಅದು ‘ಯೋಧರು ಕೇವಲ ಬಡತನದ ಕಾರಣದಿಂದಾಗಿ ಸೈನ್ಯಕ್ಕೆ ಸೇರುತ್ತಾರೆ’ ಎಂಬ ಅವರ ಬಾಲಿಶ ಹೇಳಿಕೆ . ಇದರಲ್ಲಿ ಅವರದ್ದೇನೂ ತಪ್ಪಿಲ್ಲ , ಅವರ ಓದೇ ಅಷ್ಟು . ಈ ಜಗತ್ತನ್ನು ಕೇವಲ ಆರ್ಥಿಕ ಮಾನದಂಡದ ಮೇಲೆ ಮಾತ್ರ ಅಳೆಯಲು ಕಲಿತಿರುವ ಎಲ್ಲ ಮಹಾನುಭಾವರ ಹಣೆಯ ಬರಹವೂ ಅಷ್ಟೆ . ಅಂದರೆ ಆರ್ಥಿಕತೆಯ ಮೇಲೆ ಈ ಮಾನವ ಸಮಾಜ ನಿಂತಿಲ್ಲವೇ ? ಎಂಬ ಪ್ರಶ್ನೆಗೆ ಉತ್ತರ ಖಂಡಿತ ನಿಂತಿದೆ ; ಆದರೆ ಬರಿಯ ಆರ್ಥಿಕತೆಯ ಮೇಲಲ್ಲ. ಮಾನವ ಪ್ರಣೀತ ಆರ್ಥಿಕ ಸಿದ್ದಾಂತದ ಹೊರತಾಗಿಯೂ ಬಹು ವಿಸ್ತøತವಾಗಿ ಈ ಜಗತ್ತಿನ ವ್ಯಾಪಾರಗಳು ನಡೆಯುತ್ತವೆ ಎನ್ನು ಅರಿವು ಇದ್ದರೆ ಈ ರೀತಿಯ ಹೇಳಿಕೆಗಳು ಹೊರ ಬರುವುದಿಲ್ಲ.
ಅಮ್ಮ ತನ್ನ ಹಸುಗೂಸಿಗೆ ಅಕ್ಕರೆಯಿಂದ ತನ್ನ ಎದೆಯ ಹಾಲೂಡಿಸುವಲ್ಲಿ ಯಾವ ಲೆಕ್ಕಾಚಾರವಿದೆ ? ಈ ಹೇಳಿಕೆ ನೀಡಿರುವ ಮಹಾನುಭಾವರು ಉದಿಸಿ ಬೆಳೆದು ಬಂದಿರುವುದು ಸಹ ಅಂಥಹ ನಿಸ್ವಾರ್ಥ ತಾಯೊಬ್ಬರು ತನ್ನ ರಕ್ತವನ್ನು ಬಸಿದು ಬೆಳೆಸಿದುದರಿಂದಲೇ ಎನ್ನುವುದನ್ನು ಮರೆತಿದ್ದಾರೆ. ಅಥವಾ ತನ್ನನ್ನು ಎದೆಗವಚಿ ಬೆಳೆಸಿದ ಆ ತಾಯ ಮಮತೆಯನ್ನು ಆಕೆ ಎಷ್ಟು ಲೀಟರ್ ಹಾಲನ್ನು ತನಗೆ ನೀಡಿರಬಹುದು ಇವತ್ತಿನ ತನ್ನ ಆದಾಯದಲ್ಲಿ ಅದನ್ನು ಲೆಕ್ಕ ಹಾಕಿ ಎಣಿಸಿ ಬಿಸಾಡಿದರೆ ಮುಗಿಯಿತು ಮಮತೆಯ ಬೆಲೆ , ಇಷ್ಟೇ ಇವರ ಆರ್ಥಿಕ ಪ್ರಪಂಚ. ಸೈನಿಕ ಸಂಬಳಕ್ಕಾಗಿ ದುಡಿಯುತ್ತಾನೆ ರೈತ ಹಣಕ್ಕಾಗಿ ಕೃಷಿ ಮಾಡುತ್ತಾನೆ ಇದರಲ್ಲಿ ಯಾವ ಹೆಚ್ಚುಗಾರಿಕೆ ಇದೆ ? ಎಂದು ಆಲೋಚಿಸುವಷ್ಠೆ ಚಿಕ್ಕ ಮನಸ್ಸನ್ನು ಹೊಂದಿದವರಿಗೆ ಬೇರೆ ಯಾವ ಸಂಬಂಧಗಳೂ ಅರ್ಥವಾಗುವುದಿಲ್ಲ .
ಎಲ್ಲ ರೈತರಿಗೂ ಗೊತ್ತು ಇವತ್ತು ಸಣ್ಣ ಚಾಕರಿಯಲ್ಲಿರುವವನ ತಿಂಗಳ ಆದಾಯದ ಮಟ್ಟಕ್ಕೆ ತಮ್ಮ ವರ್ಷದ ದುಡಿಮೆ ಸರಿದೂಗುವುದಿಲ್ಲ ಎನ್ನುವುದು ಈ ರೀತಿಯ ಲೆಕ್ಕಾಚಾರ ಹಿಡಿದು ರೈತರು ತಮ್ಮ ಉದ್ಯೋಗವನ್ನು ತೊರೆಯುತ್ತಾ ಹೋದರೆ, ಜಗತ್ತಿನ ಸಾವಿರ ಕೋಟಿ ಜನ ಒಂದೇ ವರ್ಷದಲ್ಲಿ ತಿನ್ನಲು ಏನೂ ಇಲ್ಲದೆ ನಾಶವಾಗಿ ಹೋಗುತ್ತಾರೆ . ಆದರೆ ಹೀಗಾಗುವುದಿಲ್ಲ, ಯಾಕೆಂದರೆ ಇಲ್ಲಿರುವುದು ಮಾನವಕೃತ ಆರ್ಥಿಕ ಲೆಕ್ಕಾಚಾರವಲ್ಲ; ಈ ಜಗತ್ತನ್ನು ಉಳಿಸುವ ವಿಶ್ವಪ್ರಜ್ಞೆ . ಅದು ಆರ್ಥಿಕ ತಜ್ಞರ ರೀತಿಯ ಲೆಕ್ಕಾಚಾರವಲ್ಲ. ಬೇಕಾದರೆ ಒಂದಷ್ಟು ಜನ ರೈತರ ಆತ್ಮಾಹುತಿಯಾದರೂ ಆಗಲಿ ಈ ಜಗತ್ತು ಹಸಿವಿನಿಂದ ಸಾಯಬಾರದು ಎಂಬ ನಿಯತಿ ಇಲ್ಲಿ ಕೆಲಸ ಮಾಡುತ್ತದೆ .
ಯೋಧರು ತಮ್ಮ ರಕ್ತವನ್ನು ಬಸಿದು ಸಾಯುತ್ತಾರೆ ; ನಮ್ಮಂತಹ ಅಯೋಗ್ಯರನ್ನು ಕಾಪಾಡಲು ; ನಂತರ ನಾವು ಬಾಯಿಗೆ ಬಂದಂತೆ ಯೋಧರನ್ನು ಅಪಹಾಸ್ಯ ಮಾಡುತ್ತೇವೆ ಹಾಗಂತ ಯಾವ ಯೋಧನೂ ರಾಜೀನಾಮೆ ಕೊಟ್ಟು ಹೊರಬರುವುದಿಲ್ಲ. ಎಲ್ಲ ಯೋಧರೂ ರಾಜೀನಾಮೆ ನೀಡಿ ಯುದ್ದರಂಗದಿಂದ ಹೊರ ಬಂದರೆ , ಎಲ್ಲ ದೇಶಗಳ ತುಂಬ ಅರಾಜಕ ನರಹಂತಕರ ರುದ್ರ ನರ್ತನದಲ್ಲಿ ರಕ್ತದ ಕಾಲುವೆಗಳು ಹರಿಯುತ್ತವೆ . ಇದು ತನ್ನ ಪ್ರಜಾಕೋಟಿಯನ್ನು ಪೊರೆಯುವ ವಿಶ್ವಸಂಕಲ್ಪಕ್ಕೆ ವಿರುದ್ದವಾದುದು ಆದುದರಿಂದಲೇ ಅದಕ್ಕೆ ಅವಕಾಶವಿಲ್ಲ. ಬೇಕಾದರೆ ಈ ಮಹಾಕಾಯಕದಲ್ಲಿ ಒಂದಷ್ಟು ನಿಷ್ಪಾಪಿ ಯೋಧರ ಹತ್ಯೆಯಾದರೂ ಜಗತ್ತು ಸುರಕ್ಷಿವಾಗಿರಲಿ ಎಂಬ ಯಾವುದೋ ಅಂತರ್ಗತ ಚಿಂತನೆಯಲ್ಲಿ ಇವೆಲ್ಲ ಜರುಗುತ್ತವೆ .
ಈ ಜಗತ್ತಿನಲ್ಲಿ ನಡೆಯುವ ಬಹಳಷ್ಟು ವಿದ್ಯಮಾನಗಳು ಈ ಮನುಷ್ಯ ಜೀವಿಯ ಪರಿಧಿಗೆ ಬರುವುದಿಲ್ಲ. ತನ್ನ ಪರಿಧಿಗೆ ಬಂದದ್ದನ್ನು ಹಾಳುಗೆಡುಹುವಲ್ಲಿ ಮಾತ್ರ ಮನುಷ್ಯ ನಿಸ್ಸೀಮ . ಇಲ್ಲಿ ಜರುಗುವ ಸಮಸ್ತ ನೈಸರ್ಗಿಕ ವಿದ್ಯಮಾನಗಳೂ ಕೇವಲ ಸ್ವಾರ್ಥದಿಂದ ಮಾತ್ರ ಕೂಡಿರುವುದಿಲ್ಲ , ಹಾಗಿದ್ದರೆ ಈ ಜಗತ್ತು ಎಂದೋ ನಿರ್ನಾಮವಾಗಿರುತ್ತಿತ್ತು.
ಕೇವಲ ಮನುಷ್ಯರು ಮಾತ್ರವಲ್ಲ ಸಕಲ ಸೃಷ್ಟಿಯೂ ಮತ್ತು ಜೀವಿಯೂ ವರ್ತಿಸುತ್ತಿರುವುದು ಸ್ವಭಾವಜನ್ಯವಾಗಿ ಮಾತ್ರ . ಮನುಷ್ಯನನ್ನು ಹೊರತು ಪಡಿಸಿದರೆ ಈ ಜಗತ್ತಿನಲ್ಲಿ ಉಳಿದು ಬೆಳೆದು ಬಾಳುತ್ತಿರುವ ಕೋಟ್ಯಾಂತರ ಜೀವಿಗಳು ಯಾವ ಆರ್ಥಿಕ ಸಿದ್ದಾಂತದ ಹಂಗೂ ಇಲ್ಲದೆ ದಿನ ನಿತ್ಯದ ಬಾಳುವೆಯನ್ನ ಸ್ವಾಭಾವಿಕವಾಗಿಯೇ ಕಟ್ಟಿಕೊಂಡು ಬಾಳುತ್ತಲೇ ಇವೆ ಅವುಗಳ ಬಾಳಿಗೆ ಏನಾದರೂ ಅಡ್ಡಿಯುಂಟಾಗಿದ್ದರೆ ಅದು ಈ ಧೂರ್ತ ಮನುಷ್ಯ ಜೀವಿಯಿಂದ ಮಾತ್ರ . ಇದನ್ನು ಅರಿಯದೆ ಮನುಷ್ಯರು ಕೇವಲ ತಮ್ಮ ಸ್ವಾರ್ಥಪೂರಿತ ವಾದಗಳಿಂದ ಸೃಷ್ಟಿಸುವ ಎಲ್ಲ ಆರ್ಥಿಕ ಸಿದ್ದಾಂತಗಳೂ ಹಳ್ಳ ಹಿಡಿಯಲು ಅವರ ವೈಯಕ್ತಿಕ ತೆವಲುಗಳು ಕಾರಣ . ಶತಮಾನಗಳ ಅನುಭವಗಳಲ್ಲಿ ಮನುಕುಲದ ಎಲ್ಲ ಅತಾರ್ಕಿಕ ಸಿದ್ದಾಂತಗಳೂ ತರಗೆಲೆಗಳಂತೆ ಉದುರಿಹೋದರೂ ಎಚ್ಚರಗೇಡಿಯಂತೆ ಮನುಷ್ಯ ವ್ಯವಹರಿಸುತ್ತಿರುವುದು ತನ್ನ ಸ್ವಯಂಕೃತ ಅಪರಾಧಗಳೂ ಮತ್ತು ಅಹಂಕಾರಗಳಿಂದ ಮಾತ್ರ .
(ಇದು ಸ್ವಲ್ಪ ಹಳೆಯ ಲೇಖನ ಈಗ ಸಂದಕ್ಕೆ ಸೇರಿಸಿದ್ದೇನೆ)