ಒಂದು ನತ್ತಿನ ಕತೆ

ಒಂದು ನತ್ತಿನ ಕತೆ

 
 
ಏನಪ್ಪಾ ಇದು Dr.ರಾಜ್ ಚಿತ್ರ 'ಒಂದು ಮುತ್ತಿನ ಕತೆ' ಬದಲು ನತ್ತಾಗಿ ಬಿಟ್ಟಿತೆ? ಅನ್ನುವ ಸಂಶಯವೇ..... ಮುಂದೆ ಓದಿ.
 
ನನ್ನಮ್ಮ ಬಹಳ ಗಟ್ಟಿ ಹೆಣ್ಣುಮಗಳು. ತನ್ನ ದೊಡ್ಡ ಸಂಸಾರ ಸಾಗರದಲ್ಲಿ ಒದ್ದಾಡಿ ಗುದ್ದಾಡಿದ್ದರಿಂದ ನಾವು ಮಕ್ಕಳಿಗೆಲ್ಲಾ ಮಾನಸಿಕ ಧೃಡತೆ ತುಂಬಿ ಅನ್ಯಾಯದ ವಿರುದ್ಧ ಯಾವಾಗಲೂ ಪ್ರತಿಭಟಿಸಲು ಪ್ರೇರಣೆ ನೀಡುತ್ತಿದ್ದವರು. ಚಿಕ್ಕದಾಗಲಿ, ದೊಡ್ಡದಾಗಲಿ ಅಮ್ಮನ ಹತ್ತಿರ ಸಮಸ್ಯೆಗೆ ಪರಿಹಾರ ದೊರಕುತ್ತಿತ್ತಲ್ಲದೆ ಎದುರಿಸಲು ಧೈರ್ಯವನ್ನೂ ತುಂಬುತ್ತಿದ್ದರು. ಈಗಲೂ ನಮ್ಮಮ್ಮ ಎಂದರೆ ನನಗೆ ತುಂಬು ಗೌರವ, ಪ್ರೀತಿ,ಅಭಿಮಾನ ಎಲ್ಲ್ಲಾ.....
 
ಆಗ ನಾನು  ೮/ ೯ ನೇ ತರಗತಿ ಇರಬೇಕು, ನನ್ನ ಅಕ್ಕ ಹತ್ತಿರದಲ್ಲೇ ಇದ್ದ ಅಕ್ಕಸಾಲಿಗರ ಹತ್ತಿರ ಹೋಗಿ ಸಂತಸದಿಂದ ಮೂಗು ಚುಚ್ಚಿಸಿಕೊಂಡು ಹೊಸ ಚಿನ್ನದ ಮೂಗುತಿಯನ್ನು ಹಾಕಿಸಿಕೊಂಡು ಬಂದವಳು ಅಳುವೇ ಮೂರ್ತಿವೆತ್ತಿ ಬಂದಂತೆ ಗಳಿಗೆಗೊಮ್ಮೆ ಜೋರಾದ ಅಳು, ಬಿಕ್ಕುಗಳನ್ನು  ಶುರುವಿಟ್ಟುಕೊಂಡಳು …. ‘ಚುಚ್ಚಿದ ಮೇಲೆ ಸೀಮೆ ಎಣ್ಣೆ ಹಾಕಿ..., ಮೂಗುತಿ ತೆಗೆದು ಹೊಸ ಪೊರಕೆ ಕಡ್ಡಿಯ ಚೂರನ್ನು ಇಡಿ' - ಎಂಬ ಅಂಗಡಿಯವನ ಮಾತನ್ನು ಧಿಕ್ಕರಿಸಿ ಸುಮ್ಮನಿದ್ದಕ್ಕೋ ಏನೋ, ಆ ಭಾಗ ಕೀವಾಗಿ ಆ ತೂತಿಗಿಂತಲೂ ದೊಡ್ಡ ವ್ರಣವಾಗಿ ಅವಳ ಮುಖ ನೋಡಲೇ ಭಯವಾಗುತ್ತಿತ್ತು. ಹೇಗೋ ೩-೪ ದಿನ ನೋವು ತಿಂದು ಇನ್ನೂ ಸಾಧ್ಯವೆನಿಸದಾಗ  ಅದನ್ನು ಕಿತ್ತು ಬಿಸಾಕಿದಳು. ಅವಳ ಸ್ಥಿತಿ ಕಂಡು ಮರುಗಿದ ನಾನು ಅಮ್ಮನಿಗೆ 'ಅಕ್ಕಸಾಲಿಗನ ಹತ್ತಿರ ಹೋಗಿದ್ದಕ್ಕೆ ತಾನೆ ಹೀಗಾದದ್ದು, ನೀನೇ  ಚುಚ್ಚಬೇಕಿತ್ತಮ್ಮ' ಅಂದೆ. ಅದಕ್ಕೆ ಅಮ್ಮ ' ಮನಸ್ಸು ಗಟ್ಟಿಯಿದ್ದರೆ ಯಾರೂ ಬೇಡ, ನಾವೇ ಚುಚ್ಚಿಕೊಳ್ಳಬಹುದು, ನಿನಗೆ ಧೈರ್ಯ ಜಾಸ್ತಿ ತಾನೇ ನೀನು ಚುಚ್ಚಿಕೋ ನೋಡೋಣ… !!’ ಎನ್ನಬೇಕೆ...'ಇದೇನು ಮಹಾ' ಅಂತ ಪಂಥ  ಸ್ವೀ ಕರಿಸಿದ ನಾನು ‘ಆಯ್ತಮ್ಮ ಮೂಗು ಬಟ್ಟು ತರಿಸು,' ಎಂದು ಬಿಟ್ಟೆ. ಅಪ್ಪ ಎರಡು ಮೂರು ದಿನ ಆದಮೇಲೆ ಭಾನುವಾರದಂದು ಹೊಸ ಮೂಗುತಿ ತಂದೂ ಬಿಟ್ಟರು. ನಿಜವಾದ ಸ್ವಾರಸ್ಯ ಈ ಭಾಗವೇ...
 
ಆವತ್ತು ಬೆಳಗ್ಗೆ ತಿಂಡಿ, ಕಾಫಿ ಆದ ಮೇಲೆ ತಾಮ್ರದ ಹೊಸಪಿನ್ನು (ಸೇಫ್ಟಿ ಪಿನ್) ತಂದ ಅಮ್ಮ, ‘ಕನ್ನಡಿಯಲ್ಲಿ ನೋಡಿಕೊಂಡು ಮೊದಲು ಗುರುತು ಮಾಡಿಕೋ, ನಂತರ ಒಂದೇ (ಗಟ್ಟಿ) ಮನಸ್ಸಿನಿಂದ ಗುರುತು ಮಾಡಿದ ಚುಕ್ಕೆ ಮೇಲೆ ಪಿನ್ ಚುಚ್ಚಿಕೊ’ ಅಂದರು. ನಾನು ಹಾಗೆಯೇ ಮೂಗಿನ ಎಡ ಭಾಗದಲ್ಲಿ ಪೆನ್ ನಿಂದ ಒಂದು ಗುರುತು ಮಾಡಿ ಹಾಕಿ, ಪಿನ್ ನಿಂದ ಚುಚ್ಚಲು ಪ್ರಯತ್ನಿಸಿದರೆ ಹೋಗುತ್ತಲೇ ಇಲ್ಲ. ೧೦ ನಿಮಿಷ ಒಂದೇ ಸಮನೆ ಪ್ರಯತ್ನಿಸಿದ ಮೇಲೆ ಸಾಧ್ಯವಾಗದೆ ಅಕ್ಕನನ್ನು ಕರೆದೆ. ಅವಳು ಇನ್ನೇನು ಚುಚ್ಚಬೇಕು ಆಗ ಜೋರಾಗಿ ಕಿರುಚಾಟ ಅಕ್ಕನ ಮಕ್ಕಳದ್ದು ....ಹೋ..!! ಅಂತ. ಪಾತ್ರೆ, ಸೌಟು, ಎಲ್ಲದರಿಂದ ಕೆಟ್ಟ ಹಿನ್ನೆಲೆ ವಾದ್ಯ ಗೋಷ್ಠಿ …!!  ಗಲಾಟೆಗೆ ಅವಳಿಗೂ ಗಮನವಿಟ್ಟು ಚುಚ್ಚಲಾಗದೆ, ‘ನಿನ್ನ ಮೂಗು ನಟ ಸುದರ್ಶನ ಥರ ಇದೆ' ಅಂತ ಮೂಗು ಮುರಿದು, ಅನಾಯಾಸವಾಗಿ ‘ಬಿರುದು’ ದಯಪಾಲಿಸಿ ಹೋದಳು.
‘ಯಾಕೋ ಆಗ್ತಾ ಇಲ್ಲ’ ಅಂತ ಅಮ್ಮನನ್ನು ಕೂಗಿದರೆ..’ಹಾವೂ ಸಾಯಲ್ಲ, ಕೋಲೂ ಮುರಿಯಲ್ಲ ಅನ್ನೋ ಹಾಗೆ ಮೆತ್ತಗೆ ಚುಚ್ಚಿದರೆ ಎಲ್ಹೋಗುತ್ತೆ ,ಈ ಕಾಲದ ಹುಡುಗ್ರು, ಏನಕ್ಕೂ ಪ್ರಯೋಜನ ಇಲ್ಲ, ಬಾ ನಾನೆ ಮಾಡ್ತೀನಿ' ಅಂದರು.. ನಾನು ಬೇರೆ ಚಾಲೆಂಜ್ ಮಾಡಿದ್ನಲ್ಲ ‘ಬೇಡ ನಂಗೇ ಆಗುತ್ತೆ ಅಂತ ಬೊಬ್ಬೆ ಹೊಡೆದುಕೊಂಡೇ ಚುಚ್ಚಿಕೊಳ್ಳಲು ಮೊದಲಿಟ್ಟೆ, ಮೂಗಿನದು ಸಾಮಾನ್ಯ ದಪ್ಪ ಚರ್ಮ ಅಲ್ವಾ, ಹೋಗ್ತಾನೆ ಇಲ್ಲ ಜೊತೆಗೆ ಭಯಂಕರ ನೋವು ಬೇರೆ.. ನಮ್ಮ ಚಿಕ್ಕಪ್ಪ ಚಿಕ್ಕಮ್ಮ ಬಂದಿದ್ರು ಅವತ್ತು ಮನೆಗೆ. ‘ಇನ್ನು ಆಯ್ತು, ಅಷ್ಟೇ ಇವಳ  ಮೂಗಿನ ಕತೆ!!…’ ಅನ್ನುವ ಅವರ ನಗು, ತಮಾಷೆ ಕೇಳಿಸಿ ಸೋಲಿನ ಭಯದ ಜೊತೆ ಕೋಪ ಬಂತು.. ನಾನು ಏನೇ ಮಾಡಿದರೂ ಒತ್ತಾಸೆಯಾಗಿ ನಿಲ್ತಿದ್ದ ತಾತ ನನ್ನ ಸಾಹಸ ನೋಡದೆ ತಾರಸ್ಥಾಯಿಯಲ್ಲಿ ಗೊರಕೆ ಹೊಡೀಬಹುದೇ !!… 
ಗೆಜ್ಜೆ ವಸ್ತ್ರ ಮಾಡ್ತಾ ಟೆ.ವಿ. ನೋಡ್ತಿದ್ದ ಅಜ್ಜಿ ‘ಇದೆಲ್ಲ ಏನು ಮಹಾ ನೋವು , ಹೆಣ್ಣು ಭೂತಾಯಿಯಂತೆ, ಎಲ್ಲ ತಡೀಬೇಕು' ಅನ್ನೋ ಡೈಲಾಗ್ ಉದುರಿಸಿದ್ದು,  ‘ಏನೇ, ಮೂಗಿನ ಜೊತೆ ಹೋರಾಟ, ಕತ್ತರಿಸಕ್ಕೆ ನಾನು ಗರಗಸ ಕೊಡ್ಲ, ಆಕ್ಸಾ ಬ್ಲೇಡ್ ಕೊಡ್ಲಾ- ಅನ್ನೋ ಅಣ್ಣಂದಿರ ಗೇಲಿ, ಇಷ್ಟೆಲ್ಲಾ ರಾಮಾಯಣ ನಡೀತಾ ಇದ್ರೂ, ಕಷ್ಟಪಡುತ್ತಿದ್ರೂ ಮುದ್ದಿನ ಮಗಳ ನೋವು ಗಮನಿಸದೆ ಅಪ್ಪ  ಕೂಡಾ ನಿದ್ದೆ ಗೆ ಜಾರಿರೋದನ್ನು  ಕಂಡು ‘ಹತಾಶೆ ‘ ಮನವನ್ನು ಆವರಿಸಿಬಿಟ್ಟಿತು. ಗಂಟೆಗಳ  ನನ್ನ ಯುದ್ಧಕ್ಕೆ ಪ್ರೋತ್ಸಾಹ ಇಲ್ಲದ ಈ ಅನುತ್ತೇಜಿತ ವಾತಾವರಣವೇ ಬೇಡ ಎಂದು ನಿರ್ಧರಿಸಿ ಮನೆಯಿಂದ ಆಚೆ ಬಂದವಳೇ ಕಾಂಪೌಂಡ್ ಗೇಟ್ ಹತ್ತಿರ ಮಲ್ಲಿಗೆಬಳ್ಳಿಯ ಕಾಂಡಕ್ಕೆ ಆತುಕೊಂಡು  ಕಣ್ಮುಚ್ಚಿ ನಿಂತು ಒಂದೊಂದಾಗಿ ಶ್ಲೋಕಗಳನ್ನು ಹೇಳಿಕೊಳ್ಳುತ್ತಾ ಎಡಗೈ ನಲ್ಲಿ ಗುರುತು ಮಾಡಿದ್ದ ಎಡ ಮೂಗಿನ ಭಾಗ ಹಿಡಿದು ಬಲಗೈ ನಿಂದ ಪಿನ್ ಬಳಸಿ ಗಟ್ಟಿಯಾಗಿ ಚುಚ್ಚಿ ...….ಚುಚ್ಚಿಯೇ ಬಿಟ್ಟೆ !!.... ಕಣ್ಣಲ್ಲಿ ನೀರು, ಮೂಗಿಂದ ಧಾರಾಕಾರವಾಗಿ ರಕ್ತ ... ತಕ್ಷಣ ಅಮ್ಮ ಬಂದು ಮೂಗುತಿ ಕೊಟ್ಟರು, ಹಾಕಿಕೊಂಡೇ ಬಿಟ್ಟೆ !!... ನೋವಿನಲ್ಲೂ ಗೆದ್ದ ಸಂಭ್ರಮ !! (ಈಗಲೂ ನಾನೆ ಚುಚ್ಚಿಕೊಂಡದ್ದು ಎಂಬುದನ್ನು ಯೋಚಿಸಿದಾಗ ಬಹಳ ಹೆಮ್ಮೆ ಆಗುತ್ತದೆ) 'ನೋಡಿದ್ಯಾಮ್ಮ , ಸಾಧಿಸಿದೆ' ಅನ್ನುತ್ತಾ ಅಮ್ಮನ ಕಡೆ ನೋಡಿದೆ. ಅಮ್ಮನೂ ಖುಷಿಯಾಗಿ ಬಾಯಿ ತುಂಬಾ ನಗುತ್ತ ಏನೋ ಹೇಳಲು ಬಂದವರು ಗಾಬರಿಯಿಂದ  ಗೇಟಿನ ಕಡೆ ಕೈ ತೋರಿಸಿದರು. 
 
 
ಹೌದು, ಇಷ್ಟೊತ್ತು ನಾನು ಗಮನಿಸೇ ಇರಲಿಲ್ಲ.., ಅಲ್ಲಿ ನನ್ನ ಮೂರು ಗೆಳತಿಯರು ನಿಂತು ಗಟ್ಟಿಯಾಗಿ ಅಳುತ್ತಾ ಇದ್ದಾರೆ…!! ‘ಯಾಕೆ, ಏನಾಯ್ತು? ಅಂತ ವಿಚಾರಿಸಲಾಗಿ ‘ಏನೇ, ನಿಮ್ಮಮ್ಮ ಇಷ್ಟು ಕಷ್ಟದ ಶಿಕ್ಷೆ ಕೊಡ್ತಿದ್ದಾರ..,?? ನಿಮ್ಮನೇನಲ್ಲಿ ಇರಬೇಡ, ನಮ್ಮನೆಗೆ ಬಂದು ಬಿಡು ‘..ಅನ್ನಬೇಕೆ…!!. ಪಾಪ ,. ರಕ್ತ ನೋಡಿ ಹೆದರಿದ್ದರು…… ಸೊಂಟದ ಮೇಲೆ ಕೈಯ್ಯಿಟ್ಟುಕೊಂಡು ನನ್ನನ್ನೇ ಗಮನಿಸ್ತಿದ್ದ ಅಮ್ಮನ ಪೋಸ್ ಕಂಡು ನನ್ನ ಯಾವುದೊ ತಪ್ಪಿಗೆ ಅಮ್ಮನ ಶಿಕ್ಷೆ ನಡೀತಿದೆ ಎಂದು ಭಾವಿಸಿದ್ದರು.

PC : Google