ಹೊಟೇಲಿನ ಆ ಘಟನೆ
ಆ ಹೊಟೇಲಿನಲ್ಲಿ ಬಹಳ ಜನ. ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ.
ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ ನಾಲಿಗೆಗಳಿಗೆ ಆ ರುಚಿಯನ್ನು ಅಂಟಿಸಿಕೊಳ್ಳುವ ಕಾಳಜಿ.
ಮಧ್ಯಾನ್ನದ ಆ ಸಮಯದಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದ ಒಬ್ಬ ಕಟ್ಟುಮಸ್ತಾದ ಸುಂದರ ಯುವಕ ತನ್ನ ವಯಸ್ಸಾದ ತಾಯಿಯನ್ನು ನಿಧಾನಕ್ಕೆ ನಡೆಸಿಕೊಂಡು ಹೊಟೇಲ್ಲಿಗೆ ಬಂದ. ಆ ತಾಯಿಯ ಕೈ, ಕಾಲು ಸ್ವಲ್ಪ ನಡುಗುತ್ತಿರುವಂತೆ ಮತ್ತೆ ನಡೆಯಲು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು. ಅಲ್ಲಿ ಹಾಲ್ ಮಧ್ಯದ ಒಂದು ಟೇಬಲ್ಲಿನಲ್ಲಿ ಅವಳನ್ನು ಯುವಕ ಕೂರಿಸಿದ.
ತಾಯಿಗೆ ತಟ್ಟೆಯೊಂದರಲ್ಲಿ ಸ್ವಲ್ಪ ಊಟ ತಂದು, ‘ಅಮ್ಮಾ.. ನೋಡು ಈ ಚಪಾತಿ ಮೆತ್ತಗಿದೆ ಮತ್ತು ಈ ಪಲ್ಯ ಬಹಳ ರುಚಿಯಿದೆ. ತಿನ್ನು’ ಅಂದ.
ತಾಯಿ ಆ ತಟ್ಟೆಯಿಂದ ಮೆಲ್ಲಗೆ ತನ್ನ ನಡುಗುವ ಕೈಗಳಿಂದ ಚಪಾತಿಯನ್ನು ಮುರಿದು ತಿನ್ನತೊಡಗಿದಳು.
ಯುವಕ ಕುಡಿಯುವ ನೀರು ತರಲು ಹೋದ. ಅಷ್ಜರಲ್ಲೆ ‘ಭಡ್’ ಶಬ್ಧ ಹೊಟೇಲಿನಲ್ಲಿ ಅನುರಣಿಸಿತು. ಹೊಟೇಲಿನಲ್ಲಿದ್ದವರ ಗಮನ ಈಗ ಆ ತಾಯಿ ಮತ್ತು ಮಗನ ಕಡೆಗೆ ಹರಿಯಿತು.
ಅವಳು ಊಟ ಮಾಡುವ ಭರದಲ್ಲಿ ಕೈತಪ್ಪಿತ್ತು ಮತ್ತು ಊಟದ ತಟ್ಟೆ ನೆಲಕ್ಕೆ ಉರುಳಿ ತಿನಿಸು ಚಿಲ್ಲಿ ಹೋಯಿತು.
ಅಲ್ಲಿದ್ದ ಕೆಲವರಿಗೆ ಮುಜುಗರ. ಕಸಿವಿಸಿ. ಊಟದ ಶಾಂತ ವಾತಾವರಣ ಸ್ವಲ್ಪ ಕದಡಿ ಹೋಯಿತು.
ನೀರು ತಂದ ಯುವಕ ತಾಯಿಯನ್ನು ನೋಡಿದ ಮತ್ತು ನಕ್ಕ. ‘ಓಹ್.. ತಟ್ಟೆ ಕೆಳಗೆ ಬಿತ್ತೆ? ನಿನ್ನ ಮೈಮೇಲೆ ಪಲ್ಯದ ಚೂರುಗಳು ಅಂಟಿಬಿಟ್ಟಿವೆ. ತಾಳು.. ನಾನು ಅವನ್ನೆಲ್ಲ ಒರೆಸಿಬಿಡುತ್ತೇನೆ. ಹಾಗೆಯೆ ಬೇರೆ ತಟ್ಟೆ ತರುತ್ತೇನೆ. ನೀನು ಆ ಕುರ್ಚಿಯಲ್ಲಿ ಕೂರಬೇಡ. ಇಲ್ಲಿ ಬಾ. ಹಾಂ.. ಇದೀಗ ಸರಿಯಾಯಿತು. ಸ್ವಲ್ಪ ನೀರು ಕುಡಿ.’
ಹೊಟೇಲಿನಲ್ಲಿದ್ದ ಎಲ್ಲ ಮಕ್ಕಳು, ಅವರ ಅಪ್ಪ ಅಮ್ಮಂದಿರು ಈ ದೃಶ್ಯ ನೋಡುತ್ತಿದ್ದರು. ತಿನ್ನುವುದನ್ನು ಸ್ವಲ್ಪ ಮರೆತಿದ್ದರು ಕೂಡ.
ಯುವಕ ತಾಯಿಯ ಬಟ್ಟೆಗಳನ್ನು ಸ್ವಚ್ಛ ಮಾಡಿದ. ಹಾಗೆಯೆ ಆ ಟೇಬಲನ್ನೂ. ಮತ್ತೆ ತನ್ನ ತಾಯಿಗೆ ಮತ್ತೊಂದು ತಟ್ಟೆಯಲ್ಲಿ ತಿನಿಸುಗಳನ್ನು ತಂದು ನಿಧಾನಕ್ಕೆ ತಿನ್ನಿಸತೊಡಗಿದ. ಹಾಗೆ ಮಾಡುವಾಗ ಅವನಿಗೆ ಹೊಳೆಯಿತು, ಹೊಟೇಲಿನ ಗ್ರಾಹಕರು ತಮ್ಮ ಕಡೆಗೆ ದೃಷ್ಟಿಸುತ್ತಿದ್ದಾರೆ ಎಂದು.
ಮುಗುಳ್ನಗುತ್ತಾ ಅವರ ಕಡೆ ಕೈಬೀಸಿ ‘ಕ್ಷಮೆ’ ಕೇಳಿದ.
ಅಲ್ಲಿಯ ಗ್ರಾಹಕರು ಮತ್ತೆ ತಮ್ಮ ಊಟದ ಕಡೆ ಗಮನ ಕೊಟ್ಟರು.
ಹದಿನೈದು ನಿಮಿಷಗಳ ನಂತರ ಯುವಕ ನಿಧಾನಕ್ಕೆ ತಾಯಿಯ ಜೊತೆ ಹೊರ ಹೊರಟ. ಬಿಲ್ಲನ್ನು ಪಾವತಿಸುತ್ತಾ ಹೇಳಿದ. ‘ನನ್ನನ್ನು ಕ್ಷಮಿಸಿ. ನಿಮ್ಮೆಲ್ಲ ಗ್ರಾಹಕರಿಗೆ ನನ್ನಿಂದ ಸ್ವಲ್ಪ ಮುಜುಗರವಾಗಿಬಿಟ್ಟಿತು. ಈ ಘಟನೆ ಇಲ್ಲಿಗೆ ಮರೆತುಬಿಡಿ’
ಬೆನ್ನ ಹಿಂದೆ ನಿಂತ ಹಿರಿಯರೊಬ್ಬರು ಯುವಕನ ಭುಜ ತಟ್ಟಿದರು. ಅವನಿಗೆ ಹಸ್ತ ಲಾಘವ ನೀಡುತ್ತಾ ಹೇಳಿದರು, ‘ಇದು ಮರೆಯುವಂಥ ಘಟನೆಯಲ್ಲ. ನೀನು ಈದಿನ ಹೊಟೇಲಿನ ಎಲ್ಲ ಜನರಿಗೆ ಸಿಹಿಯ ಅನುಭವವೊಂದನ್ನು ಹಂಚಿಬಿಟ್ಟೆ. ನಿನಗೆ ಶುಭವಾಗಲಿ’
ಯುವಕ ಮುಗುಳ್ನಕ್ಕು ಕೃತಜ್ಞತೆ ಸೂಚಿಸಿದ ಮತ್ತು ಹೊಟೇಲಿನಿಂದ ತಾಯಿಯನ್ನು ಕರೆದುಕೊಂದು ಹೊರಟ. ಹಾಗೆ ತೆರಳುವಾಗ ಹಬ್ಬುವ ಬಳ್ಳಿಯ ನರುಗಂಪ ಆದರ್ಶದ ಬೀಜಗಳನ್ನು ಹೊಟೇಲಿನಲ್ಲಿದ್ದ ಎಲ್ಲರ ಎದೆಯೊಳಗೆ ಅವನು ಚೆಲ್ಲಿಬಿಟ್ಟಿದ್ದ.
(ವಾಟ್ಸ್ಯಾಪಲ್ಲಿ ಬಂದ ಒಂದು ಆಂಗ್ಲ ಸಂದೇಶದ ಭಾವಾನುವಾದ)
Comments
ಉ: ಹೊಟೇಲಿನ ಆ ಘಟನೆ
ನಿಮ್ಮ್ ಈ ಸನ್ನಿವೆಶ ಮನ ಮುಟ್ಟುವಂತಿದೆ,ವಶಸ್ಸಾದ ತಂದೆ ತಾಯಿಗಳು ಮಕ್ಕಳಂತೆ ಆಗುತ್ತಾರೆ,ನಾವು ಮಕ್ಕ ಳು ಆಗಿದ್ದಾಗ ಅವರು ನಿಬಾಯಿಸಿದಂಥಹ ತಾಳ್ಮೆ ನಮಗೂ ಇರಬೇಕು ಅಲ್ಲವೇ?
In reply to ಉ: ಹೊಟೇಲಿನ ಆ ಘಟನೆ by massram7
ಉ: ಹೊಟೇಲಿನ ಆ ಘಟನೆ
ನಿಮ್ಮ ಅಭಿಪ್ರಾಯಕ್ಕೆ ಮತ್ತು ಓದಿ ಮೆಚ್ಛಿದುದಕ್ಕೆ ಧನ್ಯವಾಗಳು.