' ನಮೋ ನೀರಾಂಗನೆ '

' ನಮೋ ನೀರಾಂಗನೆ '

ಕವನ

 
ಮೌನ ಕಣಿವೆಯ ಇಳಿಜಾರಿನಲ್ಲಿ
ಮೈದಳೆದು ಇಳಿಯುತಿದೆ
ಸುಂದರ ಸುಮನೋಹರ
ಶುಭ್ರ ಸ್ಫಟಿಕ ಮಣಿಗಳ ಧಾರೆ
ಅದೊಂದು
ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ
 
ಅತ್ಯುನ್ನತ ಗಿರಿ ಶೀಖರಗಳ
ಗುಪ್ತ ವಲಯದಲಿ ಆವಿರ್ಭವಿಸಿ
ಅಲ್ಲಿ ಇಲ್ಲಿ ಎಲ್ಲೆಲ್ಲೋ ಸುಳಿದು
ಝರಿ ತೊರೆಗಳೊಡಗೂಡಿ
ದಿವಿನಾಗಿ ಹರಿದು
ಧುಮ್ಮಿಕ್ಕುತ್ತಿದೆ ಪಾತಾಳದ ಕಣಿವೆಗೆ
 
ಜಗದ ಎಲ್ಲ ಭಾವಗಳು ಬೆಸೆದು
ವ್ಯಕ್ತ ಸುಮನೋಹರ ಲೋಕದಲಿ
ಪ್ರಕೃತಿ ರಂಗುದಳೆದು
ಭ್ರೂಣ ರೂಪದಲಿ ಪಲ್ಲವಿಸಿ
ಸೃಷ್ಟಿಗೊಂಡಿದೆಯೊಂದು
ವಿಸ್ಮಯದ ‘ಗಂಧರ್ವ ಲೋಕ’
 
ಉತ್ಸಾಹದ ಓಟ
ಬಾಗು ಬಳುಕಿನ ನಲಿದಾಟ
ಮಿಂಚಂಥ ಕುಡಿನೋಟ
ಕಣ್ಣು ಮಿಟುಕಿಸುತ
ಸ್ವಚ್ಛಂದವಾಗಿ ಹರಿಯುತಿಹಳು ನೀರೆ
ಯಾವ ಗಮ್ಯ ಲೋಕದ ಪಯಣ
ಅರ್ಥವಾಗುತ್ತಿಲ್ಲ
 
ಎಷ್ಟೊಂದು ದೂರ
ಗೊತ್ತು ಗುರಿಯಿಲ್ಲದ ದಾರಿ
ಗುಡ್ಡ ಬೆಟ್ಟಗಳ ಹತ್ತಿ ಇಳಿದು
ಕಾಡು ಮೇಡುಗಳ
ಸುತ್ತಿ ಅಲೆದು ದಣಿವರಿಯದ
‘ಉತ್ಸಾಹದ ಪಯಣ’
 
ಯಾವುದರ ಪರಿವೆಯೂ
ನಿನಗಿಲ್ಲ ನೀರೆ !
ನಿನ್ನ ಉತ್ಸಾಹಕೆ ಎಣೆಯಿಲ್ಲ
ನೋವುಗಳ ಗಣನೆಯಿಲ್ಲ
ವ್ಯಕ್ತವಾಗಿ ಹರಿದು ಅವ್ಯಕ್ತ
ಅನನ್ಯ ಗಮ್ಯದೆಡೆಗೆ ಸಾಗುವ
ನಿಲ್ಲದ ಪಯಣ
 
ಭುವಿ ಬಾನುಗಳು ಕೂಡುವೆಡೆಯಲ್ಲಿ
ನೆಳಲು ಬೆಳಕುಗಳ ಸಂಗಮದಲ್ಲಿ
ದಟ್ಟ ಗಂವೆನುವ ಭವ್ಯ ಕಾನನದಲ್ಲಿ
ನಿನ್ನ ಆಟ ಕೂಟ ಬೇಟ ನೋಟ !
 
ಹೊಸೆದ ನೋಟ ಬೆಸೆದ ಭಾವ
ಏಕಾಂತದ ಮೌನದಲಿ
ಧ್ಯಾನಸ್ಥ ಸ್ಥಿತಿಯ ಗರಿಮೆಯಲಿ
ನೀರ ನೀರೆ ನಿರಿಗೆ ಚಿಮ್ಮಿ
ಭುವಿಯ ಮೇಲೆ ರೆಕ್ಕೆ ಬಿಚ್ಚಿ
ನೇಹಕೆಂದು ಮನಸು ಕೊಟ್ಟು
ಸ್ನೇಹವೆಂದು ಮನವ ಬಿಚ್ಚಿ
ನೀರಾಂಗನೆ ಸೇರಿ ಕೊಂಡೆಯಾ
ಅನಂತಾನಂತ ವ್ಯಾಪಿ ಕಡಲ
 
ನಿನ್ನ ಪಯಣ ಸಾರ್ಥಕ
ಮರು ಹುಟ್ಟು ಮರು ಚಲನೆ
ಮತ್ತೆ ಮತ್ತೆ ಮರು ಪಯಣ
ಹುಟ್ಟು ಸಾವಿನ ಪರಿಭ್ರಮಣ
ಸೋಲದ ಬೇಸರವರಿಯದ
ಧೀರ್ಘ ಪಯಣ ನಿನ್ನ ಚಲನಶೀಲತೆಗೆ
ನಮೋ ನಮೋ ನೀರಾಂಗನೆ !
 
         *