ಉದ್ಯೋಗ ಬೇಕೇ? ಪ್ರಾಮಾಣಿಕತೆ ಅವಶ್ಯ
ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿದ ಅನುಭವ ಇದೆಯೆಂದೂ, ತಾನು ಆ ಕಂಪೆನಿಯ ಯುಎಸ್ಎ ದೇಶದ ಕೆಲಸಕಾರ್ಯಗಳ ಮೇಲ್ವಿಚಾರಕನಾಗಿ ಇದ್ದುದಾಗಿಯೂ ಬರೆದುಕೊಂಡಿದ್ದ. ಈ ಬಗ್ಗೆ ಅವರು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬಿತ್ತು. ಆ ಅಭ್ಯರ್ಥಿ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿರಲೇ ಇಲ್ಲ!
ಇದೇನೂ ಹೊಸತಲ್ಲ. ಬಹುಪಾಲು ಅಭ್ಯರ್ಥಿಗಳು ತಮ್ಮ “ವ್ಯಕ್ತಿ ಮಾಹಿತಿ”ಯಲ್ಲಿ ಶೇಕಡಾ ೧೫ರಷ್ಟು ಸುಳ್ಳು ಸಂಗತಿಗಳನ್ನು ಬರೆಯುತ್ತಾರೆ. ಅಂತಹ ಸುಳ್ಳು ಮಾಹಿತಿಯುಳ್ಳ ಉದ್ಯೋಗ ಅರ್ಜಿ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಉದ್ಯೋಗಾಕಾಂಕ್ಷಿಗಳ ಹಿನ್ನೆಲೆ ಪರಿಶೀಲನಾ ಕಂಪೆನಿ “ಫಸ್ಟ್ ಅಡ್-ವಾಂಟೇಜ್” ನಡೆಸಿದ ಅಧ್ಯಯನದ ಪ್ರಕಾರ, ಅಂತಹ ಅರ್ಜಿಗಳ ಪ್ರಮಾಣ ೨೦೧೪ರಲ್ಲಿ ಶೇ.೧೦.೪ರಿಂದ ೨೦೧೫ರಲ್ಲಿ ಶೇ.೧೧.೬ಕ್ಕೆ ಏರಿದೆ. ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಯಲ್ಲಿ ಬರೆಯುವ ಸುಳ್ಳು ಮಾಹಿತಿ: ಅಂತಿಮ ವೇತನವನ್ನು ಇದ್ದದ್ದಕ್ಕಿಂತ ಹೆಚ್ಚಾಗಿ ನಮೂದಿಸುವುದು; ಮುಂಚಿನ ಉದ್ಯೋಗದಾತ ಕಂಪೆನಿಯಲ್ಲಿ ಕೆಲಸ ಮಾಡಿದ ಅವಧಿಯನ್ನು ಇದ್ದದ್ದಕ್ಕಿಂತ ಅಧಿಕವೆಂದು ಬರೆಯುವುದು.
ಇದರಿಂದಾಗಿ, ಈಗ ಯಾರನ್ನೂ ನಂಬುವಂತಿಲ್ಲ ಎಂಬ ಪರಿಸ್ಥಿತಿ. ಜೊತೆಗೆ, ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಅಂತಿಮ ಆಯ್ಕೆಯ ನಂತರ ಅವರ ಹಿನ್ನೆಲೆ ತನಿಖೆ ಮಾಡುವ ಕಂಪೆನಿಗಳಿಗೆ ತೊಂದರೆ. ಯಾಕೆಂದರೆ, ಮೋಸದ ಅಭ್ಯರ್ಥಿಯ ಅರ್ಜಿ ಪರಿಶೀಲನೆ, ಆಯ್ಕೆ ಪರೀಕ್ಷೆ ಹಾಗೂ ಸಂದರ್ಶನಕ್ಕಾಗಿ ವ್ಯಯಿಸಿದ ಸಮಯ ಹಾಗೂ ಶ್ರಮ ವ್ಯರ್ಥ. “ಆಡಳಿತದ ವಿವಿಧ ಹಂತಗಳಿಗೆ ಸ್ವೀಕರಿಸುವ ಅರ್ಜಿಗಳಲ್ಲಿ ಇಂತಹ ಸುಳ್ಳು ಹೇಳಿಕೆಗಳು ಹೆಚ್ಚಾಗುತ್ತಿವೆ. ಆಡಳಿತದ ಕೆಳಗಿನ ಮತ್ತು ಮಧ್ಯಮ ಹಂತಗಳಿಗೆ ಅರ್ಜಿ ಸಲ್ಲಿಸಿದವರ ಪದವಿ ಮತ್ತು ಕಾಲೇಜುಗಳ ಬಗ್ಗೆ ತನಿಖೆ ನಡೆಸಿದರೆ, ಆಡಳಿತದ ಉನ್ನತ ಹಂತಗಳಿಗೆ ಅರ್ಜಿ ಸಲ್ಲಿಸಿದವರ ಹಿಂದಿನ ಸಾಧನೆ ಮತ್ತು ದಕ್ಷತೆ ಬಗ್ಗೆ ತನಿಖೆ ನಡೆಸಲಾಗುತ್ತದೆ” ಎನ್ನುತ್ತಾರೆ “ಹಂಟ್ ಪಾರ್-ಟರ್-ನ್ಸ್” ಸಂಸ್ಥೆಯ ಮುಖ್ಯಸ್ಥರಾದ ಸುರೇಶ್ ರೈನಾ.
ಬ್ಯಾಂಕಿಂಗ್, ಆರ್ಥಿಕ ಸೇವೆಗಳು, ವಿಮೆ ಮತ್ತು ತಂತ್ರಜ್ನಾನದ ಕಂಪೆನಿಗಳಿಗೆ ಫೋರ್ಜರಿ ಮಾಡಿದ ದಾಖಲೆಗಳನ್ನು ಲಗತ್ತಿಸಿದ ಉದ್ಯೋಗಾಕಾಂಕ್ಷಿಗಳ ಅರ್ಜಿಗಳ ತನಿಖೆ ದೊಡ್ಡ ತಲೆನೋವಾಗಿದೆ. ಕಳೆದ ಹತ್ತು ವರುಷಗಳಿಂದ, ಈ ಕ್ಷೇತ್ರಗಳ ಕಂಪೆನಿಗಳು ಇಂತಹ ತನಿಖೆಗಾಗಿ ಏಜೆನ್ಸಿಗಳನ್ನು ಅವಲಂಬಿಸಿವೆ. ಮುಖ್ಯವಾಗಿ ಕ್ರಿಮಿನಲ್ ಹಿನ್ನೆಲೆ, ಶೈಕ್ಷಣಿಕ ಹಿನ್ನೆಲೆ ಮತ್ತು ಹಿಂದಿನ ಉದ್ಯೋಗದಾತರಲ್ಲಿನ ನಡವಳಿಕೆ ಬಗ್ಗೆ ತನಿಖೆ ನಡೆಸಲಾಗುತ್ತದೆ. “ಒಂದೆರಡು ಸುತ್ತು ಸಂದರ್ಶನಗಳು ಮತ್ತು ಕನಿಷ್ಠ ಒಂದು ಪರೀಕ್ಷೆ ಹಾಗೂ ಮುಖಾಮುಖಿ ಸಂದರ್ಶನ ನಡೆಸಿ ಅಭ್ಯರ್ಥಿಯ ಮೌಲ್ಯಮಾಪನ ಮಾಡುತ್ತೇವೆ. ಇದರಿಂದಾಗಿ, ಅಭ್ಯರ್ಥಿಯ ಕೌಶಲ್ಯ ಮತ್ತು ಅನುಭವಕ್ಕೆ ಸಂಬಂಧಿಸಿದ ನಮ್ಮ ಸಂದೇಹಗಳ ನಿವಾರಣೆ ಆಗುತ್ತದೆ” ಎಂಬುದು ಬ್ಯಾಂಕ್-ಬಜಾರ್-ಡಾಟ್- ಕಾಮ್ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀರಾಮ್ ವೈದ್ಯನಾಥನ್ ಅವರ ಅಭಿಪ್ರಾಯ.
ಬಹುಪಾಲು ಕಂಪೆನಿಗಳು ಇಂತಹ ಸುಳ್ಳು ಮಾಹಿತಿ ನೀಡಿದ ಅಭ್ಯರ್ಥಿಗಳನ್ನು ಪರಿಗಣಿಸುವುದೇ ಇಲ್ಲ. “ಒಂದು ಉದ್ಯೋಗಸ್ಥಾನಕ್ಕೆ ಅಗತ್ಯವಾದ ಕೌಶಲ್ಯ ಹಾಗೂ ಅನುಭವ ತಮಗಿದೆ ಎಂದು ತೋರಿಸಿಕೊಳ್ಳುವುದಕ್ಕಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಸುಳ್ಳು ಮಾಹಿತಿ ಬರೆಯುತ್ತಾರೆ. ಈಗ ಇದನ್ನು ಪತ್ತೆ ಮಾಡುವುದು ಸುಲಭ. ಸೈಕೋಮೆಟ್ರಿಕ್ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಸತ್ಯಾಸತ್ಯತೆ ಹೊರಬೀಳುತ್ತದೆ. ಅಭ್ಯರ್ಥಿಯ ಪರಿಣತಿ ಹಾಗೂ ಸಾಮರ್ಥ್ಯವನ್ನು ಸುಲಭವಾಗಿ ಅಳೆಯಬಹುದು” ಎಂದು ತಿಳಿಸುತ್ತಾರೆ ಗುರುಗ್ರಾಮದ ಸ್ಕೂಲ್ ಆಫ್ ಇನ್-ಸ್ಪೈ-ಯರ್ಡ್ ಲೀಡರ್-ಷಿಪ್ ಸಂಸ್ಥೆಯ ಅರ್-ಜ್ಯ ಚಕ್ರವರ್ತಿ.
ಯಾವನೇ ಅಭ್ಯರ್ಥಿ ಫೇಸ್-ಬುಕ್, ವಾಟ್ಸಪ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಏನೇನು ಮಾಡಿದ್ದಾನೆ (ಳೆ) ಎಂದು ಪರಿಶೀಲಿಸಿದರೆ ಆತನ/ ಆಕೆಯ ಬಣ್ಣ ಬಯಲಾಗುತ್ತದೆ. “ಒಬ್ಬ ಅಭ್ಯರ್ಥಿಯ ಹಳೆಯ ಸಹೋದ್ಯೋಗಿಗಳ ಜೊತೆ ಮಾತನಾಡಿ, ಆತ/ ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ನಂತರ ಆ ಅಭ್ಯರ್ಥಿ ಯೋಗ್ಯ ಅನಿಸಿದರೆ ಮಾತ್ರ ನಾವು ಶಿಫಾರಸ್ ಮಾಡುತ್ತೇವೆ” ಎನ್ನುತ್ತಾರೆ ಸುರೇಶ್ ರೈನಾ.
ಪ್ರತಿ ತಿಂಗಳು ನೂರಾರು ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವ ದೊಡ್ದ ಕಂಪೆನಿಗಳು ಅವರ ಶಿಕ್ಷಣ, ಅನುಭವ ಹಾಗೂ ನಡವಳಿಕೆ ಬಗ್ಗೆ ಆಮೂಲಾಗ್ರ ತನಿಖೆ ಮಾಡುತ್ತವೆ. “ಉನ್ನತ ನೈತಿಕತೆ, ಪ್ರಾಮಾಣಿಕತೆ ಹಾಗೂ ಜೀವನಮೌಲ್ಯ ಹೊಂದಿರುವ ವ್ಯಕ್ತಿಗಳನ್ನೇ ಉದ್ಯೋಗಕ್ಕೆ ಸೇರಿಸಿಕೊಳ್ಳ ಬೇಕಾದದ್ದು ಕಂಪೆನಿಗಳ ಜವಾಬ್ದಾರಿ” ಎನ್ನುತ್ತಾರೆ ಐಬಿಎಮ್- ಇಂಡಿಯಾದ ಮಾನವ ಸಂಪನ್ಮೂಲ ಉಪಾಧ್ಯಕ್ಷ ದಿಲ್-ಪ್ರೀತ್ ಸಿಂಗ್. ಐಬಿಎಮ್ ಕಂಪೆನಿಯಲ್ಲಿ ತಾತ್ಕಾಲಿಕ ಉದ್ಯೋಗಿಯನ್ನು ಖಾಯಂಗೊಳಿಸುವ ಮುನ್ನ ಬಯೋಮೆಟ್ರಿಕ್ ಪರೀಕ್ಷೆ ಕಡ್ಡಾಯ. ಯಾವನೇ ಅಭ್ಯರ್ಥಿಗೆ ಕ್ರಿಮಿನಲ್ ಹಿನ್ನೆಲೆ ಇದೆಯೆಂದು ಗೊತ್ತಾದರೆ, ಕಂಪೆನಿಯೇ ಪೊಲೀಸರಿಗೆ ತಿಳಿಸುತ್ತದೆ. ಆ ಕಂಪೆನಿಯಲ್ಲಿ ಯಾವನೇ ಉದ್ಯೋಗಿ ಮೋಸ ಮಾಡುತ್ತಿದ್ದಾನೆಂದು ತಿಳಿದೊಡನೆ ತನಿಖೆ ಮಾಡಿ, ಆತ/ ಆಕೆ ತಪ್ಪಿತಸ್ಥ ಎಂದು ಕಂಡುಬಂದರೆ, ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಉದ್ಯೋಗಾಕಾಂಕ್ಷಿಗಳ ಹಿನ್ನೆಲೆ ತನಿಖೆ ಏಜೆನ್ಸಿಗಳ ಮೂಲಕ ನಡೆಸುವುದನ್ನು ಹೆಡ್ ಹಂಟರ್ಸ್ ಇಂಡಿಯಾದ ಕ್ರಿಸ್ ಲಕ್ಷ್ಮೀಕಾಂತ್ ಸಮರ್ಥಿಸುವುದಿಲ್ಲ. ಅಂತಹ ಏಜೆನ್ಸಿಗಳನ್ನೂ ಹಣದಿಂದ ಖರೀದಿಸಬಹುದು ಎಂಬುದು ಅವರ ಅಭಿಪ್ರಾಯ. ಅದೇನಿದ್ದರೂ, ಈಗಿನ ತಂತ್ರಜ್ನಾನದ ಯುಗದಲ್ಲಿ ಉದ್ಯೋಗದಾತ ಕಂಪೆನಿಗಳಿಗೆ ಸುಳ್ಳು ಮಾಹಿತಿ ನೀಡಿ ಉದ್ಯೋಗ ಗಿಟ್ಟಿಸಿಕೊಂಡರೂ ಅದನ್ನು ದಕ್ಕಿಸಿಕೊಳ್ಳುವುದು ಸುಲಭವಲ್ಲ.
ಅರ್ಜಿದಾರರ ಪೂರ್ವಾಪರ ಸರಿಯಾಗಿ ತನಿಖೆ ಮಾಡದೆ ಸಾರ್ವಜನಿಕ ಹಣಕಾಸಿನ ನಿರ್ವಹಣೆ ಮಾಡುವ ಬ್ಯಾಂಕುಗಳಂತಹ ಸಂಸ್ಥೆಗಳಲ್ಲಿ ಅವರನ್ನು ಉದ್ಯೋಗಕ್ಕೆ ಸೇರಿಸಿಕೊಂಡರೆ ಎಂತಹ ಅನಾಹುತ ಕಾದಿದೆ ಎಂಬುದಕ್ಕೆ ಇತ್ತೀಚೆಗೆ ಸಿಕ್ಕಿದ ಪುರಾವೆ: ರೂ.೫೦೦ ಮತ್ತು ರೂ.೧,೦೦೦ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ಬಳಿಕ, ಈ ಸಂಸ್ಥೆಗಳಲ್ಲಿದ್ದ ಅಂತಹ ನಾಲಾಯಕ್ ಅಧಿಕಾರಿಗಳು ಕೋಟಿಗಟ್ಟಲೆ ರೂಪಾಯಿ ಕಪ್ಪುಹಣವನ್ನು ಕಮಿಷನ್ ದುರಾಸೆಗಾಗಿ ಹೊಸ ನೋಟುಗಳಿಗೆ ಪರಿವರ್ತಿಸಲು ಸಹಾಯ ಮಾಡಿ ಸಿಕ್ಕಿ ಬಿದ್ದಿರುವುದು.