ಹಂಬಲ ಹಣತೆ (6) ತುಳಸಿಯ ಕುಂಡ
1
ಪಡುವನಾಡಿನ ನಡುವ ಕಡಲಿನ,
ಮಡಲೊಳಿರುತಿಹುದೊಂದು ದೀವಿಯು-
ಪೊಡವಿಯೊಡೆತನ ಪಡೆಯಲೆಳಸಿದ,
ಬೆಡಗು ನಾಡಿನ ಸಿಸಿಲಿಯು!
ದುಡಿದು ದಣಿದರ ಒಡಲ ಮೆಟ್ಟುತ,
ಬಡವರೆಂಬರ ಬಡಿದು ಅಟ್ಟುತ_
ಒಡನೆ ಹುಟ್ಟಿದ ಧನಿಕರಿದ್ದರು,
ಕೆಡುಕರಲ್ಲಿಯ ಮೂವರು!
ಅವರ ಸೋದರಿ ಮಹಿಗೆ ಮಾದರಿ,
ಯುವತಿ 'ಇಸಬೆಲ' ವಿನಯದಾಗರಿ,
ಬವಣೆಗೊಳುತಿಹ ಜನದ ಗತಿಮತಿ,
ಯುವತಿ ಬಡವರ ಪ್ರತಿನಿಧಿ!
ಹೊರೆಯ ಹೊತ್ತರ ಬಳಲಿದೊಡಲಿಂ,
ಸುರಿವ ಬೆವರನು ಕಂಡು ಮರುಗುತ_
ಕೊರಗ ಕರಗಿಪ ನುಡಿಯನಾಡ್ವಳು,
ಸರಳೆ ಇಸಬೆಲ ಯುವತಿಯು!
ಅವಳ ಮದುವೆಯ ನೆಸಗೆ ಪೋಪುದು
ಅವಳ ಪಾಲಿನ ಹಣವು ಎನ್ನುತ,
ಯುವಕರಾರನು ಸುಳಿಸರಲ್ಲಿಗೆ,
ಯುವತಿ ಮೋಹಿಪಳೆನ್ನುತ!
"ಒಡಲ ಒಡೆಯಗೆ ಮೀಸಲಿರಿಸುವೆ,
ಕೆಡಕರಾದರು- ಬಿಡದೆ ಸೇವಿಪೆ-
ತೊಡಕು ಏತಕೆ? ನಡತೆಯಿಂದಲಿ
ದುಡಿದು ಸೇವಿಪ ಬೃತ್ಯಗೆ?
-ಎನ್ನುವ ಯುವಕನು ಚೆಲುವ ಚತುರನು,
ನನಿಯ 'ಲೊರೆನ್ಸ್'ನು ಪಾಪ ಭೀತನು,
ಅನುಜ ಮೂವರಿಗೀತ ದೂತನು,
ಮನೆಯ ಸೇವಕ ಮುಖ್ಯನು!
ಎನಿತು ದುಡಿದರು ತಣಿಸಲಾರದ,
ಧಣಿಯ ಮೆಚ್ಚಿಸೆ ವಿಫಲಗೊಂಡು
ವಿನಯ ಶೀಲಳ ಮೆಚ್ಚಿಗೆಂದು
ದಿನವು ದುಡಿವನು-ತರುಣನು!
2
ಅಷ್ಟು ನಿಷ್ಠೆಯ ತನ್ನ ಗಯ್ಮೆಗೆ
ಇಷ್ಟು ಕನಿಕರ ಧಣಿಯು ತೋರನು-
ಎಷ್ಟು ಕಷ್ಟದ ಗಯ್ಮೆ ಅವಗಿರೆ,
ಅಷ್ಟು ಕನಿಕರ ತರಳೆಗೆ!
ಗೆಲುವು ಗೆಯ್ಮೆಯ ಚೆಲುವು ಮೊಗದ,
ಒಲುಮೆ ಕುರುಹನು ಚದುರೆ ಗುರುತಿಸೆ-
ನಿಲಲುಲಾರನು, ನುಡಿಯಲಾರನು,
ಶಿಲೆಯ ಪುತ್ಥಳಿ ಯುವಕನು!
ತರುಣಿ ಎತ್ತಲೊ ನುಡಿವ ಮೆಲುನುಡಿ,
ತರುಣ ನಾಲಿಪ ತನಿಯಗೀತ!
ತರಳೆ ಮಿಡಿಯುವ ವೀಣೆ ವಾದ್ಯಕೆ,
ತರುಣ ನಾಮವೆ-ಸರಳೆಯು!
"ಅಳುಕಲೇತಕೆ?" ಎಂದು ಕೊಳ್ವಳು
ಕಳೆಯೆ ಬಿಡುವೆನೆ ನಾಳೆ ಸಮಯ?"-
"ಬೆಳಕು ಹರಿಯಲು"- ಎನುವ ತರುಣನು
ಗೆಳತಿಗರುಹುವೆ ಮನವನು!"
ಇಂತು ಎನ್ನುತ ತಮ್ಮ ದಿಂಬೊಳು
ಅಂತು ಕಳೆದರು ಎಲ್ಲ ಸಮಯ-
ಬಂದು ಸಂದರು ಋತುಗಳೆಲ್ಲಾ_
ಎಂದು ಬಾರದು ನಾಳೆಯು!
ಒಂದು ಸಂಜೆಯು, ದಿನದ ಕದಕೆ,
ಬಂದು ಚಂದದಿ ತೆರೆಯ ನೆಳೆಯೆ,
ಅಂದು ಒಡೆಯಲು ಮೌನ ಮುದ್ರೆಯು-
ಎಂದ ನೀಪರಿ ತರುಣನು-
"ಎನ್ನ ಮನವದು, ಚನ್ನೆ, ಕೊರಗಿತು-
ನನ್ನಿ, ನನ್ನೊಳು ನಾನು ತಪ್ಪಿದೆ,
ಇನ್ನು ನೋಯಿಸೆ ನಿನ್ನ ಮನವನು,
ಎನ್ನ ತಪ್ಪನು ಮನ್ನಿಸು-!"
ಬರೆದ ಪರಿಯನು ಕೇಳಿನಾಚಿ,
ತರಳೆ ಮೌನವ ತಾಳಿ ನಲಲು-
ಮರೆತು ಚುಂಬಿಸೆ ತರುಣನಂದು,
ಅರಳಿತಾ ಮುಖ ಕಮಲವು!
ಎಂದೊ ದೊರೆಯುವ-ಒಂದು ನೋಟಕೆ,
ಎಂದೊ ದೊರೆಯುವ ಒಂದು ನುಡಿಗೆ-
ಚಂದದಿಂದಲಿ ನಿಂದು ಕಾಯ್ವರು,
ನೊಂದುಕೊಳ್ಳದೆ ಮನದೊಳು!
ಒಲುಮೆ ಈಪರಿ ಹಬ್ಬಿಕೊಂಡಿತು,
ಕುಲುಮೆ ಕಿಚ್ಚದು ಹೆಚ್ಚಿದಂತೆ,
ಗೆಲುವಿನೊಲುಮೆಯ ಛಲಕೆ ಎದುರೆ?,
ಒಲಿದರೀರ್ವರ ಎದೆಗಳು?
3
ತರುಣನಾತನು ಒಂದು ದುರ್ದಿನ
ತರಿಣಿ, ನೋಟದಿ ನಲಿದು ನಿಂತಿರೆ,
ತೆರೆಯ ಮರೆಯಲಿ ನೋಡುತಿರ್ದನು,
ದುರುಳ ಸೋದರ ನೋರ್ವನು!
"ನಾಡ ಹೆಗ್ಗಡೆ ಗೌರ ಕುವರಗೆ,
ಮಾಡೆ ಮದುವೆಯ ತಂಗಿ ಇವಳನು-
ಗೂಢವಾಗಿಯೆ ದೊರೆವ ಹಣದೊಡೆ,
ನೋಡೆ ಘನತೆಯ ಪಡೆವೆವು_"
ಎಂಬ ಆಸೆಗೆ ಮೋಸವಾಗೆ,
ತುಂಬು ಕೋಪದಿ ಅವಳ ಸೋದರ,
ಇಂಬು ಗೊಡುತಲಿ, ನುಡಿದ ವಿಷಯವ,
ನಂಬು ವಂದದಿ ಅನುಜರು!
ಅವರು ಮರುದಿನ ತರುಣಗೆಂದರು-
"ಜವದಿ ಬೇಟೆಗೆ ನಾವು ಪೋಪೆವು,
ನೆವವನೇನೂ ಹೇಳದೆಮ್ಮೊಡೆ
ತವಕದಿಂದಲಿ ನಡೆವುದು".
ತರುಣನವರಿಗೆ ವಿನಯದಿಂದ,
ಬರುವೆ ನೆನುತಲಿ ಎಂದಿನಂದದಿ,
ಅರುಣ ನುದಯಿಪ ಮುನ್ನ ತಾನು
ಭರದಿ ಕುದುರೆಯ ನೇರಿದ!
ಬೇಟೆ ಉಡುಪನು ಧರಿಸಿ ತರುಣನು,
ಮಾಟವಾಗಿಯೆ ತಾನು ಬರುತಿರೆ,
ನೋಟ ಕಾಗಿಯೆ ಕಾದು ನಿಂದಿಹ
ಬೇಂಟ ದಾಕೆಯ ಕಂಡನು!
ತರುಂ ನೆಂದನು- "ತರುಣಿ ನಿನ್ನನು
ತೊರೆದು ಪೋಪುದೆ?" -ಎಂದುಕೊಂಡೆನು-
ಬರುವೆ ನಾಳೆಯೆ- ಕೊರತೆ ಏತಕೆ,
ವಿರಹದೊಂದೇ ದಿನದಲಿ?"
ಹಾರಿದರಿಗಳ ದಾಟಿ ಮೆಳೆಗಳ,
ಏರಿ ಹಯಗಳ ಕಾಡಿನೊಳಗೆ-
ದಾರಿ ಕಾಣದ ದಟ್ಟ ಅಡವಿಯ,
ಸಾರಿ ಬಂದರು ನಾಲ್ವರು!
ಬೀಸು ಕತ್ತಿಯ ಮೋಸದೇಟನು,
ಈಸು, ತಡೆವುದೆ ಸರಳಗರಳ?
ಹೇಸ ದೆತ್ತಿದ ಖಡುಗ ಕಾಯಿತು
ಮೀಸಲಿರಿಸಿದ ಒಲುಮೆಯು!
ಅಲ್ಲೆ ಚಲನೆಯ ವಾಯು ನಿಲ್ಲಸೆ,
ಇಲ್ಲದಾಯಿತು ಸೊಲ್ಲು ಸಪ್ಪಳ!
ಚಲ್ಲು ತವರಡಿ ಒಲುಮೆ ಧಾರೆಯ,
ಅಲ್ಲೆ ಬಿದ್ದಿತು ಸಿರವದು!
ನಂಬಿದೆರ್ದೆಯು-ನಲುಮೆಯಿಂದಲಿ,
ತುಂಬಿದುಂಬುಧಿ ಕುಂಭ-ಒಡೆದುದು!
ಇಂಬಿ ನೊಲುಮೆಯ ಕೊಲುವ, ಹರಿತದ
ಅಂಬು ಎಲ್ಲಿದೆ ಲೋಕದಿ?
ಅರಿಯ ದಾತನ ಸಿರಿವ ತರಿಯುತ,
ದುರುಳರಿರುಳಲಿ ದಾರಿಗಾಣದೆ,
ತರಳೆಗಾಗಿಯೆ-"ಕರುಳ ಕೊರೆಯುವ
ಕೊರತೆ ಯೊರತೆಯ"-ತಂದರು.
4
ಮೂವರನುಜರೆ, ಮರಳಿಬಂದಾ
ಭಾವವರಿಯದೆ- "ತರುಣನಾತನು,
ಆವಕಾರ್ಯಕೊ ಹೊರಟ" - ನೆಂಬುವ
ಭಾವ ತಳೆದಳು ತಂಗಿಯು!
ಅಳೆದು ದಿನಗಳ, ಕಳೆದು ಋತುಗಳ,
ಬಳಲೆ ಬಾಲೆಯು- ಮುನ್ನಿನಾಸೆಯು
ಬಳಿಗೆ ಸುಳಿದುದು-ಬರುವ ತರುಣನ
ಕೆಳೆಯ ನಂಬಿಸಿ, ತರಳೆಗೆ!
ಸುಳ್ಳಿನಾಸೆಯ ಜಳ್ಳು ಮಾತನು,
ಪೊಳ್ಳು ಮಾಡುವ ಅವಧಿ ಬಂದುದು
ಎಲ್ಲು ಸುದ್ದಿಯ ಸುಳಿವುಸಿಗದಿರೆ,
ಮೆಲ್ಲ ಗಿಡಿದಳು ಹಾಸಿಗೆ!
ಬಿಸಿಯ ಉಸುರಿನ ತಿದಿಯು ಬತ್ತಿ,
ಅಸುವ ಜಗ್ಗಿಸಿ ಎದೆಯ ಬತ್ತಿಸೆ,
ಮಿಸುನಿ ಮಗಳಿನ ಕುತ್ತಕಾಗುವ,
ಹಸನ ಮದ್ದದು ಎಲ್ಲಿದೆ?
"ನಿನ್ನ ನಲ್ಲನು ಇಹನು ಎಲ್ಲಿ?
ಇನ್ನು ಬರುವನೆ ನಾಳೆಯೊಳಗೆ?-
ಮಣ್ಣು ಪಾಲಿನ ನಿನ್ನ ಆಸೆಯ-
ಇನ್ನು ಏತಕೆ ನೆನೆಯುವೆ?"
"ಮುಡುಪ ಮಾಡಿದ ವಿಧವೆ ಉಡುಪನು,
ಹಿಡಿದು ಬೆಂಗಡೆ, ಬಿಡದೆ ಆಸೆಯು
ನುಡಿಸೆ ಬರುತಿದೆ -ಮಗಳೆ! ಏತಕೆ
ಇಡುವೆ ನಂಬಿಕೆ ಅದರೊಳು?"
ಸುಧೆಯು ಚಲ್ಲಿದ ಬರಿಯ ಮುಚ್ಚಳ
ಅದುವೆ ಅಲ್ಲರೆ ಅವಳ ಪಾಲಿಗೆ,
ಉದಿಸಿ ದಾಸೆಯು-ಹುಸಿಯ ಮದಿರೆಯ,
ನದಕೆ-ಒಡನೆಯೆ ತುಂಬಿತು!
ಆಸೆ ಆತುರ, ಬರಿಯ ಕಾತುರ,
ಮಾಸದೊಲವಿನ ಮಿಡಿತ ಹೊಡೆತ -
ಮೂಷೆ ಎದೆಗದೆ ಆಗಲಿಂಧನ,
ಭಾಷೆ ಬಹುದೇ ಬಣ್ಣಿಸೆ?
ಚಿಂತೆಯಿಂದಲದಿ ಕಣ್ಣ ಮುಚ್ಚಿರೆ
ಇಂತು ಒಂದಿನ ಬಂದ ಕನಸದು_
ಅಂದು ತಿಳಿಸಿತು ಗೆಳೆಯನಾತನು,
ನೊಂದು ನಂದಿದ ಪರಿಯನು
ಕ್ರೂರ ದೃಷ್ಟಿಯ ಕಪ್ಪು ನೆರಳಿಗೆ,
ಚೂರಿ ಇರಿತದ ಗುರುತು ಕೊರಳಲಿ,
ಸೋರಿ ಕಂಬನಿ ಕೊರೆದು ಮಾಡಿದೆ,
ಮೋರೆ ಎಲುಬೊಳು ಕಾಲುವೆ!
ಎಷ್ಟು ಮೆಲ್ಲನೆ ಬರಲು- ಅಬಲೆ
ಅಷ್ಟು ಬೆದರಳು-ಎಂದುಕೊಳ್ಳುತ-
ಕಷ್ಟದಿಂದಲಿ ಸರಿದು ಬರುತಲಿ,
ಇಷ್ಟು ಸಂಗತಿ ಹೇಳಿತು:_
"ಬರಿದೆ ಬಳಲುವೆ ಏತಕಿನ್ನು,
ನರರ ಬಳಗದೊಳಿಲ್ಲ ನಾನು_
ಕೊರಳ ತರಿದರು ಕೊನೆಯ ಕಾಣದು,
ಕರುಣ ದೊಲವದು - ನಿನ್ನದು!"
"ಕಾಡನಡುವಿನ ಕುಳಿಯ ಒಳಗೆ,
ಕೋಡುಗಲ್ಲಿನ ಗುರುತಿನಡೆಗೆ_
ಜಾಡ ಹಿಡಿಯುತ ಬರಲು ನೀನು,
ಪಾಡು ನನ್ನದು ನೋಡುವೆ!"
"ಧರೆಯ ಹಸುರನು ಮೆಲಲು ಮೇಗಡೆ,
ಬರುತಲಿರುತಿಹ ಕುರಿಯ ಪಡೆಯೆಡೆ,
ಮರದ ಫಲಗಳು ಮೇಲೆ ಬೀಳ್ವೆಡೆ,
ಅರಿತು ಬರುವೆಯ_ಆಕಡೆ?
"ಎನ್ನ ಮನವದು ಇನ್ನು ತಪಿಪುದು,
ನಿನ್ನ ಕಂಬನಿಯೊಂದ ಕರೆಯುತ,
ನನ್ನ ಬೇಗೆಯ ನಲ್ಲಿ ತಿಂಪಿಸು,
ಇನ್ನು ಬಾರೆನು ಇಲ್ಲಿಗೆ!"
ಇಂತು ಒರೆಯುತ ಸರಿಯೆ ಝರೆಯು_
"ಅಂತೆ ನಡೆದಿರೆ ಬದುಕಲೇನಿದೆ?"
ಎಂತು ಅರಿವೆನೊ ಇದರ ನಿಜವನು_?
ಎಂದು ಬಗೆದಳು ಮನದೊಳು!
5
ದಿನಪ ನುದಯಿಪ ಮುನ್ನ ಮರುದಿನ,
ಕನಸು ನುಡಿದೆಡೆ ನೋಳ್ಪ ಕಾತುರ,
ಮನದಿ ತುಂಬಿರೆ, ದಾಸಿ ಜೊತೆಯೊಳು,
ಮನೆಯ ಬಿಟ್ಟಳು_ ಅಡವಿಗೆ!
ಕಾಡು ಮೇಡಿನ ಜಾಡಿನೊಳಗೆ,
ಪಾಡು ಪಡುತಲಿ ನಡೆಯುತಿರಲು_
ನೋಡಿ ದಾಸಿಯು_ "ಮಗಳೆ ಏತಕೆ
ಪಾಡು ನಿನಗಿದು?" _ಎಂದಳು.
"ಚೆನ್ನ ಚೆಲುವಿನ ನಿನ್ನ ದೇಹದ
ಬಣ್ಣವಳಿಯುತ, ಮೂಳೆಯುಳಿದುದು,
ನನ್ನ ಕಣ್ಣಲಿ ಎಂತು ಕಾಂಬೆನು
ನಿನ್ನ ಬವಣೆಯ?" _ನೆಂದಳು
ಎಲ್ಲು ನಿಲ್ಲದೆ, ಏನು ನುಡಿಯದೆ,
ಸೊಲ್ಲು ಸಪ್ಪಳ ವಿಲ್ಲದಾಕಡೆ,
ಮೆಲ್ಲ ನಲ್ಲಿಯೆ ಬರುತ ಕಂಡಳು
ಎಲ್ಲ ಬಲ್ಲಾ ಕಲ್ಲನು!
ಕುರುಹಿನೆಡೆಯನು ಹುಡುಕಿ ತಿಳಿಯುತ,
ಹರಿವ ಬೆವರನು ಒರಸಿ ಹಾಕುತ_
ಸುರಿದ ಕಂಬನಿ ಸಡಿಲ ಗೊಳಿಸಿದ
ಧರೆಯ ನಗೆದಳು ತರಳೆಯು!
ಎಂದೊ ಹಾಕಿದ ತನ್ನ ಕಸುತಿಯ,
ಅಂದ ದಾತನ 'ಹೆಸರ' ಚೌಕವು_
ಇಂದು ಆಗುತ ಆಕೆಗುಡುಗೊರೆ_
ಬಂದು ಬೆರೆತುದು ಎದೆಯೊಳು!
ಸತ್ತ ಬಾಳಿಗೆ ಇತ್ತು ಗೆಳೆತನ,
ಅತ್ತು ಕುಳಿತರೆ ಬಾಲೆ ಆಯೆಡೆ,
ಮತ್ತೆ ಆದಳು ಮೊಳೆತ ಮಲ್ಲಿಗೆ,
ತೆತ್ತು ತಂಪನು ಒಳಗಡೆ!
ಒಪ್ಪಮಾಡಲು ಒಯ್ಯೆ ದೇಹವ,
ಬಪ್ಪತೊಡಕನು ಬಲ್ಲ ಬಾಲೆಯು_
ತಪ್ಪಿದೊಲುಮೆಯ ನೆನಪಿಗೆಂದು,
ಅಪ್ಪಿ ತಂದಳು ಕುರುಹನು!
ಕೆಟ್ಟ ಅಡವಿಯ ಬಿಟ್ಟು ಬಂದು,
ಇಟ್ಟು ಕುರುಹನು ಕುಂಡದೊಳಗೆ_
ನೆಟ್ಟಳಲ್ಲಿಯೆ ತಂದ ತುಳಸಿಯ,
ಒಟ್ಟಿ ಕಂಗಳನೀರನು.
ಇರುತ ಆಗಳು ತುಳಸಿ ಬಳಿಯೊಳೆ,
ಮರೆತು ಹೋದಳು _ ಮೆರೆವ ರವಿಯನು,
ಹರಿವ ತೊರೆಯನು_ ಸರಿವಸಂಜೆಯ,
'ನರರು' ಎನಿಪರ ಧರೆಯನು!
ತುಳಸಿ ಬೆಳೆಯಿತು, ಬಾಡಿತೊಡಲದು
"ಸೆಳೆಯ ಬಾಲೆಯ,ಏನೋ ಇಹುದದು
ಒಳಗೆ ಕುಂಡದಿ?"- ಎಂದು ಬಗೆದರು
ಬಳಿಕ ಮೂವರು ದುರುಳರು!
ಕಡೆಗೆ ಸಾಧಿಸಿ ಒಂದು ಸಮಯವ,
ಒಡೆದು ಕುಂಡವ ಕಂಡು ಋಂಡವ
ಒಡನೆ ಹೆದರುತ ಓಡಿ ಹೋದರು,
ಕೆಡುಕರವರಾಮೂವರು!
"ತುಳಸಿ ಕುಂಡವ ಕೊಡಿರಿ" ಎನ್ನುತ,
ಅಲೆದು ಎಲ್ಲೆಡೆ ಬಳಲೆ ಬಾಲೆಯು_
ಬಳಿಕ ಕಾಲನು ಗೆಳೆಯ ನಾಗುತ,
ಬಳಿಗೆ ಒಯ್ದನು ಕರುಣದಿ!
ತಿಳಿದು ಸಂಗತಿ, ನಾಡಯುವಕರು
ಅಳುಕಿ ನೊಂದರು; "ತುಳಸಿ ಕುಂಡದ
ಕಳವುಪಾಪವು"-ಎನುವರೀಗಲು
ತಿಳಿದ ರಲ್ಲಿಯ ಹಿರಿಯರು !
ಜಾನ್ ಕೀಟ್ಸ್ (1795-1821) ರಚಿಸಿದ 'ಇಸಬೆಲ್ಲ' ಅಥವಾ 'ದ ಪೊಟ್ ಆಫ್ ಬಸಿಲ್' ಎಂಬ ಕವಿತೆಯ ಭಾವಾನುವಾದ.
[ಅನಾತು ರೋತ್ಕಂ ಠಿತಯೋಃ ಪ್ರಸಿದ್ಧ್ಯತಾ
ಸಮಾಗಮೇನಾಪಿ ರತಿಂ ನಮಾಂ ಪ್ರತಿ||
ಪರಸ್ಞರ ಪ್ರಾಪ್ತಿ ನಿರಾಶಯೋರ್ವರಂ|
ಶರೀರ ನಾಶೋಪಿ ಸಮಾನುರಾಗಯೋ||]
(ಕಾಳಿದಾಸ)