ಜಲರಾಶಿ ಮಧ್ಯೆ ದಾಹ! ದಾಹ! (ಭಾಗ ೨)

ಜಲರಾಶಿ ಮಧ್ಯೆ ದಾಹ! ದಾಹ! (ಭಾಗ ೨)

ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿ ಆ ಊರಿಗೆ ದೊರೆತ ನಾಗರಿಕ ಸೌಲಭ್ಯಗಳು ಒಂದು ಪ್ರಾಥಮಿಕ ಶಾಲೆ ಹಾಗೂ ವಿದ್ಯುತ್ತು. (ಹೊಳೆಯ ದಡಗಳಲ್ಲಿ ಎರಡೆರಡು ಕಂಬ ನೆಟ್ಟು ವಿದ್ಯುತ್‌ ತಂತಿಗಳನ್ನು ಎಳೆಯಲಾಗಿದೆ) ಹೈಸ್ಕೂಲಿಗೆ ಮಿರ್ಜಾನಿಗೆ ಹೋಗಬೇಕು. ಕಾಲೇಜು ಕುಮಟೆಯಲ್ಲಿ. ದೊಡ್ಡ ಹುಡುಗಿಯರೆಲ್ಲ ಮನೆಯಲ್ಲಿ ನೀರು ತರಲು ಮೀಸಲಾದ್ದರಿಂದ ಇಲ್ಲಿ ಹೈಸ್ಕೂಲು ಮುಗಿಸಿದವರೂ ಕಡಿಮೆಯೇ.ಇಬ್ಬರು ಹುಡುಗರು ಮಾತ್ರ ಇಲ್ಲಿಂದ ಕಾಲೇಜಿಗೆ ಹೋಗಿತ್ತಿದ್ದಾರೆ.

ಈಗ ಸರ್ಕಾರ ಎಂತೆಂಥಾ ಕಾಡು ಹಳ್ಳಿಗಳಿಗೂ ಸಾರಿಗೆ-ಸಂಪರ್ಕ ಕಲ್ಪಿಸಿದೆ. ಆದರೆ ಐಗಳ ಕುರ್ವೆಯ ಸಾರಿಗೆಯ ಸಮಸ್ಯೆಯೇ ಬೇರೆ. ಅದಕ್ಕೆ ಸರ್ಕಾರ ತಲೆ ಹಾಕಲೇ ಇಲ್ಲ. ಬದಲಾಗಿ ಜನರೇ ಮಾಡಿಕೊಂಡಿರುವ ವ್ಯವಸ್ಥೆ ಮಾದರಿಯಾದದ್ದು. ಸಮಸ್ಯೆ ಒಂದೇ ಆದಾಗ ಜನ ಕೈ ಕೂಡಿಸುತ್ತಾರೆ ಇಂಬುದಕ್ಕೆ ಸಾಕ್ಷಿ.

ಇಲ್ಲಿ ಸಹಕಾರೀ ತತ್ವದ ಮೇಲೆ ಎರಡು ದೋಣಿಗಳನ್ನು ಇರಿಸಲಾಗಿದೆ. ಅದಕ್ಕೆ ಬರುವ ಖರ್ಚನ್ನು ಜನ ವಾರ್ಷಿಕವಾಗಿ ಹಂಚಿಕೊಳ್ಳುತ್ತಾರೆ. ನಿಯಮದಂತೆ ದಿನಾ ಒಂದು ಮನೆಯವರು ದೋಣಿ ನಡೆಸಬೇಕು. ತಪ್ಪಿದರೆ ದಂಡ, ಗ್ರಾಮಸ್ಥರೆಲ್ಲ ಸೇರಿ ವಿಧಿಸುತ್ತಾರೆ. ಬೆಳ್ಳಗ್ಗೆ ಆರಕ್ಕೆ ಆರಂಭವಾದ ದೋಣಿ ರಾತ್ರಿ ಎಂಟರವರೆಗೆ ಎರಡೂ ದಡಗಳ ಮುಟ್ಟಾಟ ಆಡುತ್ತದೆ. ಇಲ್ಲಿಯ ಹೆಂಗಸರು-ಮಕ್ಕಳು ಕೂಡಾ ಗಜ ಗಾತ್ರದ ಜಲ್ಲೆಯಿಂದ ದೋಣಿ ನಡೆಸಬಲ್ಲರು. ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತದೆ!.

ನಿಜ. ಅವರೆಲ್ಲ ಈ ಪರಿಸರಕ್ಕೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ಅವರಿಗೆ ಈ ಉಪ್ಪು ದ್ವೀಪದ ಜೀವನ ಸಮಸ್ಯೆಯೇ ಅಲ್ಲ. ಕೋಡ್ಕಣಿ ಪೇಟಿಗೆ ಹಾಲು ಕೊಡಲು ಹೋದ ಸರೋಜ ಅಷ್ಟೊಂದು ದೂರ ಸೊಂಟದ ಮೇಲೆ ನೀರಿನ ಕೊಡ ಹೊತ್ತು ಬರುವಾಗ ಆಯಾಸವೇ ಇಲ್ಲ. 'ಆಚಿಂದ ಬರುವಾಗ ನಾಲ್ಕು ಕೆ.ಜಿ. ಹಿಂಡ ತಗೊಂಬಾ' ಅಂತಾ ಭಂಡಾರಿಗೆ ಯಾರೋ ಹೇಳಿದಾಗ ಇಲ್ಲ ಅನ್ನಲಿಲ್ಲ. ಇಲ್ಲಿಯ ಜೀವನ ನೋಡುವವರಿಗೆ ಮಾತ್ರ ಕಷ್ಟವೇನೋ ಎನ್ನುವಂತೆ ನಡೆದು ಹೋಗುತ್ತಿದೆ! ನೀರು, ಊರನ್ನು ಬೇರ್ಪಡಿಸಿದ್ದರೂ ಅಲ್ಲಿಯ ಜನರನ್ನು ಒಂದುಗೂಡಿಸಿರುವುದು ಎಂಥ ಅಪೇಕ್ಷಿತ ಆಕಸ್ಮಿಕ ಎನಿಸಿವುದಿಲ್ಲವೇ?
ನಿಮಗೆ ನೆನಪಿರಬಹುದು. ೧೮೮೨ರಲ್ಲಿ ಭೀಕರ ಚಂಡಮಾರುತ ಕರ್ನಾಟಕದ ಕರಾವಳಿಗೆ ಬಂದು ಬಡಿದಿತ್ತು. ಆಗ ಅತ್ಯಂತ ತೊಂದರೆಗೊಳಗಾಗಿದ್ದ ಹಳ್ಳಿ ಐಗಳ ಕುರ್ವೆ.

ಊರಿಗೂರೇ ನೀರಲ್ಲಿ ಮೂಳುಗಿತ್ತು. ಒಂದು ಕಾಲ ಕೋಡ್ಕಣಿಯೆ ಗಂಜಿ ಕೇಂದ್ರದಲ್ಲಿ ಜನ ರಕ್ಷಣೆ ಪಡೆದಿದ್ದರು. “ನಾವು ಜೀವಮಾನದಲ್ಲಿ ಗಳಿಸಿದ್ದೆಲ್ಲ ಆಗ ತೊಳೆದು ಹೋಯ್ತು”ಎಂದು ಅದನ್ನು ನೆನಸಿಕೊಂಡು ಜನ ಅತ್ತರು. ಅಳಿದುಳಿದ ಮನೆಗಳಲ್ಲಿ ನೀರು ಬಂದ ಗುರುತನ್ನು ಈಗಲೂ ಕಾಣಬಹುದು.

ಆಗ ಹೆಚ್ಚಿನ ಮನೆ-ಮಾಡುಗಳೆಲ್ಲ ನಿರ್ನಾಮವಾದವು.೧೯೮೨ ರ ನಂತರ ಐಗಳ ಕುರ್ವೆಯ ಪುನರ್ನಿಮಾಣ ಆದಂತೆಯೇ. ಮತ್ತದೇ ಗುಡಿಸಲುಗಳು ಮೇಲೆದ್ದಿದ್ದಾವೆ. ಕೆಲವು ಮನೆಗಳಿಗೆ ಮಾತ್ರಹೆಚ್ಚು ಹೆಂಚು ಬಿದ್ದಿವೆ!

ಭರ್ಜರಿ ಮಳೆಗಾಲದಲ್ಲಿ ಐಗಳ ಕುರ್ವೆ ದಿನ-ಎರಡು ದಿನಗಳ ಕಾಲ ಹೊರ ಸಂಪರ್ಕ ಕಳೆದುಕೊಳ್ಳುವುದು ಪ್ರತಿವರ್ಷವೂ ಉಂಟು. ಎಂಥ ಅನಿರ್ದಿಷ್ಟ ಬದುಕು!

ಐಗಳ ಕುರ್ವೆಯಲ್ಲಿರುವ ಎರಡೇ ಅಂಬಿಗರ ಕುಟುಂಬಗಳಲ್ಲಿ ಒಂದು ಲಕ್ಷ್ಮಿಯದು. ಅಂಬಿಗರ ಲಕ್ಷ್ಮಿ ಸುತ್ತೆಲ್ಲ ಪರಿಚಿತಳು. ಸಣ್ಣ ಸೋಗೆಯ ಗುಡಿಸಲು ಹಾಗೂ ಒಂದು ದೋಣಿ ಅವಳ ಆಸ್ತಿ. ಆಕಸ್ಮಿಕವಾಗಿ ವಿಧವೆಯಾದಾಗ ಧೃತಿಗೆಡದ ಲಕ್ಷ್ಮಿ, ಗಂಡ ನಡೆಸುತ್ತಿದ್ದ ದೋಣಿಯಲ್ಲೇ ನಾಲ್ಕು ಜನರ ಸಂಸಾರ ನಿಭಾಯಿಸಿದಳು. ಹೆಣ್ಣು ಮಕ್ಕಳ ಮದುವೆ ಮಾಡಿದಳು.

'ದೋಣಿ ನಡೆಸಿದರೆ' ದಿನಾ ಎಂಟ್ಹತ್ತು-ಸೀಸನ್ನಿನಲ್ಲಿ ೨೦ ರವರಗೂ ದುಡ್ಡು ಸಿಗುತ್ತದೆ ಎನ್ನುವ ಅವಳು "ಹೆಂಗೋ ನಡೀತದ್ರಾ. ಆದರೆ ಈ ಹುಡುಗ ಶಾಲೆಗೆ ಸರಿಯಾಗಿ ಹೋಗ್ತಿಲ್ಲಾ ಅಂತ್ಲೇ ಬೇಜಾರು" ಎಂದು ಶಾಲೆಗೆ ಚಕ್ಕರು ಹಾಕಿ ಅಮ್ಮನ ದೋಣಿಯಲ್ಲಿ ಕುಳಿತಿದ್ದ ಮಗನ ಕಡೆಗೆ ಕೈ ತೋರಿಸಿದಳು.

ನಡಿಯೋ ಶಾಲೆಗೆ ಹೊಳೇಲಿ ಹಾಕಿ ಬಿಡ್ತೆ ನೋಡು" ಎಂದು ಅಮ್ಮ ಹೆದರಿಸಿದ್ದಕ್ಕೆ ಮಗ ನಕ್ಕ, ದೋಣಿ ಸಾಗಿತು!

Comments