ಹುಟ್ಟು ಹಬ್ಬ - ಒಂದು ಚಿಂತನೆ

ಹುಟ್ಟು ಹಬ್ಬ - ಒಂದು ಚಿಂತನೆ

 
 
ನಮ್ಮ ಅಕ್ಕ - ಅಣ್ಣಂದಿರ ಕಾಲದಲ್ಲಿ ಅಂದರೆ ೬೦ರ ದಶಕದಲ್ಲಿ, ಅವರ  ಶೈಶವಾಸ್ಥೆಯ ೫-೬  ವರುಷದವರಿಗೆ ಹುಟ್ಟು ಹಬ್ಬದ ದಿನ ಬಾಗಿಲಿಗೆ ಹಸಿರು ತೋರಣ, ಮನೆ ಮುಂದೆ ದೊಡ್ಡ ರಂಗೋಲೆಯ ಅಲಂಕಾರ.. ಬೆಳಗ್ಗೆ  ಸತ್ಯನಾರಾಯಣಪೂಜೆಯೋ, ಯಾವುದಾದರೂ ಸೇವೆಯೋ ದೇವಸ್ಥಾನದಲ್ಲಿ ಮಾಡಿಸಿ ಸಂಜೆಗೆ ಮನೆಯಲ್ಲಿ ಆರತಿ ಇಟ್ಟುಕೊಳ್ಳುವ ಪದ್ಧತಿ ಇತ್ತು.  ಬಣ್ಣ ಬಣ್ಣದ ರೇಷ್ಮೆ ಸೀರೆ, ಹೂವಿನ ಹಾರದಿಂದ  ಅಲಂಕರಿಸಿದ ಪುಟ್ಟ ಖುರ್ಚಿಯ ಮೇಲೋ, ಮಂಡಲದ ಹಸೆ ಬಿಡಿಸಿದ  ಮಂದಾಸನದ ಮೇಲೋ ಹುಟ್ಟು ಹಬ್ಬದ  ಮಗುವನ್ನು ಕೂರಿಸುತ್ತಿದ್ದರು.  'ಎಲ್ಲಿ ಎಲ್ಲರೂ ಒಂದೊಂದು ಹಾಡು ಹೇಳಿ' ಎಂಬ ಮನೆಹಿರಿಯರ ಅಣತಿ ಬಂದೊಡನೆ ಆಹ್ವಾನಿತರಾದ ನೆರೆಹೊರೆಯವರು, ಆಗತಾನೇ ಸಂಗೀತ ಕಲಿಯಲು ಶುರು ಮಾಡಿದ ಕಿಶೋರಿಯರು, ಕಲಿತ ಹೆಣ್ಣುಮಕ್ಕಳು, ಮನೆಮಟ್ಟಿಗೆ ದೇವರ ಪೂಜೆಗೆಂದು ಹಾಡಿಕೊಳ್ಳುವ ಗೃಹಿಣಿಯರು ಒಬ್ಬೊಬ್ಬರಾಗಿ ಹಾಡು ಹೇಳುವಂತೆ ಒತ್ತಾಯ ಮಾಡಿಸಿಕೊಂಡು  ದಾಸರಪದಗಳು, ಕೀರ್ತನೆಗಳು, ಸುಂದರ ದೇವರನಾಮಗಳು , ಕೆಲವೊಮ್ಮೆ ಸಿನೆಮಾ ಹಾಡುಗಳ ಉತ್ಸವ, ತಮಾಷೆ ನಡೆದು ಕೊನೆಗೆ ಮಗುವಿಗೆ ಆರತಿ ಮಾಡಿ ಹರ್ಷಿಸುತ್ತಿದ್ದರು. ಚೆಂದವಾಗಿ ಸೀರೆ ಉಟ್ಟು , ಮುಡಿ ತುಂಬಾ ಹೂ ಮುಡಿದ  ಮುತ್ತೈದೆಯರೆಲ್ಲಾ  'ಆರತಿ ಎತ್ತಿರಿ ಪುಟ್ಟ ಕಂದನಿಗೆ ...' ಎಂದು ಹಾಡುತ್ತಿದ್ದರೆ ಮಗು ಕೂಡಾ ಎರಡೂ ಬದಿಯಲ್ಲಿ ಇರಿಸಿದ ಹೂ ಸುತ್ತಿದ ಬೆಳ್ಳಿಯ ದೀಪಸ್ತಂಭಗಳ ಮಧ್ಯೆ ವಿರಾಜಮಾನವಾಗಿ ಕುಳಿತು ಖುಷಿ ಖುಷಿಯಾಗಿ ನಗುತಲಿರುತ್ತಿತ್ತು  ( ಸ್ವಲ್ಪ ಹೊತ್ತೇ..ಆಮೇಲೆ ಹೊಸ ಬಟ್ಟೆಯ ಇರುಸು ಮುರಿಸಿಗೆ ಅಳು ಪ್ರಾರಂಭ) ತಮ್ಮ ಮಗುವೇ ಎನ್ನುವಂತೆ ಎಲ್ಲರೂ ಹೃದಯ ತುಂಬಿ ಆಶೀರ್ವದಿಸಿ ಸಿಹಿ, ಖಾರ ತಿಂದು ಸಾಧ್ಯವಾದರೆ ಉಡುಗೊರೆ ನೀಡಿ ತಮ್ಮ ಮನೆಗೆ ಮರಳುತ್ತಿದ್ದರು. ಆ ಬಾಂಧವ್ಯ  ವರ್ಣಿಸದಳ!!!
 
೭೦ ರ ದಶಕದ ಕೊನೆಯಲ್ಲಿ ನಾವು ಪ್ರಾಥಮಿಕ ಹಂತಕ್ಕೆ ಬರುವ ವೇಳೆಗೆ ಸಂಸಾರ ದೊಡ್ಡದಾಗಿರುತ್ತಿದ್ದರಿಂದ ಈ ಮುದ್ದುಗರೆವ ಪರಿ, ಸಂಭ್ರಮ ಮಾಯವಾಗಿ ಅಂತಹ  ಔತಣಕೂಟ ನಡೆಯದಿದ್ದರೂ ಮನೆ ಮಂದಿ  ಖುಷಿಯಾಗಿ ಹಾರೈಸುವುದರ ಮೂಲಕ ದಿನದ ಪ್ರಾರಂಭ!!... ಅಂದು ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ ಮಡಿ ಬಟ್ಟೆ ಧರಿಸಿ (ಹೊಸ ಬಟ್ಟೆ ಅಲ್ಲ, ವರ್ಷಕ್ಕೆರೆಡು ಜೊತೆ ಬಟ್ಟೆಯಲ್ಲೇ ನಾವು ತೃಪ್ತರು. ) ದೇವರಿಗೂ, ಅಪ್ಪ-ಅಮ್ಮ ಮತ್ತು ಮನೆಯ ಹಿರಿಯರಿಗೆಲ್ಲಾ ನಮಸ್ಕರಿಸಿ ಅವರ ಸವಿನುಡಿಗಳ ಮನಃಪೂರ್ವಕ ಆಶೀರ್ವಾದ ಪಡೆಯುವುದು ಮುಖ್ಯವಾಗಿತ್ತು. ಅಂದಿನ ದಿನ ಶಾಲೆ ಇದ್ದರೆ ಹೋಗಿ ಬರುತ್ತಿದ್ದೆವು. ಎಲ್ಲರೊಂದಿಗೆ ಚಾಕೊಲೇಟ್ ವಿನಿಮಯಕ್ಕೆ ಅಥವಾ ಆಡಂಬರದ ಪ್ರದರ್ಶನಕ್ಕೆ ಅವಕಾಶವಿಲ್ಲದೆ ಪ್ರತಿ ದಿನದ ಸರಳ ಅಡುಗೆಯ ಜೊತೆಗೆ ಅಮ್ಮ ತಯಾರಿಸಿದ ಸಿಹಿಯನ್ನು (ಪಾಯಸವೋ, ಜಾಮೂನೋ..) ನಿಧಾನವಾಗಿ ಅನುಭವಿಸುತ್ತಾ ಸವಿದರೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂತೋಷ!! ಅಲ್ಲಿಗೆ ಹುಟ್ಟುಹಬ್ಬದ ಸಂಭ್ರಮ ಮುಗಿದ ಹಾಗೆ..
 
ಸಂಪ್ರದಾಯಸ್ಥ ಕುಟುಂಬಗಳಿಗೆ ಮಾತ್ರ ಮೀಸಲಾಗಿದ್ದ ಹಬ್ಬ-ಹರಿದಿನಗಳು, ಆಚಾರ-ವಿಚಾರಗಳು ಕ್ರಮೇಣ  ಜಾತಿ-ಕುಲವೆನ್ನದೆ ಎಲ್ಲರ ಮನೆಯಂಗಳಕ್ಕೂ ದಾಪುಗಾಲಿಟ್ಟ ಕಾಲ... ಇದಕ್ಕೆ ಬಲವಾದ ಕಾರಣ (ಮೂಲ) ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಧರ್ಮಾಧಾರಿತ ಪೂಜಾ ಕಾರ್ಯಕ್ರಮಗಳೆನ್ನಬಹುದು. ಹಾಗಾಗಿ ದಿನೇ ದಿನೇ ಶೀಘ್ರಗತಿಯಲ್ಲಿ ಬದಲಾವಣೆಯ ಗಾಳಿ ಬೀಸಿ ರಾಶಿ ಫಲ, ನಕ್ಷತ್ರ ಯೋಗ, ಚೌತಿ, ಷಷ್ಠಿ ಉಪವಾಸ, ಏಕಾದಶಿಯ ನಿಟ್ಟುಪವಾಸ, ಜನಿವಾರಧಾರಣೆ  ಜಾತ್ಯಾತೀತ ಆಚರಣೆಗಳಾಗಿ ಮಾರ್ಪಟ್ಟಿವೆ.  ಉಳ್ಳವರು  ತಮ್ಮ ಮಕ್ಕಳ ಹುಟ್ಟು ಹಬ್ಬ ಬಂದರೆ  ಹೋಮ ಹವನ ಮಾಡಿಸುತ್ತಾರೆ. ಭರ್ಜರಿ ಊಟ, ಸಾವಿರಾರು ಉಡುಗೊರೆಗಳ ರಾಶಿ ಬಂದು ಬೀಳುತ್ತದೆ. ದೇವಸ್ಥಾನಗಳಿಗೆ ಸಾವಿರಾರು ರೂಪಾಯಿಗಳ ಕಾಣಿಕೆ ಸಲ್ಲಲ್ಪಡುತ್ತದೆ. ಕೆಲವೊಮ್ಮೆ ಚಿನ್ನದ ಒಡವೆ, ವಸ್ತು ಸಹ... ಮಕ್ಕಳ ಹೆಸರಲ್ಲಿ ಅರ್ಚನೆ, ಅಭಿಷೇಕ ಮಾಡಲು ಸಾವಿರಾರು ರೂಪಾಯಿ ಚೆಲ್ಲುವ ಜನ ಅವರಿಗೆ ಸಂಸ್ಕಾರ ಕಲಿಸಲು ಮಾತ್ರ ಮರೆತುಬಿಡುವುದು ವಿಶೇಷ !! ….
 
ಲಕ್ಷಾಂತರ ರೂಪಾಯಿಗಳ ಒಡವೆ, ಸೀರೆಗಳು, ವೈಭವೋಪೇತ ಅಲಂಕಾರ ಸಾಮಗ್ರಿಗಳು ತಂದು ದೊಡ್ಡ ಹೊಟೇಲುಗಳಲ್ಲಿ ಪಾರ್ಟಿ ಮಾಡಿದರೂ ಆ ದಿನಗಳ ಸಡಗರ ಕಾಣಸಿಗದೇಕೆ??.. ಅಷ್ಟು ಹಣ ಖರ್ಚು ಮಾಡಿ ಇಷ್ಟಪಟ್ಟವರನ್ನು ಕರೆದು ನಲಿದ  ಸಮಾರಂಭ ಎಲ್ಲರನ್ನೂ ಒಪ್ಪಿಸುವ ಕರ್ತವ್ಯದ ಸೋಗಿನ ಕಾರ್ಯಕ್ರಮವೆನಿಸುವುದೇಕೆ??....  ಆಡಂಬರದ ಪ್ರದರ್ಶನದ ಮುಂದೆ ಮನಸ್ಪೂರ್ವಕ ನಗು, ಆತ್ಮೀಯತೆ ಮರೆಯಾಗಿ ಸಂಬಂಧಗಳ ಸಂಕೀರ್ಣತೆ ರಾಚುತ್ತಿದೆ, ಮೌಲ್ಯಗಳ ಅದಃಪತನ ಭಾವನೆಗಳನ್ನು ಮಾರುಕಟ್ಟೆಯ ವಸ್ತುವನ್ನಾಗಿಸಿದೆ , ಎಲ್ಲೋ ಏನೋ ಖಾಲಿತನ , ಒಳಗೆಲ್ಲೋ ಶೂನ್ಯಭಾವ!!
 
ಮತ್ತೆ ಮಗುವಾಗಬೇಕು, ಸ್ವಾರ್ಥದ ಲವಲೇಶವೂ ಇಲ್ಲದೆ, ನಿರೀಕ್ಷೆಗಳ ಮೂಟೆ ಹೊರದೆ ಹಗುರಾಗಬೇಕು....ನೋವ ಹೊದಿಕೆ ಕಿತ್ತೊಯ್ದು ಮುಂದಿನ ಹುಟ್ಟು ಹಬ್ಬಕೆ ಅಣಿಯಾಗಬೇಕು...ನಮ್ಮ ವ್ಯಕ್ತಿತ್ವದ ಮಾಪನ ಮಾಡಿಕೊಂಡು ವರ್ಷದಿಂದ ವರ್ಷಕ್ಕೆ ಬೌದ್ಧಿಕವಾಗಿ ಬೆಳೆಯಬೇಕು. ಅದೇ ನಿಜದ ಜನುಮದಿನ, ಸಾರ್ಥಕ ಚಣ....
 
 
 
ಏನಂತೀರಿ??........