ಅಜ್ಞಾತ ಪ್ರಸಂಗಗಳ ಪ್ರದರ್ಶನ ತುಡಿತ
ಮೂರು ತಿಂಗಳ ಹಿಂದೆ ಮಿತ್ರ ಕಿಶೋರ್ ಭಟ್ ಕೊಮ್ಮೆ ಯಕ್ಷಗಾನ ಪ್ರದರ್ಶನವೊಂದಕ್ಕೆ ಆಹ್ವಾನಿಸಿದರು. ಪ್ರಸಂಗ, ವಹಿಸಬೇಕಾದ ಪಾತ್ರ, ಆ ಸನ್ನಿವೇಶಕ್ಕೆ ಒದಗುವ ಭಾಗವತರು, ಪಾತ್ರಕ್ಕಿರುವ ಪದ್ಯಗಳು, ಪಾತ್ರದ ರಂಗ ಅವಕಾಶಗಳು.. ಹೀಗೆ ಹೊಸ ಪರಿಕ್ರಮದ ಮಾಹಿತಿ ನೀಡಿದರು. ಒಪ್ಪಿಕೊಂಡ ಬಳಿಕ ಮಾಹಿತಿಗಳತ್ತ ಆಸಕ್ತನಾದೆ.
ಅಂದಿನ ಪ್ರಸಂಗ – ‘ದುಂದುಭಿ ಆಖ್ಯಾನ’. ರಂಗಕ್ಕೆ ತೀರಾ ಪರಿಚಿತವಾದ ಪ್ರಸಂಗ. ರಾತ್ರಿಯಿಡೀ ಲಂಬಿಸುವ ಕಥಾನಕ. ಬಣ್ಣದ ಮನೆಗೆ ಪ್ರವೇಶಿಸುವಾಗ ಕಿಶೋರ್ ಕಲಾವಿದರಿಗೆ ಕಥಾನಕ, ಸನ್ನಿವೇಶಗಳನ್ನು ವಿವರಿಸುವುದರಲ್ಲಿ ಮಗ್ನರಾಗಿದ್ದರು. ಎಲ್ಲರಲ್ಲೂ ಪ್ರಸಂಗದ ಪ್ರತಿಗಳಿದ್ದುವು. ಓದಿನಲ್ಲಿ ತಲ್ಲೀನರಾಗಿದ್ದರು. ಪರಸ್ಪರ ಸಮಾಲೋಚನೆಗಳು ನಡೆಯುತ್ತಿದ್ದುವು.
ಚೌಕಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಒಟ್ಟೂ ಪ್ರಕ್ರಿಯೆಗಳು ಪ್ರದರ್ಶನದ ಮೇಲೆ ಪರಿಣಾಮಕಾರಿ. ಚಾಲ್ತಿ ಪ್ರಸಂಗಗಳಲ್ಲಿ ಕಲಾವಿದರು ಅಂದಂದಿನ ರಂಗ ಜತೆಗಾರಿಕೆಯ ವಿಚಾರದಲ್ಲಿ ಮಾತುಕತೆಯಾಡುವುದು ವಿರಳ. ಭಾಗವತರೊಂದಿಗೆ ಸಮಾಲೋಚನೆ ದೂರದ ಮಾತು. ಕಲಾವಿದ ಕಲಾವಿದನೊಂದಿಗೆ, ಕಲಾವಿದ ಭಾಗವತರೊಂದಿಗೆ ಒಂದೈದು ನಿಮಿಷ ಸಮಾಲೋಚನೆ ಮಾಡಿದರೂ ಸಾಕು, ಪ್ರದರ್ಶನದಲ್ಲಿ ಗಮನೀಯ ಪರಿಣಾಮ.
ಕಾಸರಗೋಡು ಜಿಲ್ಲೆಯ ಕೋಳ್ಯೂರು ಶಂಕರನಾರಾಯಣ ದೇವಸ್ಥಾನದಲ್ಲಿ ‘ಓಂಕಾರ್ ಫ್ರೆಂಡ್ಸ್’ ಇವರು ವ್ಯವಸ್ಥೆ ಮಾಡುವ ಸಾರ್ವಜನಿಕ ಶನೀಶ್ವರ ಪೂಜೆಯ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ. ಏಳು ವರುಷದಿಂದ ನಿರಂತರ ನಡೆಯುತ್ತಿದೆ. ಅದರಲ್ಲಿ ಕಳೆದ ಮೂರು ವರುಗಳಿಂದ ರಂಗಕ್ಕೆ ಚಿರಪರಿಚಿತವಾದ ಪ್ರಸಂಗಗಳ ಆಯ್ಕೆ. ಅದಕ್ಕೆ ವ್ಯಾಪಕ ಪ್ರಚಾರ. ದೂರದೂರಿನಿಂದ ಪ್ರದರ್ಶನಕ್ಕಾಗಿಯೇ ಆಗಮಿಸುವ ಕಲಾಭಿಮಾನಿ ಸಂದೋಹವು ಪ್ರದರ್ಶನದ ಯಶಸ್ಸಿಗೆ ಸಾಕ್ಷಿ.
ಪ್ರದರ್ಶನ ದಿನದಿಂದ ಮೂರು ತಿಂಗಳ ಮೊದಲೇ ಕಿಶೋರ್ ಬಳಗ ಚುರುಕಾಗುತ್ತದೆ. ಪ್ರಸಂಗವನ್ನು ಆಯ್ಕೆ ಮಾಡುತ್ತದೆ. ನಾಲ್ಕೈದು ಗಂಟೆಗಾಗುವಷ್ಟು ಎಡಿಟ್ ಮಾಡಿಕೊಳ್ಳುತ್ತದೆ. ಪಾತ್ರದ ಸ್ವಭಾವ, ತ್ರಾಣಕ್ಕೆ ಹೊಂದಿಕೊಂಡು ಕಲಾವಿದರ ಆಯ್ಕೆ. ಎಲ್ಲರ ಸಂಪರ್ಕ. ಆಶಯ ನಿರೂಪಣೆ. ಕಲಾವಿದರ ಒಪ್ಪಿಗೆ ಪಡೆದ ಬಳಿಕವೇ ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಗುತ್ತದೆ.
“ನಮ್ಮ ಆಶಯಕ್ಕೆ ಹೊಂದುವ ಕಲಾವಿದರನ್ನೇ ಆಯ್ಕೆ ಮಾಡುತ್ತೇವೆ. ಪಾತ್ರಗಳನ್ನು ಮೊದಲೇ ಸೂಚಿಸುತ್ತೇವೆ. ಪ್ರಸಂಗದ ಪ್ರತಿಯನ್ನೂ ಒದಗಿಸುತ್ತೇವೆ. ಇದರಿಂದಾಗಿ ಕಲಾವಿದರಿಗೆ ಅಧ್ಯಯನ ಮಾಡಲು ಅನುಕೂಲ. ಹೊಸ ಪ್ರಸಂಗವೊಂದರ ಪ್ರದರ್ಶನದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವುದು ಸಾಧ್ಯವಾಗುತ್ತದೆ. ಪ್ರತಿ ವರುಷವೂ ಹೊಸತನ್ನು ಆಯ್ಕೆ ಮಾಡುವುದರಿಂದ ಕಲಾವಿದರೂ ಉತ್ಸುಕರಾಗಿರುತ್ತಾರೆ,” ಎನ್ನುತ್ತಾರೆ ಕಿಶೋರ್ ಭಟ್. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡರೂ ಸಂಘಟಕರ ಆಶಯವನ್ನು ಹಗುರವಾಗಿ ಸ್ವೀಕರಿಸುವವರು ಇಲ್ಲದಿಲ್ಲ!
ಆಹ್ವಾನಿತ ವೃತ್ತಿ ಕಲಾವಿದರು ಕೋಳ್ಯೂರು ಆಟದಲ್ಲಿ ಭಾಗವಹಿಸುತ್ತಾರೆ. ಹೊಸ ಕತೆಯೊಂದರ (ಅಂದರೆ ಹಳೆಯ ಪ್ರಸಂಗ) ಪ್ರದರ್ಶನಕ್ಕೆ ಬೇಕಾದ ಸರ್ವಯತ್ನವನ್ನೂ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮೇಳಗಳ ಕಲಾವಿದರಿಗೆ ದೇವಿಮಹಾತ್ಮೆ, ಕ್ಷೇತ್ರಮಹಾತ್ಮೆಗಳಿಗೆ ಒಗ್ಗಿಸಿಕೊಳ್ಳುವ ಅನಿವಾರ್ಯತೆಯಿದೆ. ಒಂದೇ ಪ್ರಸಂಗ, ಒಂದೇ ಪಾತ್ರ! ನಿತ್ಯವೂ ‘ಸಿದ್ಧ ಸಂಭಾಷಣೆ’ಯೊಳಗೆ ರಿಂಗಣ. ಒಂದು ಪದವೂ ಸೇರುವಂತಿಲ್ಲ, ಬಿಡುವಂತಿಲ್ಲ. ಇಂತಹ ಸ್ಥಿತಿಯಲ್ಲಿ ಕಲಾವಿದರಿಗೂ ಬೇರೆ ಪ್ರಸಂಗದತ್ತ ತುಡಿತವಿರುತ್ತದೆ.
ಈಚೆಗಿನ ಸಂಘಟಕರನ್ನು ಗಮನಿಸಿ. ದೇವಿಮಹಾತ್ಮೆ, ಕ್ಷೇತ್ರ ಮಹಾತ್ಮೆ... ಗಳಂತಹ ಪ್ರಸಂಗ ಹೊರತುಪಡಿಸಿದರೆ ಹೊಸತು ರಂಗಕ್ಕೆ ಬರುವುದಿಲ್ಲ. ಮೇಳಗಳು ಏನೂ ಮಾಡುವ ಹಾಗಿಲ್ಲ. ವೀಳ್ಯ ಕೊಡುವ ಸೇವಾಕರ್ತ ಹೇಳಿದ ಪ್ರಸಂಗವನ್ನು ಆಡಲೇಬೇಕು. ಪ್ರತೀವರುಷವೂ ಆಟ ಆಡಿಸುವ ಸೇವಾಕರ್ತ ಒಂದೇ ಪ್ರಸಂಗಕ್ಕೆ ಅಂಟಿಕೊಳ್ಳುವುದಕ್ಕಿಂತ ಹೊಸ ಹೊಸ ಆಖ್ಯಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಹೀಗೆ ಹೇಳಿದಾಗ ಕಲಾವಿದರಿಗೆ ಕಷ್ಟವಾಗಲಾರದೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಲಾವಿದನಾದವನು ಯಾವುದೇ ಪಾತ್ರ ಮಾಡಲು ಹಿಂಜರಿಯಲಾರ. ಸಂಘಟಕ, ಪ್ರೇಕ್ಷಕರು ಅನುವು ಮಾಡಿಕೊಡಬೇಕಷ್ಟೇ. ಪಾತ್ರಗಳು ರಂಗದಲ್ಲಿ ಅಭಿವ್ಯಕ್ತಿಗೊಂಡಾಗಲೇ ಪಾತ್ರವು ವಶವಾಗುವುದಷ್ಟೇ. ಕೇವಲ ಒಂದೆರಡು ಪ್ರದರ್ಶನಗಳಲ್ಲಿ ಮೌಲ್ಯಮಾಪನ ಮಾಡಲಾಗದು. ಮಾಡಬಾರದು. ಹಿರಿಯ ಕಲಾವಿದ ವಾಸುದೇವ ಸಾಮಗರೊಮ್ಮೆ ಹೇಳಿದ ಮಾತು ನೆನಪಾಗುತ್ತದೆ, “ಒಂದೆರಡು ವೇಷವನ್ನು ನೋಡಿ ಕಲಾವಿದನ ಯೋಗ್ಯತೆಯನ್ನು ಅಳೆಯಲು, ವಿಮರ್ಶೆ ಮಾಡಲು ಸಾಧ್ಯವಿಲ್ಲ.”
ಹಿರಿಯರು ಮಾತಿಗೆ ಸಿಕ್ಕಾಗಲೆಲ್ಲಾ ಮೂರ್ನಾಲ್ಕು ದಶಕದ ಹಿಂದಿನ ಪ್ರದರ್ಶನಗಳು ವೈಭವ ಪಡೆಯುತ್ತದೆ. ನಳದಮಯಂತಿ, ಹರಿಶ್ಚಂದ್ರ ಚರಿತೆ, ಸತ್ಯವಾನ್ ಸಾವಿತ್ರಿ.. ಮೊದಲಾದ ಮೌಲಿಕ ಪ್ರಸಂಗಗಳು ರಂಗದಲ್ಲಿ ವಿಜೃಂಭಿಸಿದ ದಿನಮಾನಗಳಿದ್ದುವಲ್ಲಾ. ಅದನ್ನು ಒಪ್ಪಿಕೊಳ್ಳುವ ಪ್ರೇಕ್ಷಕರಿದ್ದರಲ್ಲಾ. ರಂಗದಲ್ಲಿ ಪಾತ್ರವು ಅತ್ತಾಗ ಪ್ರೇಕ್ಷಕರೂ ಕಣ್ಣೊರೆಸಿಕೊಳ್ಳುತ್ತಿದ್ದಲ್ಲಾ. ಉತ್ತಮ ಪ್ರದರ್ಶನ ನೀಡಿದರೆ ಈಗಲೂ ಕಣ್ಣೊರೆಸಿಕೊಳ್ಳುವ ಪ್ರೇಕ್ಷಕರಿದ್ದಾರೆ.
ಕೋಳ್ಯೂರು ಪ್ರದರ್ಶನದ ಆಯೋಜಕರು ಪ್ರಸಂಗದ ಆಯ್ಕೆಯಲ್ಲಿ ಬದಲಾವಣೆಯ ಎಳೆಯೊಂದರ ಜಾಡು ಹಿಡಿದಿದ್ದಾರೆ. ಕಳೆದ ವರುಷ ಮೂಲಕಾಸುರ ಕಾಳಗ, ಹಿಂದಿನ ವರುಷ ಕರಂಡಕಾಸುರ ವಧೆ ಪ್ರಸಂಗಗಳನ್ನು ರಂಗಕ್ಕೆ ತಂದಿತ್ತು. “ಮೂರು ಪ್ರಸಂಗಗಳ ಶೋ ಬಳಿಕ ಪ್ರೇಕ್ಷಕರಿಂದ ಉತ್ತಮ ಹಿಮ್ಮಾಹಿತಿ ಬಂದಿದೆ. ಮುಂದಿನ ವರುಷದ ಯಾವುದೆಂದು ಕೇಳಲು ಶುರುಮಾಡಿದ್ದಾರೆ,” ಎಂದು ಕಿಶೋರ್ ಕಣ್ಣುಮಿಟುಕಿಸಿದರು! ಕಿಶೋರ್ ಜತೆಯಲ್ಲಿ ಹೆಗಲೆಣೆಯಾಗಿ ದುಡಿಯುವ ನಿಜಾಸಕ್ತ ತಂಡವಿದೆ. ಕಲಾವಿದ ವಿಠಲ ಭಟ್ ಮೊಗಸಾಲೆಯವರಿಗೆ ಪ್ರಸಂಗದ ಆಯ್ಕೆಯ ಜವಾಬ್ದಾರಿ. ಇಡೀ ತಂಡ ಪ್ರಸಂಗವನ್ನು ಓದಿ ನಿರ್ಧಾರಕ್ಕೆ ಬರುತ್ತಾರೆ.
ರಂಗಕ್ಕೆ ಬಾರದ ಪ್ರಸಂಗಗಳು ಅಗಣಿತ. ಅಚ್ಚಾಗಿದ್ದರೂ ಕಪಾಟಿನಲ್ಲಿ ಭದ್ರವಾಗಿವೆ. ‘ಸಂಘಟಕರಿಗೆ ಅರಿವಿರುವುದಿಲ್ಲ. ಮೇಳಗಳು ಹೇಳವು. ಕಲಾವಿದ ಅಸಹಾಯಕ’ ಎನ್ನುವ ವ್ಯವಸ್ಥೆಯ ಕೂಪದಲ್ಲಿ ರಂಗ ಸುತ್ತುತ್ತಿರುವಾಗ ಹೊಸ ಆಖ್ಯಾನಗಳ ಸುದ್ದಿಯನ್ನು ಹೇಳುವವರಾರು? ಕೇಳುವವರಾರು? ಅಜ್ಞಾತವಾಗಿರುವ ಪ್ರಸಂಗಗಳು ಪ್ರದರ್ಶನ ತುಡಿತದಲ್ಲಿವೆ.
ಈ ಹಿನ್ನೆಲೆಯಲ್ಲಿ ಕೋಳ್ಯೂರು ತಂಡದ ಪರಿಶ್ರಮವು ಎದ್ದು ಕಾಣುತ್ತದೆ.