ನನಗೆ ಪ್ರಮೋಷನ್ ಸಿಗಲೇ ಇಲ್ಲ

ನನಗೆ ಪ್ರಮೋಷನ್ ಸಿಗಲೇ ಇಲ್ಲ

ದೊಡ್ಡ ಕುಟುಂಬದಲ್ಲಿ ಅಂದರೆ ಅವಿಭಕ್ತ ಕುಟುಂಬಗಳಲ್ಲಿ ಇರುವವರಿಗೆ ಸಿಗುವ ಅನುಭವ ಸಾಗರದಷ್ಟು. ಮನೆ ತುಂಬಾ ಜನ. ಅದಕ್ಕೆ ಸರಿಯಾಗಿ ನೋವು-ನಲಿವುಗಳೂ ಜಾಸ್ತಿಯೇ. ದಿನದ ತಿಂಡಿ ಊಟಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು ನಮಗೆ 'ಚಿಲ್ಲರೆ' ಕೆಲಸ ಕೊಡುತ್ತಿದ್ದರು. ಉದಾಹರಣೆಗೆ ಚಪಾತಿ ಮಾಡುವಾಗ ದೊಡ್ಡ ಬೋಗುಣಿಯಲ್ಲಿ ಹಿಟ್ಟು ಕಲೆಸೋದು-ನಾದೋದು ಅಕ್ಕ ಮಾಡಿದರೆ, ಒಂದೇ ಗಾತ್ರದ ಉಂಡೆ ಮಾಡಿ ಜೋಡಿಸಿಡೋದು ನನ್ನ ಪಾಲಿನ ಕೆಲಸ. ಲಟ್ಟಿಸಿ, ಬೇಯಿಸೋದು ಇನ್ನೊಬ್ಬರ ಕೆಲಸ ಹೀಗೇ..... 
ಇನ್ನು ಹಬ್ಬ-ಹರಿದಿನ, ಹೋಮ-ಹವನ ಇದ್ದರಂತೂ ಈ ಚಿಲ್ಲರೆ ಕೆಲಸ ಬೇರೆ ಬೇರೆ ಥರಹದ್ದು. ಅಣ್ಣಂದಿರು, ಮಾವಂದಿರು, ಭಾವಂದಿರು ಮಡಿಯಲ್ಲಿ 'ನಾ ಮುಂದು ತಾ ಮುಂದು' ಅಂತ ಅಡುಗೆ ಮಾಡ್ತಿದ್ದರಿಂದ ಅಲ್ಲೂ ಚಿಕ್ಕ- ಪುಟ್ಟ ಕೆಲಸಕ್ಕೆ ಕರಿಯೋರು. ಸಿಹಿ ಬುಂದಿ ಮಾಡಿದರೆ ಲಾಡು ಕಟ್ಟೋದು, ತುರಿದ ಕೊಬ್ಬರಿ ಎತ್ತಿಡೋದು, ಕತ್ತರಿಸಿದ ತರಕಾರಿಯನ್ನು ಜೋಪಾನವಾಗಿ ಪಾತ್ರೆಗೆ ಹಾಕಿಡೋದು , ಕುಂಕುಮ-ಅರಿಸಿನ ಪಟ್ಟಿಗೆ ಸಹಾಯ ಮಾಡೋದು, ತಾಂಬೂಲಕ್ಕೆ ಎರಡು ವೀಳೇದೆಲೆ, ಅಡಿಕೆ ಜೋಡಿಸೋ ಕೆಲಸ, ಊಟಕ್ಕೆ ಕೂತವರಿಗೆ ನೀರು ಬಡಿಸೋದು, ಉಪ್ಪು-ಉಪ್ಪಿನಕಾಯಿ ನೀಡೋದು, ದೊಡ್ಡ ದೊಡ್ಡ ರಂಗೋಲೆ ಹಾಕಿದರೆ ಬಣ್ಣ ತುಂಬೋದು.....ಇತ್ಯಾದಿ .. 
 

ಹೂ ಕಟ್ಟಲು ಕೂತರಂತೂ ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಕ್ಕ, ಅತ್ತಿಗೆ ಎಲ್ಲರಿಗೂ ನಾವೊಂದಷ್ಟು ಚಿಕ್ಕ ಮಕ್ಕಳು ಇರಲೇ ಬೇಕು, ಎರೆಡೆರಡು ಹೂ ಜೋಡಿಸಕ್ಕೆ. ಕನಕಾಂಬರ, ಮಲ್ಲಿಗೆ, ಕಾಕಡ ಎಲ್ಲಾ ಬಗೆಯ ಹೂವಿನ ರಾಶಿಯಲ್ಲಿ ಜೊತೆ ಮಾಡಿ ಮಾಡಿ ಇಟ್ಟರೆ ಅವರುಗಳು ಹೂ ಹಾರ ಕಟ್ಟಲು ಅನುಕೂಲವಾಗುತ್ತಿತ್ತು. ನನಗೆ ಯಾವಾಗ ಈ ಎರಡು ಹೂ ಜೊತೆ ಮಾಡೋ ಸ್ಥಿತಿಯಿಂದ ನಾನೇ ಹೂ ಹಾರ ಕಟ್ಟುವ ಪ್ರಮೋಷನ್ ಸಿಗುತ್ತೆ ಅನ್ನೋ ತವಕ. ಆ ಜೋರು, ದರ್ಪ ನಾನೂ ಅನುಭವಿಸೋ ಹೆಬ್ಬಯಕೆ... ನಾನು ದೊಡ್ಡವಳಾಗೋ ಹೊತ್ತಿಗೆ ಈ ಸಂಭ್ರಮ-ಸಡಗರ ಎಲ್ಲಾ ಹೋಗಿ ರೆಡಿಮೇಡ್ ಹೂ ಹಾರ ಇನ್ನೂ ಅಗ್ಗಕೆ ಸಿಕ್ಕಿ ಎಲ್ಲರ ಮುಂದೆ ಜೋರು ಮಾಡಿ ಹೂ ಕಟ್ಟೋ ನನ್ನ ಪ್ರಮೋಷನ್ ಕನಸು ಹಾಗೇ ಉಳಿದುಬಿಟ್ಟಿತು. 

ನೆನಪಿನ ಬುತ್ತಿಯಲ್ಲಿ ಚಿರಸ್ಥಾಯಿಯಾಯಿತು.....

PC : Google