ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ
"ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ೧೦,೦೦೦ ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆ ಇಲಾಖೆಯ ಸಚಿವ ಎಚ್.ಕೆ.ಪಾಟೀಲರು ತಿಳಿಸಿದ್ದಾರೆ. ಈ ಹಗರಣ ನಡೆದದ್ದು ೨೦೦೯ರಿಂದ ೨೦೧೩-೧೪ರ ಅವಧಿಯಲ್ಲಿ, ೧೦೬ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ.
೧೮ ನವಂಬರ್ ೨೦೧೬ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು ಇಲಾಖೆಯಲ್ಲಿ "ಕಳ್ಳ ಠೇವಣಿ” ಹಗರಣ ಬೆಳಕಿಗೆ ಬಂದ ಬಳಿಕ ತನಿಖೆ ನಡೆಸಲು ಪುನಟಿ ಶ್ರೀಧರ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ವರದಿಯ ಅಧಾರದಲ್ಲಿ ಲೆಕ್ಕಪರಿಶೋಧನೆ ಕೈಗೊಳ್ಳಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕ ಬಿ.ಎನ್. ಶಿವರುದ್ರಪ್ಪ ಅವರು ಮುಖ್ಯಸ್ಥರಾದ ಸಮಿತಿ ನೇಮಿಸಲಾಗಿತ್ತು. ಇದೀಗ ಶಿವರುದ್ರಪ್ಪ ಸಮಿತಿ ವರದಿ ನೀಡಿದ್ದು, ಅದರಂತೆ ಇಲಾಖೆಯಲ್ಲಿ ೧೦,೦೦೦ ಕೋಟಿ ರೂಪಾಯಿ ಅಕ್ರಮ ವಹಿವಾಟು ನಡೆದಿರುವುದು ಪುರಾವೆಗಳ ಸಹಿತ ಸಾಬೀತಾಗಿದೆ ಎಂದರು.
ಈಗ ಸಮಿತಿಯ ಶಿಫಾರಸಿನಂತೆ, ಕರ್ನಾಟಕ ರಾಜ್ಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆಯ ಅಂದಿನ (೨೦೦೯-೧೪) ನಿರ್ದೇಶಕ ನಿವೃತ್ತ ಐ.ಎ.ಎಸ್. ಡಾ. ಪಿ.ಬೋರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಆಗ ಉಪ ಕಾರ್ಯದರ್ಶಿ ಆಗಿದ್ದ ರಾಮಕೃಷ್ಣ, ಸಿಂಡಿಕೇಟ್ ಬ್ಯಾಂಕ್ ಮತ್ತು ಟಿ.ಎಸ್. ಗಿರಿ ಆಂಡ್ ಅಸೋಸಿಯೇಟ್ಸ್ ಲೆಕ್ಕ ಪರಿಶೋಧನಾ ಸಂಸ್ಥೆ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಚಿವರು ತಿಳಿಸಿದರು."
ಇದು, ೧೯ ನವಂಬರ್ ೨೦೧೬ರ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಸಾರಾಂಶ. ಗಮನಿಸಿ: ಒಂದೆರಡಲ್ಲ, ೧೦,೦೦೦ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ನಂತರದ ೬೯ ವರುಷಗಳಲ್ಲಿ ಪ್ರತಿ ವರುಷವೂ ಗ್ರಾಮೀಣಾಭಿವೃದ್ಧಿಗೆ ಸರಕಾರಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಆಯ-ವ್ಯಯ ಪತ್ರ (ಬಜೆಟ್)ದಲ್ಲಿ ಮೀಸಲಾಗಿಸಿದ್ದರೂ, ನಮ್ಮ ಗ್ರಾಮಗಳು ಇಂದಿಗೂ ಯಾಕೆ ಹೀಗಿವೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತದಲ್ಲಿವೆ ಆರು ಲಕ್ಷ ಮಿಕ್ಕಿದ ಗ್ರಾಮಗಳು. ಅವುಗಳಲ್ಲಿ ಬಹುಪಾಲು ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಪೌಷ್ಠಿಕ ಆಹಾರ ಈಗಲೂ ಎಲ್ಲ ಕುಟುಂಬಗಳಿಗೆ ಸಿಗುತ್ತಿಲ್ಲ. ಸಾವಿರಾರು ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳೂ ಆರೋಗ್ಯ ಕೇಂದ್ರಗಳೂ ಇಲ್ಲ. ಅಲ್ಲಿ ನೈರ್ಮಲ್ಯವೂ ಇಲ್ಲ, ರಸ್ತೆಗಳೂ ಇಲ್ಲ. ಇದಕ್ಕೆಲ್ಲ ಕಾರಣ, ಈ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೀಸಲಾಗಿಟ್ಟ ಕೋಟಿಕೋಟಿ ರೂಪಾಯಿಗಳನ್ನು ಹೀಗೆ ಕೊಳ್ಳೆ ಹೊಡೆದದ್ದು.
ಈ ದಂಧೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಜಿಲ್ಲಾ/ತಾಲೂಕು/ಗ್ರಾಮ ಪಂಚಾಯತುಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ - ಎಲ್ಲರು ಪಾಲುದಾರರು. ಈ ಹಗರಣದಲ್ಲಿ, ಲೆಕ್ಕಪತ್ರ ಪರಿಶೀಲನೆ ನಡೆಸಿದ ಶಿವರುದ್ರಪ್ಪ ಸಮಿತಿಯ ವರದಿ ಹೀಗೆಂದಿದೆ: ನೀರು ಮತ್ತು ನೈರ್ಮಲ್ಯ ಯೋಜನೆಗೆ ೨೦೦೯ರಿಂದ ೨೦೧೪ರ ವರೆಗೆ ಬಿಡುಗಡೆಯಾದ ಅನುದಾನದ ದುರ್ಬಳಕೆ ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಗೊತ್ತಿದ್ದರೂ ಕ್ರಮ ಜರಗಿಸದೇ ಇರುವುದು ತೀವ್ರ ಮತ್ತು ಗಂಭೀರ ಅಕ್ರಮ.
ಈ ಹಗರಣದಲ್ಲಿ ಅಂತಿಮವಾಗಿ ಯಾರಿಗೆ ಶಿಕ್ಷೆಯಾಗುತ್ತದೆ, ಕಾದು ನೋಡೋಣ. ಎಲ್ಲಿಯ ವರೆಗೆ ಇಂಥ ಅಕ್ರಮ ಎಸಗಿದವರಿಗೆ ಶಿಕ್ಷೆ ಆಗುವುದಿಲ್ಲವೋ ಅಲ್ಲಿಯ ವರೆಗೆ ಇಂತಹ ಅಕ್ರಮಗಳು ನಡೆಯುತ್ತಲೇ ಇರುತ್ತವೆ, ಅಲ್ಲವೇ? ಈಗಲೂ, ಯಾವುದೇ ಇಲಾಖೆಯ ಯಾವುದೇ ಜನಪರ ಯೋಜನೆಯಲ್ಲಿ ಸಹಾಯಧನ ಬಿಡುಗಡೆ ಆಗಬೇಕಾದರೆ, ಅಧಿಕಾರಿಗಳಿಗೆ ಲಂಚ ಕೊಡಬೇಕೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗ್ರಾಮೀಣಾಭಿವೃದ್ಧಿ ಸಚಿವರು ಇದನ್ನು ನಿಲ್ಲಸಲು ಏನು ಕ್ರಮ ಕೈಗೊಳ್ಳುತ್ತಾರೆ, ಕಾದು ನೋಡೋಣ.
ಕೊನೆಗೊಂದು ಮಾತು: ಇಂತಹ ಅನ್ಯಾಯಗಳು ನಿಲ್ಲಬೇಕಾದರೆ, ಅಕ್ರಮ ಹಣದ ದುರಾಶೆ ತುಂಬಿರುವ ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಸಿಬ್ಬಂದಿಯ ಮನಪರಿವರ್ತನೆ ಆಗಬೇಕು. ಅದಕ್ಕಾಗಿ, ನಾವು ಈ ಭೂಮಿ ತೊರೆದು ಹೋಗುವಾಗ ಏನನ್ನೂ ಒಯ್ಯಲಾಗದೆಂಬ ಸತ್ಯ ಒಪ್ಪಿಕೊಳ್ಳಬೇಕು. ಇದನ್ನೇ, ಮಾನ್ಯ ಡಿ.ವಿ. ಗುಂಡಪ್ಪನವರು ಒಂದು ಮುಕ್ತಕದಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ:
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ
ಜೀರ್ಣಿಸದ ಋಣಶೇಷ - ಮಂಕುತಿಮ್ಮ