ನಗರದಲ್ಲಿರಲಾರೆ ಹಳ್ಳಿಗೆ ಹೋಗಲಾರೆ
ಹುಟ್ಟಿದ್ದೇನೋ ಹಳ್ಳಿಯಲ್ಲಿ. ಆದರೆ ಈವರೆಗಿನ ನನ್ನ ಜೀವನದಲ್ಲಿ ಓದು ಹಾಗೂ ವೃತ್ತಿಯ ದೆಸೆಯಿಂದ ನಗರಗಳಲ್ಲಿ ಉಳಿದ ವರ್ಷಗಳೇ ಹೆಚ್ಚು. ಪೇಟೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ, ಯಾವ್ಯಾವುದೋ ವ್ಯವಹಾರಗಳಲ್ಲಿ ನನ್ನ ಕಾಲು ಹೂತು ಹೋದಷ್ಟೂ ಹಳ್ಳಿಯತ್ತ ಕಾಲು ಕೀಳುವ ಮನಸ್ಸಾಗುತ್ತದೆ. ದೂರ ಹೋದಷ್ಟೂ ಹಳ್ಳಿ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಆದರೆ ನಿಜವೆಂದರೆ ಹಳ್ಳಿಗೆ ಹೋಗಿ ಎಂಟು ದಿನಗಳ ಮೇಲೆ ಅಲ್ಲಿರಲಾರೆ. ಅಲ್ಲಿಯ ಕೆಲಸಗಳು ನಮಗೆ ಬರುವುದಿಲ್ಲ. ನಮ್ಮ ಕೆಲಸಗಳನ್ನು ಅಲ್ಲಿ ಮಾಡಲಾಗದು. ನಮ್ಮ ಸಮಾನಾಸಕ್ತರೂ ಅಲ್ಲಿಲ್ಲ. ಅಲ್ಲಿರುವ ಹೊಸ ತಲೆಮಾರಿನ ಹುಡುಗರ ಪರಿಚಯವೇ ಇರುವುದಿಲ್ಲ. ಹಳ್ಳಿಯ ನಮ್ಮ ಮನೆಯಲ್ಲೇ ಪರಕೀಯ ಪ್ರಜ್ಞೆಯನ್ನು ಅನುಭವಿಸಬೇಕಾಗುತ್ತದೆ.'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಮಾತು ಅಕ್ಷರಶಃ ನಿಜವೆಂದು ಆಗೆಲ್ಲ ಅನಿಸಿದೆ.
ಜೀವನದಲ್ಲಿ ಎಷ್ಟೋ ಆಸೆಗಳಿರುತ್ತವೆ, ಕನಸುಗಳಿರುತ್ತವೆ, ಆದರೆ ಕನಸುಗಳಿಗೂ ವಾಸ್ತವಗಳಿಗೂ ಅಂತರವಿದೆಯೆಂಬುದು ಪ್ರತಿಯೊಬ್ಬರಿಗೂ ತಡವಾಗಿ ಅರಿವಿಗೆ ಬರುತ್ತದೆ. ಕನಸು ಕಾಣುವ ಮನಸು ಬೇಕು. ಆದರೆ ಕಾಣುವ ಕನಸು ವಾಸ್ತವಕ್ಕೆ ಹತ್ತಿರವಾಗಿರಬೇಕು. ಇಲ್ಲವಾದರೆ ಭ್ರಮನಿರಸನವಾಗುತ್ತದೆ. ಇದು ಪರೀಕ್ಷೆಯಲ್ಲಿ ಖಾಲಿ ಹಾಳೆ ಕೊಟ್ಟ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆಯುವ ಕನಸಿನಂತೆ ಆಗುತ್ತದೆ. ಚಿಕ್ಕಂದಿನಿಂದ ಮಲೆನಾಡಿನ ಕಾಡು, ಹೊಳೆ, ಮನೆಗಳನ್ನು ಇಷ್ಟಪಡುತ್ತ ಬೆಳೆದ ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ಇನ್ನು ಕೆಲವು ವರ್ಷ ಇಲ್ಲಿರುತ್ತೇನೆ, ಆಮೇಲೆ ವಾಪಸ್ಸು ಊರಿಗೆ ಹೋಗುತ್ತೇನೆ ಎಂತಲೇ ಅಂದುಕೊಂಡಿದ್ದೆ. ಹಾಗೆಂದು ಗೆಳೆಯರ ಬಳಿ ಹೇಳುತ್ತಿದ್ದೆ ಕೂಡಾ. ಕೆನಡಾದ ಆಧುನಿಕ ಬದುಕಿನ ಉತ್ತುಂಗ ಉದಾಹರಣೆಗಳೆನಿಸುವ ಮಾಲುಗಳಲ್ಲಿ ನಿಂತಾಗ ಕೂಡ ನನಗೆ ಕಾಡಿದ್ದು ನಮ್ಮ ಹಳ್ಳಿಯೇ ಆಗಿತ್ತು. ಆದರೆ ಇಷ್ಟು ವರ್ಷ ವೃತ್ತಿಯ ಕಾರಣದಿಂದ ನಗರ ವಾಸಿಯಾಗಿ ಉಳಿದು ಇಲ್ಲೇ ಸ್ವಂತ ಸೂರು ಹೊಂದಿ, ಮಕ್ಕಳು ಇಲ್ಲೇ ಹುಟ್ಟಿ ಬೆಳೆದು ದೊಡ್ಡವರಾಗಿರುವಾಗ ಹಳ್ಳಿಗೆ ವಾಪಸ್ಸು ಹೋಗುವುದು ಸುಲಭವಲ್ಲ ಎನಿಸುತ್ತಿದೆ. ನಾನು ಈಗ ಬರೇ ನಾನಲ್ಲ. ಮಡದಿಗೆ ಗಂಡ, ಮಕ್ಕಳಿಗೆ ಅಪ್ಪ, ಎಷ್ಟೋ ಸಂಘ ಸಂಸ್ಥೆಗಳ ಭಾಗ. ಅವರ ಬಿಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲು ನಾನು ಸ್ವತಂತ್ರನಲ್ಲ. ಈಗ ಮಕ್ಕಳು ಹೇಳುತ್ತಾರೆ: 'ಅಜ್ಜನ ಊರು ಸಿದ್ದಾಪುರ, ನಿನ್ನೂರು ವಾನಳ್ಳಿ, ಆದರೆ ನಮ್ಮೂರು ಮೈಸೂರು' ಅಂತ! ಅವರು ಹೇಳುವುದರಲ್ಲಿ ಸತ್ಯವಿಲ್ಲವೆನ್ನುವುದು ಹೇಗೆ?
ಆದರೆ ತರ್ಕಕ್ಕಲ್ಲ, ಏಕಾಂಗಿ ಕುಳಿತು ಇಂದು ನಮ್ಮ ಹಳ್ಳಿಯ ಜೀವನವನ್ನು ಹಾಗೂ ನಗರ ಜೀವನವನ್ನು ಹೋಲಿಸಿ ನೋಡುವಾಗ ಎರಡೂ ಜೀವನಗಳ ವಾಸ್ತವ ಕಣ್ಣಿಗೆ ರಾಚಿ ಕಣ್ಣು ಮಂಜಾಗುತ್ತದೆ. ಯಾವುದು ಹೆಚ್ಚು ಯಾವುದು ಕಡಿಮೆಯೆನ್ನುವುದು ಅಸಾಧ್ಯವಾಗುತ್ತದೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮಾನಸಿಕ ಸ್ಥಿತಿ ಮತ್ತೆ ನಿರ್ಮಾಣವಾಗುತ್ತದೆ. ಇತ್ತೀಚೆಗೆ ನನ್ನ ಹತ್ತಿರದ ಸಂಬಂಧಿ ಯುವಕ " ಚಿಕ್ಕಪ್ಪ ಇನ್ನು ನಗರದಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ, ನಾನು ಹಳ್ಳಿಗೆ ವಾಪಸ್ಸು ನಡೆಯುತ್ತೇನೆ" ಎಂದ. ಆತ ಕಷ್ಟಪಟ್ಟು ಇಂಜಿನಿಯರ್ ಆಗಿದ್ದಾನೆ. ಬೆಂಗಳೂರಲ್ಲಿ ಕೆಲಸದಲ್ಲಿದ್ದಾನೆ. ಎರಡು ವರ್ಷ ಬೆಂಗಳೂರಲ್ಲಿ ಇಂಜಿನಿಯರ್ ಎನಿಸಿಕೊಂಡರೂ ಅವನಿಗೆ ಕೆಲಸ ತೃಪ್ತಿ ತಂದಿಲ್ಲ. ಈ ನಗರ ಜೀವನ ನನ್ನ ಆಸಕ್ತಿಗಳನ್ನೆಲ್ಲ ಹೊಸಕಿಹಾಕಿ ಬಿಟ್ಟಿದೆ, ಮೊದಲು ನಾನು ಎಷ್ಟು ಪುಸ್ತಕಗಳನ್ನು ಓದುತ್ತಿದ್ದೆ, ಚಿತ್ರ ಬಿಡಿಸುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ಕಾಡಲ್ಲಿ ಅಲೆಯುವುದರಲ್ಲಿ ಎಷ್ಟೊಂದು ಖುಷಿ ಕಂಡಿದ್ದೆ, ಈ ಬೆಂಗಳೂರಿಗೆ ಬಂದ ಮೆಲೆ ಏನೂ ಸಾಧ್ಯವಾಗುತ್ತಿಲ್ಲ, ದಿನಾ ಬೆಳಿಗ್ಗೆ ಏಳುವುದು, ಯಂತ್ರದ ಹಾಗೆ ಕೆಲಸ ಮಾಡುವುದು, ಸಂಜೆ ಸುಸ್ತಾಗಿ ಬಂದು ಹಾಸಿಗೆಯ ಮೇಲೆ ದೊಪ್ಪನೆ ಬಿದ್ದು ಕೊಳ್ಳುವುದು- ಮತ್ತೆ ಬೆಳಗಾಗುತ್ತದೆ! ಯಾರನ್ನೋ ದೊಡ್ಡದು ಮಾಡಲು ನಾನು ಯಾಕೆ ದುಡಿಯಬೇಕೆಂದು ಅವನಿಗೆ ಈಗ ಅನಿಸುತ್ತಿದೆ. 'ಊರಿಗೆ ಹೋಗುತ್ತೇನೆ, ಸ್ವತಂತ್ರವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ, ಇನ್ನೇನೋ ಖುಷಿ ಬಂದಿದ್ದು ಮಾಡುತ್ತೇನೆ. ಈ ನಗರ ಬದುಕು ಸಾಕು' ಎಂದ.
ಈ ಯುವಕನ ನಿರ್ಧಾರ ಕಂಡು ನನಗೆ ಒಂಥರಾ ಖುಷಿ, ಒಂಥರಾ ದಿಗಿಲು. ಹಳ್ಳಿ ಹಳ್ಳಿಗಳೇ ಖಾಲಿಯಾಗುತ್ತಿರುವಾಗ ಒಬ್ಬನಾದರೂ ಹಳ್ಳಿಗೆ ವಾಪಸ್ಸು ಬರುವ ಮನಸ್ಸು ಮಾಡುತ್ತಿದ್ದಾನಲ್ಲ ಎಂಬುದು ಖುಷಿಗೆ ಕಾರಣ. ಆದರೆ ಹೀಗೆ ಉತ್ಸಾಹದಿಂದ ಹಳ್ಳಿಗೆ ಹೋದವರು ಕೆಲವೇ ವರ್ಷಗಳಲ್ಲಿ ತೀವ್ರ ಅತೃಪ್ತಿಯಿಂದ ವಾಪಸ್ಸು ಬಂದ ಉದಾಹರಣೆಗಳು ಕಣ್ಣೆದುರಿಗಿರುವಾಗ ಯಾವ ಧೈರ್ಯದ ಮೇಲೆ ಈ ಯುವಕನನ್ನು ಹಾರೈಸಲಿ ಎಂಬ ದಿಗಿಲು. ಎಲ್ಲಕ್ಕೂ ಮೊದಲು, 'ಹಳ್ಳಿಗೆ ಹೋದರೆ ನಿನಗೆ ಹೆಣ್ಣುಕೊಡುವವರಿಲ್ಲ ಮಾರಾಯ, ಮದುವೆ ಮಾಡಿಕೊಂಡಮೇಲೆ ಹಳ್ಳಿಗೆ ಹೋಗುವ ಯೋಚನೆ ಮಾಡುವುದೊಳಿತು ಎಂದು ಎಚ್ಚರಿಸಿದೆ. ಅದಕ್ಕೆ ಅವನ ಬಳಿ ಉತ್ತರ ಸಿದ್ಧವಿತ್ತು. 'ನನ್ನ ಹಾಗೆ ಯೋಚನೆಮಾಡುವ ಕೆಲವು ಹುಡುಗಿಯರಾದರೂ ಇದ್ದೇ ಇರುತ್ತಾರಲ್ಲ, ಸಿಗುತ್ತಾರೆ ಬಿಡು' ಎಂದ. ಹುಡುಗನ ದೃಢತೆ ಇಷ್ಟವಾಯಿತು.
ಹತ್ತಿರದಿಂದ ಗಮನಿಸಿರುವಂತೆ ಇವತ್ತು ಹಳ್ಳಿಗಳು ಖಾಲಿಯಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ತಲತಲಾಂತರದಿಂದ ವಾಸವಿದ್ದ ಜಾಗ-ಜಮೀನುಗಳನ್ನು ಪಾಳುಬಿಟ್ಟು ನಗರಗಳತ್ತ ವಲಸೆ ಬರುವುದು ನಮ್ಮ ರೈತರಿಗೆ, ಕೂಲಿ ಕಾರ್ಮಿಕರಿಗೆ ಖುಷಿಯ ವಿಚಾರವೇನೂ ಅಲ್ಲ. ಆದರೆ ಹಳ್ಳಿಗಳಲ್ಲಿ ಬದುಕು ಸಾಧ್ಯವಿಲ್ಲ ಎನಿಸಿದಾಗ ಇನ್ನೇನು ಮಾಡುವುದು? ನಮ್ಮ ಅಭಿವೃದ್ಧಿಯ ಮಾನದಂಡಗಳಲ್ಲಿ ನಗರೀಕರಣ ಕೂಡಾ ಒಂದು. ನಗರೀಕರಣವೇ ಅಭೀವೃದ್ಧಿಯ ಹಾದಿ ಹಾಗೂ ಗುರಿ ಕೂಡಾ. ಹೀಗಿರುವಾಗ ಹಳ್ಳಿಯ ಅಭಿವೃದ್ಧಿ ಎಂಬುದು ಸರ್ಕಾರದ ಘೋಷಣೆಗೆ ಮಾತ್ರ. ಹಳ್ಳಿಗಳು ಇಲ್ಲಗಳ ಕೊಂಪೆಗಳಾಗಿ, ಇಲ್ಲಿನ ಬದುಕು ನರಕ ಸದೃಶವಾಗಿ ಉಳಿದುಬಿಡುತ್ತವೆ. ಆಗ ನಗರಗಳ ಕೊಳೆಗೇರಿಗಳು ಕೂಡಾ ಹಳ್ಳಿಯವರಿಗೆ ಆಕರ್ಷಕವಾಗಿ ಕಾಣುತ್ತವೆ! ಇದು ಕಾರಣ ನಿರಂತರವಾಗಿ ನಗರಗಳಲ್ಲಿ ಕೊಳೆಗೇರಿಗಳ ನಿರ್ಮಾಣವಾಗುತ್ತದೆ.
ಹಿಂದೆಲ್ಲ ಏನಾಗುತ್ತಿತ್ತೆಂದರೆ ಮೇಲ್ವರ್ಗದವರು ಭೂಮಾಲಿಕರಾಗಿದ್ದರು. ಅಥವಾ ಭೂ ಮಾಲಿಕರಾದವರು ಮೇಲ್ವರ್ಗದವರಾದರು. ಭೂರಹಿತರು ಭೂಮಾಲಿಕರ ಜಮೀನುಗಳಲ್ಲಿ ದುಡಿಯುತ್ತ, ಕೆಲವರು ಜೀತಮಾಡುತ್ತ ಕೆಳವರ್ಗದವರಾದರು. ಸ್ವಾತಂತ್ರ್ಯಾನಂತರ ಸರ್ಕಾರದ ಸಮಾನತೆಯ ಕಾರ್ಯಕ್ರಮಗಳು ಫಲಕೊಟ್ಟವು. ದೇವರಾಜ ಅರಸರ ಭೂಸುಧಾರಣೆ ಕಾರ್ಯಕ್ರಮವಂತೂ ನಮ್ಮ ರಾಜ್ಯದಲ್ಲಿ ಕ್ರಾಂತಿ ಉಂಟುಮಾಡಿತು. ಭೂರಹಿತರು ಭೂಮಾಲಿಕರಾದರು. ಅವರಲ್ಲಿ ಎಲ್ಲಾ ಜಾತಿ ಪಂಗಡಗಳವರೂ ಧರ್ಮಗಳವರೂ ಇದ್ದರು. ಹೊಸ ಆರ್ಥಿಕ ವರ್ಗಗಳು ಹುಟ್ಟಿಕೊಂಡವು.( ವಿಚಿತ್ರವೆಂದರೆ ಅರಸರ ಭೂಸುಧಾರಣೆ ಒಂದು ಸುತ್ತು ಬಂದು ಹೊರಟಲ್ಲಿಗೇ ಬಂದು ನಿಂತಿದೆ) ಈ ಹೊತ್ತಿಗಾಗಲೇ ಆಗಲೇ ಮುಂದುವರಿದವರೆನಿಸಿಕೊಂಡವರು ಹಳ್ಳಿಯನ್ನು ತೊರೆದು ಬಿಟ್ಟಿದ್ದರು. ನಗರಗಳಲ್ಲಿ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡು ಗಟ್ಟಿಯಾಗಿ ನೆಲೆನಿಂತು ಫಾರಿನ್ನುಗಳಿಗೂ ಹಾರಿ ಹೋಗಿದ್ದರು. ಈಗ ಭೂಮಾಲಿಕರಾಗಿ ಹಳ್ಳಿಗಳಲ್ಲಿ ತಡವಾಗಿ ಗತ್ತು ಗೈರತ್ತು ಗಳಿಸಿಕೊಂಡ ಪಂಗಡಗಳಿಗಿಂತ ಇವರು ಒಂದರೆಡು ತಲೆಮಾರು ಮುಂದಿದ್ದರು. (ಇದನ್ನೇ ಈಚೆಗೆ ಕಾಗೋಡು ತಿಮ್ಮಪ್ಪನವರು ತಮ್ಮ ಜನರಿಗೆ ಕಿವಿಮಾತು ಹೇಳಿದರಂತೆ. ನೀವು ಇನ್ನೂ ಬಗರ್ ಹುಕುಂ ಜಪಮಾಡುತ್ತಿದ್ದೀರಿ. ಬ್ರಾಹ್ಮಣರು ಅದರ ಚಿಂತೆ ಬಿಟ್ಟು ನಗರಗಳಿಗೆ ವಲಸೆ ಹೋಗಿ ಉದ್ಧಾರವಾದರು ಅಂತ!) ಆದರೆ ನಿಧಾನವಾಗಿ ಹಳ್ಳಿಗಳಲ್ಲಿ ಉಳಿದ ನವ ಭೂಮಾಲಿಕರೂ ಆಧುನಿಕ ವಿದ್ಯೆಯ ಫಲಾನುಭವಿಗಳಾಗಿ ಮುಂದೆ ಬಂದರು. ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬಂದವರು ಮತ್ತೆ ಹಿಂದೆ ಹೋಗಲು ಒಪ್ಪಲಿಲ್ಲ. ನಗರದಲ್ಲೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರು. ಈಗ ವರ್ಗ, ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲಾ ಕಡೆ ಕಂಡುಬರುತ್ತಿರುವ ಪ್ರವೃತ್ತಿಯೆಂದರೆ ತಮ್ಮ ಪೂರ್ವಿಕರಿರುವ ಜಾಗದಲ್ಲಿ ಹಾಗೂ ವೃತ್ತಿಯಲ್ಲಿ ಹೊಸ ತಲೆಮಾರಿನವರು ಇರಬಯಸುವುದಿಲ್ಲ. (ಬಹುಶಃ ವೈದ್ಯರು ಮಾತ್ರ ಇದಕ್ಕೆ ಅಪವಾದ!) ಅಪ್ಪ ನೆಟ್ಟಾಲವನ್ನು ನೆಚ್ಚಿಕೂರಲು ಈಗಿನವರು ತಯಾರಿಲ್ಲ. ಹೀಗಾಗಿ ಎಲ್ಲಾ ಕಡೆ ಹಳ್ಳಿಗಳು ಖಾಲಿಯಾಗಿ ಅಲ್ಲಿ ವಯಸ್ಸಾದವರು ಮಾತ್ರ ಇರುವ ಪರಿಸ್ಥಿತಿ ನಿರ್ಮಾಣವಾಯ್ತು.
ಆಳವಾಗಿ ನೋಡಿದರೆ ಅಲೆಮಾರಿಜೀವನ ಮಾನವನ ಮೂಲ ಪ್ರವೃತ್ತಿಯೇ ಅನಿಸುತ್ತದೆ. ಒಂದು ಕಡೆ ನೆಲೆ ನಿಲ್ಲುವುದೇ ಅವನ ಸ್ವಭಾವಕ್ಕೆ ವಿರುದ್ಧವಾದುದು. ಪರ್ಮನೆಂಟ್ ವಿಳಾಸವೆಂಬುದೇ ಯಾರಿಗೂ ಇಲ್ಲ. ಅದು ಅಸಂಗತವಾದುದು. ಉದಾಹರಣೆ ನೋಡಿ. ನಾವು ಹಳ್ಳಿಗಳು ವೃದ್ಧಾಶ್ರಮಗಳಾಗಿವೆ ಎನ್ನುತ್ತೇವಲ್ಲ, ನಗರಗಳೂ ಅದೇ ಆಗಿವೆ. ಮೈಸೂರಿನ ಮೂಲವಸತಿ ಪ್ರದೇಶಗಳಾದ ವೊಂಟಿಕೊಪ್ಪಲು, ಜಯಲಕ್ಷ್ಮೀಪುರಂ ಹಾಗೂ ಸರಸ್ವತೀ ಪುರಗಳಿಗೆ ನೀವು ಹೋಗಿನೋಡಬೇಕು, ಅಲ್ಲಿರುವ ಬಹುತೇಕ ಮನೆಗಳಲ್ಲಿವಾಸವಿರುವುದು ಮುದುಕರು ಮಾತ್ರ. ಆ ದೊಡ್ಡ ದೊಡ್ಡ ಮನೆಗಳಲ್ಲಿ ವಯಸ್ಸಾದವರು ಇನ್ನೆಲ್ಲೋ ಇರುವ ಮಕ್ಕಳು ಮೊಮ್ಮೊಕ್ಕಳ ನೆನಪಲ್ಲಿ ಜೀವ ಹಿಡಿದುಕೊಂಡಿದ್ದಾರೆ. ಅವರ ಮಕ್ಕಳು ಬೆಂಗಳೂರಿಂದ ಹಿಡಿದು ಅಂಟಾರ್ಟಿಕದವರೆಗೂ ಹೋಗಿ ತಲುಪಿದ್ದಾರೆ. ಮೈಸೂರಿನವರ ಮಕ್ಕಳು ಬೆಂಗಳೂರಿಗೆ ಹೋದರೆ ಬೆಂಗಳೂರಿನವರು ಇನ್ನೆಲ್ಲೋ ಹೊಗುತ್ತಾರೆ. ಮಾನವ ಮೂಲತಃ ಅಲೆಮಾರಿ ಎಂಬುದನ್ನು ಇದು ಸೂಚಿಸುವಂತಿದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಲೆ ನಿಲ್ಲಲು ಈಗ ಜನ ಹೆದರುತ್ತಿರುವುದು ಯಾಕೆಂಬುದಕ್ಕೆ ದೀರ್ಘಪಟ್ಟಿಯಿದೆ. ಕೆಲಸದವರು ಸಿಗುತ್ತಿಲ್ಲ, ಸಿಕ್ಕಿದರೂ ಅವರ ಸಂಬಳವೇ ಆದಾಯವನ್ನು ಮೀರುತ್ತದೆ, ಹಳ್ಳಿಯೆಂದರೆ ಇಲ್ಲಗಳ ಕಂತೆ- ಕರೆಂಟಿರುವುದಿಲ್ಲ, ಹೀಗಾಗಿ ಟಿವಿಯಿರುವುದಿಲ್ಲ.ಮನರಂಜನೆ ಬೇರೆ ಇಲ್ಲ, ಬೇಸರ ಬಂದರೆ ಪೇಟೆಗಳಲ್ಲಿ ಆಗುವ ಹಾಗೆ ಒಂದು ಸುತ್ತು ಬಂದು ಬೀದಿಬದಿಯ ತಿಂಡಿ ತಿನಿಸು ತಿಂದು ಹೋಗಲು ಸಾಧ್ಯವಾಗದು. ಈಗಿನ ತಲೆಮಾರಿನವರು ಪೇಟೆಯ ಸವಲತ್ತುಗಳನ್ನೇ ಹಳ್ಳಿಯಲ್ಲೂ ಬಯಸುವುದರಿಂದ ಅವರಿಗೆ ಭ್ರಮನಿರಸನವಾಗುತ್ತಿರುವುದು ಸಹಜ. ಹಳ್ಳಿಯಲ್ಲಿ ನೆಲೆ ನಿಲ್ಲುತ್ತೇವೆ ಎನ್ನುವವರಿಗೆ ಈ ಪೇಟೆಯ ಆಕರ್ಷಣೆಗಳಿಗೆ ಒಳಗಾಗುವುದಿಲ್ಲ ಎಂಬ ಗಟ್ಟಿ ಗುಂಡಿಗೆ ಬೇಕು. ಸಮಯ ಕಳೆಯಲು ಮೂರ್ಖರ ಪೆಟ್ಟಿಗೆ ತ್ಯಜಿಸಿ ತಮ್ಮದೇ ಖುಷಿನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಚಾಕಚಕ್ಯತೆ ಬೇಕು. ಇದು ಗಂಡನಿಗಿದ್ದರೆ ಸಾಲದು, ಹೆಂಡತಿ ಮಕ್ಕಳಿಗೂ ಆ ಬದ್ಧತೆ ಇರಬೇಕು ಎಂಬುದು ಹಳ್ಳಿಯ ಬದುಕು ಸುಲಭವಾಗದಿರಲು ಕಾರಣ.ಅದಕ್ಕೇ ಕಿಷ್ಕಿಂದೆಯಂಥ ತಾಣದಲ್ಲಿ, ಗಲೀಜು ಪರಿಸರಗಳಲ್ಲಿ ಬದುಕುವ ಪರಿಸ್ಥಿತಿ ಇದ್ದರೂ ಸರಿ, ನಗರವೇ ವಾಸಿಯೆಂದು ಜನ ಹಳ್ಳಿಗಳಿಂದ ವಲಸೆ ಹೋಗುತ್ತಿದ್ದಾರೆ.
ಆದರೆ ಅದೆಲ್ಲ ನನಗೆ ಮುಖ್ಯವೆನಿಸುವುದಿಲ್ಲ. ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳುವ ಹಟವಿದ್ದರೆ ಅವಕ್ಕೆಲ್ಲ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ರೈತರ ಬದುಕನ್ನ ಹೈರಾಣಗೊಳಿಸುವ ಇತರ ಅಂಶಗಳಿವೆ. ಅವುಗಳಲ್ಲಿ ಪ್ರಕೃತಿ ವಿಕೋಪ ಹಾಗೂ ಬೆಳೆಗೆ ತಕ್ಕ ಬೆಲೆ ಸಿಗದಿರುವುದು ಪ್ರಮುಖವಾಗಿವೆ. ಈಚಿನ ವರ್ಷಗಳಲ್ಲಿ ಇವುಗಳೇ ರೈತರ ಬದುಕು ಮೂರಾಬಟ್ಟೆಯಾಗಲು ಕಾರಣವಾಗಿವೆ. ರೈತರು ಬಹಳ ಮುತುವರ್ಜಿಯಿಂದ ಬೆಳೆಸಿದ್ದು ಇನ್ನೇನು ಕಟಾವಿಗೆ ಬರಬೇಕು ಎನ್ನುವಾಗ ಅನಿರೀಕ್ಷಿತ ಮಳೆಯೋ, ಬಿರುಗಾಳಿಯೋ ಬಿದ್ದು ತೋಟವೇ ನಾಶವಾದರೆ ಏನು ಮಾಡಬೇಕು? ಅಥವಾ ಬಿತ್ತುವಾಗ ಇದ್ದ ಬಂಗಾರದ ಬೆಲೆ, ಬೆಳೆ ಕೈಗೆ ಬಂದಾಗ ಪಾತಾಳಕ್ಕಿಳಿದಿದ್ದರೆ ರೈತರೇನು ಮಾಡಬೇಕು? ಈ ಅನಿಶ್ಚಿತತೆ ಹಳ್ಳಿಗಳ ಜನರನ್ನು ಕಂಗಾಲುಮಾಡಿವೆ. ಹಿಂದಿನ ವರ್ಷ ಅಡಿಕೆಗೆ ಬಂಪರ್ ಬೆಲೆಯೆಂದು ಪಟ್ಟಣದವರು ಕೈಹಿಸುಕಿಕೊಳ್ಳುತ್ತಾರೆ. ಆದರೆ ಎಷ್ಟೋ ತೋಟಗಳಲ್ಲಿ ಶೇ25ರಷ್ಟು ಕೂಡಾ ಬೆಳೆ ಇರಲಿಲ್ಲ. ಬಹುಪಾಲು ಅಡಿಕೆ ಕೃಷಿಕರು ಚಿಕ್ಕ ಹಿಡುವಳಿದಾರರಾಗಿದ್ದು ಬೆಲೆಗಾಗಿ ಕಾಯುವ ಸ್ಥಿತಿ ಇರುವುದಿಲ್ಲ. ಹಿಂದಿನ ವರ್ಷ ಅಡಿಕೆಗೆ ಬೆಲೆ ಬಂದಾಗ ಕೆಲವೇ ಆಗರ್ಭ ಶ್ರೀಮಂತರು ಹೊರತು ಪಡಿಸಿ ಉಳಿದವರ ಯಾರ ಬಳಿಯೂ ಮಾರಲು ಫಸಲು ಇರಲಿಲ್ಲ.
ಬೆಲೆ ರೈತರ ಬದುಕಿನೊಡನೆ ಆಟವಾಡುವುದು ಕೃಷಿಯನ್ನು ಒಂದು ಜೂಜಾಗಿ ಪರಿವರ್ತಿಸಿದೆ. ಹಿಂದೆಲ್ಲ ಹಳ್ಳಿಗಳಲ್ಲಿ ಓಸಿ ಆಟ ತೀವ್ರ ಪ್ರಚಾರದಲ್ಲಿತ್ತು. ನಾವು ಚಿಕ್ಕವರಿರುವಾಗ ನಾಕಾಣೆಗೆ ಎಂಟು ಪಟ್ಟು ಸಿಗುವ ಆಸೆಯಿಂದ ಜನ ನಾಕಾಣೆ ನಾಕಾಣೆಯಾಗಿ ಹಣ ಕಟ್ಟುವುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅದೇನೋ ಬಸ್ಸಲ್ಲಿ ಅದರ ನಂಬರು ಬರುತ್ತಿತ್ತಂತೆ. ಜನ ಕೊಳ್ಳುವ ಟಿಕೇಟಿನಲ್ಲಿ ಬರುವ ನಂಬರಿನ ಮೇಲೆ ಬಾಜಿಕಟ್ಟುತ್ತಿದ್ದರಂತೆ. ಒಬ್ಬೊಬ್ಬರಿಗೆ ದುಡ್ಡು ಬಂದುದು ಸುದ್ದಿಯಾಗುತ್ತಿತ್ತು. ಆದರೆ ಎಷ್ಟು ಜನ ಕಳೆದುಕೊಳ್ಳುತ್ತಿದ್ದರೋ ಸುದ್ದಿಯಾಗುತ್ತಿರಲಿಲ್ಲ! ಈಗಿನ ಕೃಷಿ ಆಗಿನ ಓಸಿ ಆಟದಂತೆ ಕಾಣುತ್ತದೆ. ಎಲ್ಲಿಂದಲೋ ಸಾಲತಂದು ಕೃಷಿಗೆ ಸುರಿಯುತ್ತಾರೆ. ಅದಕ್ಕೆ ಔಷದಿಗಾಗಿ ಇನ್ನಷ್ಟು ಸುರಿಯುತ್ತಾರೆ. ಎಲ್ಲವೂ ಸರಿಯಾಗಿ ಬೆಳೆ ಬಂದರೆ ಬಂಪರ್, ಹೋದರೆ ಇವ ಪಾಪರ್. "ಹಸಿಮೆಣಸು ಬೆಳೆದು ಒಳ್ಳೆ ದುಡ್ಡು ಕೈಗೆ ಸಿಕ್ತು ಸಾರ್ ಎಂದು ಹಿಂದಿನ ವರ್ಷ ಖುಷಿಯಿಂದ ಹೇಳಿದ್ದ ವಿದ್ಯಾರ್ಥಿ ಈ ಸಾರಿ ಈರುಳ್ಳಿ ಬೆಳೆಯಲ್ಲಿ ಇಡಿಗಂಟು ಹೋಯ್ತು" ಎಂದು ಸಣ್ಣಮುಖ ಮಾಡಿಕೊಂಡು ಹೇಳಿದ್ದ. ಒಂದು ಕಾಲಕ್ಕೆ ವೆನಿಲ್ಲಕ್ಕೆ ಬಂದ ಬಂಗಾರದ ಬೆಲೆಯನ್ನು ನಂಬಿ ಎಲ್ಲಾ ಕಡೆ ವೆನಿಲ್ಲಾವನ್ನು ರೈತರು ಸಾಲಮಾಡಿಯಾದರೂ ಸೈ ಎಂದು ತಂದು ಹಚ್ಚಿದರು. ಅವರ ಬೆಳೆಬರುವಷ್ಟರಲ್ಲಿ ಬೆಲೆ ಪಾತಾಳಕ್ಕೆ ಇಳಿದಿತ್ತು. ಇಂಡಿಯನ್ ವಯಾಗ್ರ ಎಂದು ಪತ್ರಿಕೆಗಳು ಶಿಫಾರಸು ಮಾಡಿದ ಸಫೇದ ಮಸ್ಲಿಯ ಬೀಜವನ್ನು ಎಂಟುಸಾವಿರ ಕೊಟ್ಟು ದೂರದಿಂದ ತರಿಸಿ ಅಪ್ಪ ನಮ್ಮ ಜಮೀನಲ್ಲಿ ಬಿತ್ತಿದ್ದರು. ಅದು ಕೀಳಲು ಬಂದಾಗ ಮಾರುವುದೆಲ್ಲಿ ಎಂಬ ತಲೆಬಿಸಿಯಾಯ್ತು. ಬೀಜ ಕೊಟ್ಟವರು ತಾವು ಮಾರುವವರು ಮಾತ್ರ ಎಂದು ಕೈತೊಳೆದುಕೊಂಡರು. ಕೊನೆಗೂ ಅದನ್ನು ಗೊಬ್ಬರಕ್ಕೆ ಹಾಕಿದೆವು. ಒಂದೇ ಒಂದು ರೂಪಾಯಿ ಅದರಲ್ಲಿ ಹುಟ್ಟಲಿಲ್ಲ. ಅದಕ್ಕೇ ಜನರು ಕಡಿಮೆ ಸಂಬಳವಾದರೂ ಸರಿ- ಒಂದು ನೌಕರಿ ಬೇಕಂತ ಹಪಹಪಿಸುವುದು. ನೌಕರಿ ಎಂಬುದೊಂದು ಇದ್ದರೆ, ಬರ ಬರಲಿ, ನೆರೆ ಉಂಟಾಗಲಿ, ಸಂಬಳಕ್ಕೆ ಕೊರತೆ ಇರುವುದಿಲ್ಲ! ಎಲ್ಲಿಯವರೆಗೆ ಕೃಷಿ ಮಾಡಿದ ದುಡಿಮೆಗೆ ಯೋಗ್ಯ ಫಲವನ್ನು ದೃಢೀಕರಿಸುವುದಿಲ್ಲವೋ ಅಲ್ಲಿಯವರೆಗೆ ಅದು ನಂಬಲರ್ಹ ಜೀವನ ಮಾಧ್ಯಮವಾಗುವುದಿಲ್ಲ. ತಲತಲಾಂತರದಿಂದ ಜನರು ಅದನ್ನು ಆಶ್ರಯಿಸಿಕೊಂಡು ಬದುಕಿರುವುದು ನಿಜ. ಅತಿಯಾದ ಮಹತ್ವಾಕಾಂಕ್ಷೆಗಳಿಲ್ಲವಾದರೆ ನೆಮ್ಮದಿಯ ಬದುಕಿಗೆ ಕೃಷಿಗಿಂತ ಒಳ್ಳೆಯ ಮಾಧ್ಯಮವಿಲ್ಲ ಎಂಬುದೂ ನಿಜ. ಆದರೂ ಕೃಷಿಕರ ಬದುಕು ಈಚಿನ ವರ್ಷಗಳಲ್ಲಿ ಬೇರೆಲ್ಲರ ಬದುಕಿಗಿಂತ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆಯ ತಲೆಗಳು ಹೋಗಿಬಿಟ್ಟರೆ ಹೊಸಬರು ಕೃಷಿಗೆ ಏರುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಹಳ್ಳಿಯ ಭವಿಷ್ಯ ಮಸುಕಾಗಿದೆ.
ಹಾಗಂತ ಪೇಟೆಯಲ್ಲಿ ಎಲ್ಲವೂ ಸರಿಯಿದೆಯೆ? ನೆಮ್ಮದಿಯಿದೆಯೆ? ಬೆಂಗಳೂರಿನಂಥ ನಗರದಲ್ಲಿ ಹಣವಿದ್ದರೂ ಸುಖಪಡಲಾಗದು ಎಂಬ ಪರಿಸ್ಥಿತಿ ಟ್ರಾಫಿಕ್ ಸಮಸ್ಯೆಗಳಿಂದಾಗಿ ನಿರ್ಮಾಣವಾಗಿದೆ. ನನ್ನಂಥವರಿಗೆ ಬೆಳಿಗ್ಗೆ ಬೆಂಗಳೂರಿಗೆ ಹೋದರೆ ಸಂಜೆಯಾಗುವುದರೊಳಗಾಗಿ ವಾಪಸ್ಸು ಬಂದರೆ ಸಾಕೆನಿಸುತ್ತದೆ. ಉಸಿರು ಕಟ್ಟಿಸುವ ವಾತಾವರಣ, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದ ಪರಿಸ್ಥಿತಿ. ಬೆಂಗಳೂರು ಅವಕಾಶಗಳ ರಾಜಧಾನಿಯೂ ಹೌದು ಅವಘಡಗಳ ರಾಜಧಾನಿಯೂ ಹೌದು. ಮೂರಂಕಿಯಲ್ಲ ನಾಲ್ಕಂಕಿಯ ಸಂಬಳದಲ್ಲಿ ಕೂಡಾ ಇಂದು ಬೆಂಗಳೂರಲ್ಲಿ ಗೌರವದಿಂದ ಬಾಳಲಾಗದು. ನಗರ ಬದುಕಿನಲ್ಲಿ ನನಗೆ ಇಷ್ಟವಾಗದ್ದು ವರ್ಷಗಳಿಂದ ಒಟ್ಟಿಗೆ ಇದ್ದರೂ ಪರಸ್ಪರ ಪರಿಚಯವೇ ಇಲ್ಲದ, ಮಾನವ ಸಂಬಂಧಗಳಿಗೆ ಆಸ್ಪದವಿಲ್ಲದ ಜೀವನ ನನಗೆ ಒಗ್ಗದು. ಅದ್ಯಾಕೆ ಜನಗಳು ಒಂದು ಸ್ಮೈಲ್ ಕೊಡುವುದಕ್ಕೂ ಹಿಂದೆಮುಂದೆ ನೋಡುತ್ತಾರೋ! ಜೊತೆಗೆ, ವಿದ್ಯಾವಂತರ ನಡುವೆ ಇರುವಷ್ಟು ಮೋಸ, ಹೊಟ್ಟೆಕಿಚ್ಚು, ಸಣ್ಣತನಗಳು, ನೀಚತನಗಳು, ಜಾತೀಯತೆ, ನಮ್ಮ ಅನಕ್ಷರಸ್ತ ಹಳ್ಳಿಯ ಜನರಲ್ಲೂ ಇಲ್ಲವೆಂದು ಅನುಭವದಿಂದ ಹೇಳಬಲ್ಲೆ. ಡಿಗ್ರಿಗಳ ಮೇಲೆ ಡಿಗ್ರಿ ಪಡೆದವರು ವಿಷಜಂತುಗಳಂತಾಗುವುದನ್ನು ಕಂಡರೆ ವಿಷಾದವಾಗುತ್ತದೆ. ಇಲ್ಲಿ ದ್ವೇಷಕ್ಕೆ ಕಾರಣವಿಲ್ಲ, ಪ್ರೀತಿಗೆ ಉದ್ದೇಶವಿರುತ್ತದೆ! ಎಲ್ಲ ಸಂಬಂಧಗಳನ್ನು ಅನುಮಾನಿಸಬೇಕಾಗುತ್ತದೆ. ಇಂದಿನ ಹಳ್ಳಿಗಳಲ್ಲಿ ಇಂಥನೀಚತನಗಳುಇಲ್ಲವೇ ಇಲ್ಲ, ಇದು ನಗರಗಳಲ್ಲಿ ಮಾತ್ರ ಕಂಡುಬರುವ ಜಾಡ್ಯ ಎನ್ನಲಾರೆ. ನಿಧಾನವಾಗಿ ಇಂಥ ಮನೋಭಾವಗಳು, ಸಣ್ಣತನಗಳು ಹಳ್ಳಿಗೂ ವ್ಯಾಪಿಸುತ್ತಿವೆ. ಮನುಷ್ಯ ಸಮಾಜದಲ್ಲಿ ಸಹಜ ಎಂಬಂತಾಗುತ್ತಿವೆ. ಅದರೆ ಸದ್ಯಕ್ಕೆ ನಗರ ಬೇಸರ ತರಿಸಿದಾಗ ಕತ್ತಲಿನ ದಾರಿಯ ಕೊನೆಗೆ ಕಾಣುವ ಬೆಳಕು ಹಳ್ಳಿಯೇ. ಈ ಅತಂತ್ರ ಮಾನಸಿಕ ಸ್ಥಿತಿ ನನ್ನದೊಂದೇ ಅಲ್ಲ, ನನ್ನ ಸಮಕಾಲೀನ ಅನೇಕ ಸಮ ಭಾವುಕರನ್ನು ಕಾಡುವ ಅಂಶ ಎಂದು ದೃಢವಾಗಿ ಹೇಳಬಲ್ಲೆ.