ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ

ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ

ಹರಿಹರ ತಾಲೂಕು ಭತ್ತದ ಕಣಜ. ಸಾಲು ಸಾಲು ಗದ್ದೆಗಳು. ಬೆಳೆದು ನಿಂತ ಪೈರು ಕಣ್ದಣೀಯ. ಭತ್ತದ ಸುತ್ತ ನೂರಾರು ಅನುಭವಗಳು. ಬದಲಾದ ಕಾಲಘಟ್ಟದಲ್ಲಿ ಯಾಂತ್ರೀಕರಣದಿಂದ ಕೃಷಿ ಕಾರ್ಯ. ಉಳುಮೆ, ಕಟಾವ್ ತನಕ. “ಭತ್ತಕ್ಕೆ ರೇಟ್ ಇಲ್ಲ. ಉಳುವ ಯೋಗಿಯನ್ನು ಸರಕಾರ ನೋಡಿ ಕೊಳ್ಳುವ ಕ್ರಮ ನೋಡ್ರಿ,” ಕೊಮರನಹಳ್ಳಿಯ ಕೃಷಿಕ ಭೀಮಪ್ಪ ವಿಷಾದಿಸುತ್ತಾರೆ.
    “ಅಡಿಕೆ ಬೆಳೆಯುವುದು ಇಲ್ಲಿ ಶ್ರೀಮಂತಿಕೆ,” ಎನ್ನುವ ಭಾವನೆಯಿದೆ. ಭತ್ತದ ಬೆಲೆ ನಿರ್ಧಾರದ ಸರಕಾರದ  ಹಾವೇಣಿಯಾಟದಿಂದಾಗಿ ಈ ಪ್ರದೇಶಕ್ಕೆ ಅಡಿಕೆ ನಿಧಾನಕ್ಕೆ ಪ್ರವೇಶಿಸುತ್ತಿದೆ. ಈ ಮಧ್ಯೆ ಅಡಿಕೆ, ಭತ್ತದ ಹೊರತಾಗಿ ಇತರ ವಾಣಿಜ್ಯ ಬೆಳೆಯನ್ನು ಬೆಳೆಸುವತ್ತಲೂ ಕೃಷಿಕರು ಯೋಚಿಸುತ್ತಿದ್ದಾರೆ. ದರ ಇಲ್ಲ ಎಂದು ವಿಧಾನಸೌಧದತ್ತ ನೋಡುವ ದೃಷ್ಟಿಯನ್ನು ಕೆಲವರು ಬದಲಿಸಿಕೊಂಡಿದ್ದಾರೆ. ಕೃಷಿಯಲ್ಲಿ ಸ್ವಾವಲಂಬಿಯಾಗಲು ಹೆಜ್ಜೆಯೂರುತ್ತಿದ್ದಾರೆ. ಕೊಮರನಹಳ್ಳಿಯ ಕೃಷಿ ಗುಂಪೊಂದು ಈ ದಿಸೆಯಲ್ಲಿ ಹೊರಳಿದೆ.
 ಇಲ್ಲಿನ ಭೀಮಪ್ಪ, ರಂಗಪ್ಪ, ಮಂಜುನಾಥ, ಸಿದ್ಧಪ್ಪ, ಅಶೋಕ್, ಬಸವರಾಜ್.. ಕೃಷಿಕರು ಒಂದಾಗಿ ಈ ಭಾಗಕ್ಕೆ ಅಪರೂಪವಾದ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ಹತ್ತಿರದ ಮಲೆಬೆನ್ನೂರು ಬಾಳೆ ಕಾಯಿಗೆ ಉತ್ತಮ ಮಾರುಕಟ್ಟೆ ರೂಪಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಕೃಷಿಕರಿಗೆ ಉತ್ತೇಜನ ನೀಡಿದೆ. ಸ್ವ-ಸಹಾಯಕ್ಕಾಗಿ ಸಂಘವನ್ನು ರೂಪಿಸಿದೆ. ಇದರಿಂದಾಗಿ ಕೃಷಿಕರು ಪರಸ್ಪರ ಶ್ರಮ ವಿನಿಮಯ ಮಾಡುವುದರ ಮೂಲಕ ಕೃಷಿ ಚಟುವಟಕೆಯಲ್ಲಿ ತೊಡಗಿಸಲು ಪ್ರೇರೇಪಿಸಿದೆ.
ಈ ಕೃಷಿಕರಿಗೆ ಸೇರಿದ ಸುಮಾರು ಹನ್ನೆರಡೆಕ್ರೆ ಭೂಮಿ ಹಡಿಲಾಗಿತ್ತು. ಕೃಷಿ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿತ್ತು. ಯೋಜನೆಯ ಮುಖ್ಯಸ್ಥೆ ಮಾಲಿನಿ ಹೆಗ್ಡೆಯವರು ಕೃಷಿಕರನ್ನು ಒಗ್ಗೂಡಿಸಿ, ಮನವೊಲಿಸಿ ಹಡಿಲು ಭೂಮಿಗೆ ಮರುಜೀವ ಕೊಟ್ಟರು. ಕಳೆ, ಕಲ್ಲುಗಳನ್ನು ತೆಗೆಸಿದರು. ಆರಂಭಿಕ ಬಂಡವಾಳವನ್ನು ಸಾಲದ ರೂಪದಲ್ಲಿ ನೀಡಿದರು. ಮೊದಲಿಗೆ ಅಡಿಕೆ ಗಿಡವನ್ನು ನೆಟ್ಟು, ಬಳಿಕ ಅದರ ಮಧ್ಯೆ ಏಲಕ್ಕಿ ಬಾಳೆ ಬೆಳೆಯುವಂತೆ ಸೂಚಿಸಿದರು.
    ಹೊಸ ಬೆಳೆ. ಹೇಳುವಂತಹ ಪ್ರಾಯೋಗಿಕ ಅನುಭವವಿಲ್ಲ. ಇತರ ಕೃಷಿಕರ ಕೃಷಿ ಕ್ರಮವನ್ನು ನೋಡಿದರು. ಎಲ್ಲರೂ ಒಟ್ಟು ಸೇರಿಸಿ ಸುಮಾರು ಎರಡೆಕ್ರೆಯಂತೆ ಬಾಳೆ ಕೃಷಿಗೆ ಶ್ರೀಕಾರ ಬರೆದರು. ಹೊಂಡ ತೆಗೆಯಲು ಯಂತ್ರದ ಅವಲಂಬನೆ. ಒಂದು ಎಕ್ರೆಗೆ ಸುಮಾರು ಆರುನೂರು ಬಾಳೆ ಗಿಡ ನಾಟಿ.  ರಾಸಾಯನಿಕ ಗೊಬ್ಬರ ಬಳಕೆ.    ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ. ಎಲ್ಲರೂ ಸ್ವ-ದುಡಿಯುವುದರಿಂದ ಸಹಾಯಕರ ಅವಲಂಬನೆ ಕಡಿಮೆ. ಹನ್ನೊಂದು  ತಿಂಗಳಿನಲ್ಲಿ ಕಟಾವ್.
    “ಹೀಗೊಂದು ಮಾಡಲು ಆಗುತ್ತೆ ಅಂತ ಗೊತ್ತಿರಲಿಲ್ಲ. ಹೇಳುವವರೂ ಇರಲಿಲ್ಲ. ಈಗ ಖುಷಿಯಾಗಿದೆ. ಪ್ರತೀತಿಂಗಳು ಹಣ ಕೈಗೆ ಬರುತ್ತದೆ. ಹಡಿಲು ಭೂಮಿಯು ಕೃಷಿಭೂಮಿಯಾಗಿ ಪರಿವರ್ತಿತವಾಗಿದೆ ಎನ್ನಲು ಖುಷಿಯಾಗುತ್ತದೆ” ಎನ್ನುತ್ತಾರೆ ಭೀಮಪ್ಪ. ಬಾಳೆ ನಾಟಿ ಮಾಡಿ ಮೂರು ತಿಂಗಳ ತನಕ ತರಕಾರಿ ಬೆಳೆದರು. ಬಾಳೆಗೆ ಹಾಕಿದ ಬಂಡವಾಳವನ್ನು ಸ್ವಲ್ಪ ಹಗುರ ಮಾಡಿತು. ಮನೆ ಬಳಕೆಗೆ ಮಿಕ್ಕಿದ ತರಕಾರಿ ಮಾರಾಟ. “ತಿಂಗಳಿಗೆ ಮೂರರಿಂದ ನಾಲ್ಕು ಕ್ವಿಂಟಾಲ್ ಬಾಳೆಗೊನೆ ಕಟ್ ಮಾಡ್ತೀವಿ,” ಎನ್ನುವ ಅನುಭವ ರಂಗಪ್ಪರದು. ಬಾಳೆ ನೆಡುವಾಗಲೇ ಅಡಿಕೆ ಗಿಡ ನಾಟಿ ಮಾಡಿದ್ದಾರೆ.
    ಒಂದೊಂದು ಬಾಳೆ ಗೊನೆ ಸುಮಾರು ಹನ್ನೆರಡರಿಂದ ಹದಿನೈದು ಕಿಲೋ. ಒಂದು ಕಿಲೋಗೆ ಮಾರುಕಟ್ಟೆಯಲ್ಲಿ ಇಪ್ಪತ್ತರಿಂದ ಮೂವತ್ತು ರೂಪಾಯಿ. ನಲವತ್ತರ ತನಕ ಏರಿದ್ದೂ ಇದೆ! ಮೊದಲೇ ವ್ಯವಹಾರ ಕುದುರಿಸಿಕೊಂಡು ವ್ಯಾಪಾರಿಯನ್ನು ಗೊತ್ತು ಮಾಡುತ್ತಾರೆ. ಅವರೇ ಬಂದು ಗಿಡದಿಂದ ಗೊನೆ ಕಟ್ ಮಾಡಿ ಒಯ್ಯುತ್ತಾರೆ. “ಆರಂಭಕ್ಕೆ ಪ್ರತಿ ಗಿಡದಲ್ಲಿ ಬಾಳೆಗುನ್ನಿ (ಕುರ್ಲೆ) ಬಂದುಬಿಡುತ್ತೆ. ಅದರಲ್ಲಿ ಒಂದೆರಡನ್ನು ಬಿಟ್ಟು ಮತ್ತೆಲ್ಲಾ ಕಟ್ ಮಾಡ್ತಾ ಇರ್ಬೇಕು,” ಎನ್ನುತ್ತಾರೆ ಮಂಜುನಾಥ.ಕೃಷಿ ಕ್ರಮದ ಲೆಕ್ಕಾಚಾರಕ್ಕಿಂತಲೂ ಈ ಕೃಷಿಕರ ಕೃಷಿ ಕ್ರಮ ಬದಲಾದುದು ಮುಖ್ಯ. ಭತ್ತ, ಮೆಕ್ಕೆಜೋಳವನ್ನು ನಂಬಿ ಬದುಕುತ್ತಿದ್ದವರು ವಾಣಿಜ್ಯ ಬೆಳೆಯತ್ತ ಹೊರಳಿರುವುದರಿಂದ ವಿಶ್ವಾಸ ವೃದ್ಧಿಸಿದೆ. ಮೊದಲು ಕೂಲಿಗೆ ಹೋಗುತ್ತಿದ್ದವರು ಈಗ ತಂತಮ್ಮ ಹೊಲದಲ್ಲಿ ದುಡಿಯುತ್ತಾರೆ. “ಆರಂಭಿಕ ಮೊತ್ತವನ್ನು ಯೋಜನೆಯು ಅವರಿಗೆ ಸಾಲ ರೂಪದಲ್ಲಿ ನೀಡಿದೆ. ಎಲ್ಲರೂ ಸಾಲವನ್ನು ಹಿಂತಿರುಗಿಸಿದ್ದಾರೆ. ಕಳೆದೆರಡು ವರುಷಗಳಿಂದ ಕೃಷಿಗಾಗಿ ಅವರು ಸಾಲ ಮಾಡಿದ್ದೇ ಇಲ್ಲ,” ಯೋಜನೆಯ ಅಧಿಕಾರಿ ಮಾಲಿನಿ ಹೆಗ್ಡೆ ಹೇಳುತ್ತಿದ್ದಾಗ ಸಿದ್ಧಪ್ಪ ದನಿಗೂಡಿಸಿದರು, “ಹೊರಗಡೆ ಕೂಲಿಗೆ ಹೋಗದೆ ಮೂರು ವರ್ಸವಾಯಿತು. ಈಗ ಸಾಲ ಮಾಡುವ ಸ್ಥಿತಿ ಇಲ್ಲಾರಿ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಿಲ್ಲ” ಎಂದರು.
   ಕೃಷಿಯಲ್ಲಿ ಇಂತಹ ಚಿಕ್ಕ ಪುಟ್ಟ ಬದಲಾವಣೆಗಳು ಕಾಲದ ಆವಶ್ಯಕತೆ. ರೈತರಿಗೆ ಸಾಲ, ಸಹಕಾರಕ್ಕಿಂತಲೂ ಕಾಲಕಾಲಕ್ಕೆ ಜ್ಞಾನವನ್ನು ಅಪ್‍ಡೇಟ್ ಮಾಡಿ ಜ್ಞಾನವನ್ನುಣಿಸುವ ಕೆಲಸ ಇದೆಯಲ್ಲಾ ನಿಜಕ್ಕೂ ಇದು ಅನ್ನದಾತನಿಗೆ ಮಾಡುವ ದೊಡ್ಡ ಉಪಕಾರ. ನೀರಿನ ಮಿತ ಬಳಕೆ, ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ, ಸಿಂಪಡಣೆಗಳಿಗೆ ಪರ್ಯಾಯ ಹಾದಿಗಳು, ಮಾರುಕಟ್ಟೆ... ಇಂತಹ ಜ್ಞಾನವನ್ನು ಕೊಡುವ ಸಂಪನ್ಮೂಲತೆಗಾಗಿ ಕೃಷಿ ರಂಗ ಕಾಯುತ್ತಿದೆ. ಕೊಮರನಹಳ್ಳಿಯ ಈ ಕೃಷಿಕರ ಬದುಕಿನಲ್ಲಿ ಹೇಳುವಂತಹ ಆರ್ಥಿಕ ಬದಲಾವಣೆ
 
ಆಗದಿರಬಹುದು. ಆದರೆ ಪರ್ಯಾಯ ಬೆಳೆಗಳು ಅವರ ಬದುಕಿನಲ್ಲಿ ನಗು ತರಿಸಿದೆ. ಇಲ್ಲಿ ಎಷ್ಟು ಸಮಯ ಎನ್ನುವುದಕ್ಕಿಂತಲೂ ಬದಲಾವಣೆ ಹೇಗಾಗಿದೆ ಎನ್ನುವುದು ಯೋಚನಾರ್ಹ.