ಕಂಫರ್ಟ್ ಮತ್ತು ಕಂಪನಿ
ಕೈಲಾಸಂ ಕಾಲದಲ್ಲಿ ಹವಾ ನಿಯಂತ್ರಿತ ರೈಲುಗಳಿರಲಿಲ್ಲ. ಆದುದರಿಂದ ಎ.ಸಿ. 2- tierಎಂಬ ವರ್ಗವೇ ಇರಲಿಲ್ಲ. ಆದರೂ ಸಹ ಅವರು "ಸ್ವರ್ಗದಲ್ಲಿ comfortಇರುತ್ತೆ ಮರಿ, ಆದರೆ companyಇರಲ್ಲ" ಎಂದೇಕೆ ಹೇಳಿದರು? ಈ ಪ್ರಶ್ನೆ ಈಗೇಕೆ ಎಂದರೆ ಮೊನ್ನೆ ನಾನು ದೆಹಲಿಗೆ ಈ ಎ.ಸಿ. 2- tier ಎಂಬ ಸ್ವರ್ಗದಲ್ಲೇ ಪ್ರಯಾಣ ಮಾಡಿದಾಗ ಕೈಲಾಸಂ ಅಂದು ಹೇಳಿದ ಮಾತಿನ ರುಚಿ ಕಂಡುಕೊಂಡೆ. ನನ್ನ ಬೋಗಿಯಲ್ಲಿ comfortಇದ್ದರೂ company ಇರಲಿಲ್ಲ. ಅಂದರೆ ನಾನೊಬ್ಬನೇ ಪಯಣಿಸಿದೆ ಎಂದಲ್ಲ. ಜೊತೆಗೆ ಹೆಂಡತಿ ಇದ್ದಳು. ಆದರೆ ಬೇರೆ ಕಂಪನಿ ಇರಲಿಲ್ಲ.
ಅಪಾರ್ಥ ಬೇಡ. ಬೇರೆ ಕಂಪನಿ ಅಂದಾಗ ನನಗೆ ರುಮಾಲು ಗಾಂಧಿಕ್ಲಾಸ್ ನಲ್ಲಿ ಕಂಡು ಬರುವ ಕಂಪನಿ. ಆದುದರಿಂದ ನೀವು ಹುಬ್ಬೇರಿಸಬೇಕಾಗಿಲ್ಲ. ಗಾಂಧಿ ಕ್ಲಾಸ್, ಅಂದರೆ ಸ್ಲೀಪರ್ ಕ್ಲಾಸ್, ಅದೆಷ್ಟು ವೈವಿಧ್ಯಮಯ! ಫುಲ್ ಕೋಚ್ ಎಂದರೆ 72 ಮಂದಿ ಬಂದರೂ ಬರುವವರ ಹೋಗುವವರ ಸಂಖ್ಯೆ ಎಣಿಸಲು ಸಾಧ್ಯವೇ? ಚಾಯ್, ಕಾಫಿ, ಸೌತೆಕಾಯಿ, ಚುರುಮುರಿ, ಮಸಾಲೆ ವಡೆ, ಕಟ್ಲೆಟ್ - ಸಮೋಸ, ಹೀಗೆ ನೀವು ತಿನ್ನಬೇಕಿದ್ದ, ಆದರೆ ಮನೆಯಲ್ಲಿ ಲಭ್ಯವಿಲ್ಲದ ಹಲವಾರು ತಿಂಡಿ ತೀರ್ಥಗಳು ಇಲ್ಲಿ ಡೋರ್ ಡೆಲಿವರಿ ಅಥವಾ ಸೀಟ್ ಡೆಲಿವರಿ. ತುಸು ದುಬಾರಿ ಎನಿಸಿದರೂ ನೀವೇನು ಪದೇ ಪದೇ ಪ್ರಯಾಣ ಮಾಡುವುದಿಲ್ಲವಾದ್ದರಿಂದ ಧಾರಾಳವಾಗಿ ದುಡ್ಡು ಕೊಟ್ಟು ಮಿತವಾಗಿ ತಿನ್ನಲು ಸಾಧ್ಯ - ಹೀಗೆ ನಿಮ್ಮ ಜಿಹ್ವಾಚಾಪಲ್ಯ ತೀರಿದರೆ ಇನ್ನು ಕಿವಿ, ಕಣ್ಣುಗಳಿಗೂ ಮನರಂಜನೆ ಸಾಧ್ಯ.ಹಾರ್ಮೋನಿಯಂ, ತಾಳ, ತಮಟೆ, ಮುಂತಾದವುಗಳನ್ನು ಹಿಡಿದು ತಂದೆ-ತಾಯಿ-ಮಗ-ಮಗಳು ಹೀಗೆ ಒಂದು ಜೋಡಿ ಹಿಂದಿ/ಕನ್ನಡ ಗೀತೆಗಳನ್ನು ತಮಗೆ ತೋಚಿದಂತೆ ಹಾಡಿ, ನಂತರ ಕಾಸಿಗೆ ಕೈಯೊಡ್ಡುವ ದೃಶ್ಯ ಮಾಮೂಲು.
ಸ್ಲೀಪರ್ ಕ್ಲಾಸ್ ಒಂದು ಜಾತ್ಯತೀತ ಸಮಾಜ. ಪರಸ್ಪರ ಮಾತು, ಸೌಹಾರ್ದತೆ, ಕೊಡು - ಪಡೆ, ಮುಂತಾದವು ಈ ಸಮಾಜದ ಅವಿಭಾಜ್ಯ ಅಂಗ. ಕೆಳಗಿನ ಸ್ಲೀಪರ್ನವರು ಉದಾರವಾಗಿ ಮೇಲಿನ ಸ್ಲೀಪರ್ಗೆ ಹೋಗಿ, ತಮ್ಮ ಜಾಗವನ್ನು ಕೈಲಾಗದವರಿಗೆ ಬಿಟ್ಟು ಪ್ರಮೋಷನ್ ಪಡೆಯುವುದು ಮಾಮೂಲು. ಹಾಗೆ ಮೇಲೆ ಹೋಗುವಾಗ ತಮ್ಮ ಸಾಮಾನನ್ನು ಕೆಳಗಿರುವವರ ಜವಾಬ್ದಾರಿಗೆ ವಹಿದುವು ಒಂದು ಅಲೊಖಿತ ಒಪ್ಪಂದ. ಹೀಗೆ ಸ್ಲೀಪರ್ ಕ್ಲಾಸ್ನ ಪ್ರಯಾಣಿಕರು ವಸುಧೈವ ಕುಟುಂಬದಂತೆ ಕಂಪನಿಯ ಸುಖದಲ್ಲಿ ಪಯಣಿಸುತ್ತಾರೆ. ಕಂಫರ್ಟ್ ಇಲ್ಲದಿದ್ದರೇನಂತೆ - ಒಂದೆರಡು ದಿನದ ಪ್ರಯಾಣ ತಾನೆ ಎಂಬ ವೈರಾಗ್ಯದಲ್ಲಿ.
ಆದರೆ ಈ ಎ.ಸಿ. 2 - tier ನಲ್ಲಿ ಈ ಬೆನಿಫಿಟ್ ಇಲ್ಲ. ಎಲ್ಲ ಸ್ಲೀಪರ್ಗಳಿಗೂ ಕರ್ಟನ್ ಹಾಕಿ ಎಲ್ಲರನ್ನೂ ಪ್ರತ್ಯೇಕಿಸಿರುವುದರಿಂದ ಅದೊಂದು ಪಂಚತಾರಾ ಶವಾಗಾರವಾಗಿ ನನಗೆ ಕಂಡದ್ದು ಅಚ್ಚರಿ ಏನಲ್ಲ. ಮಧ್ಯಾಹ್ನ ಅಥವಾ ನಡುರಾತ್ರಿಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ನೀವು ಆ ಬೋಗಿಯಲ್ಲಿ ಅಡ್ಡಾಡಿದಾಗ ನೀವು ನಿಮ್ಮ ಸೀಟ್ ಮರಳಿ ಹುಡುಕಬೇಕಾದರೆ ಕರ್ಟನ್ಗಳನ್ನು ಸರಿಸಿ, ಇಣುಕಿ ನೋಡಬೇಕಾದ ಅನಿವಾರ್ಯತೆ ಒದಗಿಬರುತ್ತದೆ. ಹಾಗೆ ಇಣುಕಿದಾಗ ಒಂದು ಜೋಡಿ ಕಣ್ಣುಗಳು ಪಿಳಿಪಿಳಿಸುತ್ತವೆ ಅಥವಾ ದುರುಗುಟ್ಟಿ ನೋಡುತ್ತವೆ. ಹೀಗಾಗಿ ಎಲ್ಲರೂ ಪ್ರತ್ಯೇಕವಾದಿಗಳಂತೆ ತಮ್ಮ ತಮ್ಮ ಸೀಟುಗಳಿಗೆ ಅಂಟಿಕೊಂಡಿರುತ್ತಾರೆ. ಎ.ಸಿ. ಪ್ರಯಾಣಿಕರಾಗಿರುವುದರಿಂದ ಹೊರಗಿನಿಂದ ಬರುವ ತಿಂಡಿಗಳಿಗೆ ಪ್ರೋತ್ಸಾಹ ನೀಡದೆ in-house cateringಗೆ ಮಾತ್ರ ಪುರಸ್ಕಾರ. ಇದರಿಂದಾಗಿ ಸ್ಲೀಪರ್ ಕ್ಲಾಸಿನಲ್ಲಿ ಸಿಗುವ ala carte ಇಲ್ಲಿ ಮಿಸ್ಸಿಂಗ್. ಮಾರುವವರೇ ಬಾರದಿದ್ದ ಮೇಲೆ ಇನ್ನು ಬೇಡುವವರು ಬರುತ್ತಾರೆಯೆ? ಪ್ರವೇಶ ನಿಷೇಧ. ಹಾಗಾಗಿ ಮನರಂಜನೆ ಇಲ್ಲ.
ನಿಜ. comfort ಇದೆ. ತಲೆದಿಂಬಾಗಿ ನಿಮ್ಮ ಕಿಟ್ ಬ್ಯಾಗ್ ಉಪಯೋಗಿಸಬೇಕಿಲ್ಲ. ಮೆತ್ತಗಿನ ಪಿಲ್ಲೋ ಸಿಗುತ್ತದೆ. ಚಳಿಯಾದರೆ ಹೊದೆಯಲು ರಗ್ ಕೊಡುತ್ತಾರೆ. ಶೌಚಾಲಯದಲ್ಲಿ ಯಾವಾಗಲೂ ನೀರು ಇರುತ್ತದೆ. ರಾತ್ರಿ ಓದುವುದಾದರೆ ಪ್ರತ್ಯೇಕ ದೀಪ ಇದೆ.
ಆದರೆ
ಕಂಪನಿ?
ಕೈಲಾಸಂ ಸ್ವರ್ಗಕ್ಕೆ ಹೋಗುವ ಮೊದಲೇ, ಎ.ಸಿ. 2- tier ನಲ್ಲಿ ಪ್ರಯಾಣ ಮಾಡುವ ಮುಂಚೆಯೇ ಈ ಸತ್ಯ ಹೇಗೆ ಕಂಡುಕೊಂಡರು ಎಂಬುದು ನನಗೆ ಅರ್ಥವಾಗಿಲ್ಲ.
ಆದುದರಿಂದಲೇ ಅವರು genius ಅಲ್ವೇ?
Comments
ಉ: ಕಂಫರ್ಟ್ ಮತ್ತು ಕಂಪನಿ
ಪಂಚತಾರಾ ಶವಾಗಾರವೆನ್ನುವದು ಉತ್ಪ್ರೆಕ್ಷೆಯಲ್ಲ!
It's lonely at the top ಅಂತನ್ನೋ ಹಾಗೆ loneliness and comfort go hand in hand ಅಂತನ್ನಬಹುದೇನೋ!