ಎಫ್. ಎಂ. 42.0

ಎಫ್. ಎಂ. 42.0

ನಮಸ್ಕಾರ.
ಇದು 42.0 ಎಫ್.ಎಂ. ರೆಡಿಯೋ ಬ್ಯಾಡಗಿ ಮಿರ್ಚಿ. ಸಖತ್ ಖಾರ ಮಗಳೇ!
ನಮ್ಮ ವಿಶೇಷ ಫೋನ್ ಇನ್ ಕಾರ್ಯಕ್ರಮಕ್ಕೆ ಸ್ವಾಗತ. ನಿಮಗೆ ವಿಷಯ ಗೊತ್ತಿರಬಹುದು. ನಿಮ್ಮ ಹೆಂಡತಿ ಕೋಪಗೊಂಡರೆ ಅವಳನ್ನು ಹೇಗೆ ಸಮಾದಾನ ಮಾಡುತ್ತೀರಿ? ದಯವಿಟ್ಟು ಗಮನಿಸಿ - ಗಂಡಂದಿರು ಮಾತ್ರ ಫೋನ್ ಮಾಡಬಹುದು. 
     ಆ್ಹ! ಇಲ್ಲೊಂದು ಕರೆ ಬರ್ತಿದೆ. ಹೇಳಿ ಸಾರ್, ನಿಮ್ಮ ಹೆಸರು?
ಯಂಕ್ಟೇಶ್.
     ನಮಸ್ಕಾರ ಯಂಕ್ಟೇಶ್. ಎಲ್ಲಿಂದ ಮಾತಾಡ್ತಿದ್ದೀರಿ?
ನಮಸ್ಕಾರಾಮ್ಮ....ನಾನು ಕಲ್ಯಾಣಿ ಬಾರ್‍ನಿಂದ ಫೋನ್ ಮಾಡ್ತಿದ್ದೀನಿ.
ಏನು ಮಾಡ್ತಿದ್ದೀರ?
ನಾನು ಮೂರು ಕ್ವಾಟರ್ ಹಾಕಿದ್ದೇನೆ. ನಾಲ್ಕನೆಯದು ಬರಲಿದೆ. ಟಿಪ್ಸೂ ಮುಗಿದಿದೆ. ಅದಕ್ಕೆ ಕಾದಿದ್ದೇನೆ. ಅಷ್ಟರಲ್ಲಿ ಒಂದು ಫೋನ್ ಮಾಡುವಾ.....
   ಹೌದೆ? ಸರಿ, ನಿಮ್ಮ ಹೆಂಡತಿ ಕೋಪಗೊಂಡರೆ ಅವಳನ್ನು ಹೇಗೆ ಸಮಾಧಾನ ಮಾಡ್ತೀರಿ ಯಂಕ್ಟೇಶ್?
     ಸಮಾಧಾನ? ನಾನೂ ಕ್ಯಾರೆ ಅನ್ನೊಲ್ಲ. ಎಲ್ಡು ದಿನ ಆದಮೇಲೆ ಅವಳೇ ಸರಿಹೋಗ್ತಾಳೆ...
ಸರಿ ಸರಿ. ಇನ್ನೊಂದು ಕರೆ ಬಂದಿದೆ. ಮಾತಾಡಿ ಸರ್... ಹಲೋ...
ಹಲೋ... ನಾನು ಗೋವಿಂದರಾಜ್.
ಹಲೋ ಗೋವಿಂದರಾಜ್. ಎಲ್ಲಿಂದ ಮಾತನಾಡ್ತಿದ್ದೀರಿ? ಏನು ಮಾಡ್ತಿದ್ದೀರಾ?
ನಾನು ಹಣ ಎಣಿಸ್ತಿದೀನಿ ಮೇಡಂ.
ನೀವು ಕ್ಯಾಷಿಯರ್ರಾ?
      ಅಲ್ಲ ಮೇಡಮ್. ಸೋಷಿಯಲ್ ವರ್ಕರ್. ನರ್ಸರಿ ಸೀಟ್ ಕೊಡಿಸ್ದೆ. ಸೂಟ್‍ಕೇಸ್ ಕೊಟ್ಟರು. ಹಣ ಎಣಿಸ್ತದೀನಿ ಮೇಡಂ.
ಸರಿ ಗೋವಿಂದರಾಜ್. ಕೋಪಗೊಂಡ ಹೆಂಡ್ತೀನ ಹೇಗೆ ಸಮಾಧಾನ ಮಾಡ್ತೀರಾ?
ಯಾರ ಹೆಂಡ್ತಿ ಮೇಡಂ?
ನಿಮ್ಮ ಹೆಂಡತಿ ಗೋವಿಂದರಾಜ್.
     ಓ! ಹೌದಾ? ಸಾರಿ ಮೇಡಂ. ನಾನು ಸೋಷಿಯಲ್ ವರ್ಕ್ ಮುಗಿಸಿ ಮನೆಗೆ ಹೋಗೋದು ಲೇಟ್. ಸೋ ನನ್ನ ಹೆಂಡ್ತೀಗೆ ಕೋಪ ಬಂದಿರೋದು ನನಗೆ ಗೊತ್ತೇ ಆಗುವುದಿಲ್ಲ. ಬೇರೆ ಹೆಂಡ್ತೀರನ್ನ ಸಮಾಧಾನ ಮಾಡಿದ್ದೀನಿ ಮೇಡಂ.
    ಅದು ಬೇಡ ಬಿಡಿ. ಇನ್ನೊಂದು ಕಾಲ್ ಬರ್ತಿದೆ. ಹೇಳಿ ಸಾರ್. ನಿಮ್ಮ ಹೆಸರೇನು ಸಾರ್?
ನಾನು ಷೇಕ್ ಅಲ್ ಬಿನ್ ಮಹಮದ್ ಖುರೇಶಿ.
ಅದು ನಿಮ್ಮೊಬ್ಬರದೇ ಹೆಸರೇ ಸಾರ್?
ಹೌದು ಮೇಡಂ. ಬೇಕಿದ್ದರೆ ಖುರೇಶಿ ಎಂದು ಕರೆಯಿರಿ.
     ಸರಿ ಖುರೇಶಿ ಅವರೆ. ಕೋಪಗೊಂಡಾಗ ನಿಮ್ಮ ಹೆಂಡತಿಯನ್ನು ಹೇಗೆ ಸಮಾದಾನ ಮಾಡುತ್ತೀರಿ ಸರ್?
     ಯಾವ ಹೆಂಡತೀನ ಮೇಡಂ?
ಅಂದರೆ?
ನೋಡಿ ಮೇಡಂ, ನನಗೆ ಮೂರು ಹೆಂಡತಿಯರು...
ಓ!? ಮೊದಲನೆಯ ಹೆಂಡತಿಗೆ ಕೋಪ ಬಂದರೆ ಏನು ಮಾಡುತ್ತೀರಿ?
    ಎರಡನೆಯ ಹೆಂಡತಿ ಬಳಿ ಹೋಗ್ತೀನಿ. ಆಗ ಮೊದಲನೆಯ ಹೆಂಡತಿಗೆ ಬುದ್ಧಿ ಬರುತ್ತೆ. ಮೂರನೆಯ ಹೆಂಡತಿ ಪಾಠ ಕಲೀತಾಳೆ. 
ವಂದನೆಗಳು ಖುರೇಶಿ ಅವರೆ. ಇನ್ನೊಂದು ಕರೆ ಬರ್ತಿದೆ. ಹಲೋ! ಯಾರು? 
ನಾನು ಮೇಡಂ ಸುಬ್ಬನರಸಿಂಹ. 
ಹೇಳಿ ಸಾರ್?
     ಕೋಪ ಅಂದರೆ ಏನು ಮೇಡಂ? ಏಕೆಂದರೆ ನನ್ನ ಹೆಂಡತಿಗೆ ಕೋಪಾನೇ ಬರೋದಿಲ್ಲ ಮೇಡಂ. 
ಹೌದಾ?
    ಕೋಪಾ ಎಲ್ಲಾ ನನಗೇ ಬರೋದು. ಆದರೆ ಅವಳು ನನಗೆ ಸಮಾಧಾನಾನೇ ಮಾಡಲ್ಲ ಮೇಡಂ. ಏನು ಮಾಡಲಿ...
ಇನ್ನೊಂದು ಕಾಲ್ ಬರ್ತಿದೆ. ಯಾರು?
ನಾನು ಕಿರಣ್‍ಕುಮಾರ್...
     ಹೋ! ಕಿರಣ್‍ಕುಮಾರ್! ಫೇಮಸ್ ಆಕ್ಟರ್? ಓ! ಗ್ರೇಟ್! ಕಿರಣ್ ಕುಮಾರ್ ಅವರೆ, ಥ್ಯಾಂಕ್ ಯು ಫಾರ್ ಕಾಲಿಂಗ್... ಹೇಳಿ ಸಾರ್. ನೀವು ಹೇಗೆ ಹೆಂಡ್ತೀನ ಸಮಾಧಾನ ಮಾಡ್ತೀರಾ?
     ಡೈರೆಕ್ಟರ್ ಹೇಗೆ ಹೇಳಿದರೆ ಹಾಗೆ ಮೇಡಂ/
     ಅಂದರೆ?
ಅದೇ ಮೇಡಂ. ನನಗೆ ಒಂದೊಂದು ಪಿಕ್ಚರ್‍ನಲ್ಲಿ ಒಂದೊಂದು ಹೆಂಡತಿ. ಸೋ... ಡೈರೆಕ್ಟರ್ ಹೇಗೆ ಮಾಡಿ ಅಂದರೆ ಹಾಗೆ...
     ಸಾರ್, ಸಾರ್, ಅದು ರೀಲ್ ಲೈಫ್. ರಿಯಲ್ ಲೈಫ್‍ನಲ್ಲಿ ಸಾರ್....?
     ಈ ಅನೇಕ ಅನುಭವಗಳಿಂದ ಪಾಠ ಕಲಿತ ನಾನು ಮದುವೆಯಾದ ಮೇಲೆ ನನ್ನ ಹೆಂಡತಿ ಕೋಪಗೊಂಡರೆ ಸನ್ನಿವೇಶಕ್ಕೆ ತಕ್ಕಂತೆ ಸಮಾಧಾನ ಮಾಡ್ತೀನಿ. 
ಹೋಗಲಿ ಬಿಡಿ ಸಾರ್. ಥ್ಯಾಂಕ್ಸ್ ಕಾಲ್ ಮಾಡಿದ್ದಕ್ಕೆ. ಇನ್ನೊಬ್ಬರು ಯಾರೋ ಫೋನ್ ಮಾಡ್ತಿದ್ದಾರೆ. ಯಾರು?
     ನಾನು ಜೇಮ್ಸ್.
     ಹೇಳಿ ಜೇಮ್ಸ್. ನೀವು ಹೇಗೆ ಸಮಾಧಾಣ ಮಾಡ್ತೀರಾ?
     ಅದೇ ಮೇಡಂ, ಮೊನ್ನೆ ಹೀಗೆ ಸಮಾದಾನ ಮಾಡಲು ಹೋದೆ. ಅವಳು ರಪ್ಪೆಂದು ಕೆನ್ನೆಗೆ ಬಾರಿಸಿದಳು. ಇನ್ನೂ ಚುರುಚುರು ಅಂತಾ ಇದೆ. ಇಂತಹ ಹೆಂಡ್ತೀನ ಹೇಗೆ ಸಮಾದಾನ ಮಾಡೋದು ಮೇಡಂ?
     ಓ! ಸಾರಿ! ನೀವು ಆಕೆಗೆ ಕೋಪ ಬರೋಹಾಗೆ ಮಾಡಲೇಬಾರದು. ಇಲ್ಲದೇ ಹೋದರೆ ಇನ್ನೊಂದು ಕೆನ್ನೆ ಸಹ ಚುರುಚುರು ಅನ್ನುತ್ತೆ... ಹೇಳಿ ಸಾರ್. ಯಾರು ಸಾರ್ ಮಾತಾಡ್ತಿರೋದು?
ನಾನು ದೀಕ್ಷಿತ್.
ಏನು ಮಾಡ್ತೀರಿ ದೀಕ್ಷಿತ್ ನೀವು?
ನಾನು ಅರ್ಚಕ ತಾಯಿ.
ಹೌದೆ? ಹೇಳಿ ದೀಕ್ಷಿತ್ ಅವರೆ, ನೀವು ಹೆಂಡತೀನ ಹೇಗೆ ಸಮಾಧಾನ ಮಾಡ್ತೀರಾ? 
    ಸಮಾಧಾನ ಮಾಡೋದಿಕ್ಕೆ ಹೋದರೆ ನನ್ನ ಮುಖಕ್ಕೇ ಮಂಗಳಾರತಿ ಎತ್ತುತ್ತಾಳೆ. ಸಹಸ್ರನಾಮ ಹೇಳುತ್ತಾಳೆ. ಏನು ಪ್ರಸಾದ ಕೊಟ್ಟರೂ ತೊಗೊಳಲ್ಲ ಅವಳು. ಶಾಂತಿಹೋಮ ಮಾಡೋಣ ಅಂತ ಇದ್ದೀನಿ...
    ಪವರ್ ಕಟ್ ಆಗಿ ರೇಡಿಯೋ 42.0 ಎಫ್.ಎಂ. ಬ್ಯಾಡಗಿ ಮಿರ್ಚಿ ಸಖತ್ ಖಾರ ಮಗಳೇ ಬಂದ್ ಆಯಿತು.
 
(ಚಿತ್ರ ಕೃಪೆ ಗೂಗಲ್)