ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"

ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"

ಪುಸ್ತಕದ ಲೇಖಕ/ಕವಿಯ ಹೆಸರು
ವಿ.ಗಾಯತ್ರಿ
ಪ್ರಕಾಶಕರು
ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಆಂಡ್ ಆಕ್ಷನ್(ಇಕ್ರಾ) ನಂ. 22, 5ನೇ ಕ್ರಾಸ್, ಮೈಖೇಲ್ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು 560075 ಫೋನ್: 080-25283370
ಪುಸ್ತಕದ ಬೆಲೆ
150

ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು.
ಅಂತಹ ಭರಮಗೌಡ್ರು ಇಂದು ನಮ್ಮೊಂದಿಗಿಲ್ಲ. 13 ಜನವರಿ 2016 ರಂದು ವಿಧಿವಶರಾದರು. ಒಮ್ಮೆ ಅವರನ್ನು ಕಂಡರೆ ಸಾಕು, ಅವರ ಧೀಮಂತ ವ್ಯಕ್ತಿತ್ವ ನಮ್ಮಲ್ಲಿ ಅಚ್ಚೊತ್ತಿಬಿಡುತ್ತಿತ್ತು. ಅವರ ಮಾತಂತೂ ಮತ್ತೆಮತ್ತೆ ನೆನಪು.
ನಮ್ಮ ಭಾಗ್ಯ. ಅವರ ಬದುಕನ್ನು 300 ಪುಟಗಳ "ಬದುಕು ಬೇಸಾಯ" ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ವಿ.ಗಾಯತ್ರಿ.
"ಸಾವಯವ ಕೃಷಿಕನ ಮಹಾನ್ ಪಯಣ" ಎಂಬುದು ಶಿರೋನಾಮೆಯೊಂದಿಗಿನ ಟಿಪ್ಪಣಿ. ಪುಸ್ತಕದ ಹೆಸರೇ ಹೇಳುವಂತೆ, ಭರಮಗೌಡ್ರ ಬದುಕೇ ಬೇಸಾಯ. ಬದುಕಿನುದ್ದಕ್ಕೂ ಅವರ ಪ್ರಭಾವದಿಂದಾಗಿ ಸಾವಯವ ಕೃಷಿಗಿಳಿದ ರೈತರ ಸಂಖ್ಯೆ ಸಾವಿರಾರು. ಹಾಗೆಯೇ ಭರಮಗೌಡ್ರಿಗೆ ಬೇಸಾಯವೇ ಬದುಕು. ಈ ಭೂಮಿಯ ಮಣ್ಣಿನ ಕಣಕಣದ, ಗಿಡಗಳ ಕೋಶಕೋಶದ, ಭೂಮಿ - ಬೇಸಾಯದ ಅವಿನಾಭಾವ ಸಂಬಂಧದ ಸ್ಪಷ್ಟ ಅರಿವು ಅವರಿಗಿತ್ತು. ಎದುರು ಯಾರೇ ಇರಲಿ, ಬೇಸಾಯದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಅವರ ಬಾಯಿ ಮುಚ್ಚಿಸುವ ಛಾತಿಯೂ ಭರಮಗೌಡ್ರಿಗಿತ್ತು.
ಮಳೆಯಾಧಾರಿತ ಕೃಷಿಯ ಆಳ-ಅಗಲಗಳ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲ, ನಮ್ಮ ದೇಶದಲ್ಲಿ ಅದರ ಬಗ್ಗೆ ಹೊಸ ಅರಿವಿನ ಬೆಳಕು ಪಸರಿಸಿದ ಭರಮಗೌಡ್ರು "ಬೇಸಾಯ ಆರಂಭಿಸಿದ್ದು ರಾಸಾಯನಿಕ ಕೃಷಿಕರಾಗಿ" ಎಂಬುದು ಅಚ್ಚರಿಯ ವಿಷಯ. ಆದರೆ, "ಎಲ್ಲೋತಪ್ಪಾಗಿದೆ" ಎಂದು ಬಹಳ ಬೇಗನೇ ಕಂಡುಕೊಂಡದ್ದು ವಿಶೇಷ. ಸುಮಾರು ಮೂರು ದಶಕಗಳ ಮುಂಚೆ, ಮುಂಬೈಯಲ್ಲೊಂದು "ಸಹಜಕೃಷಿ - ಬದುಕಿನ ಕಾರ್ಯಗಾರ" ನಡೆಯಲಿದೆ ಎಂಬ ಸುದ್ದಿ ಸಿಕ್ಕಿದ್ದೇ ತಡ, ಭರಮಗೌಡರು ಗೆಳೆಯರೊಂದಿಗೆ ಅಲ್ಲಿಗೆ ಹೊರಟೇಬಿಟ್ಟರು. ಅಲ್ಲಿ ಸಾವಯವ ಕೃಷಿಯ ಅತಿರಥಮಹಾರಥರ ಭೇಟಿ; ಬೇಸಾಯದ ಹೊಸ ಜಗತ್ತಿನ ಸುಳಿವುದಕ್ಕಿತು. ಆಗ ಪ್ರಾರಂಭವಾಯಿತು ಸಾವಯವ ಕೃಷಿಯಲ್ಲಿ ಅವರ ಮಹಾನ್ ಪಯಣ.
"ಗದಗ್‍ನಂಥ ಶ್ರೀಮಂತ ಕೃಷಿ ಸಂಸ್ಕತಿಯ ನೆಲದಲ್ಲಿ ಪರಂಪರಾಗತ ರೈತ ಕುಟುಂಬದಲ್ಲಿ ಜನಿಸುವ ಭಾಗ್ಯ ಪಡೆದ ಭರಮಗೌಡ್ರರು, ತಂದೆಯವರು ನೇಗಿಲ ಮೇಲೆ ಕೂರಿಸಿಕೊಂಡು ಹೇಳಿತ್ತಿದ್ದ ಕಥೆಗಳನ್ನು ಕೇಳುತ್ತಾ; ಅವ್ವ, ದೊಡಮ್ಮನವರುಗಳು ಎಚ್ಚರಿಕೆಯಿಂದ ಸಂಗ್ರಹಿಸಿ, ಅರಿವಿಯಲ್ಲಿ ಗಂಟುಕಟ್ಟಿಟ್ಟ ಬೀಜಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಬಿತ್ತನೆ ಮಾಡುವುದನ್ನು ನೋಡುತ್ತಾ ಬೆಳೆದವರು. ಹೀಗೆ ಮೈಗೂಡಿಸಿಕೊಂಡ ನೆಲದ ಜ್ಞಾನ ಮುಂದೆ ಹೊರ ಪ್ರಪಂಚದೊಂದಿಗಿನ ನಿರಂತರ ಒಡನಾಟ, ಕೊನೆಯಿಲ್ಲದ ಓದುಗಳಿಂದ ದಕ್ಕಿಸಿಕೊಂಡ ಹೊಸ ಅರಿವಿನ ಕುಲುಮೆಯಲ್ಲಿ ಪಕ್ವಗೊಳ್ಳುತ್ತದೆ. ಅರಿವಿನ ಪಯಣದುದ್ದಕ್ಕೂ ಅವರ ಭಾಷೆ, ಅವರ ಮನೋಭಾವ ಕೂಡ ಬದಲಾಗುತ್ತಾ ಹೋಗುತ್ತದೆ. ತನ್ನ ಈ ವ್ಯಕ್ತಿಜ್ಞಾನವನ್ನು ಸಮಷ್ಟಿಜ್ಞಾನವಾಗಿಸುವತ್ತ ಇವರಿಟ್ಟ ಮೊದಲ ಹೆಜ್ಜೆ ಗೆಳೆಯರಾದ ಸಂಗಪ್ಪ ಕೋರಿ, ಡಾ.ಡಿ.ಸಿ.ಗಡ್ಡಿ, ಎಸ್.ಎಸ್.ನೆರೇಗಲ್, ಆರ್.ಎಸ್.ಪಾಟೀಲ್ ಮುಂತಾದವರೊಡಗೂಡಿ ಕಟ್ಟಿದ "ಧರಿತ್ರಿ ಬಳಗ". ಎಲ್ಲಾ ಏಳುಬೀಳಿನ ನಡುವೆ ಈ ಹೊತ್ತಿನ ವರೆವಿಗೂ ಅತ್ಯಂತ ಕ್ರಿಯಾಶೀಲವಾಗಿ ನಡೆದು ಬಂದಿರುವುದು "ಧರಿತ್ರಿ"ಯ ಹೆಗ್ಗಳಿಕೆ.
ಭರಮಗೌಡ್ರರು ತಮ್ಮ ನಿರಂತರ ಅರಿವಿನ ಹುಡುಕಾಟದಲ್ಲಿ ದಕ್ಕಿಸಿಕೊಂಡ ಅಮೂಲ್ಯಜ್ಞಾನವನ್ನು ನಿರರ್ಗಗಳವಾಗಿ ಹಂಚಿಕೊಳ್ಳತೊಡಗಿದಾಗ ನಾಡಿನಲ್ಲಿ ಒಂದು ಸಂಚಲನವೇ ಉಂಟಾಯಿತು. ರೈತ ಚಳುವಳಿಯಲ್ಲಿ ಮಳೆಯಾಶ್ರಿತ ರೈತರ ಧ್ವನಿಯೇ ಇಲ್ಲದಿದ್ದ ಸಮಯದಲ್ಲಿ ಮೂಡಿಬಂದ ಈ ಸಂವೇದನಾಶೀಲ ಗಟ್ಟಿಧ್ವನಿ ತನ್ನ ಸಾಚಾತನದಿಂದಾಗಿ ಸಾವಿರಾರು ರೈತರ ಆತ್ಮವಿಶ್ವಾಸದ ಸಂಕೇತವಾಗಿಬಿಟ್ಟತು. ಅವರ ಮಾತುಗಳನ್ನು ಕೇಳುತ್ತಿದ್ದ ಜನ "ಇಲ್ಲೆಂಥ ನಿಧಿ ಇದೆ!" ಎಂದು ಬೆಕ್ಕಸ ಬೆರಗಾಗಿ ಅದರ ಹಿಂದೆ ನಡೆಯತೊಡಗಿದರು, ಅವರನ್ನು ತಮ್ಮೆಡೆಗೆ ಬರಮಾಡಿಕೊಂಡರು" ಎಂದು ವಿ.ಗಾಯಿತ್ರಿ ಪುಸ್ತಕದ ಪ್ರಸ್ತಾವನೆಯಲ್ಲಿ ಭರಮಗೌಡ್ರ ಬದುಕನ್ನು ಕಟ್ಟಿಕೊಡುತ್ತಾರೆ.
"ಭರಮಗೌಡ್ರರಿಗಿದ್ದ ಜ್ಞಾನ ಅಪರೂಪದ ಜ್ಞಾನ. ಸ್ವಂತ ಅನುಭವದಿಂದ ಗಳಿಸಿಕೊಂಡ ಇಂತಹ ಜ್ಞಾನವನ್ನು ಮತ್ತೆ ಸೃಷ್ಟಿಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯೇ ಇದ್ದ ಸಭೆಯಾದರೂ ಚೂರೂ ರಾಜಿಯಾಗದೆ ತಮ್ಮ ಅನುಭವ-ವಿಚಾರಗಳನ್ನು ಸ್ಪಷ್ಟವಾಗಿ ತಣ್ಣಗೆ ಹೇಳುತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಅವರದ್ದು. ಅವರ ನೆಲಮೂಲದ ಆ ವಿವೇಕವನ್ನು ಸರ್ಕಾರದ ನೀತಿಗಳಲ್ಲಿ, ವಿಶ್ವವಿದ್ಯಾಲಯಗಳ ಬೋಧನೆಯಲ್ಲಿ ಕಿಂಚಿತ್ತಾದರೂ ಬಳಸಿಕೊಂಡಿದ್ದರೆ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿರುತ್ತಿತ್ತು. ಹಾಗಾಗಲು ಬಿಡಲಿಲ್ಲ. ಇದರಿಂದ ಕಳೆದುಕೊಂಡವರು ಭರಮಗೌಡ್ರರಂತೂ ಅಲ್ಲ " ಎಂದು ಭರಮಗೌಡ್ರರೆಂಬ ಜ್ಞಾನಖಜಾನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ಖ್ಯಾತ ಪರಿಸರವಾದಿಗಳಾದ ಅ.ನ.ಎಲ್ಲಪ್ಪ ರೆಡ್ಡಿ, ಹಾಗೆಯೇ, ಹೆಸರಾಂತ ಸಾವಯವ ಕೃಷಿಕರಾದ ಬಸವರಾಜು ಬಿ. ಸಂತೇಶಿವರ ಅವರ ಆಪ್ತ ನೆನಪು ಈ ಪುಸ್ತಕದಲ್ಲಿ ದಾಖಲಾಗಿರುವುದು ಹೀಗೆ: "ರೈತರನ್ನು ಕಂಡುಬಿಟ್ಟರೆ ಭರಮಗೌಡ್ರರಿಗೆ ಅದೆಂಥಾ ಅಭಿಮಾನವೋ. ರೈತರು ಎಲ್ಲಿ ಏನೇಕೇಳಿದರೂ ಅವರಿಗೆ ಪೂರ್ತಿ ಅರ್ಥವಾಗುವವರೆಗೆ ಬಿಡಿಸಿ ಬಿಡಿಸಿ ಹೇಳುತ್ತಿದ್ದವರು ನಮ್ಮ ಭರಮಗೌಡ್ರ ಒಬ್ಬರೇ, ಅಂಥ ಇನ್ನೊಬ್ಬರನ್ನು ನಾನು ನೋಡಿಲ್ಲ. ಯಾವುದೇ ಕಾರ್ಯಕ್ರಮವಿರಲಿ, ಸಭೆಗಳಿರಲಿ, ಚರ್ಚೆ ದಿಕ್ಕುತಪ್ಪುತ್ತಿದೆ ಎಂದಾಗ ನೂರಾರು ಪುರಾವೆಗಳನ್ನು, ಅನುಭವಗಳನ್ನು ನಿದರ್ಶನವಾಗಿ ಕೊಟ್ಟು ಅದನ್ನು ಸರಿದಾರಿಗೆ ಎಳೆದುಬಿಡುತ್ತಿದ್ದರು. ಪ್ರತಿಕ್ಷಣ ರೈತರ ಆಗುಹೋಗುಗಳ ಬಗ್ಗೆ ಚಿಂತನೆ ಮಾಡುತ್ತಿದ್ದ, ಅವರಿಗಾಗಿ ದೇಶ-ವಿದೇಶದ ಮಾಹಿತಿಯನ್ನೆಲ್ಲಾ ಹೊತ್ತುತರುತ್ತಿದ್ದ ಕಣ್ಮಣಿ ಅವರು".
'ಕೃಷಿಯಲ್ಲಿ ಬರುವ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಯಾವುದೇ ಸಮಸ್ಯೆ ಇದೆ ಎಂದಾದರೆ ಅದಕ್ಕೆ ಪರಿಹಾರ ಇದ್ದೇಇದೆ ಎಂದು ತಿಳಿದುಕೊಂಡು ಕಂಡುಹಿಡಿಯಲು ಪ್ರಯತ್ನಿಸಬೇಕು ' ಎಂಬ ನಂಬಿಕೆಯಲ್ಲಿ ಬದುಕಿಬಾಳಿದ ಮಹಾನ್ ಚೇತನ ಡಿ.ಡಿ.ಭರಮಗೌಡ್ರು.
"ನಾನೊಬ್ಬ ಇವತ್ತು ಕೇಂದ್ರಸರಕಾರದ ಯೋಜನಾ ಆಯೋಗದಲ್ಲಿ ರೈತಪ್ರತಿನಿಧಿ ಎಂದು ಹೇಳಿಕೊಳ್ಳಲು ಅಸಮಾಧಾನ ಅನಿಸುತ್ತದೆ. ಏಕೆಂದರೆ ಅಲ್ಲಿ ಎಲ್ಲವೂ, "ಸರ್ಕಾರಿ ಅಧಿಕಾರಿಗಳೇ ದೇವರು. ಅಧಿಕಾರಿಗಳ ಕೆಲಸ ದೇವರ ಕೆಲಸ" ಎಂಬ ನೀತಿಯಂತೆ ನಡೆಯುತ್ತದೆ. ಎಲ್ಲವನ್ನೂ ಇವರು ಮೊದಲೇ ತೀರ್ಮಾನ ಮಾಡಿಕೊಂಡು ಬಂದು ನೆಪಮಾತ್ರಕ್ಕೆ ಸಭೆ ಕರೆಯುತ್ತಾರೆ. ವರದಿಯಲ್ಲಿ "ರೈತ ಪ್ರತಿನಿಧಿಗಳೂ ಇದ್ದರು" ಎಂದು ಹೇಳುತ್ತಾರೆ" ಎಂಬುದಾಗಿ ನೇರಾನೇರ ಮಾತುಗಳಲ್ಲಿ ಸರಕಾರದ ಅತ್ಯುನ್ನತ ಮಟ್ಟದ ವ್ಯವಸ್ಥೆಯ ಬಗ್ಗೆ ತಮ್ಮ ಅಸಮಾಧಾನ ಬಿಚ್ಚಿಟ್ಟಿದ್ದಾರೆ ಭರಮಗೌಡ್ರು.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿಬೆಳೆದ ಭರಮಗೌಡ್ರು ಸಾವಯವ ಬೇಸಾಯದ ಜಗತ್ತಿನಲ್ಲಿ ಜಗದಗಲ ಬೆಳೆದವರು. ಒಬ್ಬ ಮನುಷ್ಯ ತಾನು ಬೆಳೆಯುತ್ತಲೇ ಇತರರನ್ನು ಹೇಗೆ ಬೆಳೆಸಬಹುದೆಂದು ದಾರಿತೋರಿದವರು. ಬದುಕಿನಲ್ಲಿ ಬೇಸಾಯ ದಲ್ಲಿ ಆಸಕ್ತಿ ಇರುವವರೆಲ್ಲರೂ ಓದಲೇಬೇಕಾದ ಪುಸ್ತಕ "ಬದುಕು ಬೇಸಾಯ".ಇದನ್ನು ಓದುತ್ತಾ ಓದುತ್ತಾ, ಓದುಗನ ಬದುಕಿನ ಕತ್ತಲು ಮಾಯವಾಗಿ ಬೆಳಕು ತುಂಬಿಕೊಳ್ಳತ್ತದೆ.
"ಸಾವಯವ ಕೃಷಿಕ ನೇಣಿಗೆ ಶರಣಾಗಲಾರ"ಎಂಬ ಭರಮಗೌಡ್ರ ಖಡಕ್ ಮಾತು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ _ ಈ ಮಹಾನ್ ಪಯಣಿಗನ ಪುಸ್ತಕ ಓದಿದ ನಂತರವೂ.