ಗೊಂದಲ.
ಮೂರು ದಿನ, ಮೂರು ತಿಂಗಳು, ಮೂರು ವರ್ಷ, ಮೂರು ದಶಕಗಳಲ್ಲಾಗುವ ಘಟನೆಗಳ ಸರಮಾಲೆಯನ್ನು ಮೂರೇ ತಾಸುಗಳಲ್ಲಿ ಸಿನಿಮಾದ ಪರದೆಯ ಮೇಲೆ ನೋಡಿ (ಸಾಧ್ಯವಾದರೆ) ಆನಂದಿಸಬಹುದು. ಸಮಯ ಹೇಗೆ ಘನೀಬವಿಸುತ್ತದೆ ಎಂಬುದನ್ನು ಅಲ್ಲಿ ನೋಡಲು ಸಾಧ್ಯ. ನಿರೂಪಣೆ ಸರಿ ಇದ್ದರೆ ಸಮಯ ಹಾಗೆ ಸರಿಯುವುದು ನಮಗೆ ಸಮಸ್ಯೆ ಒಡ್ಡುವುದಿಲ್ಲ. ಆದರೆ ಕತೆ ಎಡವಿದರೆ? ನಿರ್ದೇಶಕನ ಕೈಗಡಿಯಾರ ನಿಂತುಹೋಗಿದ್ದರೆ?
ಮೊನ್ನೆ ಯಾವುದೋ ಒಂದು ಕನ್ನಡ ಸೀರಿಯಲ್ ನೋಡಿತ್ತಿದ್ದೆ. ಅಲ್ಲಿ ಅಕ್ಕ-ತಂಗಿ ಇದ್ದಾರೆ. ತಂಗಿ ಹೊಸದಾಗಿ ಗಂಡನ ಮನೆಗೆ ಹೋಗಿ ತನಗೆ ಬೇಕಾದ ಎಲ್ಲಾ ಸಾಮಾನುಗಳನ್ನು ತರಲು ಪತಿದೇವನಿಗೆ ಮೂರು ತಿಂಗಳ ಅವಧಿ ನೇಡಿದ್ದಾಳೆ. ಅದೇ ಸಮಯಕ್ಕೆ ಅಕ್ಕ ಬಸುರಿ ಎಂದು ತಿಳಿದು ಅತ್ತೆ-ಮಾವ/ತಂದೆ-ತಾಯಿ ಮಾಮೂಲಿನಂತೆ ಕುಣಿದು ಕುಪ್ಪಳಿಸುತ್ತಾರೆ. ಸಹಜ ಬಿಡಿ. ಆದರೆ ಈ ಸಿರಿಯಲ್‍ನ ನಿರ್ದೇಶಕರ ಸಾಪೇಕ್ಷವಾದದ ಪ್ರಕಾರ ತಂಗಿ ನೀಡಿದ ಮೂರು ತಿಂಗಳ ಅವಧಿ ಮುಗಿಯುವ ಹೊತ್ತಿಗೆ ಅಕ್ಕನ ಬಸಿರಿಗೆ ಎಂಟು ತಿಂಗಳಾಗಿರುತ್ತದೆ. ಇದು ಹೇಗಾಯಿತು ಎಂದು ನಾನು ಚಿಂತಿಸುವ ಹೊತ್ತಿಗೆ ಆ ಎಪಿಸೋಡ್ ಮುಗಿದೇಹೋಗಿರುತ್ತದೆ.
ಈ ಸಮಯ ಪಾಲನೆ ಬಗ್ಗೆ ನಾನು ಪದೇ ಪದೇ ತಲೆ ಕೆಡಿಸಿಕೊಳ್ಳುತ್ತಿರುತ್ತೇನೆ. ಒಂದು ಸೀರಿಯಲ್‍ನಲ್ಲೋ ಅಥವಾ ಚಿತ್ರದಲ್ಲೋ ಕೊಲೆ ನಡೆದ ತಕ್ಷಣ ವಿಚಾರಣೆ ಪ್ರಾರಂಭವಾಗಿ ತೀರ್ಪು ಸಹ ಹೊರಬೀಳುತ್ತದೆ. ನನಗೆ ಅದು ಸಮಸ್ಯೆಯಾಗಿ ಕಾಣುವುದಿಲ್ಲ. ನನ್ನ ಸಮಸ್ಯೆ ಎಂದರೆ ನಮ್ಮ ಈ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಲೆ-ವಿಚಾರಣೆ-ತೀರ್ಪು ಈ ಪ್ರಕ್ರಿಯೆಗೆ 4-5 ವರ್ಷ ಬೇಡವೆ? ನಿಜ. ಇದನ್ನೆಲ್ಲ ತೆರೆಯ ಮೇಲೆ ತೋರಿಸಲಾಗುವುದಿಲ್ಲ. ಆದರೆ ಈ ಅವಧಿಯಲ್ಲಿ ಹೀರೋ, ಹೀರೋಯಿನ್, ಅವರ ತಂದೆ ತಾಯಂದಿರು, ಇವರೆಲ್ಲ ಏನು ಮಾಡಿಕೊಂಡಿದ್ದರು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ಈ ಗೊಂದಲದಲ್ಲಿ ಬೀಳುವ ನಾನು ಕತೆಯ ಮುಂದಿನ ಭಾಗದಲ್ಲಿ ತಲ್ಲೀನನಾಗುವ ಬದಲು ಹಿಂದಿನ ಭಾಗದಲ್ಲೇ ಉಳಿದುಬಿಡುತ್ತೇನೆ. ಅತ್ತ ಕತೆ ಮುಂದುವರೆದು ನನ್ಲ್ಲಿ ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸತೊಡಗಿರುತ್ತದೆ.
ಈ ಸಾಪೇಕ್ಷವಾದವಷ್ಟೇ ನನ್ನ ಸಮಸ್ಯೆ ಅಲ್ಲ. ಭಾರ ಎತ್ತುವ ಬಗ್ಗೆ ಒಲಿಂಪಿಕ್ಸ್‍ನಲ್ಲಲ್ಲ, ತೆರೆಯ ಮೇಲೆ ಸಹ ನಾನು ಗೊಂದಲಕ್ಕೊಳಗಾಗಿದ್ದೇನೆ. ಹೀರೋ ಬಿಡಿ; ಅವನು ಬಲಸಾಲಿಯಾಗಿರುತ್ತಾನೆ. ಆದರೆ ನಮ್ಮ ಹೀರೋಯಿನ್‍ಗಳು ಸಹ ತಾವು ಪ್ರಯಾಣ ಮಾಡುವಾಗ ತಮ್ಮ ಸೋಟ್‍ಕೇಸ್‍ಗಳನ್ನು ಲೀಲಾಜಾಲವಾಗಿ ಕೊಂಡೊಯ್ಯುತ್ತಾರೆ. ಆಕೆಯನ್ನು ಮನೆಯಿಂದ ಹೊರಹಾಕಿದ್ದರಂತೂ ಮಳೆಯಲ್ಲೂ - ಆ ಸಮಯದಲ್ಲಿ ಮಳೆ ಖಂಡಿತ ಬರುತ್ತಿರುತ್ತದೆ - ಆಕೆ ತನ್ನ ಬಟ್ಟೆ ಬರೆ ತುಂಬಿದ ಸೂಟ್‍ಕೇಸನ್ನು ತಾನೇ ಎತ್ತಿ ನಡೆದಿರುತ್ತಾಳೆ. ಆದರೆ ಹಾಡಲ್ಲದ ಸಮಯದಲ್ಲೂ ಆಕೆಯ ಭುಜಗಳಿಗೆ ಆ ಭಾರ ಎತ್ತಲು ಶಕ್ತಿ ಇರುತ್ತದೆ. ಇದು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ನಾನು ಯಥಾ ಪ್ರಕಾರ ತಲೆ ಕೆಡಿಸಿಕೊಂಡಿರುತ್ತೇನೆ.
ಈ ಸೂಟ್‍ಕೇಸ್ ಬಿಡಿ. ಬಂಗಾರದ ಬಿಸ್ಕತ್‍ಗಳಿರುವ ಒಂದು ದೊಡ್ಡ ಕ್ರೇಡನ್ನು ಲೀಲಾಜಲವಾಗಿ ಸಾಗಿಸುವ ಕಳ್ಳಸಾಗಣೆದಾರರನ್ನು ನಾನು ತೆರೆಯ ಮೇಲೆ ನೋಡಿ ನನ್ನ ಭಕ್ತ ಅನೇಕ ಸಂಕಟಗಳನ್ನು ಎದುರಿಸುತ್ತಾನೆ. ಆದರೆ ನಮ್ಮ ಹಾಕಿ ತಂಡದಂತೆ ಅವನು ಸೋಲನ್ನು ಅನುಭವಿಸುವುದಿಲ್ಲ. ಸೋಲಿಲ್ಲದ ಸರದಾರ ಚುನಾವಣೆಯಲ್ಲಿ ಗೆಲ್ಲುವಂತೆ ಈ ನಮ್ಮ ಭಕ್ತ ದೇವನೊಡ್ಡುವ ಎಲ್ಲ ಪರೀಕ್ಷೆಗಳಲ್ಲೂ ಪಾಸ್. ಕೊನೆಗೆ ದೇವ ವಿಧಿಯಿಲ್ಲದೆ ಪ್ರತ್ಯಕ್ಷನಾಗಿ "ನಿನ್ನ ಭಕ್ತಿಗೆ ಮೆಚ್ಚಿದೆ..." ಎಂಬ ಡೈಲಾಗ್ ಹೇಳುತ್ತಾನೆ. ವರ ಕೊಡುತ್ತಾನೆ.
ಇಲ್ಲಿ ನನ್ನ ಸಮಸ್ಯೆ ಎಂದರೆ ಎಲ್ಲವನ್ನೂ ತಿಳಿದಿರುವ ಈ ನಮ್ಮ ದೇವನಿಗೆ ನನ್ನ ಭಕ್ತ ತನ್ನೆಲ್ಲ ಪರೀಕ್ಷೆಗಳಲ್ಲೂ ಪಾಸಾಗುತ್ತಾನೆ ಎಂಬುದು ಮೊದಲೇ ಗೊತ್ತಿರುವುದಿಲ್ಲವೆ? ಗೊತ್ತಿದ್ದರೂ ಈ CET, GRET, GATE, IAS, IRS ಮುಂತಾದ ಪರೀಕ್ಷೆಗಳಿಗೆ ತನ್ನ ಭಕ್ತನನ್ನು ಒಡ್ಡಬೇಕೇಕೆ ಎಂಬುದೇ ನನ್ನ ಗೊಂದಲ. ಎಲ್ಲವೂ ಗೊತ್ತಿರುವ ದೇವನಿಗೆ ನನ್ನ ಗೊಂದಲವೂ ತಿಳಿಯುತ್ತದೆ ಎಂದು ನಾನೆಂದುಕೊಂಡಿದ್ದೇನೆ.
ಆದರೆ ಈ ದೇವರ ಕಷ್ಟ ನನಗೆ ಗೊತ್ತಿದೆ. ಏಕೆಂದರೆ ನನ್ನ ಗೊಂದಲಗಳು ಒಂದೇ, ಎರಡೇ...
ಉದಾಹರಣೆಗೆ ತಿ.ತಿ.ಯನ್ನೇ ತೆಗೆದುಕೊಳ್ಳಿ. ತಿ.ತಿ. ಎಂದರೆ ತಿರುಪತಿ ತಿಮ್ಮಪ್ಪ ಉರುಫ್ ಬಾಲಾಜಿ ಉರುಫ್ ಲಾರ್ಡ್ ವೆಂಕಟೇಶ್ವರ ಯಾನೆ ಏಡುಕುಂಡಲವಾಡ, ಎಟಿಸೆಟರಾ. "ದೇವನೊಬ್ಬ ನಾಮ ಹಲವು" ಎಂಬುದು ಇದರಿಂದಲೇ ಸೃಷ್ಟಿಯಾಗಿರಬಹುದೇ ಎಂಬುದರ ಬಗ್ಗೆ ನನ್ನ ಗೊಂದಲ ಇದ್ದೇಯಿದೆ. ಅದರಲಿ, ತಿರುಪತಿ ತಿಮ್ಮಪ್ಪನನ್ನು ಭಕ್ತಾದಿಗಳು ಶೋಷಣೆ ಮಾಡಿತ್ತಿರುವುದರ ಬಗ್ಗೆ ನನಗೆ ಗೊಂದಲ ಕಾಡುತ್ತಿದೆ. ಬೆಳಿಗ್ಗೆ ನಾಲ್ಕಕ್ಕೆಲ್ಲ ಏಳುವ ತಿಮ್ಮಪ್ಪ - ಅಂದ ಹಾಗೆ ಎಚ್ಚೆನ್ ಸಹ ಇಷ್ಟು ಬೇಗ ಏಳುತ್ತಿರಲಿಲ್ಲ. ಅವರು 4:30ಕ್ಕೆ ಏಳುತ್ತಿದ್ದರಂತೆ - ಮಲಗುವುದು ರಾತ್ರಿ 1ಕ್ಕೆ ನಡೆಯುವ ಶಯನೋತ್ಸವದ ನಂತರವೇ. ಪಾಪ! ಅವನಿಗೆ ಪ್ರತಿ ರಾತ್ರಿ ಮೂರೇ ತಾಸು ವಿಶ್ರಾಂತಿ. ಪುನರಪಿ ಸುಪ್ರಭಾತ, ಪುನರಪಿ ಶಯನೋತ್ಸವಗಳಲ್ಲಿ ಅವನ ನೆಮ್ಮದಿ ಕೆಟ್ಟಿಲ್ಲವೇಕೆ ಎಂಬುದರ ಬಗ್ಗೆ ನನಗೆ ಗೊಂದಲವಾಗಿದೆ. ದುಡ್ಡು ಬೇಕಿದ್ದರೆ ವಿಶ್ರಾಂತಿ ಇಲ್ಲದೆ ದುಡಿಯಲೇಬೇಕು ಎಂದು ನಮ್ಮ ಐಟಿ ಪಡ್ಡೆ ಹುಡುಗರು ಮಾಡುತ್ತಿರುವುದಕ್ಕೆ ತಿ.ತಿ. ಸ್ಫೂರ್ತಿಯೋ? ನನಗೆ ಯಥಾಪ್ರಕಾರ ಗೊಂದಲ, "ಪುನರಪಿ ಸುಪ್ರಭಾತ, ಪುನರಪಿ ಶಯನೋತ್ಸವ" ಉನ್ನಬೇಕೋ, "ಪುನರಪಿ ಶಯನೋತ್ಸವ, ಪುನರಪಿ ಸುಪ್ರಭಾತ" ಎಂದು ಹೇಳಬೇಕೋ ಎನ್ನುವ ಗೊಂದಲವಿಲ್ಲವೇ ಎಂದು ನೀವು ಕೇಳಬೇಕಿಲ್ಲ. ಆ ಗೊಂದಲವೂ ಇದೆ.
ರಾಜಕಾರಣಿಗಳ ಬಗ್ಗೆಯೂ ನನಗೆ ಗೊಂದಲ ಇದೆ. ಮೊನ್ನೆ ದೇವೇಗೌಡರು "ಈ ದೇವೇಗೌಡನಿಗೆ ಭಯವೆಂಬುದೇ ಇಲ್ಲ"ಎಂದು ಹೇಳಿದ್ದು ನಿಮಗೆ ನೆನಪಿದೆ ತಾನೆ? ಅಂದರೆ ಮತದಾರರ ಬಗ್ಗೆಯೂ ಅವರಿಗೆ ಹೆದರಿಕೆ ಇಲ್ಲವೆ? ಎಂಬುದರ ಬಗ್ಗೆ ನನಗೆ ಗೊಂದಲವಿದೆ. ನಿಮಗೆ? ಭಯ ಇಲ್ಲದಿರುವುದರಿಂದಲೇ ಅವರು ಸಭೆಗಳಲ್ಲಿ ನಿದ್ರಿಸುವರೆ? ಎಂಬ ಗೊಂದಲದಿಂದಾಗಿ ನನಗೆ ರಾತ್ರಿಯೂ ನಿದ್ದೆ ಬರದು.
ಹೀಗೆ ನಾನು ಮುಂದುವರಿಸುತ್ತಲೇ ಇರಬಹುದು. ಆಗ ಇದು ಮುಗಿಯುವುದೋ ಇಲ್ಲವೋ ಎಂಬ ಗೊಂದಲ ನಿಮಗಾಗಬಹುದು, ಅಲ್ಲವೆ?
(ಚಿತ್ರ ಕೃಪೆ ಗೂಗಲ್)