ನಾನು ನೋಡಿದ ಚಿತ್ರ - ಗುಡ್ ಮಾರ್ನಿಂಗ್ ವಿಯೆಟ್ನಾಂ
IMDb : http://www.imdb.com/title/tt0093105/?ref_=nv_sr_1
ನನ್ನ ನೆಚ್ಚಿನ ನಟ ರಾಬಿನ್ ವಿಲಿಯಮ್ಸ್ (Robin Williams) ನ ಚಿತ್ರವಾದ "ಗುಡ್ ಮಾರ್ನಿಂಗ್ ವಿಯೆಟ್ನಾಂ " ೧೯೮೭ರಲ್ಲಿ ತೆರೆಕಂಡಿತು. ಈ ಸಿನಿಮಾ ವಿಯೆಟ್ನಾಂ ಯುಧ್ಧ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಬರುವ ಒಬ್ಬ ರೇಡಿಯೋ ಜಾಕಿಯ ಕುರಿತಾದ ಕಥೆ.
ವಿಯೆಟ್ನಾಂ ಯುಧ್ಧದ ಭೀಕರತೆ ಕಂಡು ಬೇಸತ್ತು ಹೋಗಿದ್ದ ಸೈನಿಕರಲ್ಲಿ ಕೊಂಚ ಉತ್ಸಾಹ ಮೂಡಿಸಲು ಅಲ್ಲಿ ನಿಯೋಜನೆಗೊಂಡಿದ್ದ ಒಬ್ಬ ಜನರಲ್ ತಾನು ಬೇರೆಲ್ಲೊ ಕೇಳಿದ ರೇಡಿಯೋ ಕಾರ್ಯಕ್ರಮ ತುಂಬಾ ಹಾಸ್ಯಭರಿತವಾದದ್ದು ಎಂದೆನಿಸಿ ಆ ಕಾರ್ಯಕ್ರಮದ ರೇಡಿಯೋ ಜಾಕಿಯನ್ನು ವಿಯೆಟ್ನಾಂಗೆ ಕರೆಸುತ್ತಾನೆ. ಹಾಗೆ ಬರುವವನೇ ಆರ್. ಜೆ ಏಡ್ರಿಯನ್ ಕ್ರಾನವರ್ (Adrian Cronauer).
ಏಡ್ರಿಯನ್ ವಿಯೆಟ್ನಾಂಗೆ ಆಗಮಿಸಿದಾಗ ಅಲ್ಲಿನ ಉಷ್ಣ ವಾತಾವರಣಕ್ಕೇ ಸುಸ್ತು ಹೊಡೆದಾಗ ಅವನ ಸಹಾಯಕನಾಗಿ ನಿಯೋಜನೆಗೊಂಡಿದ್ದ ಎಡ್ವರ್ಡ್ ಗಾರ್ಲಿಕ್ ( ಆತನ ಪಾತ್ರದಲ್ಲಿ ಫಾರೆಸ್ಟ್ ವಿಟ್ಟೇಕರ್ ) ನಿಧಾನವಾಗಿ ಅಲ್ಲಿನ ಸಂಸ್ಕೃತಿ , ಏಡ್ರಿಯನ್ ಮರೆತೇಹೋದಂತಿದ್ದ ಮಿಲಿಟರಿ ಶಿಸ್ತು, ಕಾರ್ಯಕ್ರಮ ನಡೆಸುವ ಕ್ರಮ ಮತ್ತು ಆತನ ಹಿರಿಯ ಅಧಿಕಾರಿಗಳು ಎಲ್ಲವನ್ನು ಪರಿಚಯಿಸುತ್ತಾನೆ.
ಮಿಲಿಟರಿ ಜಾಯಮಾನಕ್ಕೇ ಸೇರದವನಂತೆ ತುಂಬಾ ಹಾಸ್ಯಭರಿತವಾಗಿ ವಿವಾದಿತ ವಿಷಯಗಳನ್ನೂ ಒಳಗೊಂಡಂತೆ ಕಾರ್ಯಕ್ರಮ ನಡೆಸುತ್ತ ಎಲ್ಲ ಸೈನಿಕರ ಪ್ರಶಂಸೆ ಗಳಿಸುತ್ತಾನೆ. ಅವನ ಈ ನಡವಳಿಕೆ ಹಿರಿಯ ಅಧಿಕಾರಿಗಳಿಗೆ ಇಷ್ಟವಾಗದೆ ಜನರಲ್ ಬಳಿ ದೂರು ಹೇಳಿದರೂ ಜನರಲ್ ಅದನ್ನೆಲ್ಲಾ ತಳ್ಳಿಹಾಕುತ್ತ ಅವನಿಗೆ ಬೆಂಬಲ ಕೊಡಲು ಮುಂದಾಗುತ್ತಾನೆ.
ಇದೆಲ್ಲರದರ ಮಧ್ಯೆ ಏಡ್ರಿಯನ್ ಹಿಂದೆ ತಾನು ನೋಡಿದ ಒಂದು ವಿಯೆಟ್ನಾಂ ಹುಡುಗಿಯನ್ನು ಮತ್ತೆ ನೋಡಿ ಆಕೆ ಹೋಗುತ್ತಿದ್ದ ಇಂಗ್ಲಿಷ್ ಕ್ಲಾಸ್ ರೂಮಿನವರೆಗೂ ಹಿಂಬಾಲಿಸುತ್ತ ಬರುತ್ತಾನೆ. ಅಲ್ಲಿ ಪಾಠ ಹೇಳಿಕೊಡುತ್ತಿದ್ದ ಒಬ್ಬ ಅಮೇರಿಕನ್ ಸೈನಿಕನನ್ನು ಪುಸಲಾಯಿಸಿ ತಾನೇ ಪಾಠ ಮಾಡಲು ನಿಲ್ಲುತ್ತಾನೆ. ಆಕೆಗೆ ಸನಿಹವಾಗಲು ಆಕೆಯ ತಮ್ಮನೊಂದಿಗೆ ಸ್ನೇಹ ಬೆಳೆಸುತ್ತಾನೆ. ಹೀಗೇ ಏಡ್ರಿಯನ್ ನ ಜೀವನ ಸಾಗುತ್ತಿರುವಾಗ ತಾನು ಸದಾ ಕುಡಿಯುತ್ತಿದ್ದ ಬಾರ್ ನಲ್ಲಿ ಸ್ಪೋಟವಾಗಿ ಅದರಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಳ್ಳುತ್ತಾನೆ. ಇದರಿಂದ ವಿಚಲಿತನಾದ ಆದ ತನ್ನ ರೇಡಿಯೋ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ಅಮಾನತುಗೊಳ್ಳುತ್ತಾನೆ. ಅಮಾನತಾದ ಅವಧಿಯಲ್ಲಿ ವಿಯೆಟ್ನಾಂ ಹುಡುಗಿಯ ಬಗ್ಗೆ ತಿಳಿಯಲು ಆಕೆಯ ತಮ್ಮನೊಟ್ಟಿಗೆ ಅವರ ಹಳ್ಳಿಗೆ ತೆರಳುತ್ತಾನೆ. ಅಲ್ಲಿ ವಿಯೆಟ್ನಾಂ ನ ಹಳ್ಳಿಯ ಜೀವನ ಕಂಡು ಅವರೊಟ್ಟಿಗೆ ಆನಂದಿಸುತ್ತಾ ಇರುವಾಗ ಅವನ ಮತ್ತು ಆ ಹುಡುಗಿಯ ನಡುವೆ ಸ್ನೇಹವೂ ಕೂಡ ಸಾಧ್ಯವಿಲ್ಲ ಎಂದು ಆ ಹುಡುಗಿ ಹೇಳಿದಾಗ ಏಡ್ರಿಯನ್ ಗೆ ಆಕೆ ಹೇಳುತ್ತಿದ್ದುದು ನಿಜವೆನಿಸಿ ಮರಳುತ್ತಾನೆ.
ಅತ್ತ ಅವನ ಕಾರ್ಯಕ್ರಮ ವಂಚಿತರಾದ ಅನೇಕ ಸೈನಿಕರು ಆತನ ಬದಲಿಗೆ ಕಾರ್ಯಕ್ರಮ ನಡೆಸಿಕೊಡುತ್ತಿದವನಿಂದ ಬೇಸರಗೊಂಡು ಏಡ್ರಿಯನ್ ನ ಕಾರ್ಯಕ್ರಮ ಕೋರಿ ಪತ್ರಗಳನ್ನು ಬರೆಯುತ್ತಾರೆ. ಇದನ್ನು ನೋಡಿದ ಜನರಲ್ ಏಡ್ರಿಯನ್ ಮಾಡಿದ ತಪ್ಪು ತುಂಬಾ ಸಣ್ಣದು ಎಂದೆನಿಸಿ ಆತನಿಗೆ ಮತ್ತೆ ಕಾರ್ಯಕ್ರಮ ನಡೆಸಲು ಅಪ್ಪಣೆ ಕೊಡುತ್ತಾನೆ. ಆದರೆ ಇದರಿಂದ ಅವಮಾನ ಅನುಭವಿಸಿದ ಆತನ ಹಿರಿಯ ಅಧಿಕಾರಿ ಆತ ಫೀಲ್ಡ್ ನಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿ ಅಪ್ಪಣೆ ಕೋರಿದಾಗ ಬೇಕೆಂದೇ ಸುರಕ್ಷಿತವಲ್ಲದ ಜಾಗಕ್ಕೆ ಹೋಗಲು ಅಪ್ಪಣೆ ಕೊಡುತ್ತಾನೆ. ಹೀಗೆ ಗೊತ್ತಿಲ್ಲದೇ ಹೋದ ಎಡ್ರಿಯನ್ ಮತ್ತು ಎಡ್ವರ್ಡ್ ಲ್ಯಾಂಡ್ ಮೈನ್ ಗೆ ಸಿಕ್ಕಿ ಜೀಪು ಕಳೆದುಕೊಳ್ಳುತ್ತಾರೆ. ಕಾಡಿನಲ್ಲಿ ನಡೆಯುತ್ತಾ ವಿಯೆಟ್ ಕಾಂಗ್ (viet cong) ನವರಿಗೆ ಸಿಕ್ಕಿಬೀಳುತ್ತಾರೆ. ಇಷ್ಟರಲ್ಲಿ ಅಂದು ಕ್ಲಾಸಿಗೆ ಏಡ್ರಿಯನ್ ಬರದಿದ್ದನ್ನು ನೋಡಿ ಗಾಬರಿಗೊಂಡ ವಿಯೆಟ್ನಾಂ ಹುಡುಗ ಏಡ್ರಿಯನ್ ನ ಬೇಸ್ ಗೆ ಹೋಗಿ ವಿಚಾರಿಸಿದಾಗ ಆತ ಹೋಗಿರುವ ಜಾಗದ ಬಗ್ಗೆ ಸುಳಿವು ಸಿಕ್ಕಿ ಅವರು ಹೋದ ಕಡೆಗೆ ದೌಡಾಯಿಸುತ್ತಾನೆ. ಹೇಗೋ ಹೋದ ಅವರಿಬ್ಬರನ್ನು ಬದುಕಿಸಿ ಕರೆತರುತ್ತಾನೆ.
ಆದರೆ ಇಷ್ಟು ಮಾಹಿತಿ ಸಿಕ್ಕ ಆತನ ಹಿರಿಯ ಅಧಿಕಾರಿ ಏಡ್ರಿಯನ್ ಒಡನಾಟದಲ್ಲಿ ಇರುವ ಆ ಹುಡುಗ ವಿಯೆಟ್ ಕಾಂಗ್ ಗೆ ಸೇರಿದವ ಎಂಬ ವಿಷಯ ಕಲೆ ಹಾಕಿ ಏಡ್ರಿಯನ್ ನಂತಹ ಶತ್ರುಗಳ ಜೊತೆ ಒಡನಾಟ ಇರುವವನಿಗೆ ಮತ್ತೆ ಅಲ್ಲಿ ಕಾರ್ಯಕ್ರಮ ನಡೆಸಲು ಅಪ್ಪಣೆ ನೀಡದಂತೆ ಜನರಲ್ ಗೆ ದೂರು ನೀಡುತ್ತಾನೆ. ಆ ಹುಡುಗ ವಿಯೆಟ್ ಕಾಂಗ್ ಗೆ ಸೇರಿದವ ಎಂದು ಗೊತ್ತಾದ ಏಡ್ರಿಯನ್ ಗೂ ಸಿಟ್ಟು ಬಂದು ಆತನನ್ನು ಹುಡುಕಿ ಆತನೊಟ್ಟಿಗೆ ಆತ ಮಾಡಿದ ಮೋಸದ ಬಗ್ಗೆ ಮಾತನಾಡಲು ಹೋದಾಗ ಆ ಹುಡುಗ ಹೇಳುವ ಮಾತುಗಳೂ ಸತ್ಯ ಎನಿಸಿ ಯುದ್ಧದ ಬಗ್ಗೆ ಬೇಸರಗೊಂಡು ಕೊನೆಯ ಬಾರಿ ತನ್ನ ಇಂಗ್ಲಿಷ್ ಕ್ಲಾಸ್ ವಿದ್ಯಾರ್ಥಿಗಳ ಜೊತೆ ಒಂದು ಬೇಸ್ ಬಾಲ್ ಆಟವಾಡಿ, ತನ್ನ ಅಭಿಮಾನಿಗಳಿಗಾಗಿ ಒಂದು ಕಡೆಯ ಕಾರ್ಯಕ್ರಮ ರೆಕಾರ್ಡ್ ಮಾಡಿಟ್ಟು ಆ ಊರಿನಿಂದ ಹೊರಡುತ್ತಾನೆ.
ಹಾಸ್ಯ ಚಿತ್ರ ಮತ್ತು ಯುಧ್ಧ ಸಂಬಂಧಿತ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರದಲ್ಲಿ ರಾಬಿನ್ ವಿಲಿಯಮ್ಸ್ ಅಭಿನಯ ಅಮೋಘವಾಗಿದೆ.
- ವಿಶ್ವನಾಥ್