ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 2)
ರೂಢಿಯಂತೇ ಮಾಳದ ಕೆಳಗೆ ಸಣ್ಣ ಬೆಂಕಿ ಹಾಕುತ್ತಾನೆ. ಚಳಿ ಹೋಗಲಿ ಎಂಬುದೊಂದೇ ಅಲ್ಲ. ಬೆಂಕಿ ಕಂಡರೆ ಪ್ರಾಣಿಗಳು ಬರುವುದಿಲ್ಲ ಎಂಬ ಧೈರ್ಯ. ಆದರೆ ದಿನಾ ಕಾಣುವ ಬೆಂಕಿಗೆ ಹೆದರುವವರಾರು? ಅದು ಅವನಿಗೂ ಗೊತ್ತು. ಅದಕ್ಕೇ ಬ್ಯಾಟರಿ ಹಿಡಿದು ಹೊರಡುತ್ತಾನೆ. ಗದ್ದೆಯ ಬಯಲನ್ನು ಸುತ್ತಿ ಬರಲಿಕ್ಕೆ. ಕಬ್ಬಿನ ಗದ್ದೆಯ ಒಳಹೊಕ್ಕು ನೋಡಬೇಕು. ಹೊರಗಿನಿಂದ ನೋಡಿದರೆ ಒಳಹೊಕ್ಕವರು ಕಾಣುವುದೇ ಇಲ್ಲ.
ಕತ್ತಲಲ್ಲಿ ಗದ್ದೆ ಹಾಳೆಯ ಮೇಲೆ ನಡೆಯುವುದು ಸುಲಭವಲ್ಲ. ಕಡಿದಾದ ಹಾಳೆಗಳು (ಬದು) ಹೆಜ್ಜೆ ತಪ್ಪಿದರೆ ಆ ಗದ್ದೆಯ ಅರಲೊಳಗೇ ಬೀಳುವುದು. ಗದ್ದೆಯಂಚಿಗೆ ಸತತ ನೀರು ಹರಿಯುವುದರಿಂದ ತಣ್ಣಗೆ ಮೆಟ್ಟಿದ್ದು ಕಪ್ಪೆಯೋ - ಹಾವೋ ಗೊತ್ತಾಗುವುದಿಲ್ಲ. ಎಲ್ಲೆಲ್ಲಿ ಏಡಿ ಜಿಗಣೆಗಳಿವೆಯೋ ಯಾರಿಗೆ ಗೊತ್ತು? ಮತ್ತೆ - ಒಂಟಿ ಹಂದಿ ಎದುರಾದರೆ ಎಷ್ಟು ಎಚ್ಚರ ವಹಿಸಿದರೂ ಸಾಲದು. ಬೇಡವೆಂದರೂ, ಮನಸ್ಸಿಗೆ ಮೊನ್ನೆಯ ಯಕ್ಷಗಾನದಲ್ಲಿ ನೋಡಿದ "ಅಭಿಮನ್ಯು" ನೆನಪಿಗೆ ಬರುತ್ತಾನೆ!
ಒಂದು ಸುತ್ತು ಹೋಗಿ ಬರುವಷ್ಟರಲ್ಲಿ ಮಧುರಾತ್ರಿಯಾಗುತ್ತದೆ. ತಿರುಗಿ ಮಾಳಕ್ಕೆ ಬಂದವನು ಬೆಂಕಿ ಕಾಯಿಸುತ್ತಾ ಕುಳಿತುಕೊಳ್ಳುತ್ತಾನೆ. ಕಾಲಕಳೆಯಲು ಭಾಗೋತರ ಹಾಡು ನೆನಪಾಗುತ್ತದೆ. "ಕುರುರಾಯನಿದನೆಲ್ಲ...ಕಂಡು...ಸಂತಾಪದೀ..." ಹಾಡು ಆರಂಭ. ಅದಕ್ಕೆ ಚಂಡೆ ಇರದಿದ್ದರೆ ಹೇಗೆ? ಪಕ್ಕದಲ್ಲಿ ಉಂಟಲ್ಲ ಡಬ್ಬಿ. ಚಂಡೆಯ ಬಡಿತ ಶುರು! ಒಮ್ಮೆಲ್ಲೇ ಮೊಳಗಿದ ಡಬ್ಬಿ ಬಡಿತಕ್ಕೆ ಆಗತಾನೇ ಹೊಲದೊಳಕ್ಕೆ ಕಾಲಿಟ್ಟ ಪ್ರಾಣಿಗಳು ಹೆದರಿ ದಿಕ್ಕಾಪಾಲು, ಪರಾರಿ.
ಏನು ಮಾಡಿದರೂ ಹೊತ್ತು ಕಳೆಯುವುದಿಲ್ಲ. ಮತ್ತೊಂದು ಕವಳ ಹಾಕಿದ. ಆಚೆ ಗದ್ದೆಗಾದರೂ ಹೋಗಿ ಕೃಷ್ಣ ಬಾವನ ಬಳಿ ಸೊಸೈಟಿಯಲ್ಲಿ ಸಕ್ಕರೆ, ಚಿಮಣಿ ಎಣ್ಣೆ ಬಂದಿದೆಯೋ ಕೇಳಿಕೊಂಡು ಬರೋಣವೆಂದು ಹೊರಟ. ಕೂಗು ಹಾಕುತ್ತಾ ತಿರುಗಿ ಬಂದಾಗ ಬೆಳಗಿನ ಒಂದು ಜಾವ ಕಳೆದಿದೆ. ನಿದ್ದೆ ತಡೆಯಲಾಗುತ್ತಿಲ್ಲ. ಹಗಲು ಕೆಲಸ ಮಾಡಿದ ಆಯಾಸ ಬೇರೆ. ಇನ್ನೊಮ್ಮೆ ಗದ್ದೆ ಸುತ್ತಿ ಬಂದು ಬಿದಿರಿನ ಏಣಿಯ ಮೂಲಕ ಮಾಳದ ಮಂಚ ಏರಿದ, ಕೆಳಗೆ ಸಣ್ಣಗೆ ಉರಿಯುವ ಬೆಂಕಿ ಚಳಿಯನ್ನು ಓಡಿಸುತ್ತದೆ. ಮಲಗಿದ್ದೊಂದು ಗೊತ್ತು. ಎಚ್ಚರವಾದಾಗ ಚುಮುಚುಮು ಬೆಳಗು.
ಗಡಬಡಿಸಿ ಎದ್ದ. ಕಂಬಳಿ ಮಡಿಸಿ, ಬೆಂಕಿ ಆರಿಸಿ ಮನೆಯತ್ತ ಹೊರಟ. ದಾರಿಯಲ್ಲಿ ನೋಡಿದರೆ ರಾತ್ರಿ ಯಾವಾಗಲೋ ಅವನ ಕಣ್ಣು ತಪ್ಪಿಸಿ ಕಡ ನುಗ್ಗಿದ್ದು ಕಾಣುತ್ತದೆ. "ಅವು ಸತ್ತೇ ಹೋಗ್ಲಿ... ಪುಣ್ಯಕ್ಕೆ ಹಂದಿ ಬರಲಿಲ್ಲ..." ಎಂದು ಹಣೆ ಚಚ್ಚಿಕೊಂಡು ಹೆಜ್ಜೆ ಹಾಕಿದ. ಮನೆಯಲ್ಲಿ ಬಿಸಿಬಿಸಿ ಚಹಾ, ದೋಸೆ ಅವನನ್ನು ಕಾಯುತ್ತಾ ಇದ್ದವು.
ಹೀಗೆ ರಾತ್ರಿ ಎಂಟರಿಂದ ಬೆಳಗು ಆರರವರೆಗೆ 'ಮಾಳ' ಮಲೆನಾಡ ಚಟುವಟಿಕೆಯ ಕೇಂದ್ರಬಿಂದು. ಊರಲ್ಲಿ ಆಟವಾಗಲಿ, ನಾಟಕವಾಗಲಿ, ಯಾರ ಮನೆಯಲ್ಲಿ ಮದುವೆ-ಮುಂಜಿಗಳೇ ಆಗಲಿ ಮಾಳಕ್ಕೆ ಮಾತ್ರ ಬಿಡುವಿಲ್ಲ. ಒಂದು ದಿನ ಮಾಳ ಕಾವಲು ತಪ್ಪಿಸಿದರೂ, ಗದ್ದೆ ಕೊಯ್ಯುವ ಕೆಲಸವೇ ಉಳಿಯುವುದಿಲ್ಲ. ಕಬ್ಬನ್ನು ಹಂದಿಯೇ ಆಡಿರುತ್ತದೆ. ರೈತನ ನಾಕಾರು ತಿಂಗಳ ದುಡಿಮೆಯನ್ನು ಹಾಗೂ ಅನ್ನವನ್ನು ಹಾಳುಮಾಡಲು ಹಂದಿಗಳಿಗೆ ಅರ್ಧರಾತ್ರಿ ಸಾಕು!
ಅಂತೂ ಬೆಳೆ ಉಳಿಸಿ ಕೊಯ್ಲಾದ ದಿನ ಮಾಳ ಕಾವಲಿನ ಕೊನೆ. ಸುತ್ತಮುತ್ತಲ ಮಾಳ ಕಾವಲೂ ಸಾಮಾನ್ಯ ಒಟ್ಟಿಗೆ ಮುಗಿಯುವುದರಿಂದ ಅಂದು ಎಲ್ಲರೂ ಸೇರಿ ಮಾಳಕಾವಲಿಗೆ ಮಂಗಳ ಹಾಡಬೇಕು. ಅದು ಹೇಗೆ? ಅಂದು 'ಮಾಳಕಂಬಳ'. ಮಾಳ ಕಾದ ನೆನಪಿಗೆ ಇಡೀ ರಾತ್ರಿ ಗದ್ದೆ ಬಯಲಲ್ಲಿ ಎಲ್ಲರೂ ಸೇರಿ ಆಚರಿಸುವ ಜಾಗರಣೆ. ಅಂದು ಹಂದಿಯ ಭಯವಿಲ್ಲ. ಬೆಳೆಯ ಚಿಂತೆಯಿಲ್ಲ. ಮುಗಿಲು ಮುಟ್ಟುವಂತೆ ಎದ್ದ ಕಂಬಳದ ಬೆಂಕಿ ಅವರ ಉತ್ಸಾಹಕ್ಕೆ ಸಾಕ್ಷಿ.
ಈಗ ಅಡಿಗೆಯಾಗಬೇಕು. ಮನೆಯಲ್ಲಿ ಹೇಳಿದರೂ ಹೆಂಡತಿ ಮಾಡಿರದ ಅಡಿಗೆಗಳನ್ನೆಲ್ಲ ಇಲ್ಲಿ ರೆಡಿಮಾಡುತ್ತಾರೆ! ಮನೆಯಲ್ಲಿ ಹೇಳದೇ ತುಪ್ಪದ ಪಾತ್ರೆಯನ್ನೋ ಬೆಣ್ಣೆ ಮುದ್ದೆಯನ್ನೋ ಕದ್ದು ತಂದಿದ್ದಾರೆ. ಮೊದಲೇ ಮಾತಾಡಿಕೊಂಡಂತೆ ಬೆಲ್ಲ, ಅಕ್ಕಿ ಹಿಟ್ಟು, ಈರುಳ್ಳಿ, ತೆಂಗಿನಕಾಯಿ, ಹಾಲು, ಸಕ್ಕರೆ ... ಎಲ್ಲಾ ಬಂದಿದೆ. ಕಾಯಿ ಉಂಡೆ, ಮಸಾಲದೋಸೆ. ರವೆಶಿರಾ... ಬೇಕಾದ್ದು ಸಿದ್ಧವಾಗುತ್ತದೆ. ಕಂಬಳಕ್ಕೆ ಇತರ ಮನೆಗಳ ಗಂಡಸರೂ ವಿಶೇಷ ಆಹ್ವಾನಿತರು. ಎಲ್ಲರೂ ಸೇರಿ ತಿಂದುಂಡು, ಆಟ ಆಡಿ ಹಾಡು ಹೇಳುವಾಗ ಗೌಜೋ, ಗೌಜು... ಮಜವೋ ಮಜ.
ಕಾಲಚಕ್ರ ತಿರುಗಿದಂತೆ ಮತ್ತೆ ಮತ್ತೆ ಬರುತ್ತದೆ. ಕಾವಲಿನ ಕಷ್ಟ. ಕಂಬಳ ಸಂಭ್ರಮದಲ್ಲಿ ಕಳೆದು ಹೋಗಿ "ಮಾಳ" ಮಾತ್ರ ಉಳಿದುಕೊಳ್ಳುತ್ತದೆ!
ಮಾಳ ಕಂಬಳ ಎಂದಕೂಡಲೇ "ಬಂಗಿ ಉಂಡೆ"ಯ ನೆನಪಾಗುತ್ತದೆ!
ಬಂಗಿ (ಗಾಂಜಾ) ಒಂದು ರೀತಿಯ ಅಮಲು ಬರಿಸುವ ಸೊಪ್ಪು. ಅದನ್ನು ಬೆಳೆಸುವುದು ಅಪರಾಧ. ಬಂಗಿಯಿಂದ ಮಾಡಿದ ಉಂಡೆ ತಿಂದರೆ ಅಮಲೇರುತ್ತದೆ. ಏನುಮಾಡಿದರೂ ನಮಗೇ ಗೊತ್ತಾಗುವುದಿಲ್ಲ. ಬಂಗಿಯ ಅಮಲೇರಿದರೆ ನಗುತ್ತಿದ್ದ ವ್ಯಕ್ತಿ ಅಮಲು ಇಳಿಯುವವರೆಗೂ ನಗುತ್ತಲೇ ಇರುತ್ತಾನೆ!
ಮಾಳಕಂಬಳಕ್ಕೂ ಬಂಗಿ ಉಂಡೆಗೂ ವಿಶೇಷ ಸಂಬಂಧ. ಮಾಳ ಕಂಬಳದಲ್ಲಿ ಸಾಮಾಸ್ಯ ಕಜ್ಜಾಯವಾದ ಉಂಡೆಯಲ್ಲಿ ಒಂದೆರಡನ್ನು ಆರಸಿ ಅದಕ್ಕೆ ಕೆಲವರು ತುಂಟರು ಬಂಗಿ ಸೇರಿಸುವುದುಂಟು. ಎಲ್ಲಾ ಉಂಡೆಗಳೂ ಒಂದೇ ತರಹ ಕಾಣುವುದರಿಂದ ಬಂಗಿ ಉಂಡೆಗಳು ಯಾರಿಗೆ ಹೋಗುವವೋ ಗೊತ್ತಾಗುವುದಿಲ್ಲ. ತಿಂದವರು ಹುಚ್ಚರ ಹಾಗೆ ಆಡಲು ಶುರು. ಉಳಿದವರಿಗೆ ಒಳ್ಳೇ ಮನರಂಜನೆ.
ಎಲ್ಲಾ ಕಂಬಳದಲ್ಲಿ ಬಂಗಿ ಉಂಡೆ ಮಾಡುವುದಿಲ್ಲವಾದರೂ ಅದರ ಹೆದರಿಕೆಯಿಂದ ಬಹಳ ಜನ, ಕಂಬಳಕ್ಕೆ ಕರೆದರೂ ಬರುವುದಿಲ್ಲ. ಎಷ್ಡೋ ವೇಳೆ ಬಂಗಿ ಹಾಕಿರದಿದ್ದರೂ ಆ ಭ್ರಮೆಯಲ್ಲಿ ಕೆಲವು ಪುಕ್ಕಲರು ಬಂಗಿ ತಿಂದಂತೆ ಆಡುವುದು ತಮಾಷೆಯೆನಿಸುತ್ತದೆ.
ಅದಕ್ಕೆ ಮಾಳ ಕಂಬಳವೆಂದರೆ ತಾಯಂದಿರಿಗೆ ಆಗದು. ಮಕ್ಕಳನ್ನು ಹೋಗದಂತೆ ತಡೆಯುತ್ತಾರೆ. ಅಲ್ಲಿ ಬಂಗಿ ತಿನ್ನಿಸುತ್ತಾರೆ ಎಂಬ ಹೆದರಿಕೆ. ಅಲ್ಲದೇ "ಅದು ಪೂರಾ ಗಂಡಸರ ಲೋಕ" ಎಂತೆಂಥ ಅಣಿ ಮುತ್ತುಗಳು ಉದುರುತ್ತವೋ ಎಂಬ ದೂರಾಲೋಚನೆ!