ಆನೆ ಸಾಕಿ ನೋಡು.......

ಆನೆ ಸಾಕಿ ನೋಡು.......

ಕುಂಟ್ಯಾನದಲ್ಲಿ ಸಂಜೆ ಆಗುವುದು ಹೀಗೆ. 
 
ಆಕಾಶಕ್ಕೆ ಕೆಂಪು ರಾಚಿ ಸೂರ್ಯ ಮುಳುಗುತ್ತಾನೆ. ಕೆಲಸ ಬಿಟ್ಟು ಕೂಲಿಗಳು, ಆಟ ನಿಲ್ಲಿಸಿ ಮಕ್ಕಳು ಮನೆಗೆ ಹೊರಡುತಾರೆ. ಮೇಯಲು ಹೋದ ದನ-ಕರುಗಳು ಹೊಟ್ಟೆ ತುಂಬಿಸಿಕೊಂಡು ಕುಪ್ಪಳಿಸುತ್ತ ಕೊಟ್ಟಿಗೆಯತ್ತ ಹೆಜ್ಜೆ ಹಾಕುತ್ತವೆ. 
 
ಮುಂದೆ ದನಗಳ ಮಂದೆ. ಅವುಗಳ ರಕ್ಷಕನೋ ಎನ್ನುವ ಹಾಗೆ ಹಿಂದೊಬ್ಬ ಭಾರೀ ಆಸಾಮಿ ನಡೆದು ಬರುತ್ತಾನೆ. ಹೆಜ್ಜೆಯ ಮೇಲೆ ಹೆಜ್ಜೆ, ಯಾವೂರ ರಾಜನೋ ಎಂಬ ಗಾಂಭೀರ್ಯ. ಇವನ ಮುಖ ಕಂಡೊಡನೆ ಮನೆಯೆದುರು ಬೆತ್ತದ ಕುರ್ಚಿಯಲ್ಲಿ ಕುಳಿತ ವೃದ್ಧರು ಉದ್ಗರಿಸುತ್ತಾರೆ - "ಕೃಷ್ಣ ಬಂದ"
 
ಹೌದು, ಕೃಷ್ಣ ಬಂದ. ಉಳಿದ ದನ-ಕರುಗಳ ಹಾಗೆ ಹಟ್ಟಿಗೆ ನುಗ್ಗಲಿಲ್ಲ. ಸೀದಾ ಬಂದ - ದಣಿಗಳ ಮುಂದೆ. ಮೈ ಮುಟ್ಟಿ- ಕೈ ಹೊಸೆದು ದಣಿಗಳ ಮಾತನಾಡಿಸುತ್ತಾನೆ. ಎಷ್ಟು ಸಲಿಗೆ, ಎಂಥ ಪ್ರೀತಿ ಅವನಿಗೆ!
 
"ಕೃಷ್ಣ ನಿನಗೆ ಇವರ ಪರಿಚಯ ಉಂಟಾ" - ವೃದ್ಧೆ ಪ್ರಶ್ನೆ. "ಇಲ್ಲಾ" ಎಂಬಂತೆ ದೊಡ್ಡ ಮೂತಿ ಅಲ್ಲಾಡುತ್ತದೆ. "ನೋಡುವಾ, ನಿನ್ನ ಗಂಟೆ ಹೊಡೆಯೋ" - ಕೃಷ್ಣ ಗಣಗಣ ಬಾರಿಸುತ್ತಾನೆ. " ಹಸಿವಾಗಿದೆಯೇನೋ, ಹೋಗೋ ಮಾರಾಯ" - ದಣಿಗಳ ಆಜ್ಞೆಗೆ ಹೊರಡುತ್ತಾನೆ, ಉತ್ಸವ ಮೂರ್ತಿ. ಅಷ್ಟರಲ್ಲಿ ಅವನಿಗಾಗಿ ಅನ್ನ ಬರುತ್ತದೆ. ಬುಟ್ಟಿ ತುಂಬಾ ಅನ್ನ. ಅವನೇನು ಬಕಾಸುರನೇ ಅನ್ನಬೇಡಿ. ಅವನ ಹೊಟ್ಟೆಗೆ ಇದು ಅರೆಕಾಸಿನ ಮಜ್ಜಿಗೆ!
 
ಎಲ್ಲಿದೆ ಈ "ಕಂಟ್ಯಾನ"? ಯಾರು ಈ ಕೃಷ್ಣ? ತಿಳಿಯುವ ಕುತೂಹಲವಿದ್ದರೆ ಧರ್ಮಸ್ಥಳದ ಬಳಿ ಬರಬೇಕು. ಕಳಂಜ ಧರ್ಮಸ್ಥಳದ ಬಳಿಯ ಗ್ರಾಮ. ಅದರ ಸುತ್ತ ಇರುವ ಕಾಡು ಸಾಮಾನ್ಯವಲ್ಲ. ಪಶ್ಚಿಮ ಘಟ್ಟಗಳ ಪಾದದಡಿ ನೆಲೆನಿಂತ ದಟ್ಟಡವಿ. ಈ ಕಾಡ ನಡುವೆಯೇ ಕುಂಟ್ಯಾನವಿದೆ. ಅಲ್ಲಿ ದೃಷ್ಟಿ ಹಾಯುವವರೆಗೂ ಅಡಿಕೆ- ತೆಂಗಿನ ಸಾಲು. ನಡುವೆ ತೋಟದ ಮನೆ- ಉಜಿರೆಯ ಪ್ರಭುಗಳದ್ದು.
 
ಕಾಡ ನಡುವೆ ಇರುವುದರಿಂದ ಪ್ರಭುಗಳ ತೋಟಕ್ಕೆ ಕಾಡಾನೆ ಹಾವಳಿ ಬಹಳ. ಹದಿನೆಂಟು ವರ್ಷಗಳ ಹಿಂದಿನ ಮಾತು. ಆನೆಗಳ ಕಾಟ ತಡೆಯದಾದ ಪ್ರಭುಗಳು ಉಪಾಯ ಮಾಡಿದರು. ದೊಡ್ಡ ಕಂದಕದ ಮೇಲೆ ಭ್ರಾಮಕ ನೆಲ ನಿರ್ಮಿಸಿ ಖೆಡ್ಡ ನಿರ್ಮಿಸಿದರು. ಒಂದು ರಾತ್ರಿ ತೋಟಕ್ಕೆ ನುಗ್ಗಿದ ಆನೆಗಳ ಪೈಕಿ ಪುಟಾಣಿ ಮರಿಯೊಂದು ಖಡ್ಡದೊಳಗೆ ಸಿಕ್ಕಿಬಿತ್ತು. 
 
ಮನೆಯಂಗಳದಲ್ಲಿ
 
ಹೀಗೆ ಪ್ರಭುಗಳ ತೆಕ್ಕೆಗೆ ಬಂದ "ಕೃಷ್ಣ" ಇಂದು ತುಂಬು ಯೌವನಿಗ. ಮದ್ದಾನೆಗಳ ನಡುವೆ ಬೆಳೆಯಬೇಕಾದವ ಮನೆಯಂಗಳದಲ್ಲಿ ಬೆಳೆದ ಪರಿಣಾಮ - ಇವತ್ತು ಕೃಷ್ಣ ಮೇಯಲು ಕಾಡಿಗೇ ಹೋದರೂ ಓಡಿಹೋಗುವುದಿಲ್ಲ. ಪಕ್ಕದಲ್ಲೇ ತೋಟವಿದ್ದರೂ ದಾಳಿ ಮಾಡುವುದಿಲ್ಲ. ಮಕ್ಕಳ ಜೊತೆ ಆಟವಾಡುತ್ತಾನೆ. ದೊಡ್ಡವರ ಜೊತೆ ಚರ್ಚೆಗಿಳಿಯುತ್ತಾನೆ. ದಣಿಗಳ ಜೊತೆ ಅರಸನಾಗಿ ಕುಳಿತುಕೊಳ್ಳುವವ, ಆಳುಗಳ ಆಳಾಗಿ ಕೆಲಸ ಮಾಡುತ್ತಾನೆ. 
 
"ಆನೆ ಸಾಕಿ ನೋಡು" ಎನ್ನುತ್ತಾರೆ. ಕೃಷ್ಣ ಹಾಗಲ್ಲ. ಅವನನ್ನು ಸಾಕುವುದೇ ಖುಷಿ. ಲಾಭದಾಯಕವೂ ಹೌದು. ಮಾರುವುದಾದರೆ ಈಗ ಕೃಷ್ಣನ ಬೆಲೆ ಒಂದು ಲಕ್ಷಕ್ಕಿಂತ ಹೆಚ್ಚು. ಆದರೆ ಪ್ರಭುಗಳಿಗೆ ಆ ಯೋಚನೆಯೇ ಇಲ್ಲ. ಅವನು ಅವರ ಮನೆಯ ಹುಡುಗ. ಅವನಿತ್ತ ಪ್ರೀತಿಗೆ ಬೆಲೆ ಕಟ್ಟುವುದು ಹೇಗೆ?
 
ಮತ್ತೆ ಕೃಷ್ಣನೇನೂ ದಣಿಗಳಿಗೆ ಹೊರೆಯಲ್ಲ. ಅವನ ದುಡಿತ ಖರ್ಚಿಗಿಂತ ಹೆಚ್ಚು.  ನಿಮಗೆ ಗೊತ್ತರಲಿಕ್ಕಿಲ್ಲ. ಕೃಷ್ಣ, ಈಗ ಭಾರೀ ಬೇಡಿಕೆಯಲ್ಲಿರುವ ಸಿನಿಮಾ ನಟ. ನಾಗರಹೊಳೆ, ದೊಂಬರ ಕೃಷ್ಣ, ಕಾಡಿನ ರಾಜ, ವಿಜಯ ಖಡ್ಗ, ಶಿವ ಮೆಚ್ಚಿದ ಕಣ್ಣಪ್ಪ, ದೇವತಾ ಮನುಷ್ಯ, ಪುನ್ನಮಿ ನಿಲುವಲ್, ದೈವಂ ತಿರುಮಂಗಲ್ - ಕೃಷ್ಣ ನಟಿಸಿದ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
 
ಕನ್ನಡ, ತಮಿಳು, ತೆಲುಗು, ಹಿಂದಿಗಳಲ್ಲೂ ನಟಿಸಿರುವ ಕೃಷ್ಣನ ಕಂಡರೆ ನಿರ್ದೇಶಕ- ನಟರುಗಳಿಗೆ ಭಾರೀ ಹೆಮ್ಮೆ. ನಿರ್ದೇಶಕರು ಹೇಳಿದ್ದನ್ನು ಕೃಷ್ಣ ಚಾಚೂ ತಪ್ಪದೇ ಮಾಡುತ್ತಾನೆ. ಬೇಕಾದ ಶೌರ್ಯ, ಸಾಹಸಗಳನ್ನು ಪ್ರದರ್ಶಿಸುತ್ತಾನೆ. ತಮಟೆ ಹೊಡೆಯುತ್ತಾನೆ. ಕಾರಿನ ಹಾರನ್ ಬಾರಿಸುತ್ತಾನೆ. ಶೂಟಿಂಗ್ ಬೆಳಕಿಗೆ ದೃಷ್ಟಿ ನೆಟ್ಟಿಸುತ್ತಾನೆ - ಇತರ ಪ್ರಾಣಿಗಳಂತೆ ಓಡಿ ಹೋಗುವುದಿಲ್ಲ. ಹೀಗಾಗಿ ಸಿನಿಮಾ ಪ್ರಪಂಚದಲ್ಲಿ ಕೃಷ್ಣ ಭಾರೀ ಜನಪ್ರಿಯ. ಇವನ ಜೊತೆ ಫೋಟೋ ತೆಗೆಸಿಕೊಳ್ಳಲು ನಟ -ನಟಿಯರು ಕ್ಯೂ ನಿಲ್ಲುತ್ತಾರೆ!
 
ಸಿನಿಮಾ ಶೂಟಿಂಗ್‍ಗಾಗಿ ಮೈಸೂರು, ಮದ್ರಾಸು, ಹೈದರಾಬಾದುಗಳಿಗೆ ಆಗಾಗ ಹೋಗುವ ಕೃಷ್ಣನಿಗೆ ಪ್ರಯಾಣವೆಂದರೆ ಪ್ರಾಣ. ಮನೆಯ ಮುಂದೆ ಲಾರಿ ಬಂದರೆ ಸಾಕು- ಅವನಿಗೆ ಗೊತ್ತು. ಹೊರಡಲು ರೆಡಿಯಾಗುತ್ತಾನೆ. ಸರಾಗವಾಗಿ ಲಾರಿ ಹತ್ತಿ ರೈಟ್ ಎಂದು ಗಂಟೆಯ ಸದ್ದು ಮಾಡುತ್ತಾನೆ. 
 
ಏಕದಂತ
 
ಲಾರಿ ಸಂಚಾರವೇ ಕೃಷ್ಣನಿಗೆ ಮುಳುವಾದದ್ದೂ ಉಂಟು. ಒಮ್ಮೆ ಲಾರಿಯಲ್ಲಿ ಸಾಗಿದ್ದಾಗ - ಬಸ್ಸಲ್ಲಿ ತಲೆ ಹೊರಗೆ ಹಾಕಿ ಜಗತ್ತನ್ನೇ ನೋಡುವ ಪುಟ್ಟ ಮಕ್ಕಳ ಹಾಗೆ- ಕೃಷ್ಣನೂ ಸೊಂಡಿಲು ಚಾಚಿದ! ಎದುರಿಂದ ಬಂದ ಲಾರಿಯೊಂದು ಅವನ ದಂತವನ್ನು ಮುರಿದುಕೊಂಡೇ ಹೋಯ್ತು. ಕೃಷ್ಣ ಘೀಳಿಟ್ಟ, ಗೋಳಾಡಿದ. ಪ್ರಭುಗಳು ವೈದ್ಯರನ್ನು ಕರೆಸಿ ತಿಂಗಳುಗಟ್ಟಲೆ ಆರೈಕೆ ಮಾಡಿದ ಮೇಲೆ ಏಕದಂತ ಕೃಷ್ಣ ಚೇತರಿಸಿಕೊಂಡ. 
 
ಕೃಷ್ಣನ ಕೆಲಸ ಏನು? ಅವನಿಗೆ ಬಿಡುವೇ ಇಲ್ಲ. ಆಗಾಗ ಮರದ ದಿಮ್ಮಿಗಳನ್ನು ಸಾಗಿಸಲು ಹೋಗುತ್ತಾನೆ. ಮದುವೆ ಸೀಸನ್‍ನಲ್ಲಿ ನವದಂಪತಿಗಳನ್ನು ಸವಾರಿ ಮಾಡಿಸುವುದು ಅವನ ಇನ್ನೊಂದು ಹವ್ಯಾಸ. ಹಾಗೆಯೇ ವಿವಿಧ ಕಾರ್ಯಕ್ರಮಗಳಿಗೆ ಹೋಗಿ ಅತಿಥಿಗಳಿಗೆ ಮಾಲೆ ಹಾಕುವುದೂ ಉಂಟು. ಇಂದಿರಾ ಗಾಂಧಿಯೂ ಸೇರಿದಂತೆ ಅವನು ಮಾಲೆ ಹಾಕಿದ ಗಣ್ಯರಿಗೆ ಲೆಕ್ಕವಿಲ್ಲ. ಆದರೇನು, ಅವನಿಗೆ ಮಾಲೆಹಾಕಿದವರು ಮಾತ್ರ ಯಾರೂ ಇಲ್ಲ!!
 
ಸಾಕುವ ವೆಚ್ಚ
 
ಉಜಿರೆಯಲ್ಲಿ ಯು. ವಾಸುದೇವ ಪ್ರಭುಗಳು ದೊಡ್ಡ ಕೃಷಿಕರು. ಕುಂಟ್ಯಾನದಲ್ಲಿ ಅವರ ತೋಟ. ಅಲ್ಲೇ ಕೃಷ್ಣನ ವಾಸ. ಗಂಗಾಧರ, ಶೀನ ಅವನನ್ನು ನೋಡಿಕೊಳ್ಳುವ ಮಾವುತರು.
 
ದಿನಾ ಹತ್ತು ಕೆ.ಜಿ. ಅಕ್ಕಿಯ ಅನ್ನ ಕೃಷ್ಣನಿಗೆ ಬೇಕು. ಜೊತೆಗೆ ಬೇಯಿಸಿದ ಜೋಳ- ಗೋಧಿಯ ನುಚ್ಚು. ಬೆಳಗಿಂದ ಸಂಜೆಯವರೆಗೆ ಸೊಪ್ಪು- ಮೇಯಿಸದ ಮೇಲೂ ಅವನನ್ನು ಕಟ್ಟಿದಲ್ಲಿ ಸದಾ ಹುಲ್ಲು ಇರಲೇಬೇಕು. ಅಂತೂ ಕೃಷ್ಣನನ್ನು ಸಾಕಲು ದಿನಾ ನೂರು ರೂ. ಸಾಲದು.
 
"ಕೃಷ್ಣನಿಗೆ ಬೇಧಿ ಶುರುವಾಗಿದೆ!" ಮೊನ್ನೆ ಪ್ರಭುಗಳ ಮಗ ಹೇಳಿದಾಗ ಜೋರಾಗಿ ನಕ್ಕೆ. ಅದಕ್ಕೇನು ಮಾಡುತ್ತೀರಿ ಎಂದೆ. ಮನುಷ್ಯರಿಗೆ ನೀಡುವ ಔಷಧವನ್ನೇ 4-5 ಪಟ್ಟು ನೀಡುತ್ತೇವೆ ಎಂದರು!
 
ಬಕಾಸುರ ಮಗನಿಗೆ ಹೊಟ್ಟೆ ತುಂಬಿಸಿದರಾಯ್ತೇ? 
 
 
(ಲೇಖನ ಬರೆದ ವರ್ಷ 1988)
 
(ಚಿತ್ರ ಕೃಪೆ: ಗೂಗಲ್)