ಔಷಧೀಯ ಸಸ್ಯ ಸಂಪತ್ತು

ಔಷಧೀಯ ಸಸ್ಯ ಸಂಪತ್ತು

ಪುಸ್ತಕದ ಲೇಖಕ/ಕವಿಯ ಹೆಸರು
ಪಿ.ಎಸ್.ವೆಂಕಟರಾಮ ದೈತೋಟ
ಪ್ರಕಾಶಕರು
ವಿವೇಕಾನಂದ ಸಂಶೋಧನಾ ಕೇಂದ್ರ, ವಿವೇಕಾನಂದ ಕಾಲೇಜು, ನೆಹರೂ ನಗರ, ಪುತ್ತೂರು - 574 203 (ದ.ಕ.)
ಪುಸ್ತಕದ ಬೆಲೆ
ರೂ.500

“...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ, ಬೆಂಕಿ-ನೀರು ಸೇರಿ ಉಪ್ಪು, ವಾಯು- ಆಕಾಶ ಸೇರಿ ಕಹಿ, ಬೆಂಕಿ-ವಾಯು ಸೇರಿ ಖಾರ, ವಾಯು, ಭೂಮಿ ಸೇರಿ ಒಗರು ಈ ಆರು ರಸಗಳು ಉಂಟಾದುವು. ಇವೇ ಷಡ್ರಸಗಳು (ಆರು ಆಹಾರ ರಸಗಳು.) ಮಾನವನ ದೇಹಧಾರಣೆ ಹಾಗೂ ಆರೋಗ್ಯ ಮೂಲದ್ರವ್ಯಗಳು. ನಮ್ಮ ಪರಿಪೂರ್ಣ ಆಹಾರದಲ್ಲಿನ ಮೂಲಘಟಕಗಳು. ಬದುಕಿನ ಚಟುವಟಿಕೆಗಳಿಗೆ ಅವಶ್ಯ ಇಂಧನಗಳು. ಈ ಮೂಲ ರಸಗಳು ನಿಶ್ಚಿತ ದಾಮಾಶಯದಲ್ಲಿ ಮಾತ್ರ ದೇಹಾರೋಗ್ಯಕ್ಕೆ ಮೂಲವಾಗಬಹುದು. ಆಹಾರದಲ್ಲಿನ ರಸಗಳು ನಿಶ್ಚಿತ ಪ್ರಮಾಣದಲ್ಲಿ ಇದ್ದರೆ ದೇಹವು ಸುಸ್ಥಿತಿಯಲ್ಲಿ ಇರುವುದು. ಪ್ರಮಾಣಗಳು ವ್ಯತ್ಯಾಸವಾದರೆ ಅದೇ ರೋಗ ಮೂಲವೂ ಆಗುವುದು. ಈ ಸಮಸ್ಯೆಯ ಪರಿಹಾರ - ಹೆಚ್ಚು ಕಡಿಮೆಯಾದ ರಸಗಳ ಪ್ರಮಾಣಗಳನ್ನು ಸರಿಗೊಳಿಸುವುದರಿಂದ ಮಾತ್ರ. ನಮಗೆ ಜಾಸ್ತಿ ಹಸಿವಾದಾಗ ಜೀವ ಕಣಗಳ ಕ್ಷಮತೆ ಕುಂಠಿತವಾಗುವುದು. ಅದೇ ಶಕ್ತಿಹ್ರಾಸ. ಇದಕ್ಕೆ ಪರಿಹಾರ ಯೋಗ್ಯ ಆಹಾರ ಸೇವನೆ-ಚೈತನ್ಯ ಭರ್ತಿಗೆ. ಒಟ್ಟಿನಲ್ಲಿ ದೇಹದೊಳಗಿನ ರಾಸ ಘಟಕಗಳ ಆಂಶಿಕ ಕೊರತೆಯಾದಾಗ ದೇಹಸ್ಥಿತಿ ಕ್ಷೀಣವಾಗುವುದು. ಆಹಾರವು ದೇಹ ಸೇರಿದಾಗ ಶರೀರ ಕ್ರಿಯಾಶಕ್ತವಾಗುವುದು. ಈ ವಿಚಾರಗಳು ಆಯುರ್ವೇದೋಕ್ತ. ಇದೇ ತತ್ವ-ದೇಹಕ್ಕೆರಗುವ ರೋಗ ಹಾಗೂ ಚಿಕಿತ್ಸೆಗಳಿಗೂ ಅನ್ವಯ. ಷಡ್ರಸಗಳ ಏರುಪೇರು ದೇಹದಲ್ಲಾದಾಗ ರೋಗಲಕ್ಷಣಗಳು ಕಾಣಿಸುತ್ತವೆ. ಅವೇ ಷಡ್ರಸಗಳನ್ನು (ದೇಹ ಪ್ರಕೃತಿ ಹೊಂದಿ) ಸಮತೋಲಗೊಳಿಸಿದಾಗ ರೋಗಶಮನ ವಾಗುವುದು. ಅಂದರೆ ಹಸಿವೆಯು ದೇಹದ ಒಂದು ರೋಗ. ಆಹಾರ ಸೇವನೆಯೇ ಅದಕ್ಕೆ ತಕ್ಕ ಔಷಧಿ. ಅಂತೆಯೇ ರೋಗವೂ ದೇಹದ ಒಂದು ಹಸಿವೆ. ಅದಕ್ಕೆ ತಕ್ಕ ಔಷಧ ನೀಡುವಿಕೆಯೇ ಆಹಾರ. ಮೂಲತ: ಷಡ್ರಸಗಳ ಏರು-ಪೇರುಗಳನ್ನು ಹೆಚ್ಚಾಗಲೀ-ಕಡಿಮೆಯಾಗಲೀ ಅದರ ಮಟ್ಟವನ್ನು ತೋಲನೆಗೊಳಿಸುವುದು ದೇಹಸ್ವಾಸ್ಥ್ಯಮೂಲ. ಶರೀರದ ಚೈತನ್ಯ ಮೂಲಗಳಾದ ಸಸ್ಯಗಳ ಸಾರವಾದ ಆರು ರಸಗಳೇ ಶರೀರ ಬೆಳವಣಿಗೆ - ಕ್ಷಮತೆ - ದೀರ್ಘಾಯುಸ್ಸುಗಳ ಮೂಲ. ‘ಔಷಧಿ’(ಮೂಲಿಕೆ)ಗಳಲ್ಲಿ ಷಡ್ರಸಗಳು ಸೇರಿರುವುದರಿಂದ ‘ಔಷಧ’ಗಳಾದುವು. ದೇಹಧಾರಣಾಮೂಲವಾದ ‘ಆಹಾರ’ಗಳೆಂದೂ ಬಳಕೆಯಾದುವು. ಚಿಕಿತ್ಸೆಗಳಲ್ಲಿ ಯೋಗವಾಗಿ ಮತ್ತು ಒಂದೊಂದೇ ಮೂಲಿಕೆಗಳಿಂದ ಹಲವು ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಪದ್ಧತಿಯೇ ಅನೂಚಾನವಾಗಿ ನಮ್ಮ ಪರಂಪರೆಯಲ್ಲಿ ಬಂತು. ಜಾನಪದ ‘ಆರೋಗ್ಯ ಸಾಧನೆ’ ಮುಂದುವರಿಯಿತು. ಜನಪದರಿಗೆ ವರದಾಯಕವಾಯಿತು. ಪರಂಪರೆಯಲ್ಲಿ ಏಕಮೂಲಿಕಾ ಚಿಕಿತ್ಸೆಯೂ ಸೇರಿಕೊಂಡು ಸಮಾಜದ ಆರೋಗ್ಯ ಸಿದ್ಧಿಗೊಳ್ಳಲು ದಾರಿಯಾಯಿತು. ನಮ್ಮ ಪಾರಂಪರಿಕ ಮೂಲಿಕಾ ವೈದ್ಯ ವೈದ್ಯ ಪರಂಪರೆ ಇತರ ಜ್ಯೋತಿಷ್ಯ, ಮಂತ್ರವಾದ, ಪೌರೋಹಿತ್ಯ, ಸಂಗೀತ ಇತ್ಯಾದಿ ಪರಂಪರೆಗಳಂತೆ ಸಾಮಾನ್ಯವಾಗಿ ಕುಟುಂಬ ಪರಂಪರೆಗಳಲ್ಲಿ ನಡೆದು ಬರುತ್ತಿದ್ದವು. ಇಂತಹ ಪರಂಪರೆಯ ಅಭ್ಯಾಸ ರಕ್ತಗತವಾಗುತ್ತಿತ್ತು. ಜ್ಞಾನ ಸುಲಭವಾಗಿ ಸಿಗುತ್ತಿತ್ತು. ಕುಟುಂಬದಲ್ಲಿ ಒಬ್ಬರಂತೆ ಈ ಜ್ಞಾನದಿಂದ ಸಾಮಾಜಿಕ ಕರ್ತವ್ಯ ಪಾರುಪರ್ಯವಾಗಿ ನಡೆಸಿಕೊಂಡು ಬರುವಿಕೆ ಇತ್ತು. ಹಿರಿಯರ ಚಿಕಿತ್ಸಾ ಕ್ರಮ ಕಿರಿಯರಿಗೆ ಸುಲಭಗ್ರಾಹ್ಯವಾಗಿತ್ತು. ಮೂಲಿಕಾಪರಿಚಯ, ಅವುಗಳ ಗುಣ, ಚಿಕಿತ್ಸಾ ಪರಿಣಾಮಗಳು, ಔಷಧ ಸಂಗ್ರಹ ಕ್ರಮ, ಶೇಖರಿಸುವಿಕೆ, ಗಿಡಗಳ ಉಪಯುಕ್ತ ಭಾಗ, ಸಂಗ್ರಹಕಾಲ, ಇವೆಲ್ಲ ಕ್ರಮಗಳು ಶಾಸ್ತ್ರೀಯವಾಗಿಯೇ ನಡೆಯುತ್ತಿದ್ದುದೂ ವಿಶೇಷ. ಇವನ್ನೆಲ್ಲ ಚಾಚೂ ತಪ್ಪದೆ ಅನುಸರಿಸುವಿಕೆ. ಬದುಕಿನ ಚಟುವಟಿಕೆಗಳೊಂದಿಗೇ ಮುಂದುವರಿಸುತ್ತಿದ್ದುದು ಪದ್ಧತಿಯಾಗಿತ್ತು. ಈ ಕ್ರಮವು ಹೆಚ್ಚು ಪರಿಣಾಮಕಾರಿಯೆಂಬುದು ಶತ:ಸಿದ್ಧ. ಕಲಿಕೆ ರಕ್ತಗತವಾಗಿ ಬರುತ್ತಿತ್ತು. ಹೆಚ್ಚು ಪರಿಣಾಮಕಾರಿಯಾಗಿತ್ತು. ಹೊಸಬರು ಚಿಕಿತ್ಸಾ ಜವಾಬ್ದಾರಿ ಸ್ವೀಕರಿಸಿದಾಗ ಅವರು ಜ್ಞಾನದಲ್ಲಿ ಪರಿಪೂರ್ಣತ್ವ ಪಡೆದಿರುತ್ತಿದ್ದರು. ಚಿಕಿತ್ಸಾ ಕ್ರಮಗಳ ‘ಒಳ ಹೊರಗೆಲ್ಲ’ ರಕ್ತಗತವಾಗಿರುತ್ತಿತ್ತು. ಚಿಕಿತ್ಸೆಯ ಪ್ರತಿಫಲ-ಚಿಕಿತ್ಸಾ ಪ್ರತಿಫಲವಾಗಿ ವೈದ್ಯರಿಗೆ ರೋಗಿಗಳೇ ಅಕ್ಕಿ, ತೆಂಗಿನಕಾಯಿ, ಫಲವಸ್ತುಗಳು, ನಿತ್ಯೋಪಯೋಗಿ ವಸ್ತುಗಳು ಇವನ್ನು ನೀಡುವುದು ಸಾಮಾನ್ಯವಾಗಿತ್ತು. ಹೊರತಾಗಿ ವೈದ್ಯರು ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸುತ್ತಿರಲಿಲ್ಲ. ಕಠಿಣ ರೋಗಗಳಲ್ಲಿ ಅವುಗಳ ಮೂಲ ಹೊಂದಿ ದೇವರಿಗೆ ‘ಕಾಣಿಕೆ’ ಅರ್ಪಿಸಲು ತಿಳಿಸುವುದೂ ನಡೆದು ಬರುತ್ತಿತ್ತು. ಉದಾ - ವಿಷ ಪ್ರಕಾರಗಳಿಗೆ - ಸುಬ್ರಹ್ಮಣ್ಯ, ಜೀರ್ಣಾಂಗವ್ಯೂಹಗಳ ತೊಂದರೆಗೆ - ಗಣಪತಿ, ಸ್ತ್ರೀರೋಗಗಳಿಗೆ ದೇವಿ, ವಾತರೋಗಕ್ಕೆ ಆಂಜನೇಯ, ಭಯಮೂಲಕ್ಕೆ ಶಿವ... ಹೀಗೆ ಆಯಾ ದೇವರಿಗೆ ಹಾಗೂ ರೋಗಿಯ ವಾಸಸ್ಥಳ ಸಮೀಪದ ಸ್ಥಳೀಯ ಶಕ್ತಿಗಳಿಗೆ ಇಂತಹ ‘ಸಲ್ಲಿಕೆ’ಗೆ ತಿಳಿಸುತ್ತಿದ್ದುದೂ ಸಾಮಾನ್ಯ. ಪಾರಂಪರಿಕ ಏಕಮೂಲಿಕಾ ವೈದ್ಯ ಪ್ರತಿ ಮೂಲಿಕೆಗೂ ಅವರದೇ ವಿಶಿಷ್ಟ ಗುಣಗಳಿವೆ. ಕೆಲ ಮೂಲಿಕೆಗಳಲ್ಲಿ ಅವಶ್ಯ ಘಟಕಗಳೊಂದಿಗೆ ಅನವಶ್ಯ ಯಾ ಉಪ ಪರಿಣಾಮ ಬೀರುವ ಇನ್ನಿತರ ಘಟಕಗಳೂ ಸಹ ಇರಲು ಸಾಧ್ಯ ಹಾಗೂ ಸಹಜ. ಈ ಸಮಸ್ಯೆಯನ್ನು ರೋಗಿಗೆ ತೊಂದರೆಯಾಗದಂತೆ ಹಾಗೂ ಅವಶ್ಯ ಗುಣಗಳು ಹೆಚ್ಚು ಪರಿಣಾಮ ಬೀರುವಂತೆ ಉದಾ. ಮೂಲಿಕೆಗಳನ್ನು ಸಮೂಲ ಯಾ ಅವಶ್ಯ ಭಾಗಗಳನ್ನು ಮಾತ್ರವಾಗಿ, ಸಂಸ್ಕರಿಸಲು ಯಾ ಕೆಲ ದ್ರವ್ಯಗಳನ್ನು ಸೇರಿಸಿಕೊಳ್ಳಲು ವೈದ್ಯರು ತಿಳಿಸುವುದು ಪದ್ಧತಿ.......” ‘ಔಷಧೀಯ ಸಸ್ಯ ಸಂಪತ್ತು’ ಪುಸ್ತಕದಲ್ಲಿ ಪ್ರಕಟವಾದ ‘ಪಾರಂಪರಿಕ - ಏಕಮೂಲಿಕಾ ವೈದ್ಯ’ ಬರಹದ ಆಯ್ದ ಸಾರವಿದು. ಈ ಪುಸ್ತಕವು ‘ಅಡಿಕೆ ಪತ್ರಿಕೆ’ಯಲ್ಲಿ ಕಾಲು ಶತಮಾನದಿಂದ ಪ್ರಕಟವಾಗುತ್ತಿರುವ ವೆಂಕಟರಾಮ ದೈತೋಟರ ಜನಪ್ರಿಯ ‘ಮನೆಮದ್ದು’ ಅಂಕಣ ಬರೆಹದ ಸಂಕಲನ. ಮೂಲಿಕೆಗಳ ಚಿತ್ರಗಳು, ಸಸ್ಯಶಾಸ್ತ್ರೀಯ ವಿವರಗಳು, ಪರಿಚಯ, ಉಪಯೋಗಗಳು, ಬಳಕೆ.. ಕುರಿತು 280 ಮೂಲಿಕೆಗಳ ಪರಿಚಯವಿದೆ.