ಕನ್ನಡ, ಸಿರಿಗನ್ನಡ, ಸವಿಗನ್ನಡ ಈಗ ಚಾನಲ್ಗನ್ನಡ!

ಕನ್ನಡ, ಸಿರಿಗನ್ನಡ, ಸವಿಗನ್ನಡ ಈಗ ಚಾನಲ್ಗನ್ನಡ!

ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮಥ್ರ್ಯ ಹೇಗೆ ಅಳೆಯಬಹುದೋ ನನಗಂತೂ ತಿಳಿಯಲಿಲ್ಲ. ಆದರೆ ಇದರ ಬೆನ್ನು ಹತ್ತಿದ ಸುದ್ದಿ ವಾಹಿಸಿಯೊಂದು ರಾಜ್ಯಾದ್ಯಂತ ಸಿಕ್ಕ ಸಿಕ್ಕ ಶಿಕ್ಷಕರ ಮುಖಕ್ಕೆ ಮೈಕ್ ಹಿಡಿದು ಅನೇಕ ಪ್ರಶ್ನೆಗಳನ್ನು ಕೇಳಿ ಅವರ ಸಾಮಾನ್ಯ  ಅಜಾನವನ್ನು ಜನತೆಯ ಮುಂದೆ ತೋರಿಸಿದರು. 
 
ಆದರೆ ನಮ್ಮ ಈ ಸುದ್ದಿ ಚಾನಲ್‍ಗಳ ಕನ್ನಡ ಜ್ಞಾನ  ಎಷ್ಟಿದೆ?
 
ಇದಕ್ಕಾಗಿ ನೀವೇನು ಮಂತ್ರಿಗಳಂತೆ ಪರೀಕ್ಷೆ ನಡೆಸಬೇಕಿಲ್ಲ. ಅವರೇ ಪ್ರತಿನಿತ್ಯ ಪರೀಕ್ಷೆಗೆ ಒಡ್ಡುಕೊಳ್ಳುತ್ತಿದ್ದಾರೆ. ಈ ಚಾನೆಲ್‍ಗಳ ಕಿರುತೆರೆಯ ಮೇಲೆನಿರಂತರವಾಗಿ ಮೂಡಿಬರುವ ಸ್ಕ್ರಾಲ್‍ಗಳನ್ನು ಓದಿದರೆ ಕನ್ನಡ ಜ್ಞಾನ   ಎಷ್ಟಿದೆ ಎಂಬುದನ್ನು ಅರಿತುಕೊಳ್ಳಬಹುದು. ನಾನು ಈಗ್ಗೆ ಕೆಲವು ದಿನಗಳಿಂದ ಇದನ್ನು ಮಾಡುತ್ತಿದ್ದೇನೆ. ಅದರ ಫಲಿತಾಂಶ ಇಲ್ಲಿದೆ.  ಓದಿ ಆನಂದಿಸಿ.
 
"ಶುರುವಾಗಿರುವ" ಕನ್ನಡದ ಈ ಹೊಸ ಪ್ರಭೇದದಲ್ಲಿ ಜನರು ಅಲ್ಲ "ಜನ್ರು" ಬರುತ್ತಾರೆ ಹೋಗುತ್ತಾರೆ ಅಲ್ಲ. "ಬರ್ತಾರೆ" ಅಥವಾ "ಹೋಗ್ತಾರೆ". ಇನ್ನೂ "ಓಗ್ತಾರೆ" ಆಗಿಲ್ಲ. ಆಗಿರಬಹುದೇನೋ, "ಆದ್ರೆ", ಆದರೆ ಅಲ್ಲ. ನನ್ನ ಕಣ್ಣಿಗಿನ್ನೂ ಬಿದ್ದಿಲ್ಲ. ಹಾಗೆಯೇ "ಮತ್ತೊಬ್ರು" "ಹೋದ್ರು" ಅಥವಾ "ಬಂದ್ರು".
 
ಕೆಲವರು ರ್ಯಾಂಪ್ ಮೇಲೆ "ಎಜ್ಜೆ" ಹಾಕುತ್ತಾರೆ.
 
ಮತ್ತೆ ಕೆಲವರು "ಹೆಲಿಕಾಫ್ಟರ್" ಅಥವಾ "ಹೆಲಿಕ್ಯಾಪ್ಟರ್"ನಲ್ಲಿ ಪ್ರಯಾಣ ಮಾಡುತ್ತಾರೆ "ಎರೆಡೂ" ಅಲ್ಲ ಅದು ಹೆಲಿಕಾಪ್ಟರ್ ಎಂದು ನೀವು ಬೇಕಿದ್ರೆ "ಬಾಯಿ ಬಡ್ಕೋಬಹುದು".
 
ಹೆಲಿಕಾಪ್ಟರ್ ಬಿದ್ದರೆ ಜನ "ಢಮಾರ್" ಆಗ್ತಾರೆ.
 
"ಅವರ್ಯಾರೂ" ಮದುವೆ ಮಾಡಿಕೊಳ್ಳರು ಬದಲಿಗೆ "ಮದ್ವೆ" ಮಾಡಿಕೊಳ್ಳುತ್ತಾರೆ.
 
"ದಿನವಿಡಿ" "ಫಾಗಿಂಗ್ ಸಿಂಪಡನೆ" ಮಾಡಿದರೂ ಸೊಳ್ಳೆ ಕಾಟ ಹೋಗದು. ದಸರೆಯಲ್ಲಿ "ದಿಪಾಲಂಕಾರ" ನಡೆಯುತ್ತದೆ. 
 
ನೀವು "ಲಾಭಿ" ಮಾಡಿದರೆ ಕೆಲಸವಾಗಬಹುದು. ಹಾಗೇ "ಸುಫಾರಿ" "ಕೊಟ್ರೆ" ಕೆಲಸವಾದರೂ "ಕಾರಾಗೃಹ"ಕ್ಕೆ ಹೋಗಬೇಕಾಗಿ ಬರಬಹುದು. 
 
"ಮತ್ತೊಬ್ರು", ಮತ್ತೊಬ್ಬರು ಅಲ್ಲ, ಏನು ಮಾಡಿದ್ರು ಗೊತ್ತೆ? ಅವರು "ವಂಧಿಮಾಗಧ"ರನ್ನು ನೇಮಿಸಿಕೊಂಡರು,
 
ಅನೇಕರು "ತಲೆಕೆಡಿಸಿದ್ರು". ಅದು "ಮಾಡಿದ್ಹೇಗೆ" ಎಂದು ಕೇಳಿದರಾ? ಅದು "ಸಾಭೀತಾಗಿದೆ". 
 
ಇದರಿಂದ ನಾನು "ಕಲಿತ್ತಿದ್ದೇನೆ'ಂದರೆ ಪರೀಕ್ಷೆಯಲ್ಲಿ "ಸರ್ಟಿಫೀಕೆಟ್" ಪಡೆದರೆ ಸಾಲದು. 
 
"ಆದ್ರಂದು" ಅವರು "ಬಂದ್ರು ಹೋದ್ರು".
 
ಕನ್ನಡ "ಹೀಗಿದ್ರೆ" ನಿಮಗೇನು "ತೊಂದ್ರೆ" ಎಂದು ಕೇಳಿದಿರಾ? "ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸ್ತಾರೆ'. ಅದಕ್ಕೇ ಹೇಳಿದ್ದು.
 
"ನಿಮ್ಗೆ" ಇದು "ಬೇಡ್ವಾ' ಅಥವಾ "ಬೇಕ"? "ನಮ್ಗೂ" ಬೇಡ. ಆದರೆ "ನೀವೆ" ನೋಡಿ. ಎಲ್ಲ "ವಿಭಾಗಗಳತ್ತನೂ" ಕಣ್ಣು ಹಾಯಿಸಿ. ಇಂದು "ಪ್ರೆಸ್‍ಮೀಟ"ಲ್ಲಿ "ಅಂಗನಾಡಿ"ಗಳ ಬಗ್ಗೆ ಸಚಿವರು "ಮಾತನಾಡೋಕೆ" ಹೊರಟರು. "ಮಕ್ಳ" ಸಮಸ್ಯೆ "ಶುರುವಾಗಿದ್ದು" ಆಗಲೇ. 
 
ಏನು ಪ್ಲಾನ್ "ವರ್ಕೌಟಾಯ್ತು"? ಅದರಿಂದ ನಿಮಗೇನು "ಧಕ್ಕಲಿದೆ"? ಇಂಟರ್ನಾಷನಲ್ ಹೆಗ್ಗಳಿಕೆ "ಸಿಕ್ತು" ಎಂದಿರಾ? ನಾನು "ಸಾಧ್ಯನೇ" ಇಲ್ಲ ಎಂದರೆ ನೀವು "ಪೊಲೀಸ್ರಿಗೆ" "ನಿರ್ಧಾಕ್ಷಿಣ್ಯ"ವಾಗಿ ದೂರು "ಕೊಡುತ್ತಿರಲ್ಲವೆ"? ಆಗ ನಿಮ್ಮನ್ನು "ಯಮಧೂತರು" ವಿಚಾರಿಸಿಕೊಳ್ಳುತ್ತಾರೆ.
 
ವಿಷ "ಕಾರ್ತಾನೆ" ಎಂದರೂ ನೀವು "ಚಿಕತ್ಸೆ" ಕೊಡಿಸಲಿಲ್ಲವೆ?
 
ನಿಮಗೆ "ಮಾತನಾಡೋಕು" ಬರದೆ "ಬಳಲುತ್ತಿದ್ದಿರ?"
 
ಎಲ್ಲರೂ ರೂಪರೇಷೆ ರಚಿಸಿದರೆ ಇಲ್ಲಿ ಅದು "ರೂಪುರೇಷೆ" ಆಗಿದೆ
 
ಮುಖ್ಯಮಂತ್ರಿಗಳು ಸಂಪುಟ "ಪುನರಾಚನೆ ಬಗ್ಗೆ "ಆಪ್ತೇಷ್ಠರ" ಜತೆ ಮಾತಿನಲ್ಲಿ ತೊಡಗಿದರು. "ಅವರ್ಯಾರು" ಅದು "ಸರಿಯಾಗಿದಿಯೇ" ಎಂಬುದರ ಬಗ್ಗೆ ತಲೆಕೆಡಿಸಿಲೊಳ್ಳಲಿಲ್ಲ. 
 
"ಅಪ್ಪನ ನೋಡಲು" ಇಂದು "ಬ್ರಂಹ್ಮಾಡ" ಸ್ವಾಮಿಗಳು ಬಂದಿದ್ದರು. ಆದರೆ ಅಪ್ಪ "ಎರೋಸ್ಪೇಸ್" ನೋಡಲು ಹೋಗಿದ್ದರು.
 
ಅಂದಹಾಗೆ ನೀವು ಏನು "ಮಾಡ್ತೀದ್ದೀರಾ"? ನೀವು "ಗುರುವಾಗಿದ್ಹೇಗೆ?"
 
ಅವನು "ಬರ್ತಿದಾನೆ".
 
"ಎರಡೂವರೆ ಲಕ್ಷಕ್ಕೂ ಹೆಚ್ಚು ಗಾಂಜಾ ಬೆಳೆ ವಶ" ಎಂದರೆ ಏನರ್ಥ?
 
ಈ ಕನ್ನಡವನ್ನು ಈ ಚಾನೆಲ್ ಕನ್ನಡಿಗರು ಹೇಗೆ "ತಗಲಾಕ್ಕೊಂಡರು"? ಎಂದು ನನಗಿನ್ನೂ ಅರ್ಥವಾಗಿಲ್ಲ. 
 
ಇದು ಬರೆಯುವ ಅಧ್ವಾನವಾದರೆ ನುಡಿಯುವ ಕನ್ನಡವೋ ದೇವರಿಗೇ ಅಥವಾ "ದೇವ್ರಿಗೆ" ಪ್ರೀತಿ. ಏಕೆಂದರೆ, "ಏನು", "ಒಂದು", ಎಲ್ಲೋ ಒಂದು ಕಡೆ" - ಈ ಮೂರು ಇದ್ದರೆ ಸಾಕು ಎಂತಹ ವರದಿಯನ್ನಾದರೂ ಬಿತ್ತರಿಸಬಹುದು; ಅವು ಇಲ್ಲದೆನಿರೂಪಣೆಯೇ ಇರುವುದಿಲ್ಲ. 
 
"ಇಂದು ಏನು ಇಲ್ಲಿ ಒಂದು ಅಪಘಾತವಾಗಿದೆ; ಇಂದು ಈ ಹೆದ್ದಾರಿಯಲ್ಲಿ ಇದರಲ್ಲಿ ಏನು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ; ಏನು ಈ ಅಪಘಾತದಲ್ಲಿ ಇಂದು ಕಾರು ಮತ್ತು ಬಸ್ ಡಿಕ್ಕಿ ಹೊಡೆದಾಗ ನಾಲ್ಕು ಮಂದಿ ದುರ್ಮರಣವನ್ನು ಅಪ್ಪಿದರು ಅವರಲ್ಲಿ  ಏನು ಒಬ್ಬ ಮಹಿಳೆಯೂ ಸೇರಿದ್ದರು. ಇದನ್ನು ನೋಡಿದಾಗ ಎಲ್ಲೋ ಒಂದು ಕಡೆ ಪೋಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿದು ಬರುತ್ತದೆ.... ಅಲ್ವೇ ಶಾಂತಿ?"
 
ನನ್ನ ಚಿಂತೆ ಒಂದೇ. ಈ ಆದ್ರೆ, ಬಂದ್ರೆ, ಹೋದ್ರೆ, ಮಾಡಿದ್ರು, ಮತ್ತೊಬ್ರು,. ಇಂತಹ ಪದ ಪ್ರಯೋಗಗಳೇ ಸರಿ ಎಂದು ನಮ್ಮ ಮಕ್ಕಳು ಇದನ್ನೇ ಬರೆಯತೊಡಗಿದರೆ, ಮಾಸ್ತರುಗಳೂ ಹೀಗೆ ಕಲಿಸತೊಡಗಿದರೆ ಕನ್ನಡ ಎಲ್ಲಿ ಮುಟ್ತದೆ. ದೇವ್ರೇ ಗತಿ! ನೋಡಿದಿರಾ ನನಗೂ ಈ ಚಾನಲ್ಗನ್ನಡ ಬಂದೇ ಬಿಟ್ಟಿತು! ಆದರೆ ನೀವು ಕಲಿಯಬೇಡಿ.