ಈ ಮಾಸ್ತರರಿಗೆ ಹಳ್ಳಿಯೇ ಶಾಲೆ! (ಭಾಗ 1)
ಅವರು ಬೆಳಾಲಿನ ಗೊಲ್ಲ ಮಾಸ್ತರು. ಗೋಪಾಳಕೃಷ್ಣ ಗೊಲ್ಲ ಅವರ ಹೆಸರು. ಕಪ್ಪಗೆ-ಉದ್ದಕ್ಕೆ, ಸಣಕಲು ದೇಹಿ, ಸಟಸಟ ಓಡಾಟ, ಪಟಪಟ ಮಾತು. ಅಚ್ಚ ಬಿಳಿ ಪಂಚೆ- ಅಂಗಿ, ಊರವರು ಹೇಳುವ ಹಾಗೆ- ಗೊಲ್ಲ ಮಾಸ್ತರರು ಯಾವತ್ತೂ ಹೀಗೇ!
ಬೆಳಾಲು ಬೆಳ್ತಂಗಡಿ ತಾಲ್ಲೂಕಿನ ಸಣ್ಣ ಊರು. ಉಜಿರೆಯಿಂದ ಹತ್ತು ಕಿ.ಮೀ. ದೂರ. ಈಗೀಗ ಬಸ್ಸು- ಜೀಪುಗಳ ಸೌಕರ್ಯ ಕಾಣುತ್ತಿರುವ ಕೊಂಪೆ. ಅರು ವರ್ಷಗಳ ಹಿಂದೆ ಮಾರಕ ರೋಗ ಮಂಗನ ಕಾಯಿಲೆ ದಾಳಿ ಮಾಡಿದಾಗ ಜನಗಳು ನೊಣಗಳ ಹಾಗೆ ಉದುರಿದ್ದು ಇಲ್ಲಿಯೇ.
ಹಣೆಬರಹ
ಗೊಲ್ಲ ಮಾಸ್ತರು ಬೆಳಾಲಿಗೆ ಬಂದದ್ದು 34 ವರ್ಷಗಳ ಹಿಂದೆ. ಮಂಗಳೂರಿನ ಬೇಸಿಕ್ ಟ್ರೇನಿಂಗ್ ಸ್ಕೂಲ್‍ನಲ್ಲಿ ಓದು ಮುಗಿಸಿದ ಚಿಗುರು ಮೀಸೆಯ ಹುಡುಗ. ಬೆಳಾಲಿನ ಸರಸ್ವತೀ ಹಿರಿಯ ಪ್ರಾಥಮಿಕ ಶಾಲೆಗೆ ಅಧ್ಯಾಪಕನಾಗಲು ಉಜಿರೆಯಿಂದ ಎಂಟು ಕಿ.ಮೀ. ನಡೆದುಕೊಂಡೇ ಬಂದರು! ಅಲ್ಲಿಂದ ಮುಂದೆ ಈ ಮೂರೂವರೆ ದಶಕಗಳಲ್ಲಿ ಈ ಊರ ಮಕ್ಕಳ ಹಾಗೂ ಅವರ ಪಾಲಕರ ಹಣೆಬರಹ ಬದಲು ಮಾಡಲು ಗೊಲ್ಲ ಮಾಸ್ತರರು ಏನೆಲ್ಲ ಮಾಡಿದರು! ಗೊಲ್ಲ ಮಾಸ್ತರರ ಸೋಲು- ಗೆಲವುಗಳ ರಮ್ಯ ಕಥೆ ಒಂದೂರಿನ ಬೆಳವಣಿಗೆಯ ಚರಿತ್ರೆಯೇ ಆದೀತು.
ಅವರು ಕಾಲಿಟ್ಟಾಗ ಬೆಳಾಲಿನಲ್ಲಿ ಓದಲು ಬರೆಯಲು ಬಲ್ಲವರ ಸಂಖ್ಯೆ ಅತಿ ಕಡಿಮೆ. ಅಗಾಧ ಓದುವ ಹುಚ್ಚಿನ ವ್ಯಕ್ತಿಗೆ ಪರಕೀಯ ಪರಿಸರ. ಇಲ್ಲಿ ಪೋಸ್ಟ್ ಆಫೀಸ್ ಇರಲಿಲ್ಲ. ಇವರೇ ಓಡಾಟ ಮಾಡಿ ಪೋಸ್ಟು ಆಫೀಸು ಆರಂಭಿಸಿದರು. ಎಂಟು ಕಿ.ಮೀ. ದೂರದಿಂದ ಪತ್ರಗಳನ್ನು ತಂದರು. ಹದಿನೆಂಟು ವರ್ಷ ಶಾಲಾ ಮಾಸ್ತರಿಕೆಯ ಜೊತೆಗೆ ಪೋಸ್ಟ್ ಮಾಸ್ತರಿಕೆಯನ್ನೂ ಮಾಡಿ ಬೇರೆಯವರು ತಯಾರಾದಾಗ ಬಿಟ್ಟುಕೊಟ್ಟರು.
ಓದುವ ಜನಗಳೇ ಇಲ್ಲದ ಊರುಗಳಲ್ಲಿ ಓದುವ ಹುಚ್ಚು ಬೆಳೆಸಲು ಹೊರಟಿದ್ದು ಗೊಲ್ಲರು ಮುಪ್ಪಿನ ಬಾಗಿಲಲ್ಲಿ ನಿಂತು ನೆನೆಸುವ ಸಾಹಸ.
ಮಕ್ಕಳು- ಮರಿಯಿಲ್ಲದ ಮಾಸ್ತರರು ಮಕ್ಕಳಿಗಾಗಿ ಉಪಯೋಗವಾಗುವ ಪುಸ್ತಕಗಳ ಪ್ರಕಟಣೆಗಿಳಿದರು. "ವಾಣಿ ಸಾಹಿತ್ಯಮಾಲೆ"ಯನ್ನು ಆರಂಭಿಸಿ ಏಳು ಪುಸ್ತಕಗಳನ್ನು ಹೊರತಂದರು. ಮದುವೆಯನ್ನೇ ಮುಂದೂಡಿ ಸಾಹಿತ್ಯ ಮಾಲೆಗಾಗಿ, ದುಡಿದ ಹಣವನ್ನು ಸುರಿದರು. ನಾಕಾಣೆ-ಎಂಟಾಣೆಗಳಿಗೆ ಪುಸ್ತಕ ಮಾರಿ ಕೈಸುಟ್ಟುಕೊಂಡದ್ದು ಮಾಸ್ತರರಿಗೆ ಇನ್ನೂ ಮಾಯದ ಗಾಯ.
ಊರಲ್ಲಿ ಒಂದು ಜೀವಂತ ವಾತಾವರಣ ಉಂಟುಮಾಡುವುದಕ್ಕಾಗಿ ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಪಂಚಾಯತಿಗೆ ರೇಡಿಯೋ ಬಂದಾಗ ರೆಡಿಯೋ ರಿಕ್ರಿಯೇಷನ್ಸ್ ಕ್ಲಬ್ ಮಾಡಿ ಕೆಲವು ದಿನ ಜನರಿಗೆ ತಿಳಿವಳಿಕೆ ಕೊಟ್ಟರು. ಗೆಳೆಯರ ಬಳಗ ಕಟ್ಟಿಕೊಂಡು ಹಲವು ವರ್ಷ ನಾಟಕ- ಯಕ್ಷಗಾನ- ಬಯಲಾಟಗಳನ್ನರ್ಪಿಸಿದರು. ಬೆಳ್ತಂಗಡಿಯ ಲೈಬ್ರರಿಯಿಂದ ಮೂರು ತಿಂಗಳಿಗೊಮ್ಮೆ ನೂರು ಪುಸ್ತಕಗಳನ್ನು ತಲೆಮೇಲೆ ಹೊತ್ತುಕೊಂಡುಬಂದು ಹಂಚಿದರು. ಮತ್ತೆ ಲೈಬ್ರರಿಗೆ ಪುಸ್ತಕಗಳನ್ನು ವಾಪಸ್ಸು ಮಾಡುವಾಗ ಸೋತು ಸುಣ್ಣವಾಗಿತ್ತಿದ್ದರು.
ರಾತ್ರಿ ಶಾಲೆ
ಮಕ್ಕಳಿಗೆ ಕಲಿಸುವ ಮಾಸ್ತರರು ಮಕ್ಕಳ ಅಪ್ಪಂದಿರ ಶಿಕ್ಷಣದ ಬಗೆಗೂ ಯೋಚಿಸಿದ್ದು ಮೂವತ್ತು ವರ್ಷಗಳ ಹಿಂದೆ. ಆಗ ಯಾರ ನೆರವನ್ನೂ ಪಡೆಯದೇ ಗೊಲ್ಲ ಮಾಸ್ತರರೇ ರಾತ್ರಿ ಶಾಲೆಯನ್ನು ತೆರೆದರು. ಪೈಸೆ ಕಾಸಿನ ನಿರೀಕ್ಷೆಯಿಲ್ಲದೇ ಊರ ವಯಸ್ಕರಿಗೆ "ಅಆಇಈ" ಹೇಳಿಕೊಟ್ಟರು. ಶಾಲೆಗೆ ನಲವತ್ತು ಜನ ಬರುತ್ತಿದ್ದರು. ಕಷ್ಟವೆಂದರೆ ಕೆಲಸ ಮಾಡಿ ಸುಸ್ತಾದ ಜನ ಕುಡಿದು ಬರುತ್ತಿದ್ದರು. ಮಾಸ್ತರರಿಗೇ ಜೋರು ಮಾಡುತ್ತಿದ್ದರು! ಅದನ್ನು ಮಾಸ್ತರರು ತಡೆದುಕೊಂಡರು. ಆದರೆ ಎಲ್ಲ ಜಾತಿಯರನ್ನೂ ಶಾಲೆಗೆ ಸೇರಿಸಿದ್ದರಿಂದಾಗಿ ಜನ ಒಪ್ಪದೇ ಒಂದು ದಿನ ಶಾಲೆಯೇ ನಿಂತು ಹೋಯ್ತು. ಇದು ಇನ್ನೂ ಅವರಿಗೆ ನೋವು ನೀಡುವ ನೆನಪು.
ಹಿಂದೊಮ್ಮೆ ಅವರಿಗೆ ಹುರುಪು ಬಂದದ್ದು - ತಿಂಗಳಿಗೊಮ್ಮೆ ಊರವರನ್ನೆಲ್ಲ ಸೇರಿಸಿ ಸಭೆ ಮಾಡಬೇಕು ಎಂಬುದಾಗಿ. ಆ ಸಭೆಯಲ್ಲಿ ಕೃಷಿ ವಿಚಾರ, ಸಾಮಾಜಿಕ ವಿಚಾರಗಳನ್ನು ಚರ್ಚಿಸಬೇಕು. ಪಕ್ಷಿ ವೀಕ್ಷಣೆ, ನಕ್ಷತ್ರ ವೀಕ್ಷಣೆಗಳನ್ನು ಕಲಿಸಬೇಕು. ತಿಂಗಳಿಗೊಂದು ಹೊಸ ಕಾರ್ಯಕ್ರಮ ನೀಡಬೇಕು ಎಂಬುದು ಅವರ ಉದ್ದೇಶ. ಶುರುವಿಗೆ ಭಾರೀ ಜನ ಸೇರಿದರು. ಬರಬರುತ್ತ ನೂರಾರು ತಾಪತ್ರಯಗಳ ನೆಪದಿಂದ ಜನ ಕಡಿಮೆಯಾಗಿ ಒಂದು ತಿಂಗಳು ಯಾರೂ ಬಾರದಿದ್ದಾಗ "ಕಣ್ಣೀರು ಬಂತು" ಎನ್ನುತ್ತಾರೆ ಗೊಲ್ಲರು.
ಗೊಲ್ಲ ಮಾಸ್ತರ ಬಗ್ಗೆ ಖುಷಿಯಾಗುವುದು ಅವರ ವೈಜ್ಞಾನಿಕ ಮನೋಭಾವ. ಶಾಲೆಯಲ್ಲಿ "ಅಆ" ಇಂದ ಎಲ್ಲ ವಿಷಯಗಳನ್ನೂ ಕಲಿಸಬೇಕಾದರೂ ಅವರ ಆಸಕ್ತಿ ವಿಜ್ಞಾನ . ಕನ್ನಡ ಶಾಲೆಗಳಲ್ಲಿ
ಪ್ರಯೋಗಾಲಯಗಳೇ ಇರುವುದಿಲ್ಲ. ಪಠ್ಯದಲ್ಲಿರುವ ಸಣ್ಣ ಸಣ್ಣ ಪ್ರಯೋಗಗಳನ್ನು ಮಾಡಿ ತೋರಿಸುವುದೂ ಅಸಾಧ್ಯ. ಈ ಸ್ಥಿತಿಯಲ್ಲಿ ಗೊಲ್ಲ ಮಾಸ್ತರರು ಅಕ್ಕಪಕ್ಕದ ಶಾಲೆ-ಕಾಲೇಜುಗಳಲ್ಲಿ ಕಾಡಿ ಬೇಡಿ ಬೀರೆಟ್‍ಗಳನ್ನೋ, ಫ್ಲಾಸ್ಕ್‍ಗಳನ್ನೋ, ಇತರ ಪ್ರಯೋಗ ಸಾಮಾಗ್ರಿಗಳನ್ನೋ ಸಂಪಾದಿಸಿದರು. ತಮ್ಮ ಮಕ್ಕಳಿಗೆ ಸರಳ ವೈಜಾÐನಿಕ ಪ್ರಯೋಗಗಳನ್ನು ಕಣ್ಣೆದುರು ಮಾಡಿ ತೋರಿಸಿದ್ದೇ ಅಲ್ಲದೇ ತಾಲ್ಲೂಕಿನ 60 ಶಾಲೆಗಳಿಗೆ ಹೋಗಿ ವಿಜ್ಞಾನ ಪಾಠ-ಪ್ರಯೋಗ ಮಾಡಿದ್ದಾರೆ.
"ಹೈಸ್ಕೂಲು-ಕಾಲೇಜುಗಳಲ್ಲಿ ಹಾಳುಮಾಡುವ ಉಪಕರಣಗಳನ್ನು ಪ್ರಾಥಮಿಕ ಶಾಲೆಗಳಿಗೆ ಕೊಟ್ಟರೂ ನಮ್ಮ ಪ್ರಾಥಮಿಕ ಶಾಲೆಯ ಮಕ್ಕಳು ಬೆಪ್ಪುತಕ್ಕಡಿಗಳಾಗುವುದು ತಪ್ಪುತ್ತದೆ" ಎನ್ನುವ ಗೊಲ್ಲ ಮಾಸ್ತರರು ಈಗ ಸರ್ಕಾರ ಪ್ರಾಥಮಿಕ ಶಿಕ್ಷಣದ ಬಗ್ಗೆ ಏನೇನೂ ಗಮನಹರಿಸುವುದಿಲ್ಲ ಎಂದು ವಿಷಾದಿಸುತ್ತಾರೆ.
(ಚಿತ್ರ ಕೃಪೆ : ಗೂಗಲ್)
(ಲೇಖನ ಬರೆದ ವರ್ಷ : 1991)
ವಿಜ್ಞಾನ