ನವುಲೆಯಲ್ಲಿ ಭತ್ತದ ತಳಿಗಳ ಪ್ರದರ್ಶನ
ಶಿವಮೊಗ್ಗ ಜಿಲ್ಲೆಯ ನವುಲೆಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ೨೨ ಫೆಬ್ರವರಿ ೨೦೧೭ರಿಂದ ಭತ್ತದ ತಳಿಗಳ ಪ್ರದರ್ಶನ ಜರಗುತ್ತಿದೆ. ಅಲ್ಲಿ ೭೦ ವಿವಿಧ ದೇಸಿ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಲ್ಲಿ ಕೆಲವು ತಳಿಗಳ ಹೆಸರು ಮತ್ತು ವಿಶೇಷತೆ ಹೀಗಿದೆ: ಕಾಳಜೀರ: ಕಪ್ಪು ಬಣ್ಣದ ಅಕ್ಕಿಯ, ಔಷಧೀಯ ಗುಣಗಳ ತಳಿ. ದೀಪಿಕಾ ರಾಣಿ ಗಾಢ ಕೆಂಪು ಬಣ್ಣದ ಅಕ್ಕಿಯ ತಳಿ. ಮೈಸೂರು ಮಲ್ಲಿಗೆ: ಅಧಿಕ ಇಳುವರಿ ನೀಡುವ ತಳಿ. ಬರರತ್ನ ಚೂಡಿ: ಕಡಿಮೆ ನೀರು ಬಳಸಿ ಬೆಳೆಯುವ ಉತ್ತಮ ಇಳುವರಿಯ ತಳಿ. ಗಂಧಸಾಲೆ: ಇದರ ಅಕ್ಕಿ ಬೇಯಿಸಿ ಅನ್ನ ಮಾಡಿದಾಗ ವಿಶೇಷ ಪರಿಮಳ ಬೀರುವ ಭತ್ತದ ತಳಿ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಬೆಳೆಸಲು ಸೂಕ್ತ. ನವರ: ಸಕ್ಕರೆ ಕಾಯಿಲೆ ರೋಗಿಗಳಿಗೆ ಇದರ ಅನ್ನ ಒಳ್ಳೆಯದು. ಯಾಕೆಂದರೆ ಇದರಲ್ಲಿ ಪ್ರೋಟೀನ್ ಪ್ರಮಾಣ ಜಾಸ್ತಿ ಮತ್ತು ಶರ್ಕರಪಿಷ್ಟ ಪ್ರಮಾಣ ಕಡಿಮೆ. ಮೀಸೆ ಭತ್ತ, ನೆಟ್ಟೆ ಭತ್ತ, ಕರಿ ಮೀಸೆ -
ಇವು “ಮೀಸೆ" ಹೊಂದಿರುವ ಭತ್ತದ ತಳಿಗಳು. ಜೊತೆಗೆ, ಕರಿಕಂಡಗ, ಅಂಬಿ ಮೊಹರಿ, ದಪ್ಪ ವಾಳ್ಯ, ಸೂಸಾ ಸುಗಂಧಿ, ಅರ್ಜುನ, ನಲ್ಲೂರು ಪಿಸ್ತೂಲ್ ತಳಿಗಳೂ ಇವೆ. ನವುಲೆ ಕೇಂದ್ರದ ಸಹಸಂಶೋಧಕ ಶ್ರೀಕಾಂತ್ ನೀಡಿದ ಮಾಹಿತಿ: ಇಲ್ಲಿನ ಕೃಷಿಕ್ಷೇತ್ರದಲ್ಲಿ ರಾಜ್ಯದ ವಿವಿಧ ಪ್ರದೇಶಗಳ ರೈತರು ಬೆಳೆಸುವ ದೇಸಿ ಭತ್ತದ ತಳಿಗಳನ್ನು ಸಂಗ್ರಹಿಸಿ ಬೆಳೆಸಲಾಗುತ್ತಿದೆ. ಈ ವರೆಗೆ ೧೪೫ ಭತ್ತದ ತಳಿಗಳ ಸಂರಕ್ಷಣೆ ಮಾಡಲಾಗಿದೆ.