ಔಷಧೀಯ ಸಸ್ಯ- 2
ಸಸ್ಯ ಶಾಸ್ತ್ರೀಯ ಹೆಸರು: ವಿಥಾನಿಯಾ ಸೊಮ್ನಿಫೆರಾ
ಸಂಸ್ಕೃತ: ಅಶ್ವಗಂಧ
ಕನ್ನಡ : ಹಿರೇಮದ್ದಿನ ಗಿಡ"ಹೆಸರಿಲ್ಲದ ಕಾಯಿಲೆಗೆ ಅಶ್ವಗಂಧ ಮದ್ದು" ಎಂಬಂತೆ ಎಲ್ಲಾ ಖಾಯಿಲೆಗಳಿಗೂ ಅಶ್ವಗಂಧವನ್ನು ಮದ್ದಾಗಿ ಬಳಸಬಹುದು.
ಅಶ್ವಗಂಧವು ನೇರವಾಗಿ ಬೆಳೆಯುವ ಸುಮಾರು 30 ರಿಂದ 150 ಸೆ. ಮೀ ಎತ್ತರವಾದ ಗಿಡ. ಇದರ ಹಣ್ಣುಗಳು ಹಸಿರು ಅಥವಾ ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತದೆ. ಹಣ್ಣುಗಳು ಬೆಳೆದಂತೆ ಕೆಂಪುಬಣ್ಣಕ್ಕೆ ತಿರುಗತ್ತದೆ. ಇದರ ಬೇರುಗಳು ಪ್ರಮುಖ ಹಾಗು ವಿಶೇಷವಾದ ಅಂಶಗಳನ್ನು ಹೊಂದಿದ್ದು, ಇದರ ಒಳಭಾಗ ಕೆನೆ ಬಣ್ಣ ಹೊಂದಿರುತ್ತದೆ. ಇದರ ತಾಜಾ ಬೇರು ಕುದುರೆಯ ಮೂತ್ರದ ವಾಸನೆಯಂತೆ ಇರುವುದರಿಂದ ಈ ಗಿಡಕ್ಕೆ ಆಶ್ವಗಂಧ ಎಂಬ ಹೆಸರು ಬಂದಿದೆ. ಈ ಗಿಡವನ್ನು ಮೂಲಿಕೆಯಾಗಿ ಆರ್ಯುವೇದದಲ್ಲಿ ಬಳಸಲಾಗುತ್ತದೆ. ಅಶ್ವಗಂಧ ಗಿಡದ ಬೇರು, ಎಲೆ ಮತ್ತು ಬೀಜವು ಔಷಧಿ ಗುಣಗಳನ್ನು ಹೊಂದಿದ್ದು ಬಹಳ ಉಪಯೋಗಕಾರಿಯಾಗಿದೆ.
ಸಂಧಿವಾತ : ಅಶ್ವಗಂಧ ಗಿಡದ ಬೇರುಗಳನ್ನು ಕುಟ್ಟಿ ಪುಡಿಮಾಡಿ ಹಾಲಿನೊಟ್ಟಿಗೆ ದಿನಕ್ಕೆ 2 ಬಾರಿ ಕುಡಿಯಬೇಕು. ಜೊತೆಗೆ ಬೇರನ್ನು ತೇಯ್ದು ನೋವಿರುವ ಜಾಗಕ್ಕೆ ಲೇಪಿಸಿಕೊಳ್ಳಬೇಕು.
ಗಾಯ: ಹಳೇ ಗಾಯಗಳಿದ್ದಲ್ಲಿ, ಅಶ್ವಗಂಧ ಗಿಡದ ಬೇರನ್ನು ತೇಯ್ದು ಲೇಪಿಸಬೇಕು.
ಜಂತುನಾಶಕ: ಹೊಟ್ಟೆಯಲ್ಲಿ ಜಂತುಗಳಿದ್ದರೆ,ಅಶ್ವಗಂಧದ ಎಲೆಗಳ ಕಷಾಯ ಮಾಡಿ 2 ಬಾರಿಯಂತೆ 1 ವಾರ ಕುಡಿಯಬೇಕು.
ತಲೆನೋವು: ಒಂದು ಚಮಚ ಅಶ್ವಗಂಧ ಬೇರಿನ ಪುಡಿಯನ್ನು ಹಾಲಿನಲ್ಲಿ ಬೆರೆಸಿ 2-3 ವಾರ ದಿನಕ್ಕೆ 2ಬಾರಿ ಸೇವಿಸುವುದರಿಂದ ನಿರಂತರ ತಲೆನೋವಿಗೆ ಪರಿಹಾರ ಸಿಗುತ್ತದೆ.
ನಿದ್ರಾಹೀನತೆ: ಒಂದು ಚಮಚ ಅಶ್ವಗಂಧ ಮರದ ಬೇರಿನ ಪುಡಿಯನ್ನು ತುಪ್ಪ ಮತ್ತು ಸಕ್ಕರೆ ಜೊತೆ ಬೆರೆಸಿ ರಾತ್ರಿ ಊಟದ ನಂತರ ಸೇವಿಸಿದರೆ, ನಿದ್ರೆ ಚನ್ನಾಗಿ ಬರುತ್ತದೆ.
(ವಿವಿಧ ಮೂಲಗಳಿಂದ)
ಚಿತ್ರ ಕೃಪೆ : ಹರಿ ಪ್ರಸಾದ್ ನಾಡಿಗ್