ಸಕಾಲದಲ್ಲಿ ಪರಿಹಾರ! ತಕ್ಷಣ ಸಂಪರ್ಕಿಸಿ.....

ಸಕಾಲದಲ್ಲಿ ಪರಿಹಾರ! ತಕ್ಷಣ ಸಂಪರ್ಕಿಸಿ.....

ಸಮಸ್ಯೆ ಯಾರಿಗಿಲ್ಲ ಹೇಳಿ? ಕೆಲವರಿಗೆ ಹಾಸಲುಂಟು, ಕೆಲವರಿಗೆ ಹೊದೆಯಲುಂಟು. ಕೆಲವು ನತದೃಷ್ಟರಿಗೆ ಹಾಸಲೂ ಉಂಟು, ಹೊದೆಯಲೂ ಉಂಟು. ಸಮಸ್ಯೆ ಇಲ್ಲದಿದ್ದರೆ ಬಾಳು ನೀರಸವಾಗುತ್ತದೆ ಎಂದು ಹೇಳಿದವನೂ ಇದ್ದಾನೆ. ಹೌದೆ? ಆದರೆ ಬಹುಶಃ ಅವನು ಸಮಸ್ಯೆ ಇಲ್ಲದೆ ಹಾಯಾಗಿರುವವರ ಬಗ್ಗೆ ಅಸೂಯೆ ಪಟ್ಟು ಹಾಗೆ ಹೇಳಿ ಅವರಿಗೂ ಒಂದಿಷ್ಟು ಸಮಸ್ಯೆಗಳು ಕಾಡಲಿ ಎಂದು ಬಯಸಿರಲೂಬಹುದು. ಅಥವಾ, ಹಾಗೆ ಹೇಳಿ ತನಗೆ ತಾನೇ ಸಾಂತ್ವನ ಹೇಳಿಕೊಂಡಿರಬಹುದದೆ? ಗೊತ್ತಿಲ್ಲ.

ಹೋಗಲಿ ಬಿಡಿ. ಸಮಸ್ಯೆ ಇದೆ ನಿಜ. ಆದರೆ ಪರಿಹಾರ? ಅದೇ ಸಮಸ್ಯೆ ಅಂದರೆ ಸಮಸ್ಯೆಗೆ ಪರಿಹಾರ ಸಿಗದಿರುವುದು ಸಮಸ್ಯೆಗಿಂತಲೂ ದೊಡ್ಡ ಸಮಸ್ಯೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳಿಕೊಂಡಾಯಿತು. ಪರಿಣಿತರಿಗೆ ವಿವರಿಸಲಾಯಿತು. ಆಪ್ತ ಸಮಾಲೋಚನ / ಗುಪ್ತ ಸಮಾಲೋಚನೆ ಸಹ ಮಾಡಿದ್ದಾಯಿತು. ಆದರೆ ಪರಿಹಾರ ಅಗೋಚರ, ಸಮಸ್ಯೆ ಬೆಟ್ಟದಂತೆ ಎದುರು ನಿಂತಿದೆ. ಅದು ಕರಗದು. ದಾರಿ ಕಾಣದು.

ಮುಂದೇನು? ನದಿಗೂ/ ಕೆರೆಗೂ ಹಾರುವುದೆ? ರೈಲಿಗೆ ತಲೆ ಕೊಡುವುದೆ? ಬೆಟ್ಟದಿಂದ ಜಿಗಿದರೆ ಹೇಗೆ? ಅಥವಾ ವಿಷ ನುಂಗಿದರೆ? ಕೊರಳಿಗೆ ಹಗ್ಗ ಬಿಗಿದುಕೊಳ್ಳಲೂ ಸಹ ಸಾಧ್ಯ.

ಹೋಲ್ಡ್ ಆನ್. ದುಡುಕದಿರಿ. ನಿಮಗೆ ಪರಿಹಾರ ಬೇಕಲ್ಲವೆ? ಅತ್ಯಧಿಕ ಪ್ರಸಾರವುಳ್ಳ ಯಾವುದೇ ಪತ್ರಿಕೆಯ ಕ್ಲಾಸಿಫೈಡ್ ಜಾಹೀರಾತು ಕಾಲಂ ನೋಡಿ. ನೀವು ಅರಸಿ ಹೋಗುತ್ತಿದ್ದ ಪರಿಹಾರ ನಿಮ್ಮ ಕಾಲಿಗೆ ತೊಡರಿದಂತಾಗುತ್ತದೆ. ಅಥವಾ ನಿಮಗೆ ಪರಿಹಾರ ಸೂಚಿಸಲೂ ಕಾತುರರಾಗಿರುವ ಅನೇಕರು ಕಾಣಸಿಗುತ್ತಾರೆ. ಅವರು ಜ್ಯೋತಿಷಿಗಳಾಗಿರಬಹುದು; ವಶೀಕರಣ ಸ್ಪೆಷಲಿಸ್ಟ್ ಆಗಿರಬಹುದು; ಅಘೋರಿ ಸಾಧು ಇರಬಹುದು; ಕೇರಳದಿಂದ ಬಂದಿರಬಹುದಾದ ಅಥವಾ ಹಿಮಾಲಯ – ಕೊಳ್ಳೇಗಾಲದ ವಿದ್ಯೆ ಕಲಿತವರಿರಬಹುದು. ಇವರೆಲ್ಲ ನಮ್ಮ ನಿಮ್ಮ "ಘೋರ, ನಿಗೂಢ, ಗುಪ್ತ, ಕಠಿಣ, ಅ ತಿ ಕಠಿಣ" ಹೀಗೆ ತರಹಾವರಿ ಸಮಸ್ಯೆಗಳನ್ನು ಲೀಲಾಜಾಲವಾಗಿ ಪರಿಹಾರಹೊಳಿಸುತ್ತಾರೆ. ಅಥವಾ ಹಾಗೆಂದು ಅವರ ಜಾಹೀರಾತು ಸಾರುತ್ತದೆ.

ಇವರದೆಲ್ಲ "ಸಕಾಲ" ಸೇವೆ. ನಿಗದಿತ ಸಮಯದಲ್ಲಿ ಶಾಶ್ವತ ಪರಿಹಾರ. ಆ ನಿಗದಿತ ಸಮಯ ಕೇವಲ 30 ನಿಮಿಷದಿಂದ ಹಿಡಿದು 48 ತಾಸುಗಳವರೆಗೆ. ಕುಂಬಾರನಿಗೆ ಒಂದು ವರ್ಷ ದೊಣ್ಣೆಗೆ ಒಂದು ನಿಮಿಷ ಎನ್ನುವಂತೆ ನಿಮ್ಮ ಸಮಸ್ಯೆ ವರ್ಷ ಗಳಷ್ಟು ಹಳೆಯದದಿದ್ದು ತುಕ್ಕು ಹಿಡಿದಿರಲೂಬಹುದು. ಆದರೆ ಅದು ಇವರ ಬಳಿ ಬಂದರೆ ಚಿಟಿಕೆ ಹೊಡೆದಂತೆ ನಿವಾರಣೆಗೊಳ್ಳುತ್ತದಂತೆ. ಸಮಸ್ಯೆ ನಿವಾರಣೆಗೆ ಬೇಕಾದ ಸಮಯ ಸಮಸ್ಯೆಯ ಗಂಭೀರತೆಯನ್ನು ಒಬ್ಬ ಪಂಡಿತ 30 ನಿಮಿಷಗಳಲ್ಲೇ ಪರಿಹರಿಸಿದರೆ ಇನ್ನೊಬ್ಬನಿಗೆ 48 ತಾಸು ಹಿಡಿಯಬಹುದು. ಈ ಎರಡೂ ಗಡುವುಗಳ ನಡುವೆ 1, 2, 5, 7, 8 ಮತ್ತು 11 ತಾಸುಗಳಲ್ಲಿ ನಿಮ್ಮ ಸಮಸ್ಯೆಗೊಂದು ದಿಕ್ಕು ತೋರಿಸುವ ಭೂಪರೂ ಇದ್ದಾರೆ.

ಕೆಲವು ಪಂಡಿತರು ಫೋನಿನಲ್ಲೇ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ. ಆದರೆ ನಿಮ್ಮಿಂದ ಹಣ ವಸೂಲಿ ಅಥವಾ ಸೇವಾ ಶುಲ್ಕ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ನಿಗೂಢ. ಇರಲಿ ಬಿಡಿ. ಅದು ಅವರ ಸಮಸ್ಯೆ. ಕೆಲವರಿಗೆ ಈ ಪರಿಹಾರ ನೀಡುವ ಶಕ್ತಿ ನಾಗಾಸಾಧು ಪೂಜೆಗಳಿಂದ ಲಭಿಸಿದರೆ ಇನ್ನು ಕೆಲವರು ದೈವಶಕ್ತಿಯಿಂದ ಇದು ತಮಗೆ ಸಾಧ್ಯವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಒಬ್ಬ ಅಂಬಾ ಭವಾನಿ ಪ್ರೇರಿತ ಪಂಡಿತರಂತೂ ಕ್ಷಣ ಮಾತ್ರದಲ್ಲಿ ಗ್ಯಾರಂಟಿ ಪರಿಹಾರ ನೀಡಲು ಸಿದ್ಧರಿದ್ದು, ಪರಿಹಾರವನ್ನು "ನಂಬಿ ಪಡೆಯಿರಿ" ಎಂದು ತಮ್ಮ ಫೋನ್ ನಂಬರ್ ನೀಡಿದ್ದಾರೆ. ಅಂದಹಾಗೆ, ಹೀಗೆ ಪ್ರಚಾರ ಮಾಡಿಕೊಳ್ಳುವ ಈ ಪರಿಹಾರ ಸ್ಪೆಷಲಿಸ್ಟ್ ಗಳೆಲ್ಲ ತಮ್ಮ ಕಚೇರಿ ವಿಳಾಸ ನೀಡದಿರುವುದು ಸೋಜಿಗ ತರಿಸುತ್ತದೆ. ಎಲ್ಲರನ್ನೂ ಮೊಬೈಲ್ ಮೂಲಕವೇ ಮೊದಲು ಸಂಪರ್ಕಿಸಬೇಕಿದೆ . ಮೊಬೈಲ್ ಇಲ್ಲದ ದಿನಗಳಲ್ಲಿ ಇವರು ವಿಳಾಸ ನೀಡುತ್ತಿದ್ದರೇನೋ.

ಇವರೆಲ್ಲರೂ ವಶೀಕರಣದಲ್ಲಿ ಸ್ಪೆಷಲಿಸ್ಟ್ ಗಳಾಗಿರುವುದನ್ನು ಅವರು ನೀಡಿರುವ ಜಾಹೀರಾತಿನ ಮೂಲಕ ಗಮನಿಸಬಹುದು. ಒಬ್ಬರು ತಮ್ಮನ್ನು ತಾವೇ "ಚಂಡಿ ಚಾಮುಂಡಿ ದೈವಶಕ್ತಿಯಿಂದ 28 ವರ್ಷಗಳಿಂದ ಹಿಮಾಲಯದಲ್ಲಿ "ವಶೀಕರಣ ಸ್ಪೆಷಲಿಸ್ಟ್" ಎಂದು ಕರೆದುಕೊಂಡಿದ್ದು - “ಇಂದೇ ಕರೆಮಾಡಿ ನೋಡಿ, ಇದು ಸತ್ಯ" ಎಂದು ಸಾರಿದ್ದಾರೆ. ಆದರೆ ಎಲ್ಲರೂ ವಶೀಕರಣದಲ್ಲಿ ಪರಿಣಿತರು ಎಂದೇನಿಲ್ಲ. ಹಣಕಾಸು , ಶತ್ರುಕಾಟ, ಪ್ರೀತಿಯಲ್ಲಿ ಮೋಸ, ಸಂತಾನ ಭಾಗ್ಯ, ಮಾಟಬಾಧೆ, ವ್ಯಾಪಾರಾಭಿವೃದ್ಧಿ , ಸಾಲಬಾಧೆ ಹೀಗೆ ನಿಮ್ಮ ಸಮಸ್ಯೆ ಏನೇ ಇರಲಿ, ಹೇಗೇ ಇರಲಿ" ಇವರು ಅದನ್ನು ಪರಿಹರಿಸಲು ಸಿದ್ಧ. ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ಹಣ ವಾಪಸ್ ಮಾಡುವ, ಸ್ತ್ರೀಯರಿಗೆ ರಿಯಾಯಿತಿ ದರ ವಿಧಿಸುವ ಕರುಣಾಳುಗಳೂ ಇದ್ದಾರೆ. “ಬೇರೆ ಕರೆ ಮಾಡಿ ನೊಂದಿದ್ದರೆ ಇಲ್ಲೊಮ್ಮೆ ಕರೆ ಮಾಡಿ" ಎನ್ನುವ ಪಂಡಿತರು ನಿಮ್ಮ ಪರಿಹಾರ ಪಡೆಯುವ ಆಸೆಗೆ ಮತ್ತೊಮ್ಮೆ ನೀರೆರೆಯುತ್ತಾರೆ. ಸ್ತ್ರೀ ಪುರುಷ ವಶೀಕರಣ "ಮನಬಂದಂತೆ ಮಾಡಿಕೊಡುವ" ಮಂದಿಯೂ ಲಭ್ಯ. 100% ಗ್ಯಾರಂಟಿ ಚಾಲೆಂಜಿನೊಂದಿಗೆ 11 ಗಂಟೆಗಳಲ್ಲಿ ಪರಿಹಾರ ನೀಡುವವರೂ ಸಿಗುತ್ತಾರೆ. ಆಯ್ಕೆ ನಿಮ್ಮದು. ಹನ್ನೊಂದೇ ತಾಸಿನಲ್ಲಿ "ಇಷ್ಟ ಪಟ್ಟವರು ನಿಮ್ಮಂತೆ ಆಗಲು" ಮಾಡುವ ಧುರೀಣರನ್ನು ಭೇಟಿ ಮಾಡಲು ನಾನು ತುದಿಗಾಲಲ್ಲಿ ನಿಂತಿದ್ದೇನೆ. ನೀವು?

ಇದೇ ರೀತಿ ವೈದ್ಯರು ಮತ್ತು ವಕೀಲರು ಜಾಹೀರಾತು ಕೊಡತೊಡಗಿದರೆ ಹೇಗಿರಬಹುದು? “ನಿಮಗೆ ಜಾಮೀನು ಬೇಕೆ? ನಮ್ಮನ್ನು ಸಂಪರ್ಕಿಸಿ " ಅಥವಾ "ಡೈವೋರ್ಸ್ ಬಗ್ಗೆ ಯೋಚಿಸುತ್ತೀದ್ದೀರಾ? ಆ ಚಿಂತೆ ನಮಗೆ ಬಿಡಿ" ಎಂದು ವಕೀಲರು ಕಕ್ಷಿದಾರರನ್ನು ಆಕರ್ಷಿಸಬಹುದು. “ಪಕ್ಕದ ಮನೆಯವರು ಕಿರುಕುಳ ಕೊಡುತ್ತಿದ್ದರೆ ಅಥವಾ ಪಕ್ಕದ ಮನೆಯವರಿಗೆ ಕಿರುಕುಳ ಕೊಡಬೇಕೆಂದಿದ್ದರೆ ಇಂದೇ ನಮಗೆ ಫೋನ್ ಮಾಡಿ, ಆಕರ್ಷಕ ದರಗಳು , ಫಲ ಕೊಡದಿದ್ದರೆ ಹಣ ವಾಪಸ್" ಎಂದೂ ಜಾಹೀರಾತು ಹಾಕಿಕೊಳ್ಳಬಹುದು. ಆದರೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೆಯೇ, ಅಧೀಕೃತ ವೈದ್ಯರು - ಅವರು ಎಷ್ಟೇ ಪರಿಣಿತರಿರಲಿ, ತಮ್ಮ ವೃತ್ತಿಕೌಶಲವನ್ನು ಠಾಂ ಠಾಂ ಹೊಡೆಯುವಂತಿಲ್ಲ. ಇಲ್ಲದಿದ್ದರೆ, “ನಿಮಗೆ ಮೂಳೆ ಮುರಿದಿದೆಯೆ? ನಮ್ಮಲ್ಲಿಗೇ ಬನ್ನಿ" ಎಂದೋ ಅಥವಾ "ನಿಮ್ಮ ಕೆಮ್ಮು ನಿಂತಿಲ್ಲವೆ? ನಮ್ಮಲ್ಲಿ ಶಾಶ್ವತ ಪರಿಹಾರ ಸಾಧ್ಯ. ನೂರಾರು ಮಂದಿ ವಾಸಿ ಮಾಡಿಕೊಂಡಿದ್ದಾರೆ" ಎಂಬ ಜಾಹೀರಾತುಗಳು ನಮ್ಮ ಕಣ್ಣಿಗೆ ಬೀಳುತ್ತಿದ್ದವು. ಆದರೆ ಗುಪ್ತ ಸಮಾಲೋಚನೆ ಮಾಡುವ ಢೋಂಗೀ ವೈದ್ಯರು ತಮ್ಮ ಪರಿಣಿತಿಯನ್ನು ಮಾತ್ರ ಜಗಜ್ಜಾಹೀರು ಮಾಡುವುದು ಕಂಡುಬರುತ್ತದೆ.. ಇವರಿಗೂ ವಶೀಕರಣ ಸ್ಪೆಷಲಿಸ್ಟ್ ಗಳಿಗೂ ಏನು ವ್ಯತ್ಯಾಸ? ಇಬ್ಬರ ಶೈಕ್ಷಣಿಕ ಅರ್ಹತೆ ಒಂದೇ ತರಹದ್ದು ಇರಬಹುದಲ್ಲವೆ?