ರೈತರಿಗೆ ಬೇಕು ಸೂಕ್ತ ಕೃಷಿ ಸಾಲ ವ್ಯವಸ್ಥೆ.

ರೈತರಿಗೆ ಬೇಕು ಸೂಕ್ತ ಕೃಷಿ ಸಾಲ ವ್ಯವಸ್ಥೆ.

ವರುಷದಿಂದ ವರುಷಕ್ಕೆ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ೧೯೯೫ರಿಂದ ೨೦೧೪ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ಕೃಷಿಕಾರ್ಮಿಕರ ಸಂಖ್ಯೆ ಮೂರು ಲಕ್ಷಕ್ಕಿಂತ ಜಾಸ್ತಿ. ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯುರೋ ನಮ್ಮ ದೇಶದ ಆತ್ಮಹತ್ಯೆಗಳ ಬಗ್ಗೆ ೪೯ನೇ ವಾರ್ಷಿಕ ವರದಿಯನ್ನು ಜನವರಿ ೨೦೧೭ರಲ್ಲಿ ಪ್ರಕಟಿಸಿದೆ. ಅದರ ಅನುಸಾರ, ೨೦೧೫ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ೮,೦೦೭ ಮತ್ತು ಕೃಷಿಕಾರ್ಮಿಕರು ೪,೫೯೫ (ಒಟ್ಟು ೧೨,೬೦೨). ೨೦೧೪ಕ್ಕೆ ಹೋಲಿಸಿದಾಗ ೨೦೧೫ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ ೨ ಹೆಚ್ಚಳವಾಗಿದೆ.

ಕಳೆದ ೧೫ ವರುಷಗಳಲ್ಲಿ ಈ ಮಾಹಿತಿ ಪ್ರಕಟವಾದಾಗೆಲ್ಲ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದು ರಾಷ್ಟ್ರವಾಗಿ ಇಂತಹ ದುರಂತಗಳ ಬಗ್ಗೆ ನಮಗೆ ಕಿಂಚಿತ್ತೂ ಆತಂಕವಿಲ್ಲವೇ?
ಈ ಮಾಹಿತಿ ಬಹಿರಂಗವಾದ ೪೮ ಗಂಟೆಗಳೊಳಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಅನಂತರ ಸದ್ದಿಲ್ಲದೆ ಈ ಸ್ಫೋಟಕ ಸುದ್ದಿಯ ಸಮಾಧಿ ಮಾಡಲಾಯಿತು. ಅದೇ ಸಂದರ್ಭದಲ್ಲಿ, ಅಧಿಕ ಬೆಲೆಯ ನೋಟುಗಳ ಮಾನ್ಯತೆ ರದ್ದು ಮತ್ತು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸಿದ್ದೀರಾ? ಆ ಗದ್ದಲದಲ್ಲಿ ರೈತರ ಆತ್ಮಹತ್ಯೆಗಳು ೨೦೧೭ನೇ ವರುಷದಲ್ಲಿ ಹೆಚ್ಚಾಗುವ ಸೂಚನೆಗಳು ಯಾವುವು ಎಂಬ ಚರ್ಚೆ ಹುಟ್ಟಲೇ ಇಲ್ಲ!

೨೦೧೫ರಲ್ಲಿ ಅತ್ಯಧಿಕ ಸಂಖ್ಯೆಯ (೪,೨೯೧) ರೈತರು ಆತ್ಮಹತ್ಯೆ ಮಾಡಿಕೊಂಡದ್ದು ಮಹಾರಾಷ್ಟ್ರದಲ್ಲಿ; ಇನ್ನೂ ಮೂರು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಗಳು ಒಂದು ಸಾವಿರಕ್ಕಿಂತ ಅಧಿಕ: ಕರ್ನಾಟಕದಲ್ಲಿ ೧,೫೫೯, ತೆಲಂಗಾಣದಲ್ಲಿ ೧,೪೦೦, ಮಧ್ಯಪ್ರದೇಶದಲ್ಲಿ ೧,೨೯೦. ತಮಿಳ್ನಾಡಿನ ಪರಿಸ್ಥಿತಿಯಂತೂ ರೈತರ ಹತಾಶೆಯ ಸ್ಪಷ್ಟ ಸೂಚನೆ ನೀಡಿತು: ಅಲ್ಲಿ ಒಂದೇ ತಿಂಗಳಿನಲ್ಲಿ ಪ್ರಾಣತ್ಯಾಗ ಮಾಡಿದ ರೈತರ ಸಂಖ್ಯೆ ಒಂದು ನೂರಕ್ಕಿಂತ ಅಧಿಕ! ಈ ಎಲ್ಲ ರಾಜ್ಯಗಳೂ ಕಳೆದ ಮೂರು ವರುಷಗಳಲ್ಲಿ ಭೀಕರ ಬರಗಾಲದಿಂದ ತತ್ತರಿಸಿವೆ. ಅಲ್ಲಿನ ರೈತರು ವರುಷದಿಂದ ವರುಷಕ್ಕೆ ಹೆಚ್ಚೆಚ್ಚು ಸಾಲ ಪಡೆಯುತ್ತಿದ್ದಾರೆ. ಆದರೆ, ಬೆಳೆ ನಷ್ಟವಾಗಿ, ಸಾಲ ತೀರಿಸಲಾಗದೆ ಕಂಗಾಲಾಗುತ್ತಿದ್ದಾರೆ. ಹಾಗಿರುವಾಗ ಸಾವಿರಗಟ್ಟಲೆ ರೈತರ ಆತ್ಮಹತ್ಯೆ ಕೇವಲ ಎಚ್ಚರಿಕೆಯ ಗಂಟೆಯಲ್ಲ. ಅದು ರೈತರ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳನ್ನು ತುರ್ತಾಗಿ ಸಮರೋಪಾದಿಯಲ್ಲಿ ಆರಂಭಿಸಬೇಕೆಂಬ ಎಚ್ಚರಿಕೆಯ ಗುಡುಗು. ಕಳೆದೆರಡು ವರುಷಗಳಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣ ತೀವ್ರ ಬರಗಾಲ. ತಮಿಳ್ನಾಡಿನ ಮುಖ್ಯಮಂತ್ರಿ ಇಡೀ ರಾಜ್ಯವೇ ಬರಪೀಡಿತವೆಂದು ಘೋಷಿಸಿದ್ದಾರೆ. ಕರ್ನಾಟಕದ ಒಟ್ಟು ೧೭೬ ತಾಲೂಕುಗಳಲ್ಲಿ ೧೬೦ ಬರಪೀಡಿತವೆಂದು ಸರಕಾರವು ಫೆಬ್ರವರಿ ೨೦೧೭ರ ಆರಂಭದಲ್ಲಿ ಘೋಷಿಸಿದೆ. ರೈತರ ಆತ್ಮಹತ್ಯೆಗಳ ಹೊಸ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಇನ್ನೊಂದು ಸುದ್ದಿಯೂ ಸದ್ದು ಮಾಡುತ್ತಿತ್ತು: ಅದೇನೆಂದರೆ, ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ, ನವಂಬರ್ – ಡಿಸೆಂಬರ್ ೨೦೧೬ರಲ್ಲಿ ಬ್ಯಾಂಕುಗಳು ಈ ಮೂರು ವರ್ಗಗಳಿಗೆ ನೀಡಿದ ಸಾಲದ ಪ್ರಮಾಣ ಚರಿತ್ರೆಯಲ್ಲೇ ಅತ್ಯಂತ ಕಡಿಮೆ – ವ್ಯಾಪಾರವಹಿವಾಟಿಗೆ, ವ್ಯಕ್ತಿಗಳಿಗೆ ಮತ್ತು ರೈತರಿಗೆ.
ಗ್ರಾಮೀಣ ಸಾಲ ವ್ಯವಸ್ಥೆ ಕುಸಿಯಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಪ್ರಧಾನ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಏರುತ್ತಿರುವ ಸಾಲದ ಹೊರೆ ರೈತರನ್ನು ಹೈರಾಣ ಮಾಡಿದೆ. ಸೋತುಸುಣ್ಣವಾಗಿದ್ದ ರೈತರು, ೨೦೧೬ರಲ್ಲಿ ಸಾಧಾರಣ ಮಳೆ ಆಗುತ್ತದೆಂದು ನಿರೀಕ್ಷಿಸಿದ್ದರು. ಸಾಧಾರಣ ಮಳೆ ಬಂತು, ರೈತರಿಗೆ ಬಂಪರ್ ಫಸಲೂ ಬಂತು. ಆದರೆ, ಸರಕಾರವು ರೈತರ ಕೈಬಿಟ್ಟಿತು. ರೂ.೫೦೦ ಮತ್ತು ರೂ.೧,೦೦೦ದ ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುಸಿಯಿತು; ಅದರೊಂದಿಗೆ ರೈತರ ಆಸೆಗಳೆಲ್ಲ ಮಣ್ಣುಪಾಲಾದವು. ಕರ್ನಾಟಕದಲ್ಲಿ ಕೆಲವೆಡೆ ಎಲೆಕೋಸು ಬೆಳೆದ ರೈತರು ಎಲೆಕೋಸಿನ ಹೊಲದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಇನ್ನು ಕೆಲವೆಡೆ ಟ್ರಾಕ್ಟರಿನಿಂದ ಎಲೆಕೋಸಿನ ಹೊಲ ಉಳುಮೆ ಮಾಡಿ, ತಾವೇ ಬೆಳೆದಿದ್ದ ಎಲೆಕೋಸನ್ನು ಮಣ್ಣಿಗೆ ಸೇರಿಸುತ್ತಿದ್ದಾರೆ. ಯಾಕೆಂದರೆ ಎಲೆಕೋಸಿನ ಬೆಲೆ ಕಿಲೋಗ್ರಾಂಗೆ ಒಂದು ರೂಪಾಯಿಗೆ ಕುಸಿದಿದೆ. ಹಾಗಾಗಿ ಕೊಯ್ದು ಮಾರಿದರೆ ರೈತರಿಗೆ ಕೊಯ್ಲಿನ ಮಜೂರಿ ವೆಚ್ಚವೂ ಗಿಟ್ಟುವುದಿಲ್ಲ! ಹಾಗಾದರೆ, ರೈತರು ಈಗೇನು ಮಾಡಲಿದ್ದಾರೆ? ಅವರು ಹೆಚ್ಚು ಸಾಲ ಮಾಡಲಿದ್ದಾರೆ – ದೈನಂದಿನ ವೆಚ್ಚಕ್ಕಾಗಿ, ಚಳಿಗಾಲದ ಬೆಳೆ ಉಳಿಸಿಕೊಳ್ಳಲಿಕ್ಕಾಗಿ ಮತ್ತು ಬೇಸಗೆಯ ಬೆಳೆಯ ತಯಾರಿಗಾಗಿ. ಆದರೆ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿಯ ಪ್ರಕಾರ, ಬ್ಯಾಂಕ್ ಇತ್ಯಾದಿ ಸಾಂಸ್ಥಿಕ ಮೂಲಗಳಿಂದ ರೈತರಿಗೆ ನೀಡಲಾದ ಒಟ್ಟು ಸಾಲ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿಯ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಇದು ರೈತರ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ಸಾಲವನ್ನೆಲ್ಲ ಅವರು ಮರುಪಾವತಿಸಲು ಸಾಧ್ಯವೇ? ಹಂಗಾಮಿನಿಂದ ಹಂಗಾಮಿಗೆ ರೈತರ ಸಾಲದ ಹೊರೆ ಹೆಚ್ಚಾಗುತ್ತ ಹೋದಂತೆ ಅವರು ಹತಾಶರಾಗಿ, ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.

ಹಾಗಿರುವಾಗ, ರೈತರನ್ನು ಈ ಸಾಲದ ಸುಳಿಯಿಂದ ರಕ್ಷಿಸಲಿಕ್ಕಾಗಿ ಸರಕಾರ ಏನು ಮಾಡಬೇಕು? ತಟಕ್ಕನೆ ಅಧಿಕ ಮೌಲ್ಯದ ನೋಟುಗಳ ಮಾನ್ಯತೆ ರದ್ದು ಮಾಡಿ, ರೈತರಿಗೂ ಸಲೀಸಾಗಿ ನಗದು ಸಿಗದಂತೆ ಮಾಡಿದ ಸರಕಾರ, ಈಗ ರೈತರಿಗೆ ಸುಲಭವಾಗಿ ಕೃಷಿಸಾಲ ಸಿಗುವ ವ್ಯವಸ್ಥೆ ಮಾಡಬೇಕು.

ಫೆಬ್ರವರಿ ೧, ೨೦೧೭ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ ೨೦೧೭-೧೮ರ ಬಜೆಟಿನಲ್ಲಿ ಈ ಬಗ್ಗೆ ಪ್ರಮುಖ ಘೋಷಣೆ ಮಾಡಲಾಗಿದೆ. ಕಳೆದ ವರುಷದ ಬಜೆಟಿನಲ್ಲಿ ರೂಪಾಯಿ ೯ ಲಕ್ಷ ಕೋಟಿ ಹಣವನ್ನು ಕೃಷಿ ಸಾಲಕ್ಕಾಗಿ ಮೀಸಲಾಗಿಟ್ಟಿದ್ದ ಕೇಂದ್ರ ಸರಕಾರ, ಈ ಬಜೆಟಿನಲ್ಲಿ ಅದನ್ನು ರೂಪಾಯಿ ಹತ್ತು ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಸಾಲ ರೈತರಿಗೆ ಶೇಕಡಾ ೭ ಬಡ್ಡಿದರದಲ್ಲಿ ಸಿಗಲಿದೆ. ಜೊತೆಗೆ, ಸಕಾಲದಲ್ಲಿ ಕೃಷಿಸಾಲ ಮರುಪಾವತಿಸಿದ ರೈತರಿಗೆ ಶೇಕಡಾ ೩ ಬಡ್ಡಿ ರಿಯಾಯ್ತಿ ಮುಂದುವರಿಯಲಿದೆ. ಕೇಂದ್ರ ಬಜೆಟಿನ ಈ ಕ್ರಮಗಳು ಸರಿಯಾಗಿ ಜ್ಯಾರಿಯಾಗಿ, ರೈತರ ಸಂಕಟ ಕಡಿಮೆಯಾಗಲೆಂದು ಹಾರೈಸೋಣ.
 

Comments