ಕಾನೂನಿನೊಳಗೆ ನಲುಗುತ್ತಿರುವ "ಕಲ್ಪರಸ"ಕ್ಕೆ ಎಂದು ಶಾಪಮೋಕ್ಷ?

ಕಾನೂನಿನೊಳಗೆ ನಲುಗುತ್ತಿರುವ "ಕಲ್ಪರಸ"ಕ್ಕೆ ಎಂದು ಶಾಪಮೋಕ್ಷ?

ಡೈರಿ ಹಾಲಿಗಿಂತ ತೆಂಗಿನ ಹಾಲಿನಲ್ಲಿ ಸತ್ತ್ವಾಂಶ ಹೆಚ್ಚು. ನಿಯಸಿನ್ ಅಥವಾ ವಿಟಾಮಿನ್3 ಪೋಷಕಾಂಶವಿದೆ. ಡೈರಿದ್ದರಲ್ಲಿರುವುದಕ್ಕಿಂತ ಕಬ್ಬಿಣ ಮತ್ತು ತಾಮ್ರದ ಅಂಶವೂ ತೆಂಗಿನ ಹಾಲಿನಲ್ಲಿ ಹೆಚ್ಚು. ಡೈರಿ ಹಾಲಲ್ಲಿರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆ ಇದರಲ್ಲಿಲ್ಲ. ಇದನ್ನು ಕರಗಿಸಲು ಕೆಲವರಿಗೆ ಕಷ್ಟವಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ತೆಂಗಿನ ಹಾಲನ್ನು ಬಳಸಬಹುದು,” ಎನ್ನುತ್ತದೆ,  ಕೊಚ್ಚಿಯಲ್ಲಿರುವ ಭಾರತೀಯ ತೆಂಗು ಮಂಡಳಿ. ಇತ್ತೀಚೆಗೆ ಸುವಾಸಿತ ‘ಕುಡಿಯಲು ಸಿದ್ಧ’ ತೆಂಗಿನ ಹಾಲನ್ನು ಮೂರು ಪರಿಮಳಗಳಲ್ಲಿ ಮಂಡಳಿಯು ಉತ್ಪಾದಿಸಿದೆ. ನಿಕಟಭವಿಷ್ಯದಲ್ಲಿ ಕಾಫಿ ಮತ್ತು ಬಾದಾಮ್ ಪರಿಮಳದ ಪಾನೀಯ ಬಿಡುಗಡೆಯಾಗುತ್ತದೆ.

ದ.ಕ. ಜಿಲ್ಲೆಯ ಬಂಟ್ವಾಳ ಪುಣಚದಲ್ಲಿ ‘ತೆಂಗು ಉತ್ಪಾದಕರ ಸಂಘ‘ವನ್ನು ಕಾಸರಗೋಡು ಸಿಪಿಸಿಆರ್‍ಐ ನಿರ್ದೇಶಕ ಡಾ.ಪಿ.ಚೌಡಪ್ಪನವರು ಉದ್ಘಾಟಿಸಿ ಮಾತನಾಡುತ್ತಿದ್ದಾಗ ತೆಂಗು ಮಂಡಳಿಯ ಮಾತು ನೆನಪಾಯಿತು. ಚೌಡಪ್ಪ ಹೇಳುತ್ತಾರೆ, “ತೆಂಗಿನ ‘ನೀರಾ’ ಸೇವನೆಗೆ ಮಾನಸಿಕ ತಡೆಯಿದೆ. ಶೇಂದಿ ಅಂತ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ನೀರಾಕ್ಕೆ ‘ಕಲ್ಪರಸ’ ಅಂತ ಹೆಸರಿಸಿದ್ದೇವೆ. ಉತ್ತಮ ಪೋಷಕಾಂಶವುಳ್ಳ ಕಲ್ಪರಸವನ್ನು ಮರದಿಂದ ಇಳಿಸಲು ಸರಕಾರದ ಪರವಾನಿಗೆ ಇಲ್ಲ. ಸರಕಾರ ಲೈಸನ್ಸ್  ಕೊಟ್ಟುಬಿಟ್ಟರೆ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ!” ಸಂಘವನ್ನು ರೈತ ಸಂಘ- ಹಸಿರುಸೇನೆ, ಮಂಗಳೂರು ತೆಂಗು ಉತ್ಪಾದಕರ ಜಿಲ್ಲ ಫೆಡರೇಶನ್ ಆಯೋಜಿಸಿದ್ದುವು. ತೆಂಗಿನಕಾಯಿಗೆ ಖುಷಿ ದರವಿಲ್ಲ. ಮಾರುಕಟ್ಟೆಗೆ ಒಯ್ದ ತೆಂಗನ್ನು ದರವಿಲ್ಲದೆ ಮರಳಿ  ಮನೆಗೆ ತಂದ ಕೃಷಿಕರಿದ್ದಾರೆ. ಜಾಣ್ಮೆಯನ್ನು ಬಳಸಿ ಮೌಲ್ಯವರ್ಧಿತ ಉತ್ಪನ್ನವನ್ನು ಮಾಡಿ ಉತ್ತಮ ದರವನ್ನು ಪಡೆದ ಯಶೋಗಾಥೆಗಳು ದೇಶವಲ್ಲ, ವಿದೇಶದಲ್ಲೂ ಆಸಕ್ತಿ ಹುಟ್ಟಿಸುತ್ತದೆ. ಕನ್ನಾಡಿನಲ್ಲಿ ತೆಂಗಿನ ತಾಜಾ ಎಣ್ಣೆ (ತೆಂತಾ ಎಣ್ಣೆ ವರ್ಜಿನಲ್ ಕೊಕನಟ್ ಆಯಿಲ್) ತಯಾರಿಸುವ ಉದ್ದಿಮೆಗಳು ಮನೆ ಮಟ್ಟದಿಂದ ಫ್ಯಾಕ್ಟರಿ ತನಗೆ ಬೆಳೆದಿವೆ. ಫಿಲಿಪ್ಪೈನ್ಸ್‍ಗೆ ಭೇಟಿ ನೀಡಿದ್ದ ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಮಾತಿಗೆ ಸಿಕ್ಕಾಗ ಹೇಳಿದ್ದರು, “ನಾವಿಲ್ಲಿ ಶ್ಯಾವಿಗೆ ಮಾಡಿದಷ್ಟೇ ಸುಲಭದಲ್ಲಿ ಅಲ್ಲಿ ಮನೆಮನೆಗಳ ಹಿಂಕೋಣೆಗಳಲ್ಲಿ ಕುಟುಂಬ ಸದಸ್ಯರೇ ತೆಂತಾ ಎಣ್ಣೆ ಹಿಂಡುತ್ತಾರೆ. ಕಳೆದ ಅರ್ಧ ದಶಕದಲ್ಲಿ ಅಲ್ಲಿ ತೆಂತಾ ಘಟಕಗಳ ಸಂಖ್ಯೆ ಆರು ಸಾವಿರ ಮೀರಿದೆ.”

ಫಿಲಿಪೈನ್ಸ್‍ನಲ್ಲಿ ತೆಂಗಿನ ಮರವೊಂದು ವರುಷಕ್ಕೆ ಹನ್ನೆರಡು ಸಾವಿರ ‘ಪಿಸೋ’ ಮೌಲ್ಯದ ತೆಂಗಿನ ಸಕ್ಕರೆ ಕೊಡುತ್ತದೆ! (ಒಂದು ಫಿಲಿಪೈನ್ಸ್ ಪಿಸೋ ಅಂದರೆ ಭಾರತದ 1.37 ರೂ.) ಈ ಮರದಿಂದ ಕೊಬ್ಬರಿ ತಯಾರಿಸಿದರೆ ಸಿಗುವುದು ಕೇವಲ ಮುನ್ನೂರ ಇಪ್ಪತ್ತು ಪಿಸೋ. ಅಲ್ಲಿನ ಜೆರ್ರಿ ತಾರೆ ಕುಟುಂಬವು ದೇಶದಲ್ಲೇ ಹೆಚ್ಚು ಸಕ್ಕರೆ ಮತ್ತು ಸಿರಪ್ ತಯಾರಿಸುತ್ತಾರೆ. ಅವರ ಅನುಭವ ನೋಡಿ. ತೆಂಗಿನ ಮರವು ವರುಷಕ್ಕೆ ಸುಮಾರು ನಾಲ್ಕು ನೂರ ಎಂಭತ್ತು ಲೀಟರ್ ‘ಕೊಕ್ಕೊ ಸ್ಯಾಪ್’ (ನೀರಾ) ಉತ್ಪಾದಿಸುತ್ತದೆ. ಇನ್ನೂ ಅರಳದ ತೆಂಗಿನ ಹೂವಿನಿಂದ ಸಂಗ್ರಹಿಸುವ ದ್ರವವಿದು. ಒಂದು ಕಿಲೋ ಸಕ್ಕರೆ ಆಗಲು ಎಂಟು ಕಿಲೋ ನೀರಾ ಬೇಕು. ನಾಲ್ಕು ನೂರ ಎಂಭತ್ತು ಲೀಟರಿನಲ್ಲಿ ಅರುವತ್ತು ಕಿಲೋ ಸಕ್ಕರೆ.  ಮಾರುಕಟ್ಟೆ ದರ ಕಿಲೋಗೆ ಇನ್ನೂರು ಪಿಸೋ. ಒಂದು ಹೆಕ್ಟಾರಿನಲ್ಲಿ ನೂರ ನಲವತ್ತು ಮರಗಳು. ಕೇವಲ ತೆಂಗಿನಕಾಯಿ, ಎಳನೀರು ಮಾರಾಟದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಥಿರತೆ ಕಾಣಲು ಕಷ್ಟಸಾಧ್ಯ. ಮೌಲ್ಯವರ್ಧನೆಯಿಂದ ಬೆಲೆಯೂ ವರ್ಧಿಸುತ್ತದೆ ಎನ್ನುವುದಕ್ಕೆ ವಿಶ್ವಾದ್ಯಂತ ಅನೇಕ ಯಶೋಗಾಥೆಗಳಿವೆ. ಅರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿಯವರು ತೆಂಗಿನ ವಿಶ್ವದರ್ಶನವನ್ನು ಮಾಡಿಸುತ್ತಾರೆ : ತೊಂಭತ್ತು ರಾಷ್ಟ್ರಗಳಲ್ಲಿ ತೆಂಗು ಉತ್ಪನ್ನಗಳ ಮಾರಾಟ ಜಾಲವಿದೆ. ಭಾರತದ ಹದಿನೆಂಟು ರಾಜ್ಯಗಳಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಾಗುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು ಮುಂಚೂಣಿಯಲ್ಲಿದೆ. ಎಂಭತ್ತ ನಾಲ್ಕು ರಾಷ್ಟ್ರಗಳಿಗೆ ಉತ್ಪನ್ನಗಳು ರಫ್ತಾಗುತ್ತಿವೆ. ತೆಂಗಿನಪುಡಿ ಸೇರಿಸಿದ ಪಾನ್ ‘ಕೊಕೊನಟ್ ಬೀಡಾ‘ವು ನಮ್ಮ ದೇಶದ ಪಾನ್ ರುಚಿಪ್ರಿಯರ ಉದರ ಸೇರುತ್ತಿದೆ. ಹುಡುಕಿ ಬರುವ  ಗ್ರಾಹಕರಿದ್ದಾರೆ. ನಗರಗಳಲ್ಲಿ ತೆಂಗಿನ ಸಣ್ಣ ಹೋಳಿಗೆ ಎರಡು ರೂಪಾಯಿ ದರ. ಒಂದು ತೆಂಗಿನಲ್ಲಿ ಇಪ್ಪತ್ತು ಹೋಳಿಗೆ ಎಂದಾದರೂ ಒಂದು ತೆಂಗಿನಕಾಯಿಗೆ ನಲವತ್ತು ರೂಪಾಯಿ! ಇದು ಮೌಲ್ಯವರ್ಧನೆಯ ತಾಕತ್ತು.
ಎಳನೀರು ಶಕ್ತಿಶಾಲಿ ಪೇಯ. ಉಳ್ಳವರು ಮಾತ್ರ ಕುಡಿಯುತ್ತಾರೆ ಎನ್ನುವ ಕಾಲಘಟ್ಟವಿತ್ತು. ಕೊಳ್ಳುವ ಸಾಮಥ್ರ್ಯ ಹೆಚ್ಚಾದಂತೆ ಎಳನೀರಿನ ಬಳಕೆ ಹೆಚ್ಚಾಗುತ್ತದೆ. ಹಗಲಿಡೀ ದುಡಿವ ಶ್ರಮಿಕರಿಗೂ ಒಂದೆರಡು ಎಳನೀರು ಕುಡಿದು ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಷ್ಟು ಅರಿವು ಮೂಡಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಅಂಗಡಿಯಲ್ಲಿ ಬೊಂಡವನ್ನು ಮುಂಗಡ ಕಾದಿರಿಸುತ್ತಾರೆ. ಅದರಲ್ಲೂ ಸ್ಥಳೀಯ ಎಳನೀರು ಮಾರುಕಟ್ಟೆಗೆ ಬಂದರೆ ಸಾಕು, ತಕ್ಷಣದಲ್ಲಿ ಖಾಲಿ ಖಾಲಿ! ಬಾಟ್ಲಿಯಲ್ಲಿ ಸಿಗುವ ಬಣ್ಣ ಬಣ್ಣದ ನೀರಿಗಿಂತ ಆರೋಗ್ಯದಾಯಕ ಎನ್ನುವ ಕಾಳಜಿಯಿದೆ. ಪೊಳ್ಳಾಚಿಯಿಂದ ಮಂಗಳೂರು ಮಾರುಕಟ್ಟೆಗೆ ವಾರಕ್ಕೆ ಎರಡು ಲಾರಿ ಲೋಡು ಗೆಂದಾಳಿ ಎಳನೀರು ಬರುತ್ತದೆ! ಒಂದು ಗೆಂದಾಳಿ ಎಳನೀರಿಗೆ 30-35 ರೂಪಾಯಿ. ಮೀಯಪದವಿನ ಡಾ.ಡಿ.ಸಿ.ಚೌಟರು ತನ್ನ ತೋಟದ ಎಳನೀರನ್ನು ಸ್ಥಳೀಯವಾಗಿ ಮಾರುತ್ತಾರೆ. ಕೊಂಡಾಣದ ಚಂದ್ರಶೇಖರ ಗಟ್ಟಿಯವರು ಮಾರುಕಟ್ಟೆ ಮಾಡಲೆಂದೇ ತೆಂಗಿನ ತೋಟ ಎಬ್ಬಿಸಿದ್ದಾರೆ.
 
ಕೇರಳದ ಮಂಜೇಶ್ವರ ಕಡಂಬಾರಿನಲ್ಲಿ ಎಳನೀರು ಪ್ಯಾಕೇಜಿಂಗ್ ಉದ್ದಿಮೆಯೊಂದು ಒಂದೂವರೆ ವರುಷದಿಂದ ಸದ್ದಾಗುತ್ತಿದೆ. ಯುವಕ ಸಫ್ವಾನ್ ಮೊೈದಿನ್ ಅವರ ಕನಸು. ಗ್ಲೋಬಲ್ ಅಸೋಸಿಯೇಟ್ಸ್ – ಉದ್ದಿಮೆ ಹೆಸರು. ‘ಪುಶ್ ಡ್ರಿಂಕ್ಸ್’ ಹೆಸರಿನಲ್ಲಿ ಉತ್ಪನ್ನ ತಯಾರಿಸುತ್ತಿದ್ದಾರೆ. ಕಾಲು ಲೀಟರ್ ಎಳೆನೀರಿನ ಬಾಟಲ್‍ನಲ್ಲಿ ಸೂಪರ್ ಮಾರ್ಕೆಟಿನಲ್ಲಿ ಲಭ್ಯ. ಈ ಉತ್ಪನ್ನಕ್ಕೆ ಒಂಭತ್ತು ತಿಂಗಳ ತಾಳಿಕೆ. ಎಲ್ಲವೂ ಯಂತ್ರಚಾಲಿತ. ತೆಂಗು ಅಭಿವೃದ್ಧಿ ಮಂಡಳಿಯ ತಂತ್ರಜ್ಞಾನ. ಸ್ಥಳೀಯವಾಗಿ ಸ್ವಲ್ಪ ಪ್ರಮಾಣದಲ್ಲಿ  ಎಳನೀರು ಸಂಗ್ರಹ. ಮಿಕ್ಕಂತೆ ಕೇರಳ, ತಮಿಳುನಾಡಿನಿಂದ ತರಿಸಿಕೊಳ್ಳುತ್ತಾರೆ. ಯುರೋಪು ದೇಶಕ್ಕೆ ರಫ್ತು ಮಾಡುವಷ್ಟು ಸದೃಢವಾಗಿದೆ.
 
ಕರಾವಳಿ ಮೂಲಕ ಮುಂಬಯಿಗೆ ರಘುನಂದನ್ ಕಾಮತ್ ಅಂದರೆ ಫಕ್ಕನೆ ಪರಿಚಯ ಸಿಗದು. ಆದರೆ ‘ನ್ಯಾಚುರಲ್ ಐಸ್‍ಕ್ರೀಂ’ ಅನ್ನಿ. ಎಲ್ಲರಿಗೂ ಗೊತ್ತು. ಐಸ್‍ಕ್ರೀಮಿಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲಸಿನ ಹಣ್ಣನ್ನು ಒಯ್ದ ಸಾಹಸಿ. ಎಳನೀರಿನಲ್ಲಿರುವ ಗಂಜಿ(ಬಾವೆ)ಯನ್ನು ತೆಗೆದು ಐಸ್‍ಕ್ರೀಮಿನಲ್ಲಿ ಬಳಸುವ ಉದ್ದಿಮೆ ಕ್ಲಿಕ್ ಆಗಿದೆ. ಇದಕ್ಕಾಗಿ ಹಿಂದಿನ ವರುಷ ತುಂಡರಿಸಿದ ಎಳನೀರಿನ ಸಂಖ್ಯೆ ಆರು ಲಕ್ಷ! ಕೃಷಿ ಲೇಖಕ ಪಡಾರು ಒಂದು ಅಂಕೆಸಂಖ್ಯೆಯನ್ನು ಹೇಳುತ್ತಾರೆ, ದೇಶಾದ್ಯಂತ ದಿನಕ್ಕೆ ಸುಮಾರು ಹದಿನೈದು ಸಾವಿರ ಲೀಟರ್ ನೇಚುರಲ್ ಐಸ್‍ಕ್ರೀಮನ್ನು ಕಾಮತರು ತಮ್ಮ ಔಟ್‍ಲೆಟ್ ಮೂಲಕ ಗ್ರಾಹಕರಿಗೆ ತಿನ್ನಿಸುತ್ತಾರೆ. ಅದರಲ್ಲಿ ಸೀತಾಫಲಕ್ಕೆ ಮೊದಲ ಮಣೆ. ನಂತರದ ಸ್ಥಾನ ಎಳನೀರಿನದು.
 
ಸಿಪಿಸಿಆರ್‍ಐ ಯೋಚನೆಯ ‘ಕಲ್ಪರಸ’ವನ್ನು ಪ್ರಸಿದ್ಧೀಕರಿಸಲು ಕೃಷಿಕರು ಆಸಕ್ತರಾಗಿದ್ದಾರೆ. ಕರ್ನಾಟಕದಲ್ಲಿ ಕಾನೂನು ತೊಡಕಿದೆ. ಎಲ್ಲರೂ ನೀರಾ ಇಳಿಸುವಂತಿಲ್ಲ. “ನಮ್ಮ ತೋಟದ ತೆಂಗಿನ ಮರದಿಂದ ಕಲ್ಪರಸವನ್ನು ಇಳಿಸಲು ನಾವು ಸರಕಾರದ ಮುಂದೆ ನಿಲ್ಲಬೇಕಾ? ನಮಗೆ ಹಕ್ಕಿಲ್ವಾ? ವಿಧಾನಸೌಧದ ಅಧಿಕಾರಿಗಳು ಪರ್ಮಿಶನ್ ಕೊಡ್ತೇವೆ ಅಂತ ಹೇಳಿ ವರುಷಗಳೇ ಸಂದಿವೆ. ಬಜೆಟಿನಲ್ಲೂ ಪ್ರಸ್ತಾವವಾಗಿದೆ. ಹಾಗಾಗಿ ಕಲ್ಪರಸ ಉದ್ದಿಮೆಯನ್ನು ಸ್ಥಾಪಿಸುವ ನನ್ನ ನಿರ್ಧಾರವನ್ನು ಬದಲಿದೆ,” ಎಂದು ವಿಷಾದಿಸುತ್ತಾರೆ, ಕೃಷಿಕ ಉಳಿಪ್ಪಾಡಿಗುತ್ತು ರಾಜೇಶ್ ನಾೈಕ್. ರಾಜೇಶ್ ವಿಷಾದದಲ್ಲೂ ಅರ್ಥವಿದೆ. ನಮ್ಮ ಕಾನೂನುಗಳೇ ನಮಗೆ ತೊಡಕು. ಕೃಷಿ, ಕೃಷಿಕ, ಮಾರುಕಟ್ಟೆಯು ಹಳಿಯಲ್ಲಿ ಸಂಚರಿಸದೆ ಕಂಪಿಸುತ್ತಿದೆ. ಪರ್ಯಾಯ ಬದುಕನ್ನು ರೂಪಿಸಲು ಸಂಪನ್ಮೂಲಗಳಿವೆ. ಇದನ್ನು ಕ್ರೋಢೀಕರಿಸುವ ಮನಸ್ಸುಗಳಿವೆ. ಕಾನೂನಿನ ತೊಡಕು, ಸರಕಾರದ ನೀತಿ, ಅಧಿಕಾರಿಗಳ ಕರಾಮತ್ತು.. ಹೀಗೆ ವಿವಿಧ ವ್ಯವಸ್ಥೆಗಳು ಕೃಷಿಕರ ಮನಸ್ಸನ್ನು ಮುದುಡಿಸುತ್ತಿವೆ. ಕಲ್ಪರಸಕ್ಕೆ ಉತ್ತಮ ಅವಕಾಶಗಳಿದ್ದು, ಜನ ಸ್ವೀಕೃತಿಯೂ ಉತ್ತಮವಾಗಿದೆ. ಹಾಗಾಗಿ ಕಲ್ಪರಸ ಅಥವಾ ನೀರಾ ಇಳಿಸಲು ಪರವಾನಿಗೆ ನೀಡಿದರೆ ಮೌಲ್ಯವರ್ಧಿತ ಉತ್ಪನ್ನವೊಂದು ತೆಂಗು ಕೃಷಿಕರ ಬಾಳಿನಲ್ಲಿ ಮುಗುಳ್ನಗೆ ಮೂಡಿಸಬಹುದು.