ಕಾಫಿ ನಾಡಲ್ಲರಳಿದ ಪಾಪಣ್ಣ
ಯಕ್ಷಗಾನ ರಂಗದಲ್ಲಿ ‘ಪಾಪಣ್ಣ’ ಪಾತ್ರವನ್ನು ನೆನಪಿಸಿಕೊಂಡರೆ ಥಟ್ಟನೆ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಕಣ್ಣ ಮುಂದೆ ಬರುತ್ತಾರೆ. ಇವರು ‘ಪಾಪಣ್ಣ’ನನ್ನು ಕಡೆದ ಶಿಲ್ಪಿ. ಜೀವ ಕೊಟ್ಟ ಮಾಂತ್ರಿಕ. ‘ಪಾಪಣ್ಣ ವಿಜಯ’ ಪ್ರಸಂಗವು ಭಟ್ಟರನ್ನು ಎತ್ತರಕ್ಕೇರಿಸಿ ತಾನೂ ಎತ್ತರಕ್ಕೆ ಏರಿದೆ. ಪಾತ್ರವೇ ಭಟ್ಟರಿಗೆ ‘ಪಾಪಣ್ಣ ಭಟ್ರು’ ಎನ್ನುವ ಅಭಿದಾನ ನೀಡಿದೆ.
ನಾರಾಯಣ ಭಟ್ಟರ ಯಜಮಾನಿಕೆಯಲ್ಲಿ ಸುಮಾರು ಆರರ ದಶಕದಲ್ಲಿ ಮೂಲ್ಕಿ ಮೇಳ ವಿಜೃಂಭಿಸುತ್ತಿತ್ತು. ಭದ್ರಾಯು ಚರಿತ್ರೆ, ಜಲಂಧರ ಕಾಳಗ, ವಜ್ರಬಾಹು ಕಾಳಗ, ವಿದ್ಯುನ್ಮತಿ ಕಲ್ಯಾಣ, ಕುಮಾರ ವಿಜಯ, ನಳಚರಿತ್ರೆ, ಹರಿಶ್ಚಂದ್ರ.. ಪ್ರಸಂಗಗಳಿಂದ ಟೆಂಟ್ ಫುಲ್! ಉದ್ಧಾಮ ಕಲಾವಿದರ ತಂಡಕ್ಕೆ ಅಭಿಮಾನದ ಹೊನಲಿನ ಸಮೃದ್ಧತೆ. ಆಗಲೇ ಪೆರುವಡಿ ಭಟ್ಟರಿಗೆ ನಳಚರಿತ್ರೆಯ ‘ಬಾಹುಕ’ ಪಾತ್ರವು ಒಲಿದಿತ್ತು.
ಪಾದೆಕಲ್ಲು ಛತ್ರದ ವೆಂಕಟ್ರಮಣ ಭಟ್ಟರು ಮೂಲ್ಕಿ ಮೇಳಕ್ಕಾಗಿಯೇ ‘ಪಾಪಣ್ಣ ವಿಜಯ’ ಪ್ರಸಂಗವನ್ನು ರಚಿಸಿದ್ದರು. ಮೇಳದ ಕಲಾವಿದರಿಗೆ ಹೊಂದುವಂತಹ ಪಾತ್ರಸೃಷ್ಟಿಗಳು ಪ್ರಸಂಗದಲ್ಲಿದ್ದುವು. ಪರಿಣಾಮಕಾರಿಯಾದ ರಸಭಾವಗಳಿದ್ದುವು. ‘ಕಾಲ್ಪನಿಕ ಪ್ರಸಂಗ’ ಎನ್ನುವ ಮುಜುಗರ ಒಂದೆಡೆ. ಜನಸ್ವೀಕೃತಿಯಾದೀತೇ ಎಂಬ ಭಯ ಇನ್ನೊಂದೆಡೆ. ಪೌರಾಣಿಕ ವಾತಾವರಣದ ಮಧ್ಯೆ ಪಾಪಣ್ಣ ಗೆಲ್ಲಬಹುದೇ ಎನ್ನುವ ಆತಂಕ. ಸ್ವಲ್ಪ ದಿವಸ ಮೀನಮೇಷದಿಂದಲೇ ದಿನ ಸಂದಿತು.
ಪಾಪಣ್ಣನ ಪಾತ್ರ ರಚನೆಯು ಫಕ್ಕನೆ ನೋಡುವಾಗ ‘ಬಾಹುಕ’ನನ್ನು ನೆನಪಿಸುತ್ತದೆ. ಆದರೆ ಬಾಹುಕನ ಗುಣ-ಸ್ವಭಾವ ಬೇರೆ, ಪಾಪಣ್ಣನ ಚಿತ್ರಣವೇ ಬೇರೆ. ಸನ್ನಿವೇಶದಿಂದ ಸನ್ನಿವೇಶಕ್ಕೆ ಕುತೂಹಲ ಮೂಡಿಸುವ ಪ್ರಸಂಗದ ಪ್ರದರ್ಶನಕ್ಕೆ ಪೆರುವೋಡಿಯವರು ಉತ್ಸುಕರಾದರು. ಮೇಳದಲ್ಲಿ ಏನಾದರೂ ಹೊಸತನ್ನು ರೂಪಿಸಬೇಕು, ಜನರ ಒಲವನ್ನು ಪಡೆಯಬೇಕೆನ್ನುವ ತುಡಿತವಿತ್ತು. ಅದಕ್ಕೆ ಈ ಪ್ರಸಂಗ ನೀರೆರೆದು ಪೋಷಿಸಿತು.
ಮೂಲ್ಕಿ ಮೇಳವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಟೆಂಟ್ ಊರಿನ ಸಮಯ. ಮೊದಲ ಪ್ರದರ್ಶನಕ್ಕೆ ಕೊಪ್ಪದ ‘ಕುದ್ರೆಗುಂಡಿ ಎಸ್ಟೇಟ್’ನ್ನು ಆರಿಸಿಕೊಂಡರು. ‘ಒಂದು ವೇಳೆ ಪ್ರದರ್ಶನ ಕೈಕೊಟ್ಟರೆ ಇದೇ ಮೊದಲು, ಇದೇ ಕೊನೆ ಎನ್ನುವ ನಿರ್ಧಾರಕ್ಕೆ ಬರಬಹುದಲ್ಲಾ. ಜತೆಗೆ ಊರಿನಲ್ಲಿ ಕಾಲ್ಪನಿಕ ಪ್ರಸಂಗವನ್ನು ಆಡಲು ಭಯ. ಆಗ ಪ್ರೇಕ್ಷಕರೂ ವಿಮರ್ಶಕರಾಗಿದ್ದರು ನೋಡಿ. ಹಾಗಾಗಿ ಕೊಪ್ಪವು ಸೂಕ್ತ ಜಾಗ ಅಂತ ಅಲ್ಲಿ ಮೊದಲ ಪ್ರದರ್ಶನ ಮಾಡಿದೆವು,” ಆ ದಿವಸಗಳನ್ನು ನಾರಾಯಣ ಭಟ್ ಜ್ಞಾಪಿಸಿಕೊಳ್ಳುತ್ತಾರೆ.
ಪೆರವೋಡಿಯವರ ‘ಪಾಪಣ್ಣ’, ಪಾತಾಳ ವೆಂಕಟ್ರಮಣ ಭಟ್ಟರ ‘ಗುಣಸುಂದರಿ’, ಗುಂಪೆ ರಾಮಯ್ಯ ರೈಗಳ ‘ಉಗ್ರಸೇನ’, ಪುತ್ತೂರು ನಾರಾಯಣ ಹೆಗಡೆ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ ‘ದುರ್ಮುಖ-ದುರ್ಮತಿ’, ಮಧೂರು ಗಣಪತಿ ರಾಯರ ‘ಚಂದ್ರಸೇನ’, ಚಂದ್ರಗಿರಿ ಅಂಬು ಅವರ ‘ಕರಡಿ’ ಪಾತ್ರಗಳು ಜನಮೆಚ್ಚುಗೆ ಪಡೆದುವು. ಅಂಬು ಅವರು ಕರಡಿ ಪಾತ್ರವನ್ನು ಮುಖವರ್ಣಿಕೆ, ವೇಷಭೂಷಣ ತೊಟ್ಟು ಅಂದವಾಗಿ ಮಾಡಿದ್ದರು. “ಕೃತಕ ಮುಖವಾಡದ ಬದಲಿಗೆ ವೇಷತೊಟ್ಟೇ ಪ್ರಾಣಿಪಾತ್ರಗಳನ್ನು ಮಾಡಿದರೆ ಅದು ಯಕ್ಷಗಾನವಾಗಿ ಕಾಣುತ್ತದೆ,” ಎನ್ನುತ್ತಾರೆ.
ಬಾಹುಕನಂತೆ ಮುಖವರ್ಣಿಕೆ, ಅಭಿನಯ ಅಗಬಾರದು ಎನ್ನುವ ಎಚ್ಚರವಿತ್ತು. ‘ಪಾಪಣ್ಣ’ನ ಪೂರ್ವರೂಪ ರಾಜಕುಮಾರನದ್ದೆಂಬ ಹಿನ್ನೆಲೆಯಲ್ಲಿ ಹಾಸ್ಯರಸ ತರುತ್ತಿರಲಿಲ್ಲ. ಗಂಭೀರವಾದ ಅಭಿವ್ಯಕ್ತಿ. ಆರಂಭದಲ್ಲಿ ಪಾತಾಳರು ಗುಣಸುಂದರಿಯಾದರೆ ನಂತರದ ವರುಷಗಳಲ್ಲಿ ಕೊಕ್ಕಡ ಈಶ್ವರ ಭಟ್ಟರು ಪಾಪಣ್ಣದ ಹೆಂಡತಿಯಾದರು. ಈ ಜತೆಗಾರಿಕೆ ಪ್ರಸಂಗವನ್ನು ಹಲವು ವರುಷ ಜೀವಂತವಾಗಿಟ್ಟಿತು. ಈಗಲೂ ಇವರಿಬ್ಬರ ರಂಗ ಕಾಂಬಿನೇಶನ್ ಮಾತಿಗೆ ವಿಷಯ.
ಪಾಪಣ್ಣ ಪ್ರದರ್ಶನದ ಒಂದು ಘಟನೆಯನ್ನು ಅವರೇ ಹೇಳಬೇಕು : “ರಂಗದಲ್ಲಿ ಬಿಕ್ಷು ಪಾತ್ರಗಳನ್ನು ಮಾಡಿದಾಗ ಪಾತ್ರವು ಪ್ರೇಕ್ಷಕರ ಮಧ್ಯೆ ಹೋಗಿ ಬೇಡುವುದು ಹಿಂದಿನಿಂದಲೇ ಬಂದ ಪದ್ಧತಿ. ಈ ಕ್ರಮವನ್ನು ಮಡದಿ ಸಾವಿತ್ರಿ ಆಕ್ಷೇಪಿಸಿದ್ದಳು. ಜತೆಗೆ ಮೇಳದ ಯಜಮಾನ ಎಂಬ ನೆಲೆಯಲ್ಲಿ ನನಗೂ ರುಚಿಸುತ್ತಿರಲಿಲ್ಲ. ಇಂತಹ ಪಾತ್ರಗಳನ್ನು ಮಾಡಿದಾಗ ಪ್ರೇಕ್ಷಕರೇ ರಂಗಕ್ಕೆ ನಾಣ್ಯಗಳನ್ನು ಚೆಲ್ಲುತ್ತಿದ್ದರು. ಕೆಲವರು ರಂಗಕ್ಕೆ ಬಂದು ಕೈಗಿಡುತ್ತಿದ್ದರು. ಹೆಚ್ಚೆಂದರೆ ನೂರು ರೂಪಾಯಿ ಸಂಗ್ರಹ ಆದುದೂ ಇದೆ. ಇದನ್ನು ಹಿಮ್ಮೇಳದವರಿಗೆ, ಸಹ ಭಿಕ್ಷು ಪಾತ್ರಧಾರಿಗಳಿಗೆ ಹಂಚುತ್ತಿದ್ದೆ. ಕೆಲವೊಮ್ಮೆ ಎಲ್ಲರಿಗೂ ಸಿಹಿ ತಿನ್ನಿಸುತ್ತಲೂ ಇದ್ದೆ..”
‘ಪಾಪಣ್ಣ’ನ ಮುಖವರ್ಣಿಕೆ ನೋಡುವಾಗ ನಿಕೃಷ್ಟ! ಮೈಯೆಲ್ಲಾ ಹುಣ್ಣಾಗಿ ರಕ್ತ ಸೋರುವಂತಹ ಬಣ್ಣಗಾರಿಕೆ. ಕಪ್ಪು ಬಣ್ಣದ ಡ್ರೆಸ್. ಮುಖವೂ ವಿಚಿತ್ರ. ಕೈಯ ಬೆರಳೆಲ್ಲವೂ ಮುರುಟಿದಂತೆ ತೋರಿಸಬೇಕು. ಕುಂಟುತ್ತಾ ನಡೆಯುವ ಸಾಹಸ. ನಾರಾಯಣ ಭಟ್ಟರು ಪಾಪಣ್ಣನಾಗಿ ರಂಗದಲ್ಲಿರುವ ತನಕ ಈ ಎಲ್ಲಾ ಪಾತ್ರ ಗುಣಗಳು ಸಡಿಲವಾಗಲು ಬಿಡುತ್ತಿರಲಿಲ್ಲ. ರಂಗನಡೆ, ಮಾತುಗಳು ಸಹಜವೆಂಬಂತೆ ಚಿತ್ರಿಸುತ್ತಿದ್ದರು. ಅವರೊಂದಿಗೆ ಹಲವು ಬಾರಿ ‘ಗುಣಸುಂದರಿ’ಯಾಗಿ ಪಾತ್ರವಹಿಸಿದ ಸಂದರ್ಭ ನನಗೂ ಪ್ರಾಪ್ತವಾಗಿತ್ತು. ಅಭಿವ್ಯಕ್ತಿಯನ್ನು ಮರೆತು ಪಾತ್ರೋಚಿತ ನಡೆಗಳಿಗೆ ಎಷ್ಟೋ ಬಾರಿ ರಂಗದಲ್ಲಿ ದಂಗಾಗಿದ್ದೆ.
“ನಾರಾಯಣ ಭಟ್ಟರ ಪಾಪಣ್ಣ ಮತ್ತು ಕೊಕ್ಕಡ ಈಶ್ವರ ಭಟ್ಟರ ಗುಣಸುಂದರಿ ಪಾತ್ರಗಳನ್ನು ನೋಡಿದಾಗ ಇವರಿಗಾಗಿಯೇ ಬರೆಯಲ್ಪಟ್ಟ ಪ್ರಸಂಗವೆಂದು ಕೆಲವು ಭಾವಿಸಿದ್ದುಂಟು,” ಎಂದು ಬ್ರಹ್ಮಾವರದ ಎಚ್.ಸುಬ್ಬಣ್ಣ ಭಟ್ ಉಲ್ಲೇಖಿಸುತ್ತಾರೆ. “ಪಾಪಣ್ಣ ಪಾತ್ರಕ್ಕೆ ರೂಪದಾನ, ಪ್ರಾಣದಾನ ನೀಡಿದ್ದು ಪೆರುವೋಡಿಯವರೇ. ಆ ವೇಷಕಲ್ಪನೆ, ಬಣ್ಣಗಾರಿಕೆ, ಅಭಿನಯಗಳು ಅವರ ಪ್ರತಿಭೆಯ ಕಣ್ಣಲ್ಲಿ ಮೂಡಿದ್ದು,” ಎಂದು ಕೀರ್ತಿಶೇಷ ಮಧೂರು ಗಣಪತಿ ರಾಯರು ಒಂದೆಡೆ ಹೇಳಿದ್ದರು.
ಹವ್ಯಾಸಿ ಮತ್ತು ವೃತ್ತಿ ರಂಗಗಳಿಗೆ ಈ ಪ್ರಸಂಗ ಒಗ್ಗುತ್ತದೆ. ಪ್ರೇಕ್ಷಕರನ್ನು ಸೆರೆಹಿಡಿದು, ಅವರೊಳಗೆ ಚಿಂತನೆಯನ್ನು ಇಳಿಬಿಡುವ ಪ್ರಸಂಗವು ಈಗಲೂ ಜೀವಂತ. ಕಾಫಿಯ ಪರಿಮಳದ ನಡುವೆ ಅರಳಿದ ಪಾಪಣ್ಣ ಮತ್ತೆಂದೂ ಮುದುಡಿಲ್ಲ. ಅರಳುತ್ತಲೇ ಇದ್ದಾನೆ. ಅದು ಪ್ರಸಂಗದ ಗಟ್ಟಿತನ.