"ಡೋಂಟ್ ಸೆ ಮೈ ಚೈಲ್ಡ್ ಇಸ್ ಮೈಲ್ಡ್".

Submitted by VEDA ATHAVALE on Tue, 04/11/2017 - 17:48
ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಚಂದ್ರಶೇಖರ ದಾಮ್ಲೆ
ಪುಸ್ತಕದ ಬೆಲೆ
ಪುಟಗಳು -86 , ಬೆಲೆ- 75 ರೂಗಳು

‘Don’t say my child is mild’ - The issue is development of self
[ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ] 
ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್  ಮತ್ತು  ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್  -   8197731986                                                    
  
ಚಂದದ ಪುಟಾಣಿಯೊಂದು ತುಂಟನಗೆ ಬೀರುತ್ತಾ ನಿಂತಿದ್ದ ಮುಖಪುಟ ಹೊತ್ತ ‘Don’t say my child is mild’ ಪುಸ್ತಕವನ್ನು ಕೈಗೆತ್ತಿಕೊಂಡು ಓದುತ್ತಿದ್ದಂತೆಯೇ ಸಮಯ ಸರಿದದ್ದೇ ತಿಳಿಯಲಿಲ್ಲ. ನನ್ನ ಶಿಕ್ಷಕವೃತ್ತಿಯ ಅನುಭವಗಳೇ ತುಂಬಿವೆಯಲ್ಲಾ ಎಂಬ ಆಪ್ತತೆಯನ್ನು ಮೂಡಿಸಿತು ಈ ಹೊತ್ತಗೆ.
‘Don’t say my child is mild’ ಪುಸ್ತಕ ಖ್ಯಾತ ಶಿಕ್ಷಣತಜ್ಞ, ’ ಅಸಾಮಾನ್ಯ ಕನ್ನಡಿಗ ’  ಪ್ರಶಸ್ತಿ ವಿಜೇತ        ಡಾ. ಚಂದ್ರಶೇಖರ ದಾಮ್ಲೆಯವರ ಅನುಭವಕಥನಗಳ ಸಂಗ್ರಹ. ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಸ್ವರೂಪವಾದ ’ಸ್ನೇಹ  ಶಾಲೆ’ ಯ ಸ್ಥಾಪಕರಾದ ಶ್ರೀ ದಾಮ್ಲೆಯವರ ೩೫ ವರ್ಷಗಳ ಮಕ್ಕಳೊಡಗಿನ ಒಡನಾಟ ಪುಸ್ತಕದ ಪ್ರತಿ ಪುಟದಲ್ಲೂ ದಟ್ಟವಾಗಿ ಕಾಣುತ್ತದೆ.
ಇಂದು ಕುಟುಂಬಕ್ಕೊಂದೇ ಮಗು. ಅದನ್ನುಮನೆಯಲ್ಲಿ ಕಣ್ರೆಪ್ಪೆಯಂತೆ ಜೋಪಾನವಾಗಿ ಕಾಯುವ ಪಾಲಕರು ಮುಂದೆ ಶಾಲೆಯಲ್ಲೂ ಮಗುವಿಗೆ ವಿಶೇಷ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಾರೆ. ಅಲ್ಲದೆ ತಾವು ಬಾಲ್ಯದಲ್ಲಿ ಅನುಭವಿಸಿದ ಕೊರತೆಗಳು ತಮ್ಮ ಮಗುವಿಗೆ ಬಾರದಿರಲಿ ಎಂದುಕೊಂಡು ಎಲ್ಲ ಆಧುನಿಕ ಸೌಲಭ್ಯಗಳನ್ನು ಕೊಡಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಕೆಲ ಪಾಲಕರು ತಮ್ಮ ಕನಸುಗಳನ್ನು ಮಗುವಿನಲ್ಲಿ ಬಿತ್ತುವ ವ್ಯರ್ಥಪ್ರಯತ್ನವನ್ನೂ ಮಾಡುತ್ತಾರೆ. ಆದರೆ ಈ ಅತಿ ಪ್ರೀತಿ ಮಗುವಿನ ಬೆಳವಣಿಗೆಯ ಹಾದಿಯಲ್ಲಿ ಮುಳ್ಳಾಗುತ್ತದೆ. ಅದರ ಆತ್ಮವಿಶ್ವಾಸ, ಕ್ರಿಯಾಶೀಲತೆಗಳು ಅರಳಲು ಅವಕಾಶವೇ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಕ್ಕಳು ಪರಿಮಳವಿಲ್ಲದ ಹೂವಿನಂತಾಗುತ್ತಾರೆ. ಪೋಕರಿ, ದಡ್ಡ, ಅಳುಮುಂಜಿ, ದುರಹಂಕಾರಿ ಇತ್ಯಾದಿ ವಿಶೇಷಣಗಳನ್ನು ಶಾಲೆಯಲ್ಲಿ ಗಳಿಸುತ್ತಾರೆ.
ಆದರೆ ಈ ವಾಸ್ತವವನ್ನುಯಾವ ತಂದೆ-ತಾಯಿ  ಒಪ್ಪುತ್ತಾರೆ ಹೇಳಿ? ತಮ್ಮ ಮಗು ದೇವರ ಅಪೂರ್ವ ಸೃಷ್ಟಿ. ಇಂಥ ಸಾಧುಸ್ವಭಾವದ,ವಿನಯಶೀಲ, ಬುದ್ಧಿವಂತ ಮಗು ಇನ್ನೊಂದಿರಲು ಸಾಧ್ಯವೇ ಇಲ್ಲ ಎಂಬುದು ಅವರ ದೃಢ ವಿಶ್ವಾಸ. ತಮ್ಮ ಮಗುವಿನ ಸೋಲುಗಳಿಗೆ, ಸಮಸ್ಯೆಗಳಿಗೆ ಶಾಲೆ, ಶಿಕ್ಷಕರು, ಸಹಪಾಠಿಗಳು ಮತ್ತು ಶಿಕ್ಷಣವ್ಯವಸ್ಥೆಯೇ ಕಾರಣ ಎಂಬುದು ಅವರ ವಾದ. ಸಮಸ್ಯೆಯ ಮೂಲ ತಮ್ಮಲ್ಲಿ, ತಮ್ಮ ನಡವಳಿಕೆಯಲ್ಲೇ ಇದೆ ಎಂಬ ಅಪ್ರಿಯಸತ್ಯವನ್ನು ಒಪ್ಪಲು ಅವರು ಸಿದ್ಧರಿಲ್ಲ.
ಶ್ರೀಯುತ ದಾಮ್ಲೆಯವರೇ ಸ್ವತ: ಆಪ್ತ ಸಮಾಲೋಚನೆಯ ಮೂಲಕ ಪರಿಹಾರ ಸೂಚಿಸಿದ ಇಂಥ ಹತ್ತು ನಿಜಜೀವನದ ಘಟನೆಗಳನ್ನು  ಇಲ್ಲಿ ಸೊಗಸಾಗಿ ವಿವರಿಸಲಾಗಿದೆ. ಈ ಪ್ರಕರಣಗಳಲ್ಲಿ ದಾಮ್ಲೆಯವರು, ಮಕ್ಕಳ ವರ್ತನೆಗಳ ಮೌಲ್ಯಮಾಪನದಲ್ಲಿ ಹೆತ್ತವರು ಹೇಗೆ ವಿಫಲರಾಗುತ್ತಾರೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಮನೆಯಲ್ಲಿ ಮುಕ್ತ ಅವಕಾಶವಿರುವ ವರ್ತನೆ ಶಾಲೆಯಲ್ಲಿ ಹೇಗೆ ಹಟಮಾರಿತನದ್ದೆಂದು ತೋರುವುದು, ನಿರೀಕ್ಷಿತ ಸಾಧನೆಯಾಗದಿದ್ದಾಗ ಮಕ್ಕಳು ಅದಕ್ಕೆ ಬೇರಾರನ್ನೋ ಕಾರಣವೆಂದು ದೂಷಿಸುವುದು, ಸುಳ್ಳು ಹೇಳಿ ಸುಬಗತನ ತೋರುವುದು, ಮಕ್ಕಳು ಎದುರಿಂದ ಒಂದು ಮತ್ತು ಹಿಂದಿನಿಂದ ಇನ್ನೊಂದು ವರ್ತನೆ ತೋರುವ ಜಾಣ್ಮೆ ಬೆಳೆಸಿಕೊಳ್ಳುವುದು ಇತ್ಯಾದಿ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ.
 ಇಂಥ ಮಕ್ಕಳು-ಅವರ ಪಾಲಕರು ಇಲ್ಲೆಲ್ಲೋ ನಮ್ಮ ಸುತ್ತಲೇ ಇದ್ದಾರಲ್ಲ ಎಂಬ ಅನುಭವವನ್ನು ಮಾಡಿಕೊಡುವ ಜೊತೆಗೆ ಆಪ್ತ ಸಮಾಲೋಚನೆಯಿಂದ ಪರಿಹಾರವೂ ಸಾಧ್ಯ ಎಂಬ ಸಾಂತ್ವನವನ್ನೂ ಪುಸ್ತಕ ನೀಡುತ್ತದೆ. ಲೇಖಕರು ಕೊನೆಯಲ್ಲಿ ಹೇಳುವ ಈ ಮಾತು ಅತ್ಯಂತ ಗಮನಾರ್ಹ “ ಮಕ್ಕಳ ನಿಜವಾದ ಸಾಮರ್ಥ್ಯ ಮತ್ತು ತಂದೆ-ತಾಯಿಯರು ಅವರಿಂದ ನಿರೀಕ್ಷಿಸುವ ಸಾಮರ್ಥ್ಯದ ನಡುವಿನ ವ್ಯತ್ಯಾಸವೇ ಎಲ್ಲ ಸಮಸ್ಯೆಗಳ ಮೂಲ”.
ನಮ್ಮ ಮಕ್ಕಳು ಸಮಾಜದ ಆಸ್ತಿಗಳು. ಅವರು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಪಾಲಕರು ,ಶಿಕ್ಷಕರು ಹಾಗೂ ಆಪ್ತ ಸಮಾಲೋಚಕರು ಓದಲೇ ಬೇಕಾದ ಪುಸ್ತಕವಿದು. ಭವಿಷ್ಯದಲ್ಲಿ ದಾಮ್ಲೆಯವರ ಅನುಭವದ ಮೂಸೆಯಿಂದ ಸಮಾಜದ ಕಣ್ಣು ತೆರೆಸುವ ಇಂಥ ಇನ್ನಷ್ಟು ಪುಸ್ತಕಗಳು ಬರಲಿ ಎಂಬುದು ನಮ್ಮ ಹಾರೈಕೆ.