ಅಪರೂಪದ ತಾಳೆಮರ ಪಣೋಲಿ
“ ಉಜಿರೆ - ಮಂಗಳೂರಿನ ಹಾದಿಯಲ್ಲಿ ವಗ್ಗ ಎಂಬ ಊರಿದೆ. ಅದರ ಸಮೀಪ ಮೂರು ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುತ್ತಿವೆ" ಎಂದು ಗೆಳೆಯರಾದ ಬಾಟನಿ ಉಪನ್ಯಸಕ ಶಾಂತರಾಜು ಅವರು ಹೇಳಿದಾಗ ಆಶ್ಚರ್ಯ ಪಟ್ಟೆ. ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುುವುದು ಹೇಗೆ ಎಂಬ ಕುತೂಹಲದಿಂದ ನಾನು ಹಾಗೂ ಕೃಷ್ಣಮೂರ್ತಿ ನೋಡಹೋದೆವು.
ದೈತ್ಯಾಕಾರದ ಮೂರು ಮರಗಳು. ಒಂದಕ್ಕೊಂದು ಹತ್ತಿರದಲ್ಲೇ ಇದ್ದವು. ಅವು ಅಡಿಕೆ ತೋಡದ ಮಧ್ಯೆ ಹೇಗೆ ಬೆಳೆದವೋ! ನಮ್ಮ ಪುಟ್ಟ ಕ್ಯಾಮರಾ ಆ ಮರದ ಬುಡದಿಂದ ತಲೆಯವರೆಗೆ ತನ್ನ ಕಣ್ಣಲ್ಲಿ ಒಮ್ಮೆಗೇ ನೋಡಲಾಗದಷ್ಟು ತೋರ - ಎತ್ತರ.
ನೋಡಲು ಇದು ಬಗಿನಿ ಮರದ ಭಗಿನಿ. ತಾಳೆ ಮರದ ಅವಳಿ. ಕಾಂಡ ತೆಂಗಿನ ಮರವ ಕಂಡ ಹಾಗೇ. ಮರದ ಬೊಡ್ಡೆಯ ಗಾತ್ರ ಬಲು ದೊಡ್ಡ. ವ್ಯಾಸ ಒಂದು ಮೀಟರಿಗೂ ಹೆಚ್ಚು ಇದ್ದೀತು.
ಅದರ ಹೆಸರು ಪಣೋಲಿ ಮರ. ಸಸ್ಯ ಶಾಸ್ತ್ರದ ಪ್ರಕಾರ ಅರಿಕೇಸೀ (Arecaceae) ಕುಟುಂಬಕ್ಕೆ ಸೇರಿದ್ದು. Corypha Umbraculifera ಎಂಬುದು ಇದರ ವೈಜ್ಞಾನಿಕ ಹೆಸರು. ಮಲೆಯಾಳದಲ್ಲಿ ಕೊಡಪಾನಾ ಅಂತಲೂ ಕರೆಯುವರಂತೆ. ನಮ್ಮಲ್ಲಿ ಕರಾವಳಿ ಮತ್ತು ಮಲೆನಾಡುಗಳಲ್ಲಿ ಮಾತ್ರವೇ ಬೆಲೆಯುವ ಸಾಧ್ಯತೆಯಿರುವ ಈ ಮರಕ್ಕೆ ಊರೂರಿ ನಲ್ಲಿ
ಒಂದೊಂದು ಹೆಸರಿದ್ದೀತು. ಮದ್ರಾಸ್ ಪ್ರೆಸಿಡೆನ್ಸಿಯ ಹೂ ಬಿಡುವ ಗಿಡಗಳಲ್ಲಿ ಒಂದೆಂದು ಹಿಂದೆಯೇ ಹೆಸರಿಸಲ್ಪಟ್ಟ ಪಣೋಲಿ ಮೂಲತಃ ಕರ್ನಾಟಕ ದಲ್ಲಿ ಕಂಡು ಬರುವುದೇ ವಿರಳ.
ಏನು ಪಣೋಲಿಯ ವಿಶೇಷ? 40 – 60 ವರ್ಷ ಗಳವರೆಗೆ ಬೆಳೆಯುವ ಈ ಮರ ಒಮ್ಮೆ ಹೂ ಬಿಟ್ಟಿತೆಂದರೆ ಅದಕ್ಕೆ ಈ ಜಗತ್ತಿನ ಬದುಕು ಬೇಸರವಾಯ್ತು ಎಂತಲೇ ಅರ್ಥ. ಹೂವು ಪಣೋಲಿಯ ಸಾವಿನ ಮೊದಲ ಹೆಜ್ಜೆ (ಬಿದಿರಿನ ಹಾಗೆ) . ಕಾಯಿ ಮುಂದಿನದು. ಕಾಯಿ ಬಿಟ್ಟಮೇಲೆ ಮರ ಸತ್ತಂತೆಯೇ.
ಜೀವಿಗಳಿಗೆ ಹೂ ಬಿಡುವ ಕಾಲವೇ ಜೀವನದಲ್ಲಿ ಸಂಭ್ರಮದ ಕಾಲ. ನಿಜವಾದ ಜೀವನದ ಆರಂಭವೇ ಅಲ್ಲಿ. ತನ್ನ ಮಕ್ಕಳು - ಸಂಸಾರ ಎಂದೆಲ್ಲ ಜಗತ್ತನ್ನು ಅತಿ ಹೆಚ್ಚು ಪ್ರೀತಿಸುವ ಘಳಿಗೆ ಆಗ. ಆದರೆ.... ಪಣೋಲಿ ಮರಕ್ಕೆ ಮಾತ್ರ ಹಾಗಲ್ಲ.
ತಾನು ಇಲ್ಲಿಯವರೆಗೆ ಭೂಮಿಯಾಳದಿಂದ ಹೀರಿದ ಶಕ್ತಿ - ಸಂಪತ್ತನ್ನೆಲ್ಲ ಪಣೋಲಿ ಹೂಬಿಡಲು ವಿನಿಯೋಗಿಸುತ್ತದೆ. ಮತ್ತೆ ಕೊನೆಯ ಎಲೆ ಚಿಗುರಬೇಕಾದಲ್ಲಿ ಹೂವು ಅರಳುವುದರಿಂದ ಇನ್ನೂ ಮೇಲಕ್ಕೆ ಮರ ಬೆಳೆಯಲು ಸಾಧ್ಯವೇ ಇಲ್ಲ. ಹೀಗಾಗಿ ಹೂವಾಗಿ - ಕಾಯಾಗುವ ಹೊತ್ತಿಗೆ ಮರ ಟೊಳ್ಳಾಗುತ್ತದೆ. ಎಲ್ಲ ಶಕ್ತಿಯನ್ನೂ ಕಾಯಿ ಬೆಳೆಯಲು ಹೀರುವುದರಿಂದ ಬುಡವೇ ಲಡ್ಡಾಗಿ ಮರ ಉದುರುತ್ತದೆ. ಮರದಿಂದ ಉದುರಿದ ಕಾಯಿಯ ಬೀಜ ಮಣ್ಣೊಳಗೆ ಮೊಳೆತು ಗಿಡವಾದರುಂಟು - ಇಲ್ಲದಿದ್ದರೆ ಇಲ್ಲ!
ತಾಳೆ, ಬಗಿನೆಗಳ ಹಾಗೆ ಸರಿಸುಮಾರು 200 ಸೆ.ಮೀ. ಗೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಪಣೋಲಿ ನೋಡಲು ಅವುಗಳಿಗಿಂತ ಸುಂದರ. ಮಾವಿನ ಹಾಗೆ ಕೊಂಬೆಯೊಡೆದು ಬೆಳೆಯುವುದಿಲ್ಲ. ತೆಂಗಿನ ಹಾಗೆ ಹೆಡೆಹೆಡೆಯಾಗಿ ಬೆಳೆಯುವಂಥಾದ್ದು. ಹುಡುಕಿದರೆ ಎಲ್ಲೋ ಕೆಲವು ಉದಾಹರಣೆಗೆ ಮಾತ್ರ ಸಿಗುವ ಈ ಮರದ ಜೊತೆ ಅನೇಕ ಕಥೆಗಳೂ ತಳಕು ಹಾಕಿಕೊಂಡಿರುವುದು ವಿಶೇಷ.
ದಕ್ಷಿಣ ಕನ್ನಡದಲ್ಲಿ ಇದು ದುಷ್ಟ ಶಕ್ತಿಗಳ ಕಂಟಕ ಎಂಬ ಪ್ರತೀತಿ. ಪಕ್ಕದ ಗಿಡಗಳಿಗೆ ಅಪಾಯಕಾರಿ ಎಂದು ಒಪ್ಪಬಹುದೇನೋ. ಯಾಕೆಂದರೆ ನೆಲದಾಳದಲ್ಲಿ ತುಂಬ ಅಗಲಕ್ಕೆ ಸಾಗುವ ಇದರ ಬೇರುಗಳು ಆ ಜಾಗದ ಸಾರವನ್ನೇ ಹೀರಿಬಿಡುವುವಂತೆ. ಹೀಗಾಗಿ ಈ ಹೊಟ್ಟೆಬಾಕನಿಂದಾಗಿ ನೆರೆಹೊರೆಯವರಿಗೆ ಉಪವಾಸವಾದರೆ ಆಶ್ಚರ್ಯ ವಿಲ್ಲ. ಆದರೆ ಮರವಿದ್ದರೆ ಮನೆಯಜಮಾನನಿಗೆ ಯಾಕೆ ಕೆಡಕೋ ಯಾರಿಗೆ ಗೊತ್ತು?
ಇದು ಕಾರಣ, ಈ ಮರವನ್ನು ಅನಿಷ್ಟವೆಂದು ಗ್ರಹಿಸಿ ಕಡಿದುಬಿಡುತ್ತಾರೆ . ಅದೂ ಕಡಿಯುವ ಸದ್ದು ಮನೆಗೆ ಕೇಳಬಾರದಂತೆ. ಹೀಗಾಗಿ ಕೊಡಲಿ ಸದ್ದು ಮರೆಮಾಡಲು ಜೊತೆಗೆ ತಮಟೆಯನ್ನೋ , ಚಂಡೆಯನ್ನೋ ಬಡಿಯುತ್ತಾರೆ. ಮರಕ್ಕೆ ಕುಂಕುಮವಿಟ್ಟು , ಆರತಿ ಎತ್ತಿ ಮಹಾ ಪಾಪವನ್ನು ದೂರಮಾಡಿಕೊಳ್ಳುವ ರೀತಿಯಲ್ಲಿ ಭಕ್ತಿಯಿಂದ ಕಡಿಯುತ್ತಾರೆ. ಪಣೋಲಿ ಮರ ಕಡಿಯುವದೆಂದರೆ ಅಲ್ಲಿ ಚಂಡೆ, ಮದ್ದಳೆ ಎಲ್ಲಾ ಬರುತ್ತದೆ. ಕಡಿಯುವಾಗ ಕುಣಿತವೂ ಶುರುವಾಗುವುದಿಲ್ಲ ಅಷ್ಟೇ!
ಹಾಗಂತ, ಈ ಮರಕ್ಕೆ ಉಪಯೋಗವೇ ಇಲ್ಲವೇ? ಖಂಡಿತ ಉಂಟು. ಅಗಲ ಬಟ್ಟಲಿನಂಥ ಎಲೆ ಪೆಣೋಲಿಯದು. ಎಲೆಗೇ ಇದೆ ಹೂವಿನ ಚಂದ. ಹಸಿರು - ಹಳದಿ ಬಣ್ಣ. ತುಂಬ ದಿನ ಮಳೆ ಬಿಸಿಲಲ್ಲಿ ನೆನೆದರೂ ತನ್ನತನ ಉಳಿಸಿಕೊಳ್ಳುವ ಈ ಗೊರಬು ಹೊದೆದರೆ ಹನಿ ನೀರು ಕೂಡ ಒಳ ಸೇರುವುದಿಲ್ಲ. ತುಳುವಿನಲ್ಲಿ ಈ ಗೊರಬಿಗೆ ಪಣೋಲಿ ಎನ್ನುತ್ತಾರೆ. ಮರಕ್ಕೆ ಆ ಹೆಸರು ಬಂದದ್ದೇ ಹಾಗೆ.
ಮರದ ಹೊಟ್ಟೆ ಟೊಳ್ಳು, ಕಾಂಡವೂ ಗಟ್ಟಿಯಲ್ಲ. ಹೀಗಾಗಿ ನೀರು ಹರಿಯುವ ಹರಣಿ (ಕಾಲುವೆ) ಮಾಡುವುದು ಬಿಟ್ಟರೆ ಮರದ ಉಪಯೋಗ ಮತ್ತೇಕೂ ಇಲ್ಲ. ಮತ್ತೆ " ಇದರ ಹೊಟ್ಟೆಯ ಒಳಗೆ ಬಿಳಿಯಾದ ತಿರುಳುಂಟು. ಅದರ ಹಿಟ್ಟುಮಾಡಿ ಇಟ್ಟುಕೊಳ್ಳಬಹುದು. ತಾಳೆ ಮರದ ತಿರುಳು ಶೀತ. ಇದು ಬಹಳ ಉಷ್ಣ . ಮತ್ತೆ ಈ ಹಿಟ್ಟಿನಿಂದ ದೋಸೆಯನ್ನೂ ಮಾಡಬಹುದು" ಎಂದು 80ರ ಪ್ರಾಯದ ಕ್ರಿಶ್ಚಿಯನ್ ಅಜ್ಜಿಯೊಬ್ಬಳು ವಗ್ಗದಲ್ಲಿ ವಿವರಣೆ ನೀಡಿದಳು.
ಪಣೋಲಿ ಕಾಯಿ? ಅದರ ಉಪಯೋಗ ಬಹು ವಿಚಿತ್ರ. “ಚೂರು ಚೂರು ಮಾಡಿ ನದಿಗೆ ಎಸೆದು ಬಿಟ್ಟರೆ ಸಾವಿರಗಟ್ಟಲೆ ಮೀನು ಅಮಲೇರಿ ಸಾಯುತ್ತವೆ. ಹೀಗಾಗಿ ಮೀನು ಹಿಡಿಯುವವರಿಗೆ ಇದು ಅತ್ಯಂತ ಸುಲಭದ ಉಪಾಯ. ಹಾಗಂತ ಈ ಕಾಯಿಯಿಂದ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ" ಎಂದು ಅವಳು ಹೇಳಿದಳು.
ಅರವತ್ತು ವರ್ಷ ಉಳಿದರೂ ಪಣೋಲಿಗೆ ಜೀವನದಲ್ಲಿ ಹೂ ಬರುವುದು ಒಮ್ಮೆ ಮಾತ್ರ. ಅದೂ ನಮ್ಮ ರಾಜ್ಯದಲ್ಲಿ ಈ ಮರವೇ ಬಹಳ ಇಲ್ಲ. ಹೀಗಿರುವಾಗ ವಗ್ಗದಲ್ಲಿ ಒಮ್ಮೆಲೇ ಮೂರು ಮರಗಳು ಹೂ ಬಿಟ್ಟಿರುವುದು ಆಕಸ್ಮಿಕ. ನೋಡಲು ಸುವರ್ಣಾವಕಾಶ . ಆದರೆ ಹೂವು ಸಾವಿನ ಸೂಚಿಯಾದ್ದರಿಂದ ವಗ್ಗದ ಸಮೀಪ ರಸ್ತೆಬದಿಯ ಈ ಸುಂದರ ನೋಟ - ಇನ್ನು ಕೆಲವೇ ದಿನ ಮಾತ್ರ!
(ಚಿತ್ರ ಕೃಪೆ: ಗೂಗಲ್)